ಶಿವಮೊಗ್ಗ : ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಸಮಿತಿ, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಮತ್ತು ಸಹ್ಯಾದ್ರಿ ಕಲಾ ಕಾಲೇಜಿನ ಸ್ನಾತಕೋತ್ತರ ಭಾಷಾ ವಿಭಾಗಗಳು, ಅರ್ಥಶಾಸ್ತ್ರ, ರಾಜ್ಯ ಶಾಸ್ತ್ರ ವಿಭಾಗ ಇವುಗಳ ಸಂಯುಕ್ತ ಆಶ್ರಯದಲ್ಲಿ ‘ವಿಶ್ವ ಮಾತೃಭಾಷೆ ದಿನಾಚರಣೆ’ಯು ದಿನಾಂಕ 21-02-2024ರಂದು ಸಹ್ಯಾದ್ರಿ ಕಲಾ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಕನ್ನಡ ಸಾಹಿತ್ಯ ಪರಿಷತ್ತು ಶಿವಮೊಗ್ಗ ಜಿಲ್ಲಾ ಸಮಿತಿಯ ಅಧ್ಯಕ್ಷರಾದ ಡಿ. ಮಂಜುನಾಥ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ “ಬಹು ಭಾಷಾ ಕಲಿಕೆಗೆ ತಂತ್ರಜ್ಞಾನ ಬಳಕೆಯ ಸವಾಲುಗಳ ಜೊತೆಯಲ್ಲಿ ಶಿಕ್ಷಣ ಮತ್ತು ನಿತ್ಯ ಜೀವನದಲ್ಲಿ ಮಾತೃಭಾಷೆ ಬಳಕೆಗೆ ಒತ್ತು ನೀಡುವ ಅಗತ್ಯವಿದೆ. ಪ್ರಪಂಚದ ಎಲ್ಲಾ ಭಾಷೆಗಳು ಉಳಿಯಬೇಕು. ಅದನ್ನು ಮುಂದಿನ ತಲೆಮಾರಿಗೆ ಸಮರ್ಥವಾಗಿ ತಲುಪಿಸುವ ಜವಾಬ್ದಾರಿ ಎಲ್ಲರದ್ದಾಗಬೇಕು. ಅದನ್ನು ನೆನಪಿಸುವ ಸಲುವಾಗಿ ಈ ದಿನಾಚರಣೆ. ನಮ್ಮ ನಿತ್ಯದ ವ್ಯವಸ್ಥೆಯಲ್ಲಿ ಮಾತೃಭಾಷೆ ಹಾಗೂ ಪರಿಸರದ ಭಾಷೆಯನ್ನು ಚೆನ್ನಾಗಿ ಕಲಿಯಿರಿ. ಓದಲು, ಬರೆಯಲು ಬಾರದ ಕಳಪೆ ಶಿಕ್ಷಣವು ಭಾಷೆಯನ್ನು ಉಳಿಸದು. ಗುಣಮಟ್ಟದ ಶಿಕ್ಷಣ ದೊರೆಯಬೇಕಾದರೆ ಅಲ್ಲಿ ಕಲಿಕೆಯ ಭಾಷೆ ಪ್ರಮುಖ ಪಾತ್ರ ವಹಿಸುತ್ತದೆ.” ಎಂದು ವಿವರಿಸಿದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾದ ಪ್ರೊ. ಸಿರಾಜ್ ಅಹಮದ್ “ಬೇರೆ ಬೇರೆ ಭಾಷೆಯ ಅಧ್ಯಯನದಲ್ಲಿ ತೊಡಗಿರುವ ವಿದ್ಯಾರ್ಥಿಗಳು ಇಲ್ಲಿ ಸೇರಿರುವುದೇ ಭಾಷಾ ಸಂಗಮ.” ಎಂದರು.
ಕಾಲೇಜಿನ ಪ್ರಾಚಾರ್ಯ ಹಾಗೂ ಉರ್ದು ವಿಭಾಗದ ಮುಖ್ಯಸ್ಥರಾದ ಪ್ರೊ. ಸೈಯದ್ ಸನಾವುಲ್ಲಾ ಮಾತನಾಡಿ “ಇಲ್ಲಿ ಇಷ್ಟೊಂದು ಭಾಷೆಗಳಿವೆ. ನಾವು ತಿಳಿದಿರುವ ಭಾಷೆಗಳೆಷ್ಟು. ನಮ್ಮ ಭಾಷೆಯನ್ನು ನಾವು ಸಮರ್ಥವಾಗಿ ಕಲಿಯಲು ಈ ದಿವಸದ ಮಹತ್ವ ಅರಿಯಿರಿ.” ಎಂದರು.
ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಮೋಹನ್ ಚಂದ್ರಗುತ್ತಿ ಮಾತನಾಡಿ “ಯಾವ ಭಾಷೆಯೂ ಮಲಿನವಲ್ಲ. ಎಲ್ಲಾ ಭಾಷೆಯ ತಾಯಿ ಜನ್ಮನೀಡಿ ಭಾಷೆಯನ್ನು ಕಲಿಸುತ್ತಾಳೆ. ತಾಯಿ ಭಾಷೆ ಬರೀ ಭಾಷೆಯಲ್ಲ. ಕರುಳು ಬಳ್ಳಿಯ ಸಂಬಂಧವಿದೆ.” ಎಂದು ವಿವರಿಸಿದರು.
ಸಂಸ್ಕೃತ ವಿಭಾಗದ ಶೋಭಾ ಭಟ್, ಅರ್ಥಶಾಸ್ತ್ರ ವಿಭಾಗದ ಪ್ರೊ. ಮುದುಕಪ್ಪ, ರಾಜ್ಯ ಶಾಸ್ತ್ರದ ಪ್ರೊ. ಚಂದ್ರಪ್ಪ ಮಾತನಾಡಿದರು. ಇಂಗ್ಲಿಷ್ ವಿಭಾಗದ ವಿದ್ಯಾರ್ಥಿ ಅಪ್ಸರ್ ಅಹಮದ್ ಸ್ವಾಗತಿಸಿ, ಕನ್ನಡ ವಿಭಾಗದ ಚಂದನ ನಿರೂಪಿಸಿ, ಕು. ಯಶಸ್ವಿನಿ ವಂದಿಸಿದರು.