ಮಂಗಳೂರು : ಭ್ರಾಮರೀ ಯಕ್ಷಮಿತ್ರರು ಮಂಗಳೂರು ಟ್ರಸ್ಟ್ ಇವರ ಆಶ್ರಯದಲ್ಲಿ ಒಂಬತ್ತನೇ ವರ್ಷದ ‘ಯಕ್ಷ ವೈಭವ -2026’ ಕಾರ್ಯಕ್ರಮವನ್ನು ದಿನಾಂಕ 01 ಆಗಸ್ಟ್ 2026ರಂದು ಸಂಜೆ 7-00 ಗಂಟೆಗೆ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಆಯೋಜಿಸಲಾಗಿದ್ದು, ಯಕ್ಷಗಾನ ಮತ್ತು ಪ್ರಶಸ್ತಿ ಪ್ರದಾನ ನಡೆಯಲಿದೆ.
ಹಿರಿಯ ಯಕ್ಷಗಾನ ಕಲಾವಿದ ಕೆ.ಎಚ್. ದಾಸಪ್ಪ ರೈ ಇವರಿಗೆ ‘ಭ್ರಾಮರೀ ಯಕ್ಷಮಣಿ ಪ್ರಶಸ್ತಿ’ ಹಾಗೂ ಕಳೆದ 90 ವರ್ಷಕ್ಕೂ ಅಧಿಕ ಕಾಲದಿಂದ ನಿರಂತರವಾಗಿ ಯಕ್ಷಗಾನ ತಾಳಮದ್ದಳೆ ಆಯೋಜಿಸಿಕೊಂಡು, ಯಕ್ಷಗಾನ ತರಭೇತಿಯನ್ನು ನಡೆಸುತ್ತಿರುವ ಮುಡಿಪು ಕುರ್ನಾಡಿನ ಶ್ರೀ ದತ್ತಾತ್ತೇಯ ಯಕ್ಷಗಾನ ಮತ್ತು ಭಜನಾ ಮಂಡಳಿ ಸಂಸ್ಥೆಗೆ ಮತ್ತು ಯಕ್ಷಗಾನದ ನೇಪಥ್ಯ ಕಲಾವಿದರಾಗಿ ಗುರುತಿಸಿಕೊಂಡಿರುವ ಮೋನಪ್ಪ ಗೌಡ ಇವರಿಗೆ ‘ಭ್ರಾಮರೀ ಯಕ್ಷಸೇವಾ ಪುರಸ್ಕಾರ’ ಪ್ರದಾನ ಮಾಡಿ ಗೌರವಿಸಲಾಗುವುದು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಶ್ರಾಂತ ಪ್ರಾಧ್ಯಾಪಕ ಹಿರಿಯ ಯಕ್ಷಗಾನ ಅರ್ಥಧಾರಿ ಜಿ.ಕೆ. ಭಟ್ ಸೇರಾಜೆ, ಶಾಸಕ ವೇದವ್ಯಾಸ ಕಾಮತ್, ಎಸ್.ಸಿ ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕರಾದ ಶ್ರೀ ಟಿ.ಜಿ. ರಾಜಾರಾಮ್ ಭಟ್, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಪ್ರದೀಪ್ ಕುಮಾರ್ ಕಲ್ಕೂರ, ಉದ್ಯಮಿ ಶ್ರೀ ರಾಜಶೇಖರ ಕೋಟ್ಯಾನ್, ಪುಳಿಂಚ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀಧರ್ ಶೆಟ್ಟಿ ಪುಳಿಂಚ ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ನಂತರ ಪೂರ್ತಿ ರಾತ್ರಿ ತೆಂಕುತಿಟ್ಟಿನ ಸುಪ್ರಸಿದ್ದ ಹಿಮ್ಮೇಳ ಮತ್ತು ಮುಮ್ಮೇಳ ಕಲಾವಿದರ ಕೂಡುವಿಕೆಯಲ್ಲಿ ‘ಅಂಭಾಶಪಥ’, ‘ಲಕ್ಷ್ಮೀ ಸ್ವಯಂವರ’ ಹಾಗೂ ‘ತಾಮ್ರದ್ವಜ ಕಾಳಗ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

