ಉಡುಪಿ : ಈಗಾಗಲೇ ಮೂರು ವರ್ಷಗಳಿಂದ ಸತತವಾಗಿ ಬೇಸಿಗೆಯಲ್ಲಿ ಮಕ್ಕಳ ಶಿಬಿರ ನಡೆಸಿಕೊಂಡು ಯಶಸ್ವಿಯಾಗಿರುವ ಉಡುಪಿಯ ಶ್ರೀ ಅಭಿರಾಮ ಧಾಮದಲ್ಲಿ ಮುಂದಿನ ತಿಂಗಳು, ಏಪ್ರಿಲ್ 12ರಿಂದ 28ರ ತನಕ ‘ವಸಂತ ಶಿಬಿರ’ ಆಯೋಜಿಸಲಾಗುತ್ತಿದೆ. ಸುದೀರ್ಘ 16 ದಿನಗಳ ಕಾಲ ಪ್ರತೀ ದಿನ ಮುಂಜಾನೆ 6-30ಯಿಂದ 10ರ ತನಕ ಹಾಗೂ ಮಧ್ಯಾಹ್ನ 4-00ರಿಂದ 7-30ರ ತನಕ ಶಿಬಿರವು ಜರುಗಲಿದ್ದು ದಿನಂ ಪ್ರತೀ ಏಳು ತಾಸುಗಳ ಪೂರ್ವ ಆಯೋಜಿತ ಅವಧಿಗಳಲ್ಲಿ 11 ವಿಶಿಷ್ಟ ವಿಷಯ- ತಜ್ಞರ ಮೂಲಕ ಸುಜ್ನ್ಯಾನ ಪ್ರಸರಣ ಉಡುಪಿಯ ಮಕ್ಕಳಿಗೆ ನಿತ್ಯವೂ ನೀಡಲಾಗುತ್ತದೆ ಎಂದು ಅಭಿರಾಮ ಧಾಮದ ಸಂಸ್ಥಾಪಕ ಅಧ್ಯಕ್ಷರಾದ ಪರ್ಲತ್ತಾಯ ಡಾ. ಸುದರ್ಶನ ಭಾರತೀಯ ತಿಳಿಸಿದ್ದಾರೆ.

ಉಡುಪಿಯ 8ರಿಂದ 16 ವಯಸ್ಸಿನ ಚಿಣ್ಣರಲ್ಲಿ ಸನಾತನ ಧರ್ಮದ ಹೊಳಹುಗಳನ್ನು, ಸದ್ವರ್ತನೆಯ ಮಾದರಿಯನ್ನು, ಸುಜ್ನ್ಯಾನಗಳ ಹೊಂಬೆಳಕನ್ನು, ರಾಷ್ಟ್ರ ಭಕ್ತಿಯ ಮೆರುಗನ್ನು ಪುನರುಚ್ಚರಿಸುವುದರಿಂದ ಅವರು ಕೇವಲ ಸಾಮಾನ್ಯ ವ್ಯಕ್ತಿಗಳಾಗದೇ ವಿಚಾರವಂತ ವ್ಯಕ್ತಿತ್ವಗಳಾಗಿ ಬೆಳೆಯುವಲ್ಲಿ ಈ ಶಿಬಿರ ಸಹಾಯಕಾರಿಯಾಗಲಿದೆ. ಬೆಳಿಗ್ಗೆ ಹಾಗೂ ಸಂಜೆ ಶುದ್ಧವೂ, ಸ್ವಾದಿಷ್ಟವೂ ಆದ ಖಾದ್ಯಗಳನ್ನು ಪ್ರಸಾದವಾಗಿ ವಿತರಿಸಲಾಗುತ್ತದೆ. ಸಂಸ್ಕೃತ- ಯೋಗ- ಸಂಗೀತ- ನೃತ್ಯ- ಭಾಷಣಕಲೆ- ಯಕ್ಷಗಾನ- ಉತ್ತಮನಡೆ- ನುಡಿ- ವರ್ತನೆ ಕುರಿತಂತೆ ರಂಗ ಚಟುವಟಿಕೆಗಳು, ಧರ್ಮಶಾಸ್ತ್ರಗಳ ಬಗ್ಗೆ ಪಕ್ಷಿನೋಟ, ವಿದ್ವತ್ ಜನರೊಡನೆ ಒಡನಾಟ ಮುಂತಾದ ಕಾರ್ಯಕ್ರಮಗಳು ಈ ಶಿಬಿರದ ಗರ್ಭದಲ್ಲಿವೆ. ಪುಟ್ಟಪುಟ್ಟ ಬದುಕಲ್ಲಿ ಮಹತ್ತರ ಗುರಿಗಳನ್ನಿರಿಸಿಕೊಂಡು ಸಾಧನೆಯ ಪಥದಲ್ಲಿ ಸಾಗುವ ಪರಿ, ಸೃಜನಶೀಲತೆಗಳ ಮೂಸೆಯಲ್ಲಿ ಹೊಮ್ಮಬೇಕಾದ ಚಿಣ್ಣರ ಮನಗಳಲ್ಲಿ ಚಿಗುರಿಸಲಾಗುವ ಭವ್ಯ ಕನಸುಗಳು ಇತ್ಯಾದಿ ವಿಚಾರಗಳ ಕುರಿತು ವಿಷಯ ತಜ್ನ್ಯರಿಂದ ಕಮ್ಮಟ-ಪಾಠ-ಪ್ರವಚನಗಳನ್ನು ಆಟಗಳ ಮೂಲಕ ಹೆಣೆಹೆಣೆದು ಭಾರತೀಯತೆಯ ನವ ಪ್ರತೀಕವಾಗಿಸುವಲ್ಲಿ ಶತಪ್ರಯತ್ನಗಳನ್ನು ನಿಸ್ವಾರ್ಥವಾಗಿ ಮಾಡಲಿದ್ದೇವೆ ಎಂದು ಸ್ವರಸಾಮ್ರಾಟ್. ವಿದ್ವಾನ್ ಅಭಿರಾಮ ಭರತವಂಶಿ ಸಾಂಸ್ಕೃತಿಕ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ವಿದುಷಿ ಸುಷ್ಮಾ ಸುದರ್ಶನ್ ಈ ಸಂಧರ್ಭದಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿ ಹಾಗೂ ನೋಂದಾವಣೆಗೆ ಪರ್ಲತ್ತಾಯ ಡಾ. ಸುದರ್ಶನ ಭಾರತೀಯ 70222 74686 ಮತ್ತು 88926 34006 ಸಂಖ್ಯೆಯನ್ನು ಸಂಪರ್ಕಿಸಿರಿ.

