ಸಾಹಿತಿ, ರಾಜಕಾರಣಿ ವೀರಪ್ಪ ಮೊಯಿಲಿ ಅವರದು ಬಹುಭಾಷಿಕ ಸಂವೇದನೆ. ಕನ್ನಡ, ತುಳು, ಕೊಂಕಣಿ, ಹಿಂದಿ, ಇಂಗ್ಲೀಷ್ ಮೊದಲಾದ ಭಾಷೆಗಳಲ್ಲಿ ಅವರು ಪ್ರಭುತ್ವ ಸಾಧಿಸಿ ಸಾಹಿತ್ಯ ರಚಿಸಿ ಸೈ ಎನಿಸಿಕೊಂಡಿದ್ದಾರೆ. ವಾದ ವಿವಾದಗಳೂ ಅವರ ಬೆನ್ನುಬಿಟ್ಟಿಲ್ಲ. ಸಾಹಿತ್ಯದ ಅನನ್ಯತೆಗಿಂತ ಸಾಮಾಜಿಕ ಅನನ್ಯತೆಯೆಡೆಗೆ ಅವರ ತುಡಿತ ಜಾಸ್ತಿ. ಜೀವನದ ವೈವಿಧ್ಯವನ್ನು ಕೇಂದ್ರ ವಸ್ತುವಾಗುಳ್ಳ ಕಾದಂಬರಿ, ಕಾವ್ಯ, ನಾಟಕಗಳನ್ನು ರಚಿಸಿ ಅವರು ಕನ್ನಡ ಸಾರಸ್ವತ ಪ್ರಪಂಚದಲ್ಲಿ ತಮ್ಮದೇ ಛಾಪನ್ನು ಮೂಡಿಸಿದ್ದಾರೆ. ಈಗ ಅವರಿಗೆ 86ರ ಹರೆಯ. ಇಂದಿಗೂ ಅವರು ಬರವಣಿಗೆಯನ್ನು ನಿಲ್ಲಿಸಿಲ್ಲ. ವರ್ಣರಂಜಿತ ವ್ಯಕ್ತಿತ್ವದ ಮೊಯಿಲಿ ಅವರ ನಾನಾ ನೆಲೆಗಳ ಸಾಧನೆಯ ಕಿರು ನೋಟವಿಲ್ಲಿದೆ.
ಎಂ. ವೀರಪ್ಪ ಮೊಯಿಲಿ ಅವರು ನಮ್ಮ ನಾಡಿನ ಹೆಸರಾಂತ ರಾಜಕಾರಣಿಗಳಲ್ಲಿ ಒಬ್ಬರು. ಅವರು ಸಕ್ರಿಯ ರಾಜಕಾರಣದಲ್ಲಿರುವ ಭಾರತದ ವಿರಳ ಸಾಹಿತಿಯೂ ಹೌದು. ಮೊಯಿಲಿ ಅವರು ನಾಡಿನ ಜನತೆಗೆ ಒಬ್ಬ ರಾಜಕೀಯ ನಾಯಕರಾಗಿ ಪರಿಚಿತರಾಗಿದ್ದರೂ ತಮ್ಮ ನಾನಾ ಬಗೆಯ ವ್ಯಕ್ತಿತ್ವದ ಮೂಲಕ ಸಾಹಿತಿಯಾಗಿ, ಕಲಾವಿದರಾಗಿ, ನ್ಯಾಯವಾದಿಯಾಗಿ, ಹೋರಾಟಗಾರರಾಗಿ ಹಲವಾರು ಕ್ಷೇತ್ರಗಳಲ್ಲಿ ತಮ್ಮದೇ ಛಾಪನ್ನು ಮೂಡಿಸಿದ್ದಾರೆ. ತಳವರ್ಗದಿಂದ ಬಂದ ಮೊಯಿಲಿ ಅವರು ತಮ್ಮನ್ನು ತಾವು ರೂಪಿಸಿಕೊಂಡವರು. ಬಂಡಾಯದ ಹೋರಾಟದ ಮನೋಧರ್ಮವನ್ನು ರೂಪಿಸಿಕೊಂಡು ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಾ ಮುನ್ನಡೆದ ವೀರಪ್ಪ ಮೊಯಿಲಿ ಅವರು ನಮ್ಮ ನಾಡು ಕಂಡ ಅಪರೂಪದ ಸಾಧಕ. ತಮ್ಮ ರಾಜಕೀಯ ಜೀವನದ ಜತೆಜತೆಗೆ ಕಾವ್ಯ, ಕಾದಂಬರಿ, ನಾಟಕಗಳನ್ನು ರಚಿಸುತ್ತಾ ಕನ್ನಡ ವಾಙ್ಮಯಕ್ಕೆ ಅವರು ಮಹತ್ತ್ವದ ಕೊಡುಗೆಯನ್ನು ನೀಡಿದ್ದಾರೆ.
1940ರಲ್ಲಿ ವೀರಪ್ಪ ಮೊಯಿಲಿ ಅವರು ಜನಿಸಿದರು. ಅವರ ಹುಟ್ಟೂರು ಮೂಡಬಿದಿರೆ ಬಳಿಯ ಮಾರ್ಪಾಡಿ. ಅವರ ತಂದೆ ತಮ್ಮಯ್ಯ, ತಾಯಿ ಪೂವಮ್ಮ. ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದ ಕುಟುಂಬದಲ್ಲಿ ಹುಟ್ಟಿಬಂದ ವೀರಪ್ಪ ಮೊಯಿಲಿ ಅವರ ಬಾಲ್ಯದ ಜೀವನ ಅಷ್ಟೇನೂ ಸುಖಕರವಾಗಿರಲಿಲ್ಲ. ಮೊಯಿಲಿ ಅವರು ದೇವಾಡಿಗ ಜನಾಂಗಕ್ಕೆ ಸೇರಿದವರು. ಮೊಯಿಲಿ ಅವರ ತಂದೆ ತಮ್ಮಯ್ಯ ಅವರು ಊರ ದೇವಸ್ಥಾನದಲ್ಲಿ ಜಾತ್ರೆಯಲ್ಲಿ ವಾದ್ಯ ನುಡಿಸುವ ಕೆಲಸವನ್ನು ಮಾಡುತ್ತಿದ್ದರು. ವೀರಪ್ಪ ಮೊಯಿಲಿ ಅವರ ಬಾಲ್ಯದ ಹೆಸರು ಗಿರಿಯಪ್ಪ. ದೇವರ ಸೇವೆಯ ಕಾರ್ಯದಲ್ಲಿ ಬಾಲಕ ಗಿರಿಯಪ್ಪ ಕೂಡ ಪಾಲ್ಗೊಳ್ಳುತ್ತಿದ್ದರು. ಹೀಗಾಗಿ ಬಾಲ್ಯದಲ್ಲೇ ಸಂಗೀತ, ಯಕ್ಷಗಾನ ಕಲೆಯೊಂದಿಗೆ ಅನುಸಂಧಾನ ಸಾಧ್ಯವಾಯಿತು. ಮೊಯಿಲಿ ಅವರ ತಂದೆ ತಮ್ಮಯ್ಯ ಅವರು ಗೇಣಿ ವ್ಯವಸಾಯ ಮಾಡುತ್ತಿದ್ದರು. ಒಮ್ಮೆ ಭೂ ಮಾಲಿಕರ ತಂಡ ಅವರ ಕುಟುಂಬವು ವಾಸಿಸುತ್ತಿದ್ದ ಮನೆಯಿಂದ ಹೊರಹಾಕಿ ದೌರ್ಜನ್ಯ ಎಸಗಿತು. ಈ ದುರ್ಘಟನೆ ಬಾಲಕ ಗಿರಿಯಪ್ಪರನ್ನು ಬಹುವಾಗಿ ಕಾಡಿತು. ಉತ್ತಮ ಶಿಕ್ಷಣ ಪಡೆದು ದೊಡ್ಡ ವ್ಯಕ್ತಿಯಾಗಿ ಸಾಮಾಜಿಕ ಅಸಮಾನತೆಯನ್ನು ಬುಡಸಹಿತ ಕಿತ್ತು ಹಾಕಲು ನಿರ್ಧರಿಸಿದರು. ಮುಂದೆ ಬಿ.ಎ. ಮಾಡಿ ಕಾನೂನು ವಿಷಯದಲ್ಲಿ ಪದವಿ ಪಡೆದು ನ್ಯಾಯವಾದಿಯಾಗಿ ವಿವಿಧ ಹೋರಾಟಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡರು.
ಬಡತನದ ಕಷ್ಟ ಕಾರ್ಪಣ್ಯವನ್ನು ಅನುಭವಿಸಿದರೂ ಮೊಯಿಲಿ ಅವರು ಧೃತಿಗೆಡಲಿಲ್ಲ. 1947ರಲ್ಲಿ ಮೊಯ್ಲಿ ಅವರು ಮೂಡಬಿದರೆಯ ಖಾಸಗಿ ಶಾಲೆಯಲ್ಲಿ ಪ್ರವೇಶ ಪಡೆದುಕೊಂಡರು. ‘ಗಿರಿಯಪ್ಪ’ ಎಂಬ ಹೆಸರು ಶಾಲಾ ಸಿಬ್ಬಂದಿಯ ಬೇಜವಾಬ್ದಾರಿಯಿಂದ ‘ವೀರಪ್ಪ’ ಎಂದು ಶಾಲಾ ಕಡತದಲ್ಲಿ ದಾಖಲಾಯಿತು. ಶಾಲೆಯ ಬಿಡುವಿನ ಅವಧಿಯಲ್ಲಿ ತಮ್ಮ ಸಹೋದರರ ಜತೆಗೆ ಕೃಷಿ ಕೆಲಸದಲ್ಲಿ ಅವರು ಪಾಲ್ಗೊಂಡು ಶ್ರಮ ಸಂಸ್ಕೃತಿಯ ನೋವು ನಲಿವುಗಳ ಪರಿಚಯ ಮಾಡಿಕೊಂಡರು. ಓದಿನ ಜತೆಗೆ ಮೊಯಿಲಿ ಅವರು ಬಾಲ್ಯದಲ್ಲೇ ಪಠ್ಯೇತರ ಚಟುವಟಿಕೆ, ಸಾಹಿತ್ಯದ ಓದಿನ ಗೀಳನ್ನು ಅಂಟಿಸಿಕೊಂಡರು. ಸಾಹಿತ್ಯ ಕೃತಿಗಳನ್ನು ನಿರಂತರವಾಗಿ ಓದುತ್ತಿದ್ದವರಿಗೆ ತಾನೂ ಬರೆಯಬಲ್ಲೆ ಎಂಬ ವಿಶ್ವಾಸ ಮೂಡಿ ‘ಸುಳಿಗಾಳಿ’ ಎಂಬ ಕಾದಂಬರಿಯನ್ನು ಬರೆದು ಪ್ರಕಟಿಸಿದರು.

ಚಿಕ್ಕಂದಿನಲ್ಲೇ ಯಕ್ಷಗಾನ ಕಲೆಗೆ ಮಾರುಹೋದ ಅವರು ಒಂದು ತಂಡವನ್ನು ಕಟ್ಟಿಕೊಂಡು ಹಲವಾರು ಯಕ್ಷಗಾನ ಪ್ರಸಂಗಗಳನ್ನು ಪ್ರದರ್ಶಿಸಿದರು. ಮೂಡಬಿದರೆಯಲ್ಲಿ ಓಡಾಡಿಕೊಂಡಿದ್ದ ಮೊಯಿಲಿ ಅವರ ಮೇಲೆ ಜೈನಧರ್ಮದ ವಿಚಾರಗಳು ಸಾಕಷ್ಟು ಪ್ರಭಾವ ಬೀರಿದವು. ವಿದ್ಯಾರ್ಥಿ ದೆಸೆಯಲ್ಲೇ ಬಂಡಾಯ ಮನೋಧರ್ಮವನ್ನು ಬೆಳೆಸಿಕೊಂಡಿದ್ದ ಅವರು ಡಿಗ್ರಿ ಮುಗಿದ ಬಳಿಕ ಬೆಂಗಳೂರಿನ ಜೀವವಿಮಾ ಕಛೇರಿಯಲ್ಲಿ ದುಡಿಯುತ್ತಾ ಉನ್ನತ ಶಿಕ್ಷಣವನ್ನು ಗಳಿಸಿಕೊಂಡರು. ಮೊಯಿಲಿ ಅವರು ದಿಟ್ಟ ನಿಲುವಿನ ಧೈರ್ಯವಂತ ವ್ಯಕ್ತಿ. ತಮ್ಮ ತಂದೆ ಗೇಣಿದಾರರಿಂದ ಉಂಡ ನೋವು ಅವರನ್ನು ಸದಾ ಕಾಡುತ್ತಾ ಬಂದಿತ್ತು. ಹೀಗಾಗಿ ನ್ಯಾಯವಾದಿಯಾದ ಬಳಿಕ ಗೇಣಿದಾರರ ಹಿತಕಾಯಲು ಅವರು ಟೊಂಕಕಟ್ಟಿ ದುಡಿಯತೊಡಗಿದರು. ಗೇಣಿದಾರರ ಹಿತಕಾಯಲು 1968ರಲ್ಲಿ ‘ಕಿಸಾನ್ ಸಭಾ’ ಎಂಬ ಸಂಸ್ಥೆಯನ್ನು ಆರಂಭಿಸಿದರು. ಕಾರ್ಕಳ ಸುತ್ತಮುತ್ತ ಕಿಸಾನ್ ಸಭಾದ ಶಾಖೆಗಳು ಹುಟ್ಟಿಕೊಂಡವು. ಶಿಕ್ಷಣ ಪ್ರಸಾರ, ಸಾಮಾಜಿಕ ಜಾಗೃತಿ, ಅನ್ಯಾಯದ ವಿರುದ್ಧ ಹೋರಾಟ ಮುಂತಾದ ಕಾರ್ಯಕ್ರಮಗಳಲ್ಲಿ ಮೊಯಿಲಿ ಅವರು ಸಕ್ರಿಯರಾದರು.
ಸಮಾಜಮುಖಿಯಾಗಿ ಜನಪರ ಹೋರಾಟಗಳಲ್ಲಿ ಮಗ್ನರಾಗಿದ್ದ ವೀರಪ್ಪ ಮೈಲಿ 80ರ ದಶಕದಲ್ಲೇ ಗುಂಡೂರಾವ್ ಸರಕಾರದಲ್ಲಿ ಸಚಿವರಾಗಿ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಶ್ರಮಿಸಿದರು. 90ರ ದಶಕದಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಎರಡು ವರ್ಷಗಳ ಕಾಲ ಅವರು ದುಡಿದರು. ಅನಂತರ ಲೋಕಸಭೆಯ ಸದಸ್ಯರಾಗಿ ಕೇಂದ್ರ ಸರಕಾರದಲ್ಲಿ ಕಾನೂನು ಸಚಿವರಾಗಿ, ಇಂಧನ ಸಚಿವರಾಗಿ ರಾಷ್ಟ್ರಮಟ್ಟದಲ್ಲಿ ರಾಜಕಾರಣಿಯಾಗಿ ಅವರು ಮಿಂಚಿದ್ದು ಈಗ ಇತಿಹಾಸ. ಜಾತ್ಯತೀತ ನಿಲುವನ್ನು ಮೈಗೂಡಿಸಿಕೊಂಡು ಜನನಾಯಕರಾಗಿ ಅವರು ಬೆಳೆದರು.

ಸಾಹಿತಿಯಾಗಿ ಮೊಯಿಲಿ : ವೀರಪ್ಪ ಮೊಯಿಲಿ ಅವರು ಅಪ್ಪಟ ಕನ್ನಡ ಪ್ರೇಮಿ. ಬಾಲ್ಯದಿಂದಲೂ ಸಾಹಿತ್ಯ ಅವರಿಗೆ ಬಹಳ ಇಷ್ಟವಾದ ವಿಷಯವಾಗಿತ್ತು. ಸೃಜನಶೀಲ ಸಾಹಿತಿಯಾಗಿ ಚಿಂತಕರಾಗಿ ಹೆಸರು ಮಾಡಿರುವ ಅವರು ಸಾಹಿತ್ಯದ ನಾನಾ ಪ್ರಕಾರಗಳಲ್ಲಿ ಕೈಯಾಡಿಸಿದ್ದಾರೆ. ಸಾಂಸ್ಕೃತಿಕ ಚಹರೆಯನ್ನು ತಮ್ಮದಾಗಿಸಿಕೊಂಡು ರಾಷ್ಟ್ರಮಟ್ಟದಲ್ಲಿ ರಾಜಕಾರಣಿಯಾಗಿ ನಾಮಾಂಕಿತರಾದ ಕೀರ್ತಿಗೆ ಅವರು ಭಾಜನರಾಗಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿದ್ದೂ ಸಾಹಿತ್ಯ ಸಾಧನೆ ಮಾಡಿದವರ ಸಂಖ್ಯೆ ಬಹಳ ವಿರಳ. ಆದರೆ ಮೊಯಿಲಿ ಅವರು ನಾಡಿನ ನಾಮಾಂಕಿತ ಸಾಹಿತಿಯೂ, ರಾಜಕಾರಣಿಯೂ ಹೌದು ಎಂಬುದು ಅಭಿಮಾನದ ಸಂಗತಿ. ಮೊಯಿಲಿ ಅವರು ಸಾಧನೆಗೈದ ಒಂದು ಕ್ಷೇತ್ರ ರಾಜಕೀಯವಾದರೆ ಇನ್ನೊಂದು ಕ್ಷೇತ್ರ ಸಾಹಿತ್ಯ.
ಕಾದಂಬರಿಕಾರರಾಗಿ ಮೊಯಿಲಿ : ಮೊಯಿಲಿ ಅವರು ಹಿಂದುಳಿದ ವರ್ಗದಿಂದ ಬಂದವರು. ಶೋಷಣೆ, ಅನ್ಯಾಯ, ಅಸಮಾನತೆಗಳನ್ನು ಕಂಡು ರೋಸಿ ಹೋಗಿ ಅವುಗಳ ವಿರುದ್ಧ ಸಿಡಿದೆದ್ದವರು. ಶೋಷಿತ ಸಮುದಾಯಕ್ಕೆ ನ್ಯಾಯ ಸಲ್ಲಿಸುವ ಆಯುಧವಾಗಿ, ಮಾಧ್ಯಮವಾಗಿ ಸಾಹಿತ್ಯವನ್ನು ಬಳಸಿಕೊಂಡರು. ಮೊಯಿಲಿ ಅವರದು ಬಂಡಾಯ ಮನೋಧರ್ಮ. ನೊಂದವರ ಬೆಂದವರ ಕಷ್ಟ ಕಾರ್ಪಣ್ಯಗಳನ್ನು ಅವರು ಸಾಹಿತ್ಯವಾಗಿ ಪಡಿ ಮೂಡಿಸಿದ್ದಾರೆ. ‘ಸುಳಿಗಾಳಿ’ ಅವರ ಮೊದಲ ಕೃತಿ. ಇದು 1985ರಲ್ಲಿ ಪ್ರಕಟವಾಯಿತು. ಇದೊಂದು ಸಾಮಾಜಿಕ ಕಾದಂಬರಿ. ಅನಂತರ ಅವರು ಸಾಗರದೀಪ (1986), ಕೊಟ್ಟ (1993), ತೆಂಬರೆ (1999) ಕಾದಂಬರಿಗಳನ್ನು ರಚಿಸಿದ್ದಾರೆ. ಸಮಕಾಲೀನ ಪ್ರಜ್ಞೆ ಮತ್ತು ಸಾಮಾಜಿಕ ಕಾಳಜಿ ಅವರ ಕಾದಂಬರಿಗಳ ಮುಖ್ಯ ಆಶಯ. ‘ಮೌಲ್ಯಾಧಾರಿತ ಸಮಾಜ ಸ್ಥಾಪನೆಗೆ ನಿರಂತರ ಹೋರಾಟದ ಅಗತ್ಯವಿದೆಯೆ ಹೊರತು ವ್ಯವಸ್ಥೆಯು ಸಮಾಜದ ರಕ್ಷಣೆಗೆ ಅಲ್ಲ’ ಎಂಬ ದೃಢ ನಿಲುವು ಅವರದು.

‘ಸಾಗರದೀಪ’ ವೀರಪ್ಪ ಮೊಯಿಲಿ ವಿರಚಿತ ಮುಖ್ಯ ಕಾದಂಬರಿಗಳಲ್ಲಿ ಒಂದು. ಇದು ಕರಾವಳಿ ಕರ್ನಾಟಕದ ಮೀನುಗಾರ ಜನಾಂಗದ ನಾನಾ ಮುಖಗಳನ್ನು ಪರಿಣಾಮಕಾರಿಯಾಗಿ ಚಿತ್ರಿಸಿದೆ. ಮುಂಬೈಗೆ ವಲಸೆ ಬಂದ ಮೊಗವೀರ ಸಮುದಾಯದ ಸಾಹಸ ಸಾಧನೆಯ ಕುರಿತೂ ಈ ಕೃತಿ ಮಾತನಾಡುತ್ತದೆ. ಮೊಯಿಲಿ ಅವರು ಬರೆದ ಮಹತ್ವಾಕಾಂಕ್ಷೆಯ ಕಾದಂಬರಿ ‘ಕೊಟ್ಟ’. ಇದು ಬುಡಕಟ್ಟು ಜನಾಂಗಗಳಾದ ಕೊರಗ ಮತ್ತು ಜೇನುಕುರಬರ ಜೀವನ ಕಥೆಯನ್ನು ಆಧರಿಸಿ ನಿಂತಿದೆ. ಮೊಯಿಲಿ ಅವರ ಶೋಧ ಪ್ರವೃತ್ತಿ, ವ್ಯಾಪಕ ಲೋಕಾನುಭವ, ಕ್ಷೇತ್ರಕಾರ್ಯ ಈ ಕಾದಂಬರಿಯಲ್ಲಿ ಎದ್ದು ಕಾಣುತ್ತದೆ. ಕೊರಗ ಜನಾಂಗದ ತುಮುಲಗಳು, ಅವರ ಸಾಮಾಜಿಕ, ರಾಜಕೀಯ ಆಯಾಮಗಳ ಮೇಲೂ ಈ ಕಾದಂಬರಿ ಬೆಳಕು ಚೆಲ್ಲುತ್ತದೆ. ಕಾಡು ನಾಡುಗಳ ನಡುವಿನ ಸಂಘರ್ಷ ಹಾಗೂ ಮನುಷ್ಯ ಮನುಷ್ಯರ ನಡುವಿನ ಸಂಬಂಧದ ಶೋಧವೂ ಈ ಕೃತಿಯ ಜೀವಾಳ. ಮೊಯಿಲಿ ಅವರ ಕಾದಂಬರಿಗಳಲ್ಲಿ ಬಹು ಮುಖ್ಯವಾದುದು ‘ತೆಂಬರೆ’. ದಕ್ಷಿಣ ಕನ್ನಡ ಜಿಲ್ಲೆಯ ಅವಿಭಾಜ್ಯ ಅಂಗವಾಗಿರುವ ಭೂತಾರಾಧನೆ ಮತ್ತು ಯಕ್ಷಗಾನ ಪರಂಪರೆಯ ಹಿನ್ನೆಲೆಯಲ್ಲಿ ಈ ಕಾದಂಬರಿ ಚಿತ್ರಣಗೊಂಡಿದೆ. ಮುಖ್ಯವಾಗಿ ಈ ಕಾದಂಬರಿ ಭೂತಕಟ್ಟುವ ಪಂಬದ ಜನಾಂಗದ ಬದುಕನ್ನು ಚಿತ್ರಿಸುತ್ತದೆ. ಭೂತಾರಾಧನೆಯ ಅನೇಕ ಮಗ್ಗಲುಗಳ ಮೇಲೂ ಈ ಕಾದಂಬರಿ ಬೆಳಕು ಹಾಯಿಸಿದೆ. ತುಳುನಾಡಿನ ಸಂಪ್ರದಾಯ, ಪರಂಪರೆ, ಸ್ಥಳೀಯ ಚರಿತ್ರೆಯನ್ನು ಇಲ್ಲಿ ಕಲಾತ್ಮಕವಾಗಿ ಬಿಂಬಲಿಸಲಾಗಿದೆ. ಮೂಢನಂಬಿಕೆ ಹಾಗೂ ಮೂಲನಂಬಿಕೆಗಳ ಕುರಿತ ಸ್ಪಷ್ಟ ವಿವೇಚನೆಯೂ ಇಲ್ಲಿ ದಾಖಲಾಗಿದೆ. ಶೋಷಣೆ ರಹಿತ ಸಮಾಜ ನಿರ್ಮಾಣವಾಗಿ ಜನಸಾಮಾನ್ಯರ ಬದುಕು ಹಸನಾಗಬೇಕು ಎಂಬ ಆಶಯ ಇಲ್ಲಿ ವ್ಯಕ್ತವಾಗಿದೆ. ಮೊಯಿಲಿ ವಿರಚಿತ ‘ಸುಳಿಗಾಳಿ’ ಕಾದಂಬರಿ ಪ್ರೇಮವೆ ಬಾಳಿನ ಬೆಳಕು ಎಂಬ ಸಂದೇಶವನ್ನು ಸಾರುತ್ತದೆ. ಮೊಯಿಲಿ ಅವರು ಬರೆದ ‘ಸಾಗರದೀಪ’ ಕಾದಂಬರಿ ಅದೇ ಹೆಸರಿನಲ್ಲಿ ಚಲನಚಿತ್ರವಾಗಿ ತೆರೆ ಕಂಡು ಜನಮನವನ್ನು ರಂಜಿಸುವಲ್ಲಿ ಯಶಸ್ವಿಯಾಗಿದೆ.

ಕವಿಯಾಗಿ ವೀರಪ್ಪ ಮೊಯಿಲಿ : ಅನುಭವದ ಕಲಾತ್ಮಕ ಸೃಷ್ಟಿಯೇ ಕಾವ್ಯ. ವೀರಪ್ಪ ಮೊಯಿಲಿ ಅವರು ಬಾಲ್ಯದಿಂದಲೇ ಯಕ್ಷಗಾನ, ಭೂತಾರಾಧನೆ, ವಾದ್ಯ, ಸಂಗೀತ ಮೊದಲಾದ ಸಾಂಸ್ಕೃತಿಕ ಹಿನ್ನೆಲೆಯ ಸಂಪರ್ಕಕ್ಕೆ ಒಳಗಾದವರು. ಸ್ವತಃ ಯಕ್ಷಗಾನ ಕಲಾವಿದರಾಗಿ ತಮ್ಮ ಪ್ರತಿಭೆಯನ್ನು ಮೆರೆದವರು. ಯಕ್ಷಗಾನ ಪ್ರಸಂಗಗಳಿಗೆ ಹಾಡನ್ನು ಸಹ ಬರೆದವರು. 1985ರಲ್ಲಿ ಮೊಯಿಲಿ ಅವರ ಮೊದಲ ಕವನ ಸಂಕಲನ ‘ಮತ್ತೆ ನಡೆಯಲ್ಲಿ ಸಮರ’ ಬೆಳಕು ಕಂಡಿತು. ನವೋದಯದಿಂದ ತೊಡಗಿ ಬಂಡಾಯೋತ್ತರದವರೆಗಿನ ತುಸು ಸುದೀರ್ಘವಾದ ಹತ್ತಾರು ಕವಿತೆಗಳು ವೈಚಾರಿಕತೆಯಿಂದ ಕೂಡಿದ್ದು ನಮ್ಮ ಗಮನ ಸೆಳೆಯುತ್ತವೆ. ನಾಡು, ನುಡಿ, ದೇಶಾಭಿಮಾನ, ಸಾಮಾಜಿಕ ಬದುಕಿನ ನೋವು ಸಂಕಟ, ತಳಮಳ, ಹತಾಶ ಸ್ಥಿತಿಗಳ ಚಿತ್ರಣವಿಲ್ಲಿದೆ. ‘ಹೀಗೊಂದು ಯಕ್ಷ ಪ್ರಶ್ನೆ’ 1995ರಲ್ಲಿ ಬೆಳಕು ಕಂಡ ಅವರ ಎರಡನೆಯ ಕವನ ಸಂಕಲನ. ಸೃಜನಶೀಲ ಮನಸ್ಸಿನ ಅನ್ವೇಷಣೆ ಇಲ್ಲಿಯ ಪ್ರಧಾನ ಬಿಂದು. ಬಯಲ ಬದುಕಿಗೆ ಕವಿ ಆದ್ಯತೆ ನೀಡಿದ್ದಾರೆ. ಬದುಕು ಪಾರದರ್ಶಕವಾಗಿದ್ದರೆ ಜೀವನ ಸಹ್ಯವಾಗುತ್ತದೆ ಎನ್ನುತ್ತಾರೆ ಕವಿ. ‘ಜೊತೆಯಾಗಿ ನಡೆಯೋಣ’ ಮೊಯಿಲಿ ಅವರ ಮೂರನೆಯ ಕಾವ್ಯ ಕುಸುಮ. ಅವರ ಪತ್ನಿ ಮಾಲತಿ ಅವರು ಬರೆದ ಕವಿತೆಗಳೂ ಇಲ್ಲಿವೆ.
ಮೊಯಿಲಿ ಅವರ ಕವಿತೆಗಳಲ್ಲಿ ಹಸಿವು, ಬಡತನ, ಅಸಮಾನತೆ ಶೋಷಣೆಗಳಿಗೆ ಮಾನವೀಯ ಸ್ಪಂದನ ಎದ್ದು ಕಾಣುತ್ತದೆ. ‘ಹಾಲು-ಜೇನು’ ಅವರ ಸಮಗ್ರ ಕವಿತೆಗಳ ಸಂಕಲನ. ಸಮಾಜದ ಕೆಳವರ್ಗದ ಪರ ಧ್ವನಿಯಾಗಲು ಅವರು ಕಾವ್ಯದಲ್ಲಿ ಶ್ರಮಿಸಿದ್ದಾರೆ. ಸಾಮಾಜಿಕ ಬದ್ಧತೆ, ಧೋರಣೆಗಳನ್ನು ಎತ್ತಿ ಹಿಡಿದಿರುವುದು ಮೊಯಿಲಿ ಅವರ ಕಾವ್ಯದ ಅತಿಶಯತೆ. ಸಮಕಾಲೀನ ಬದುಕಿನ ಆಶಯಗಳನ್ನು ಬಿಂಬಿಸುವ ನಿಟ್ಟಿನಲ್ಲಿ ಅವರ ಕಾವ್ಯ ಯಶಸ್ವಿಯಾಗಿದೆ. ಭಾವ ಹಿಂಡಿದ ವೈಚಾರಿಕತೆಯನ್ನು ಎತ್ತಿ ಹಿಡಿಯುವ ಸಂಕೀರ್ಣ ಕವಿತೆಗಳನ್ನು ಅವರು ಹೆಚ್ಚಾಗಿ ಬರೆದಿದ್ದಾರೆ. ವ್ಯಾಪಕ ಓದು, ಪಾಂಡಿತ್ಯ, ಕವಿ ಮನಸ್ಸು, ಸುಸಂಸ್ಕೃತ ಸಂವೇದನೆ ಎಲ್ಲವೂ ಬೆರೆತು ಸಾಗುವ ಚಲನಶೀಲ ಗುಣ ಅವರ ಕವಿತೆಗಳಲ್ಲಿ ಎದ್ದು ಕಾಣುತ್ತದೆ.

ಮಹಾಕಾವ್ಯ ರಚನೆಗೂ ‘ಸೈ’ : ಮೊಯಿಲಿ ಅವರು ಕವಿತೆಯಷ್ಟೆ ಅಲ್ಲ ‘ಶ್ರೀ ರಾಮಾಯಣ ಮಹಾನ್ವೇಷಣಂ’ ಎಂಬ ಐದು ಸೋಪಾನಗಳ ಬೃಹತ್ ಮಹಾಕಾವ್ಯ (2007)ವನ್ನು ರಚಿಸಿ ವಿದ್ವತ್ ಲೋಕದಲ್ಲಿ ಬೆರಗು ಹುಟ್ಟಿಸಿದ್ದಾರೆ. 21ನೆಯ ಶತಮಾನದ ಕನ್ನಡದ ಮೊದಲ ಮಹಾಕಾವ್ಯ ಎಂಬ ಕೀರ್ತಿಗೂ ಈ ಕೃತಿ ಪಾತ್ರವಾಗಿದೆ.
ಮಾನವತೆಯನ್ನು ಬಿತ್ತಿ ಜೀವನ ಪ್ರೀತಿಯನ್ನು ಬೆಳೆಯುವ ಅಸಲಿ ಕಸುಬಿನಲ್ಲಿ ಕವಿ ವೀರಪ್ಪ ಮೊಯಿಲಿ ಅವರು ನಿರತರಾಗಿದ್ದಾರೆ. ‘ಶ್ರೀ ರಾಮಾಯಣ ಮಹಾನ್ವೇಷಣಂ’ ಅವರ ಪಾಂಡಿತ್ಯ, ಪ್ರತಿಭೆಗೆ ಸಾಕ್ಷಿಯಾಗಿದೆ. ಈ ಮಹಾಯಾನದಲ್ಲಿ, ಮಹಾನ್ವೇಷಣೆಯಲ್ಲಿ, ಮಹಾಕಾವ್ಯದಲ್ಲಿ, ಅಲ್ಲಿಯ ಪಾತ್ರಗಳಲ್ಲಿ ಕವಿ ಕಾಣುವುದು ‘ಮನುಷ್ಯತ್ವ’. ಅನಾಥರ, ನಿರ್ಗತಿಕರ, ಸಾಮಾನ್ಯರಲ್ಲಿ ಸಾಮಾನ್ಯರಾದವರ ನೊಂದವರ ಬೆಂದವರ ಬದುಕನ್ನು ಪ್ರೀತಿಯಿಂದ ಎತ್ತಿ ಮೈದಡವಿ ಸಾಂತ್ವನಗೊಳಿಸಿ ಸಮಜಾಯಿಸಿ ನೀಡಿ ಹೊಸ ಚಿಂತನೆ ಹೊಸ ಹುಮ್ಮಸ್ಸನ್ನು ಮೂಡಿಸಿ ಪ್ರಗತಿ ಪಥದಲ್ಲಿ ಹೆಜ್ಜೆ ಇಡುವಂತೆ ಮಾಡುತ್ತಾರೆ. ಮೊಯಿಲಿ ಅವರ ‘ಶ್ರೀ ರಾಮಾಯಣ ಮಹಾನ್ವೇಷಣಂ’ ಮಹಾಕಾವ್ಯದ ಪ್ರಧಾನ ಆಶಯ ಜನಪರವಾದುದು. ಯಾವುದು ಜನಪರವಾದುದೋ ಅದು ಸಮಕಾಲೀನವೇ. ಪರಂಪರೆಯನ್ನು ಒಪ್ಪಿಕೊಳ್ಳುತ್ತಾ ನಿಂತ ನೀರಾಗಿರುವ ಸಂಪ್ರದಾಯಗಳನ್ನು ಮುಲಾಜಿಲ್ಲದೆ ಸವರಿ ಹಾಕುತ್ತಾ, ಮತಧರ್ಮಗಳ ಪೊಳ್ಳುತನ ಬಯಲು ಮಾಡಿ ತನ್ನ ಸುತ್ತಲಿನ ಸಮಾಜ ಸಂಸ್ಕೃತಿಗಳ ಮಿತಿಗಳನ್ನು ಗುರುತಿಸಿ ಜನಸಾಮಾನ್ಯರ ಪರವಾಗಿ ಮಾತನಾಡಲು ಕವಿ ಇಲ್ಲಿ ಪ್ರಯತ್ನಿಸಿದ್ದಾರೆ.

ವೀರಪ್ಪ ಮೊಯಿಲಿ ಅವರು ನ್ಯಾಯವಾದಿಯಾಗಿ, ಶಾಸಕರಾಗಿ, ಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ, ಲೇಖಕರಾಗಿ, ಕಾದಂಬರಿಕಾರರಾಗಿ, ಬದುಕಿನ ಕುರಿತು ನಂಬಿಕೆಯನ್ನು ಕುತೂಹಲವನ್ನು ಉಳಿಸಿಕೊಂಡು ಬಂದ ಪ್ರಜ್ಞಾವಂತ ಲೇಖಕರಾಗಿ ಸಮಕಾಲೀನ ಜಗತ್ತಿನೊಂದಿಗೆ ಜೀವಂತ ಸಂಬಂಧವನ್ನು ಇಟ್ಟುಕೊಂಡವರು. ಜಾನಪದ ಬದುಕಿನ ಜತೆಗೆ ಇಪ್ಪತ್ತನೆಯ ಶತಮಾನದ ನಮ್ಮ ನಾಡಿನ ಸಾಂಸ್ಕೃತಿಕ ಪಲ್ಲಟಗಳನ್ನು ಗಮನಿಸಿದವರು. ಗಣರಾಜ್ಯ ವ್ಯವಸ್ಥೆ, ವಿವಿಧ ಸಾಹಿತ್ಯ ಚಳುವಳಿಗಳು, ಗಾಂಧಿ, ನೆಹರು, ಸ್ವಾಮಿ ವಿವೇಕಾನಂದ, ಲೋಹಿಯಾ, ಜಯಪ್ರಕಾಶ ನಾರಾಯಣ ಹೀಗೆ ನಾನಾ ವ್ಯಕ್ತಿ ಭಾವಗಳನ್ನು ಕಂಡು ಓದಿ ಬಲ್ಲವರು. ಕೆಳವರ್ಗದ ನೋವು ನಲಿವುಗಳನ್ನು ಚೆನ್ನಾಗಿ ಅರ್ಥ ಮಾಡಿಕೊಂಡವರು. ಈ ಕವಿಗೆ ಇಹ ಮುಖ್ಯ; ಇಹದ ಬದುಕೂ ಮುಖ್ಯ. ಈ ಮಹಾಕಾವ್ಯದಲ್ಲಿ ಬರುವ ಎಲ್ಲ ಪಾತ್ರಗಳೂ ಮುಖ ಮಾಡುವುದು ‘ಮಹಾನ್ವೇಷಣೆ’ಯ ಕಡೆಗೆ. ಆ ಮಹಾನ್ವೇಷಣೆ ಜೀವನ ಶ್ರದ್ಧೆಗೆ ಸಂಬಂಧಿಸಿದ್ದು. ಸಮಷ್ಟಿ ಪ್ರಜ್ಞೆಯ ಮೂಲಕ ಸಾಮಾಜಿಕ ವಿಕಾಸವನ್ನು ಆಶಿಸುವಂಥದ್ದು.

ಮೊಯ್ಲಿ ವಿರಚಿತ ‘ಶ್ರೀ ರಾಮಾಯಣ ಮಹಾನ್ವೇಷಣಂ’ ಆಧುನಿಕ ಜನಾಂಗದ, ಬಹು ಸಂಸ್ಕೃತಿಯ ನಾಡಿನ ದರ್ಶನ ವೈವಿಧ್ಯವನ್ನು, ಹೊಸ ಜನಾಂಗದ ಆಸೆ ಆಕಾಂಕ್ಷೆಗಳ ಶೋಧವನ್ನು, ನಮ್ಮ ದುರಾವಸ್ಥೆಗೆ ಹಿನ್ನೆಡೆಗೆ ಕಾರಣಗಳನ್ನು, ನಮ್ಮ ಬದುಕಿನ ಸತತ ಸಂಘರ್ಷಗಳಿಗೆ ಉತ್ತರವನ್ನು ಅನ್ವೇಷಿಸುವ ಉದ್ದೇಶವನ್ನಿಟ್ಟುಕೊಂಡಿದೆ. ಒಟ್ಟಿನಲ್ಲಿ ನಮ್ಮ ಸಾಮಾಜಿಕ ಹಾಗೂ ಸಮಕಾಲೀನ ಅರಿವನ್ನು ಮೂಡಿಸುವಲ್ಲಿ ಈ ಕೃತಿಗೆ ವಿಶೇಷ ಮಹತ್ತ್ವವಿದೆ.
ಮಿಲ್ಟನ್ ಕವಿಯ ಪ್ಯಾರಡೈಸ್ ಲಾಸ್ಟ್, ಪ್ಯಾರಡೈಸ್ ರೀಗೇನ್ಡ್ ಆದ ಮೇಲೆ ಯಾವ ಭಾಷೆಯಲ್ಲೇ ಆಗಲಿ ಈ ಪ್ರಮಾಣದ ಒಂದು ಮಹಾಕಾವ್ಯ ಬಂದುದನ್ನು ಕಾಣೆ ಎಂದು ದಿವಂಗತ ರಾಷ್ಟ್ರಕವಿ ಗೋವಿಂದ ಪೈ ಅವರು ಕುವೆಂಪುರವರ ‘ರಾಮಾಯಣ ದರ್ಶನಂ’ ಕೃತಿಯ ಕುರಿತು ಹೇಳಿದ್ದುಂಟು. ಅನಂತರ ಕನ್ನಡದಲ್ಲಿ ಗೋಕಾಕ, ಪು.ತಿ.ನ., ಭೂಸನೂರಮಠ, ಜಯದೇವಿತಾಯಿ ಲಿಗಾಡೆ, ಎಸ್. ರಾಮರಾಯರು ಮಹಾಕಾವ್ಯವನ್ನು ರಚಿಸಿ ದೊಡ್ಡ ಪರಂಪರೆಯನ್ನೇ ಹಾಕಿಕೊಟ್ಟರು. ಅನಂತರ ಕನ್ನಡದಲ್ಲಿ ಹತ್ತಾರು ಮಂದಿ ಮಹಾಕಾವ್ಯಗಳನ್ನು ರಚಿಸಿದ್ದಾರೆ. ಮೊಯಿಲಿ ವಿರಚಿತ ಈ ಕೃತಿ 21ನೆಯ ಶತಮಾನದ ಮೊದಲ ಮಹಾಕಾವ್ಯವೂ ಹೌದು. ‘ಶ್ರೀ ರಾಮಾಯಣ ಮಹಾನ್ವೇಷಣಂ’ ಎಂಬ ಮಹಾಕಾವ್ಯವನ್ನು ಬರೆದ ಅವರು ಕನ್ನಡ ಸಾಹಿತ್ಯ ಕ್ಷೇತ್ರದ ಶಕಪುರುಷರ ಸಾಲಿಗೆ ಸೇರಿದ್ದಾರೆ.
ರಾಮಾಯಣ ಬರೇ ಚರಿತ್ರೆಯಲ್ಲ; ಪುರಾಣವಲ್ಲ. ಬದುಕಿನ ನಿತ್ಯ ಸತ್ಯವನ್ನು ತೆರೆದು ತೋರುವ ದರ್ಶನ ಅಲ್ಲಿ ಅಡಗಿದೆ. ಅದು ಈ ನಾಡಿನ ಆದಿ ಕಾವ್ಯ. ಅದೊಂದು ಮಹತ್ತ್ವದ ಬೃಹತ್ತಾದ ಭಾವಗೀತೆ. ನಮ್ಮ ನಾಡಿನ ಜನರನ್ನು ಅದು ಶತಶತಮಾನಗಳಿಂದ ಕೈಹಿಡಿದು ನಡೆಸಿದೆ. ಅದೊಂದು ಮಹಾನ್ ಶಕ್ತಿ. ರಾಮಾಯಣ ನಮ್ಮ ಭಾವಕೋಶದಲ್ಲಿ ಸೇರಿ ಹೋಗಿಬಿಟ್ಟಿದೆ. ಅಲ್ಲಿನ ಘಟನೆಗಳು, ಸ್ಥಳಗಳು ನಮಗೆ ಭೌಗೋಳಿಕ ಸತ್ಯಗಳಾಗಿವೆ. ರಾಮಾಯಣದಲ್ಲಿ ಸಮಸಾಮಯಿಕವಾದ ಅನೇಕ ಘಟನಾವಳಿಗಳಿವೆ, ವಿಷಯಗಳಿವೆ. ‘ಮನುಷ್ಯನ ಧರ್ಮ ಏನು?’ ಎಂಬ ಚಿರಂತನ ತತ್ತ್ವದ ಮೇಲೆ ಈ ಮಹಾಕಾವ್ಯ ನಿಂತಿದೆ. ನಮ್ಮ ಸನ್ನಡತೆಯಿಂದ ಬದುಕು ಹೇಗೆ ಹಸನಾಗಬಲ್ಲದು ಎಂಬುದನ್ನು ರಾಮಾಯಣ ಕಾವ್ಯ ತಿಳಿ ಹೇಳುತ್ತದೆ. ಮನುಷ್ಯನ ಕರ್ತವ್ಯವನ್ನು ಕುರಿತು ಇದು ಮತ್ತೆ ಮತ್ತೆ ಮಾತನಾಡುತ್ತದೆ. ನಮ್ಮ ಸಂವಿಧಾನದಲ್ಲಿ ಲಿಖಿತ ಕರ್ತವ್ಯಗಳ ಉಲ್ಲೇಖವಿದ್ದರೆ ಅಲ್ಲಿ ಬದುಕಿಗೆ ಬೇಕಾದ ಅಲಿಖಿತವಾದ ಕರ್ತವ್ಯಗಳಿವೆ. ‘ಒಳ್ಳೆಯ ಮನಸ್ಸು ಒಳ್ಳೆಯ ನಡತೆಯಿಂದ ಒಳ್ಳೆಯದಾಗುತ್ತದೆ. ಕೆಟ್ಟ ಮನಸ್ಸು ಕೆಟ್ಟ ನಡತೆಯಿಂದ ಕೆಟ್ಟ ಪ್ರತಿ ಫಲವನ್ನು ಅನುಭವಿಸಬೇಕಾಗುತ್ತದೆ’ ಎಂಬುದನ್ನು ಅದು ಹೇಳುತ್ತದೆ. ರಾಮಾಯಣದಲ್ಲಿ ನಿರೂಪಿತವಾದ ಮೌಲ್ಯಗಳು ಸರ್ವತೋಮುಖ ಅಭಿವೃದ್ಧಿಗೆ ಹೆದ್ದಾರಿಯಾಗಿದೆ ಎಂಬುದನ್ನು ಮೊಯಿಲಿ ಅವರು ಕಂಡು ಕೊಂಡಿದ್ದಾರೆ. ಅವರು ಬರೇ ರಾಜಕಾರಣಿಯಲ್ಲ: ರಾಜಕೀಯದಲ್ಲಿ ಅವರು ಕಳೆದು ಹೋದವರೂ ಅಲ್ಲ. ಬರೆ ಕನಸುಗಾರರೂ ಅವರಲ್ಲ. ನಾಡಿನ ಆಡಳಿತದ ಚುಕ್ಕಾಣಿ ಹಿಡಿದು ಅದರ ಸಾರಥ್ಯ ವಹಿಸಿ ರಾಮರಾಜ್ಯದ ಕನಸನ್ನು ನನಸುಗೊಳಿಸಲು ಪ್ರಯತ್ನಿಸಿದವರು.

ಮೊಯಿಲಿ ಅವರ ಮಹಾಕಾವ್ಯದಲ್ಲಿ ಮೂಲಕ್ಕಿಂತ ಭಿನ್ನ ರೀತಿಯ ಚಿಂತನೆಗಳಿವೆ. ಕಥೆಯ ಮೂಲ ಆಶಯಕ್ಕೆ ಚ್ಯುತಿ ಬರದಂತೆ ಕೆಲವು ಮಹತ್ತ್ವದ ಬದಲಾವಣೆಗಳನ್ನು ಮಾಡಿ ಕೊಂಡಿದ್ದಾರೆ. ಕಥೆಯ ನಡುನಡುವೆ ಪರಿಸರ ಸಂರಕ್ಷಣೆ, ಪುನರ್ವಸತಿ, ಸಮಾನತೆ, ಸಮಾಜೋದ್ಧಾರ, ವಿಜ್ಞಾನದ ಅಗತ್ಯತೆ, ಶಿಕ್ಷಣದ ಮೂಲಕ ಜಾಗೃತಿ, ಭ್ರಾತೃತ್ವ, ಆತ್ಮ ವಿಮರ್ಶೆ, ಉದಾತ್ತವಾದ ನೀತಿಯ ಅರಿವು, ದರ್ಶನ ಸಾಮರ್ಥ್ಯ, ದೂರಾಲೋಚನೆ, ತಾಳ್ಮೆ, ಶಾಂತಿ, ಸಹಕಾರ, ಸಹಬಾಳ್ವೆ ಮೊದಲಾದ ಗುಣಗಳನ್ನು ತತ್ತ್ವಗಳನ್ನು ಸಮಕಾಲೀನ ನೆಲೆಗೆ ಅನ್ವಯಿಸಿ ಚರ್ಚಿಸಿದ್ದಾರೆ. ಸಮಕಾಲೀನತೆ ಒಂದು ಯುಗಮಾನದ ‘ಭಾವಲಹರಿ’ ಎಂಬುದನ್ನು ಒಪ್ಪಿಕೊಂಡಾಗ ಮೊಯಿಲಿ ಅವರ ಮಹಾನ್ವೇಷಣೆಗೆ ಹೊಸ ಹೊಸ ಅರ್ಥಗಳು ಪ್ರಾಪ್ತವಾಗುತ್ತವೆ. ಶ್ರಮ ಸಂಸ್ಕೃತಿ, ಮಾನವೀಯ ಅಂತಃಕರಣ, ಸಮಬಾಳು, ಸಮುದಾಯ ಹಿತ ಮೊದಲಾದ ಮೌಲ್ಯಗಳು ಮೊಯಿಲಿ ಅವರಿಗೆ ಪ್ರಿಯವಾದವು. ಹಾಗಾಗಿ ಅವರ ನಾಯಕರೂ ಈ ಮೌಲ್ಯಗಳನ್ನು ಎತ್ತಿ ಹಿಡಿದಿದ್ದಾರೆ. ರಾಮಲಕ್ಷ್ಮಣ ಸೀತೆ ಮೊದಲಾದವರು ಕವಿಗೆ ಬರೆ ದೇವತೆಗಳಲ್ಲ. ಅವರು ‘ಮಾನವ ಪ್ರಜ್ಞೆ ಜಾಗೃತಗೊಳಿಸಿದ ಮಹಾನುಭಾವರು’. ಯುಗ ಮನದ ಸಂಸ್ಕೃತಿಯ ವಿಚಾರಧಾರೆ, ಸಮಾಜಪ್ರಜ್ಞೆ, ಸದ್ಧರ್ಮ, ಸಭ್ಯತೆಯ ಪ್ರತೀಕವಾದವರು, ‘ಮಾನವ ಜಾತಿ ತಾನೊಂದೇ ವಲಂ’ ಎಂಬ ಮಹಾಕವಿ ಪಂಪನ ಮಾತನ್ನು ಕವಿ ಇಲ್ಲಿ ದಶರಥನಿಂದ ಆಡಿಸುತ್ತಾರೆ. ಸಂದರ್ಭ ಹೀಗಿದೆ: ದಶರಥ ಪುತ್ರ ಸಂತಾನ ಪ್ರಾಪ್ತಿಗಾಗಿ ಯಾಗವೊಂದನ್ನು ಭರ್ಜರಿಯಾಗಿ ಹಮ್ಮಿಕೊಂಡಿದ್ದಾನೆ. ಮಧ್ಯಾಹ್ನದ ಊಟದ ಹೊತ್ತು ಚಂದ್ರಶಾಲೆಯ ಬಳಿ ಹಸಿದ ಭಿಕ್ಷುಕರು ಅಲ್ಲಿಯ ಸೈನಿಕರಿಂದ ಛೀಮಾರಿ ಹಾಕಿಸಿಕೊಂಡು ಎಂಜಲೆಲೆಯಿಂದ ಆಯ್ದು ತಿನ್ನುವುದು ದಶರಥನ ಗಮನಕ್ಕೆ ಬರುತ್ತದೆ. ಆತ ತಕ್ಷಣ ‘ಏನಿದೇನಿದು ಭೋಜನ ಶಾಲೆಗೆ ಬಾರದೇ ನೀವು ಕೈಯೊಡ್ಡಿರೆ ಎಂಜಲಿಗೆ ಆಗದಾಗದು ಸಲ್ಲದು ಲೋಪ ಪಾಪವ ಸಹಿಸೆನು ಸರ್ವರೂ ಸಮನಿಲ್ಲಿ ಭೇದ ಭಾವವು ಸಲ್ಲ ಶೋಷಕರು ಇರಲಾಗಿ ಶೋಷಿತರು ತಾವಿಹರು ಸಮಪಂಕ್ತಿ ಸಮಭಾವ ಸಹಕಾರ ಸೌಹಾರ್ದ ಸಹಭೋಜನ ಸಹವಿಚಾರ ಸಹಚಿಂತನವಿಲ್ಲಿ ಕೀಳಿಲ್ಲ ಮೇಲಲ್ಲ ಮನುಜಕುಲ ಒಂದೆಂಬ ತತ್ತ್ವವನ್ನು ಸಾರಿರುವ ಬಹುಪುಣ್ಯ ಭೂಮಿಯಿದು’ ಎನ್ನುತ್ತಾನೆ. ಅಷ್ಟೇ ಅಲ್ಲ, ‘ಮನುಜ ಭೇದವ ಮಾಡೆ ಮರಣದಂಡನೆ’ಯೆಂಬ ರಾಜಾಜ್ಞೆಯನ್ನು ಹೊರಡಿಸುತ್ತಾನೆ. ಹೃದಯ ಹೃದಯಗಳ ನಡುವೆ ಎದ್ದಿರುವ ಕೋಟೆಗಳ ಕೆಡವಿ ತುಂಡರಿಸಬೇಕಾದ ಅಗತ್ಯವನ್ನು ಕವಿ ಇಲ್ಲಿ ಎತ್ತಿ ಹಿಡಿದಿದ್ದಾರೆ. ದೀನದಲಿತರ ಬಾಳು ಸುಧಾರಿಸಬೇಕು; ಬಡವ ಬಲ್ಲಿದರೆಂಬ ಭೇದ ಭಾವ, ಮೇಲು ಕೀಳೆಂಬ ತಾರತಮ್ಯ ನೀಗಬೇಕು. ಸರ್ವೋದಯ ತತ್ವಗಳು ಸಾಕಾರಗೊಳ್ಳಬೇಕು. ಶೋಷಣಾ ರಹಿತವಾದ ಸಮಾಜವೊಂದು ರೂಪು ತಳೆಯಬೇಕು ಎಂಬುದು ಕವಿಯ ಹಿರಿಯಾಸೆ. ಶಾಂತಿ ಸ್ಥಾಪನೆಗೆ ಹೊರಟಿರುವ ರಾಮ ಲಕ್ಷ್ಮಣರಿಗೆ ವಿಶ್ವಾಮಿತ್ರ ಹೇಳುವ ಮಾತು ನಮ್ಮ ಭಾವಿ ಪ್ರಜೆಗಳನ್ನು ಉದ್ದೇಶಿಸಿ ಹೇಳಿದ ಮಾತು ‘’ಯುಗ ಧರ್ಮವಿದೆಯೆಂದು ತಲೆ ಚಚ್ಚೆ ಬರುವುದೇ ಸ್ವರ್ಗ ಸೌಭಾಗ್ಯ ಕಾಲ ಬುಡಕೆ?, ನಾವಿಕರು ನೀವಾಗಿ, ನಾಳೆ ಬರಲೆಂದೆನುತ ಕಾಯೆ ಹಳಸಲ್ಪುಡುವುದು. ಆದಾನ ಪ್ರದಾನ ಪ್ರಯೋಗ ವಿಜ್ಞಾನ, ಮಾನವರ ದೇವರಾಗಿಸುವ ಸಿದ್ಧಾಂತ ಬೆಳೆಯೆ, ಗೋರಿ ಸೇರಲೈ ವರ್ಣಜಾತಿಗಳ ಕಾಟಾಚಾರ, ವಿಜ್ಞಾನ ಸೊಗಡ ಅನ್ವೇಷಣೆಯ ಮಹಾಯಾತ್ರೆಯ ಜಗ ಕಾಣಲಿ ಬೆಳಕು’. ಸತ್ಯಾನ್ವೇಷಣೆಯೆ ನಮ್ಮ ಬದುಕಿನ ದೀಕ್ಷೆಯಾಗಬೇಕೆಂಬುದು ಕವಿಯ ಆಶಯ.
ಮನುಷ್ಯ ಬರೇ ಪ್ರಾಣಿಯಲ್ಲ. ಬಲ ಪ್ರಯೋಗ, ಕಾನೂನಿನಿಂದ ಎಲ್ಲವನ್ನೂ ಬದಲಾಯಿಸಲು ಚಿಕಿತ್ಸೆಗೊಳಿಸಲು ಸಾಧ್ಯವಿಲ್ಲ ‘ದಾನವತೆ ಅಳಿಯಲಿಕೆ ಕೊಲುವುದೊಂದೇ ಮಾರ್ಗವಲ್ಲವು, ಮಾನವತೆಯ ಸಿಂಚನವ ಮಾಡೋಣ’ ಪ್ರೀತಿ ಕಾರುಣ್ಯಗಳೆ ಜಗವ ಉಳಿಸುವ ಗಾರುಡಿಯು, ಲೇಸಲ್ಲ ವಧೆ; ಸಹನೆ ಲೇಸು’ ಎಂಬಲ್ಲಿ ಮನುಕುಲದ ಉಳಿವಿನ ಬಗೆಗೆ ಕವಿಗಿರುವ ಕಾಳಜಿ ಹೃದಯ ವೈಶಾಲ್ಯ ಗಮನಾರ್ಹವಾದ ಅಂಶ.

ನಾಟಕಕಾರರಾಗಿ ಮೊಯಿಲಿ : ಯಕ್ಷಗಾನ ಕಲೆಯಲ್ಲಿ ವಿಶೇಷವಾದ ಆಸಕ್ತಿ, ಅಭಿರುಚಿಯನ್ನು ಹೊಂದಿರುವ ವೀರಪ್ಪ ಮೊಯಿಲಿ ಅವರು ನಾಟಕ ಕ್ಷೇತ್ರದಲ್ಲಿ ಕೃಷಿ ಮಾಡಿದ್ದಾರೆ. ಅವರು ಬರೆದ ಪ್ರೇಮವೆಂದರೆ, ಪರಾಜಿತ ಹಾಗೂ ಮಿಲನ ಎಂಬ ನಾಟಕಗಳು ಬೆಳಕು ಕಂಡಿವೆ. ಮಾನವನ ಬದುಕಿನ ಮೂಲ ಸೆಲೆಯಾದ ಪ್ರೀತಿ, ಪ್ರೇಮ, ಅಹಂಕಾರ, ದ್ವೇಷಗಳನ್ನು ವಸ್ತುವಾಗಿಸಿ ಅವರು ಬರೆದ ನಾಟಕ ‘ಪ್ರೇಮವೆಂದರೆ’ ದುರಂತದಲ್ಲಿ ಅಂತ್ಯವಾಗುತ್ತದೆ. ಇದೊಂದು ಸಾಮಾನ್ಯ ನಾಟಕ. ಮಿಲನ ನಾಟಕದಲ್ಲಿ ಸತ್ಯಕ್ಕೆ ಸಾವಿಲ್ಲ ಎಂಬ ಆಶಯ ವ್ಯಕ್ತವಾಗಿದ್ದರೆ, ‘ಪರಾಜಿತ’ ನಾಟಕ ಬದುಕಿನ ಸಾರ್ಥಕತೆಯ ಹುಡುಕಾಟದಲ್ಲಿ ಅಂತ್ಯವಾಗುತ್ತದೆ. ವಾಸ್ತವವಾದ ದೃಷ್ಟಿಕೋನವಿಲ್ಲಿ ಪ್ರಕಟವಾಗಿದ್ದರೂ ರಂಗತಂತ್ರ, ಕಥಾಸಂಧಾನ, ಸನ್ನಿವೇಶ ನಿರ್ಮಾಣ, ವಸ್ತು, ವಿಷಯಗಳೆಲ್ಲ ಕಂಪೆನಿ ನಾಟಕಗಳನ್ನು ನೆನಪಿಸುವಂತಿದೆ. ನೊಂದವರ ಪರವಾಗಿ ಬರೆಯುವ ಮೊಯಿಲಿ ಅವರ ಮಾನವ್ಯ ಧೋರಣೆ ಇಲ್ಲಿಯೂ ಎದ್ದು ಕಾಣುತ್ತದೆ.
ಸಾಹಿತಿ, ರಾಜಕಾರಣಿ ವೀರಪ್ಪ ಮೊಯಿಲಿ ಅವರದು ಬಹುಭಾಷಿಕ ಸಂವೇದನೆ. ಕನ್ನಡ, ತುಳು, ಕೊಂಕಣಿ, ಹಿಂದಿ, ಇಂಗ್ಲೀಷ್ ಮೊದಲಾದ ಭಾಷೆಗಳಲ್ಲಿ ಅವರು ಪ್ರಭುತ್ವ ಸಾಧಿಸಿಕೊಂಡಿದ್ದಾರೆ. ಸಾಹಿತ್ಯದ ಅನನ್ಯತೆಗಿಂತ ಸಾಮಾಜಿಕ ಅನನ್ಯತೆಯೆಡೆಗೆ ಅವರ ತುಡಿತ ಜಾಸ್ತಿ, ಜೀವನದ ವೈವಿಧ್ಯವನ್ನು ಕೇಂದ್ರ ವಸ್ತುವಾಗುಳ್ಳ ಕಾದಂಬರಿ, ಕಾವ್ಯ, ನಾಟಕಗಳನ್ನು ರಚಿಸಿ ಅವರು ಕನ್ನಡ ಸಾರಸ್ವತ ಪ್ರಪಂಚದಲ್ಲಿ ತಮ್ಮದೇ ಛಾಪನ್ನು ಮೂಡಿಸಿದ್ದಾರೆ. ಮೇಲ್ವರ್ಗದ ಇರುವನ್ನು ಬದಿಗೊತ್ತಿ ಶೋಷಿತ ಸಮುದಾಯಗಳ ಆಂತರಿಕ ವಲಯವನ್ನು ತೆರೆದಿಡುವಲ್ಲಿ ಅವರ ಕೃತಿಗಳು ಯಶಸ್ವಿಯಾಗಿವೆ. ಎಂ. ವೀರಪ್ಪ ಮೊಯಿಲಿ ಅವರು ಒಬ್ಬ ಪ್ರಖ್ಯಾತ ಆಡಳಿತಗಾರ, ಉನ್ನತ ಮಟ್ಟದ ರಾಜಕಾರಣಿ, ಖ್ಯಾತ ಅರ್ಥಶಾಸ್ತ್ರಜ್ಞ ಮತ್ತು ಹೆಸರಾಂತ ಸಾಹಿತ್ಯ ಸಾಧಕ. ವೃತ್ತಿಯಲ್ಲಿ ವಕೀಲರಾಗಿರುವ ಅವರು ಸುಮಾರು ಆರು ದಶಕಗಳಿಂದ ರಾಜಕೀಯದಲ್ಲಿದ್ದಾರೆ. ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾರೆ; ಕರ್ನಾಟಕ ಸರ್ಕಾರದ ಹಣಕಾಸು ಮತ್ತು ಯೋಜನೆ ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ; ಕರ್ನಾಟಕ ಸರ್ಕಾರದ ತೆರಿಗೆ ಸುಧಾರಣಾ ಆಯೋಗ ಮತ್ತು ಕಂದಾಯ ಸುಧಾರಣಾ ಆಯೋಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಭಾರತ ಸರ್ಕಾರದ ಕಾನೂನು ಮತ್ತು ನ್ಯಾಯ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಪ್ರತಿಭಾನ್ವಿತ ಬರಹಗಾರರಾದ ಅವರು ಕನ್ನಡ ಮತ್ತು ಇಂಗ್ಲೀಷ್ ಎರಡರಲ್ಲೂ ಬರವಣಿಗೆ ಮಾಡಿದ್ದು ವಿಶೇಷ. ‘ನನ್ನ ಬೊಗಸೆಯ ಆಕಾಶ’ ಅವರ ಆತ್ಮ ಕಥನ, ‘ಶ್ರೀ ಬಾಹುಬಲಿ ಅಹಿಂಸಾದಿಗ್ವಿಜಯಂ’ ವೀರಪ್ಪ ಮೊಯಿಲಿ ಅವರು ರಚಿಸಿರುವ ಪೌರಾಣಿಕ ಮಹಾಕಾವ್ಯ ಕೃತಿ .ಇದು ಹತ್ತನೆಯ ಶತಮಾನದಲ್ಲಿ ಆಗಿಹೋದ ಹೇಮಾಹೇಮಿಗಳನ್ನು ಈ ಕಾವ್ಯದ ಪ್ರಮುಖ ಪಾತ್ರಗಳನ್ನಾಗಿಸಿ ಕನ್ನಡನಾಡಿನ ಚರಿತ್ರೆಯ ಜೀವತುಂಬಿ, ಆ ಅವಧಿಯ ಸಾಂಸ್ಕೃತಿಕ ಲೋಕವನ್ನು ಲೀಖಕ ಮೊಯಿಲಿ ಅವರು ಅನಾವರಣಗೊಳಿಸಿದ್ದಾರೆ ಎಂದು ಡಾ. ಹಂಪನಾ ಮೆಚ್ಚುಗೆ ಸೂಚಿಸಿದ್ದಾರೆ. ಜೊತೆಗೆ ಇತಿಹಾಸ ತಜ್ಞ ಪ್ರೊ. ಷ. ಶೆಟ್ಟರ್ ಅವರು ಈ ಕೃತಿಯ ಬಗ್ಗೆ ಬರೆಯುತ್ತಾ ‘ಮೊಯಿಲಿ ಅವರು ಜೈನರ ಜನನ-ಮರಣ ಸಂಹಿತೆಯನ್ನು ಸರಿಯಾಗಿ ಅರ್ಥಮಾಡಿಕೊಂಡು, ಜೈನಪಾರಿಭಾಷಿಕ ಪದಗಳಾದ ಸಲ್ಲೇಖನ, ಆರಾಧನಾ, ಸಮವಸರಣ, ಮಾನಸ್ತಂಭ, ಕಾರ್ಯೋತ್ಸರ್ಗ, ಕೇವಲತ್ವ ಮುಂತಾದವುಗಳನ್ನು ಸಂದರ್ಭೋಚಿತವಾಗಿ ಬಳಸಿರುವುದನ್ನು ಕಾಣಬಹುದು’ ಎನ್ನುತ್ತಾರೆ. ಈ ಸಂಪೂರ್ಣ ಮಹಾಕಾವ್ಯದ ಅಂಗೀರಸ ಶಾಂತರಸವಾಗಿದೆ. ಪ್ರಸಂಗಾನುಸಾರವಾಗಿ ಲೋಕಪ್ರಸಿದ್ಧ ಕಥೆಗಳನ್ನು ಸಮಾವೇಶ ಮಾಡಿ ಧರ್ಮೋಪದೇಶದ ಮೂಲಕ ಭೋಗದಿಂದ ತ್ಯಾಗದ ಕಡೆಗೆ ಕೊಂಡೊಯ್ಯುವ ಪ್ರಯತ್ನ ಸಾರ್ಥಕವಾಗಿದೆ ಎಂಬುದು ಪ್ರೊ. ಜಯಕುಮಾರ್ ಉಪಾಧ್ಯೆ ಅವರ ಅಭಿಪ್ರಾಯ. ಈ ಕೃತಿಗೆ ಪ್ರೊ. ಜಯಕುಮಾರ್ ಉಪಾಧ್ಯೆ, ಪ್ರೊ. ಷ. ಶೆಟ್ಟರ್, ಡಾ. ಹಂಪನಾ, ಬಿ.ಎ. ವಿವೇಕ ರೈ ಸೇರಿದಂತೆ ನಾಡಿನ ಪ್ರಮುಖ ಲೇಖಕರು ಬೆನ್ನುಡಿ ಬರೆದಿದ್ದಾರೆ. ಈ ಮಹಾಕಾವ್ಯಕ್ಕೆ 2020ನೆಯ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.

‘ವಿಶ್ವ ಸಂಸ್ಕೃತಿಯ ಮಹಾಯಾನ’ ಅವರ ಇತ್ತೀಚಿನ ಮಹಾಕೃತಿ. ಈ ಕೃತಿಯು ಬಸವಪೂರ್ವ ಯುಗದ ವೈಚಾರಿಕತೆಯಿಂದ ಆರಂಭಗೊಂಡು ಹದಿನೆಂಟನೆಯ ಶತಮಾನದ ಇಂಗ್ಲೀಷ್ ಸಾಹಿತ್ಯದ ಸಂಭ್ರಮದವರೆಗಿನ ಸುದೀರ್ಘ ಕಾಲಘಟ್ಟದ ವೈವಿಧ್ಯಪೂರ್ಣ ಸಾಂಸ್ಕೃತಿಕ ಚಿಂತನೆಗಳನ್ನು ಒಳಗೊಂಡಿದೆ. ಜಗತ್ತಿನ ಇತಿಹಾಸದ ಕಾಲಪ್ರವಾಹದಲ್ಲಿ ಎದುರಾದ ತಲ್ಲಣಗಳು, ಸಂಘರ್ಷಗಳು ಮತ್ತು ಸವಾಲುಗಳನ್ನು ಲೇಖಕರು ಇಲ್ಲಿ ಆಳವಾಗಿ ವಿಶ್ಲೇಷಣೆಗೊಳಪಡಿಸಿದ್ದಾರೆ. ಈ ಸಂಕಷ್ಟದ ಸಂದರ್ಭಗಳಲ್ಲಿ ವಿಶ್ವದಾದ್ಯಂತ ಉದಯಿಸಿದ ಕವಿಗಳು, ದಾರ್ಶನಿಕರು ಹಾಗೂ ರಾಜಕೀಯ ಮುತ್ಸದ್ದಿಗಳು ತಮ್ಮ ವಿವೇಕದ ಮೂಲಕ ಮಾನವಕುಲಕ್ಕೆ ತೋರಿದ ಮಾರ್ಗಸೂಚಿಗಳು ಇಲ್ಲಿ ಅನಾವರಣಗೊಂಡಿವೆ. ಓದುಗರನ್ನು ಎಚ್ಚರಿಸುವ ಜೊತೆಗೆ, ಬದುಕಿನ ಭವಿಷ್ಯಕ್ಕೆ ಭರವಸೆಯ ಬೆಳಕನ್ನು ನೀಡುವ ದಿಕ್ಸೂಚಿಯಾಗಿ ಈ ಕೃತಿ ಮೂಡಿಬಂದಿರುವುದು ವಿಶೇಷ. ಎಂ. ವೀರಪ್ಪ ಮೊಯಿಲಿ ಅವರು ‘ಶ್ರೀರಾಮಾಯಣ ಮಹಾನ್ವೇಷಣಂ’, ‘ಸಿರಿಮುಡಿ ಪರಿಕ್ರಮಣ’ ಮತ್ತು ‘ಶ್ರೀ ಬಾಹುಬಲಿ ಅಹಿಂಸಾ ದಿಗ್ವಿಜಯಂ’ ಮಹಾಕಾವ್ಯಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿ ತಮ್ಮ ಕಾವ್ಯ ಪ್ರತಿಭೆಯ ಅನನ್ಯ ಮುಖಗಳನ್ನು ಪ್ರಕಟಿಸಿದ್ದಾರೆ. ಈಗ ಅವರು ‘ವಿಶ್ವಸಂಸ್ಕೃತಿಯ ಮಹಾಯಾನ’ ಎನ್ನುವ ಗದ್ಯಕಾವ್ಯ ಸಂಹಿತೆಯ ಮಾದರಿಯ ಗ್ರಂಥವನ್ನು ರಚಿಸಿ ಹೊಸ ಮಾರ್ಗವೊಂದನ್ನು ಅನ್ವೇಷಿಸಿದ್ದಾರೆ. ಬೌದ್ಧಿಕ ಸಂವಾದದ ಸ್ವರೂಪದ ನಿರೂಪಣೆಯಲ್ಲಿ ಇರುವ ಈ ಸಂಕಥನವು ಕಾಲಗರ್ಭದಲ್ಲಿ ಹುದುಗಿಹೋದ ವಿಶ್ವಸಂಸ್ಕೃತಿಯ ಅಪೂರ್ವ ಜ್ಞಾನವನ್ನು ಬಹುರೂಪಿ ನೆಲೆಯಲ್ಲಿ ಅನಾವರಣ ಮಾಡುತ್ತದೆ. ಇತಿಹಾಸವನ್ನು ಶೋಧಿಸುವ ಈ ಗ್ರಂಥದಲ್ಲಿ ಮಾನವ ಇತಿಹಾಸದಲ್ಲಿ ವಿಜ್ಞಾನದ ಪ್ರಭಾವದ ವಿವಿಧ ಮಾದರಿಗಳ ಅವಲೋಕನವಿದೆ.
ಭಾರತೀಯ ವೇದಗಳು, ಉಪನಿಷತ್ತು, ಭಗವದ್ಗೀತೆ, ಧರ್ಮಶಾಸ್ತ್ರ, ನ್ಯಾಯಶಾಸ್ತ್ರ, ದರ್ಶನಗಳು, ಇವುಗಳ ಬಹುಮುಖಿ ಪದರಗಳು ಇತಿಹಾಸ, ಮಹಾಕಾವ್ಯ, ನಾಟಕಗಳು, ಜಾನಪದ ಜಗತ್ತು ಈ ಕೃತಿಯಲ್ಲಿ ತೆರೆದುಕೊಳ್ಳುವ ಬೆರಗಿನ ಜಗತ್ತು ಇದೆ. ಈ ಎಲ್ಲ ಕ್ಷೇತ್ರಗಳ ಸಾಧಕರ ಹಾಗೂ ಸಮುದಾಯಗಳ ಜ್ಞಾನಭಂಡಾರದ ಅನ್ವೇಷಣೆಯು ಕನ್ನಡದಲ್ಲಿ ಮೊದಲ ಬಾರಿ ಬೆಳಕಿಗೆ ಬರುತ್ತಿದೆ. ಗ್ರೀಕ್, ಚೀನಾ, ಜಪಾನ್, ಈಜಿಪ್ಟ್, ಬೈಜಾಂಟಿಯಂ ನಾಗರಿಕತೆಗಳ ಪುನರಾವಲೋಕನ ಮತ್ತು ಪ್ರಸ್ತುತತೆಯ ಜಿಜ್ಞಾಸೆ ಇಲ್ಲಿ ದೊರೆಯುತ್ತದೆ. ಕ್ರೈಸ್ತಧರ್ಮ, ಜರಾತುಷ್ಟ ಮತ್ತು ಯಹೂದಿ ಧರ್ಮಗಳ ಸ್ವರೂಪ ಮತ್ತು ಅಂತರ್ ಸಂಬಂಧಗಳ ಸೂಕ್ಷ್ಮ ವಿವೇಚನೆಯನ್ನು ಇಲ್ಲಿ ಕಾಣಬಹುದು.
ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯ ಆವರಣದಲ್ಲಿ ಬೇರೆ ಬೇರೆ ಶೈಕ್ಷಣಿಕ ವಿಭಾಗಗಳ ಪ್ರಾಧ್ಯಾಪಕರು ಮತ್ತು ಸಂಶೋಧನ ವಿದ್ಯಾರ್ಥಿಗಳು ಪಾಲುಗೊಳ್ಳುವುದರ ಜೊತೆಗೆ ಗಿರಿಧರನಂತಹ ಮೇಧಾವಿಯ ಬಹುಶ್ರುತ ಜ್ಞಾನವು ಬೆಳಕಿಗೆ ಬರುವ ಪ್ರಶೋತ್ತರ ಮಾದರಿಯ ತಂತ್ರಗಾರಿಕೆಯು ಈ ಗ್ರಂಥಕ್ಕೆ ಬೌದ್ಧಿಕ ಚೌಕಟ್ಟನ್ನು ನಿರ್ಮಾಣ ಮಾಡಿದೆ. ವಸುಧೈವ ಕುಟುಂಬಕಂ ಎನ್ನುವ ಸಂದೇಶವನ್ನು ಸಾರುವ ಎಂ. ವೀರಪ್ಪ ಮೊಯಿಲಿ ಅವರ ‘ವಿಶ್ವಸಂಸ್ಕೃತಿಯ ಮಹಾಯಾನ’ ಎಂಬ ಈ ಗದ್ಯ ಸಂಕಥನವು 21ನೆಯ ಶತಮಾನದ ಕನ್ನಡ ಸಾಹಿತ್ಯ ಜಗತ್ತಿಗೆ ಮಹತ್ವದ ಕೊಡುಗೆಯಾಗಿದೆ ಎಂಬುದಾಗಿ ಡಾ. ವಿವೇಕ ರೈ ಅವರು ಅಭಿಪ್ರಾಯಪಟ್ಟಿದ್ದಾರೆ.
ಸಾಹಿತಿ, ಲೇಖಕ, ಚಿಂತಕ ವೀರಪ್ಪ ಮೊಯಿಲಿ ಅವರ ಸಾಹಿತ್ಯ ಸಾಧನೆಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ದೇವರಾಜ ಅರಸು ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಗೊರೂರು ಪ್ರತಿಷ್ಠಾನದ ಪ್ರಶಸ್ತಿ, ಅಂಬೇಡ್ಕರ್ ಪ್ರಶಸ್ತಿ ಹೀಗೆ ಹತ್ತು ಹಲವು ಪುರಸ್ಕಾರಗಳಿಗೆ ಅವರು ಭಾಜನರಾಗಿದ್ದಾರೆ. ಅವರ ಒಟ್ಟು ಸಾಧನೆಯನ್ನು ಗಮನಿಸಿ ಮಂಗಳೂರು ವಿ.ವಿ. ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿದೆ. ‘ಶ್ರೀರಾಮಾಯಣ ಮಹಾ ನ್ವೇಷಣಂ’ ಕೃತಿಗೆ ಭಾರತೀಯ ಜ್ಞಾನಪೀಠ ಪ್ರತಿಷ್ಠಾನ ನೀಡುವ 2010ರ ಸಾಲಿನ ಮೂರ್ತಿದೇವಿ ಪ್ರಶಸ್ತಿ ಹಾಗೂ 2014ರ ಸಾಲಿನ ಪ್ರತಿಷ್ಟಿತ ‘ಸರಸ್ವತಿ ಸಮ್ಮಾನ್’ ಪ್ರಶಸ್ತಿ ಗೌರವ ಅವರಿಗೆ ಲಭಿಸಿದೆ. 2020ನೆಯ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೂ ಸಹ ಅವರು ಭಾಜನರಾಗಿದ್ದಾರೆ. ವೀರಪ್ಪ ಮೊಯಿಲಿ ಅವರ ಕೃತಿಗಳು ಭಾರತದ ಬೇರೆ ಬೇರೆ ಭಾಷೆಗಳಿಗೆ ಅನುವಾದಗೊಂಡಿರುವುದರಿಂದ ದೊಡ್ಡ ಓದುಗ ವರ್ಗವೂ ಅವರಿಗಿದೆ. ಮೊಯಿಲಿ ಅವರು ರಾಜಕಾರಣದಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡರೂ ಕಲಾರಾಧನೆಯಲ್ಲಿ ಸಾಹಿತ್ಯ ಕೃಷಿಯಲ್ಲಿ ಅದ್ದಿಕೊಂಡದ್ದು ಅವರ ಧೀಶಕ್ತಿಗೆ ನಿದರ್ಶನ.

ಪ್ರೊ. ಜಿ.ಎನ್. ಉಪಾಧ್ಯ ಮುಂಬೈ
ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಹಿರಿಯ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವ ಪ್ರೊ. ಜಿ.ಎನ್. ಉಪಾಧ್ಯ ಅವರು ಮುಂಬೈ ಮಹಾನಗರದಲ್ಲಿ ಕನ್ನಡದ ಪ್ರಸಾರ ಮತ್ತು ಪ್ರಚಾರದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಸಂಶೋಧನೆ, ವಿಮರ್ಶೆ, ಪತ್ರಿಕೋದ್ಯಮ, ಭಾಷಾವಿಜ್ಞಾನ ಅವರ ಆಸಕ್ತಿಯ ಕ್ಷೇತ್ರಗಳು. ವೈವಿಧ್ಯಮಯವಾದ 100ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಅವರು ತಮ್ಮದೇ ಆದ ‘ಅಭಿಜಿತ್’ ಪ್ರಕಾಶನವನ್ನು ಮುಂಬೈಯಲ್ಲಿ ಆರಂಭಿಸಿ 130ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿ ಸಾಹಿತ್ಯ ವಲಯವಾಗಿ ಮುಂಬೈ ಇಂದಿಗೂ ಬೆಳಗುವಂತೆ ಮಾಡಿದ್ದಾರೆ. ‘ಮಹಾರಾಷ್ಟ್ರದ ಕನ್ನಡ ಶಾಸನಗಳು’, ‘ಗೋದಾವರಿ ತೀರದಲ್ಲಿ ಕನ್ನಡದ ಕುರುಹು’, ‘ಮಹಾರಾಷ್ಟ್ರದ ಕನ್ನಡ ಸ್ಥಳನಾಮಗಳು’, ‘ಸಿದ್ಧರಾಮನ ಸೊನ್ನಲಿಗೆ’, ‘ಮುಂಬೈ ಕನ್ನಡ ಪರಿಸರ’, ‘ಮುಂಬೈ ಕನ್ನಡ ಸಾಹಿತ್ಯ ಚರಿತ್ರೆ’ ಮೊದಲಾದ ಕೃತಿಗಳು ವಿದ್ವತ್ ವಲಯದಲ್ಲಿ ಸಾಕಷ್ಟು ಜನಪ್ರಿಯವಾಗಿವೆ. ಅವರ ಮಾರ್ಗದರ್ಶನದಲ್ಲಿ ಈವರೆಗೆ 74 ಮಂದಿ ಎಂ.ಫಿಲ್ ಹಾಗೂ ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ. ಗುರುನಾರಾಯಣ ಸಾಹಿತ್ಯ ಪ್ರಶಸ್ತಿ, ನರಹಳ್ಳಿ ಪ್ರಶಸ್ತಿ, ಕರ್ನಾಟಕ ಶ್ರೀ ಪುರಸ್ಕಾರ ಮೊದಲಾದ ಗೌರವಕ್ಕೂ ಡಾ. ಉಪಾಧ್ಯ ಇವರು ಪಾತ್ರರಾಗಿದ್ದು, ಮುಂಬೈ ವಿವಿಯಲ್ಲಿ ಕನ್ನಡ ವಿಭಾಗಕ್ಕೆ ‘ಎ’ ಗ್ರೇಡ್ ತಂದುಕೊಡುವಲ್ಲಿ ಇವರು ಸಫಲರಾಗಿದ್ದಾರೆ.
