ಮಂಗಳೂರು : ಶ್ರೀ ಗೋಕರ್ಣನಾಥೇಶ್ವರ ಪದವಿ ಕಾಲೇಜು, ಗಾಂಧಿನಗರ, ಮಂಗಳೂರು ಇದರ ಸಭಾಂಗಣದಲ್ಲಿ 2023 ಏಪ್ರಿಲ್ 27ರಂದು ‘ಸಾಹಿತ್ಯದಲ್ಲಿ ಹಾಸ್ಯ’ ಎಂಬ ವಿಷಯ ಕುರಿತು ಉಪನ್ಯಾಸ ಕಾರ್ಯಕ್ರಮವು ಜರುಗಿತು. ಈ ಕಾರ್ಯಕ್ರಮದಲ್ಲಿ ಕರ್ನಾಟಕ ಬ್ಯಾಂಕ್ ಲಿಮಿಟೆಡ್ ಇದರ ನಿವೃತ್ತ ಹಿರಿಯ ಅಧಿಕಾರಿಯಾದ ಶ್ರೀ ಯು. ರಾಮರಾವ್ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ, “ಜೀವನದಲ್ಲಿ ಹಾಸ್ಯ ಮತ್ತು ಚಪ್ಪಾಳೆ ತಟ್ಟುವುದರಿಂದ ನಮ್ಮ ಆರೋಗ್ಯದ ಸಮಸ್ಯೆ ನಿವಾರಣೆಯಾಗುತ್ತದೆ. ಡಿ.ವಿ.ಜಿ, ದಿನಕರ ದೇಸಾಯಿ ಮುಂತಾದ ಹಾಸ್ಯ ಬರಹಗಾರರ ಸಾಹಿತ್ಯ ಕೃತಿಗಳನ್ನು ವಿದ್ಯಾರ್ಥಿಗಳು ಓದಬೇಕು. ನಾವು ಹಾಸ್ಯ ಮಾಡಬೇಕು, ಆದರೆ ಇನ್ನೊಬ್ಬರಿಗೆ ಅಪಹಾಸ್ಯ ಮಾಡಬಾರದು. ಹಾಸ್ಯವಿರುವುದು ಮನಸ್ಸಿನ ಒತ್ತಡ ನಿವಾರಣೆಗಾಗಿ” ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಆಶಾಲತಾ ಸುವರ್ಣ ಈ ಕಾರ್ಯಕ್ರಮದ ಅಧ್ಯಕ್ಷ ಸ್ಥಾನದಿಂದ ಮಾತನಾಡಿ “ನಾವಿಂದು ಧಾವಂತದ ಯುಗದಲ್ಲಿ ಬದುಕುತ್ತಿದ್ದೇವೆ. ಹಾಸ್ಯವು ವ್ಯಕ್ತಿಯ ಅನುಭವದಿಂದ ಬರುತ್ತದೆ. ನಮಗೆ ಜ್ಞಾನ ದಾಹ ಇರಬೇಕು. ಪ್ರಸ್ತುತ ನಾವಿರುವ ಸಮಾಜವನ್ನು ಅರ್ಥ ಮಾಡಿಕೊಳ್ಳಬೇಕು” ಎಂದರು. ಕಾಲೇಜಿನ ಡೀನ್ ಡಾ. ಉಮ್ಮಪ್ಪ ಪೂಜಾರಿ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು “ನಾವಿಂದು ಹಾಸ್ಯವನ್ನು ಮರೆತು ಚಿಂತೆಯಲ್ಲಿ ದಿನ ಕಳೆಯುವಂತಾಗಿದೆ. ಜೀವನದಲ್ಲಿ ಹಾಸ್ಯವಿರಬೇಕು. ಸಮಸ್ಯೆಗಳನ್ನು ನಿವಾರಿಸುವ ಶಕ್ತಿ ಹಾಸ್ಯಕ್ಕಿದೆ” ಎಂದರು.
ಈ ಕಾರ್ಯಕ್ರಮದಲ್ಲಿ ಕನ್ನಡ ಸಂಘದ ನಾಯಕ ಮತ್ತು ನಾಯಕಿಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು ಹಾಗೂ ಎಲ್ಲಾ ವಿಭಾಗದ ಉಪನ್ಯಾಸಕರು ಮತ್ತು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಕನ್ನಡ ಉಪನ್ಯಾಸಕರಾದ ಶ್ರೀ ವಸಂತ್ ಎಲ್ಲರನ್ನು ಸ್ವಾಗತಿಸಿ, ದ್ವಿತೀಯ ಕಲಾ ವಿಭಾಗದ ಕುಮಾರಿ ವೈಷ್ಣವಿ ಕಾರ್ಯಕ್ರಮ ನಿರೂಪಿಸಿ ಹಾಗೂ ಕನ್ನಡ ಸಂಘದ ನಾಯಕಿ ಕುಮಾರಿ ಜ್ಯೋತಿ ವಂದನಾರ್ಪಣೆ ಗೈದರು.