ಮಂಗಳೂರು : ಸಂಸ್ಕೃತ ಭಾರತೀ ಮಂಗಳೂರು ಇದರ ವತಿಯಿಂದ ಹತ್ತು ದಿನಗಳವರೆಗೆ ಉರ್ವ ಮಾರಿಗುಡಿ ದೇವಾಲಯದ ಆವರಣದಲ್ಲಿ ನಡೆದ ಉಚಿತ ಸಂಸ್ಕೃತ ಸಂಭಾಷಣಾ ಶಿಬಿರದ ಸಮಾರೋಪ ಸಮಾರಂಭವು ದಿನಾಂಕ 20 ಆಗಸ್ಟ್ 2024ರಂದು ನಡೆಯಿತು.
ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಶಾರದಾ ಪದವಿ ಪೂರ್ವ ಕಾಲೇಜಿನ ಸಂಸ್ಕೃತ ಪ್ರಾಧ್ಯಾಪಕ ರಮೇಶ್ ಆಚಾರ್ಯ ಮಾತನಾಡಿ “ದೇವ ಭಾಷೆಯೆಂದು ಪರಿಗಣಿಸಲ್ಪಟ್ಟ ಸಂಸ್ಕೃತದ ಮಹತ್ವವನ್ನು ವಿವರಿಸಿ ಅದರ ಕಲಿಕೆ ಹಾಗೂ ಪ್ರಚಾರಕ್ಕೆ ಒತ್ತು ನೀಡಬೇಕು.” ಎಂದು ಕರೆ ನೀಡಿದರು.
ಉರ್ವ ಮಾರಿಯಮ್ಮ ದೇವಾಲಯದ ಆಡಳಿತ ಮೊಕ್ತೇಸರರಾದ ಲಕ್ಷ್ಮಣ ಅಮೀನ್ ಇವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಆಗಮಿಸಿದ ರಾಧಾಕೃಷ್ಣ ಅಶೋಕನಗರ ಮಾತನಾಡಿದರು. ಮಣ್ಣಗುಡ್ಡೆ ಗುರ್ಜಿ ಸಮಿತಿಯ ಅಧ್ಯಕ್ಷರಾದ ರಮಾನಂದ ಪಾಂಗಾಳ ಪ್ರಸ್ತಾವಿಸಿ, ಶಿಬಿರಾರ್ಥಿ ಗಣೇಶ್ ಶೆಣೈ ನಿರ್ವಹಿಸಿದರು. ಬಳಿಕ ಶಿಬಿರಾರ್ಥಿಗಳಿಂದ ಸಮೂಹ ಸಂಸ್ಕೃತ ಗೀತ ಗಾಯನ ಪ್ರಹಸನದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ಶಿಬಿರಾರ್ಥಿಯಾದ ದರ್ಶನ್ ನೀಡಿದ ಶಿಬಿರದ ಅನುಭವ ಕಥಾನಕದೊಂದಿಗೆ ಈ ಶಿಬಿರ ಮುಕ್ತಾಯಗೊಂಡಿತು. ಶಿಬಿರದ ಸಂಚಾಲಕಿ ವೀಣಾ ಗರ್ದೆ ವಂದಿಸಿದರು.