ಕಾಂತಾವರ : ಶ್ರೀ ಯಕ್ಷದೇಗುಲ ಕಾಂತಾವರ ಇದರ ವತಿಯಿಂದ ‘ಯಕ್ಷೋಲ್ಲಾಸ 2026’ ಇಪ್ಪತ್ನಾಲ್ಕನೇ ವಾರ್ಷಿಕ ಕಾರ್ಯಕ್ರಮವನ್ನು ದಿನಾಂಕ 26 ಜುಲೈ 2026ರಂದು ಬೆಳಿಗ್ಗೆ 10-00 ಗಂಟೆಗೆ ಶ್ರೀ ಕ್ಷೇತ್ರ ಕಾಂತಾವರದಲ್ಲಿ ಆಯೋಜಿಸಲಾಗಿದೆ. ಸಂಸ್ಮರಣೆ, ಪ್ರಶಸ್ತಿ ಪುರಸ್ಕಾರ ಪ್ರದಾನ, ತಾಳಮದ್ದಲೆ ಮತ್ತು ಯಕ್ಷಗಾನ ಬಯಲಾಟ ನಡೆಯಲಿದೆ.
ಬೆಳಿಗ್ಗೆ ಬಾರಾಡಿಬೀಡು ಸರಿಮಾತಿ ಸುಮತಿ ಆರ್. ಬಲ್ಲಾಳ್ ರವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿರುವರು. ಕಾಂತಾವರ ಯುವಸಂಗಮದ ಅಧ್ಯಕ್ಷ ವಿಜಯ ಸಾಲ್ಯಾನ್, ಬೇಲಾಡಿ ವಿಷ್ಣುಮೂರ್ತಿ ಭಜನಾ ಮಂಡಳಿಯ ಅಧ್ಯಕ್ಷ ಪ್ರಭಾಕರ ಕುಲಾಲ್, ಕೇಮಾರು ಯುವ ಉತ್ಸಾಹಿ ಬಳಗದ ಅಧ್ಯಕ್ಷ ಚಂದ್ರಹಾಸ ಜೈನ್ ಇವರ ಉಪಸ್ಥಿತಿಯಲ್ಲಿ ಕ್ಷೇತ್ರದ ಪ್ರಧಾನ ಅರ್ಚಕರಾದ ಕೃಷ್ಣಮೂರ್ತಿ ಭಟ್ ಶುಭಾಶಂಸನೆಗೈವರು. ಬಳಿಕ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ‘ಚಂದ್ರಾವಳಿ ವಿಲಾಸ’ ಯಕ್ಷಗಾನ ನಡೆಯಲಿದೆ.
ಅಪರಾಹ್ನ ಗಂಟೆ 2-00ರಿಂದ ಡಾ. ಜೀವಂಧರ್ ಬಲ್ಲಾಳ್ ರವರ ಅಧ್ಯಕ್ಷತೆಯಲ್ಲಿ ಹಾಗೂ ಮೂಡಬಿದ್ರೆಯ ಶ್ರೀಪತಿ ಭಟ್ ಮತ್ತು ಕಾರ್ಕಳದ ಯಕ್ಷ ಕಲಾರಂಗದ ಅಧ್ಯಕ್ಷ ವಿಜಯ ಶೆಟ್ಟಿ ಗೌರವ ಉಪಸ್ಥಿತಿಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಪುತ್ತೂರು ದಿ. ಶ್ರೀಧರ ಭಂಡಾರಿ ಇವರ ಸ್ಮರಣಾರ್ಥ ಪೂಕಳ ಲಕ್ಷ್ಮೀನಾರಾಯಣ ಭಟ್ ಹಾಗೂ ಬಾಯಾರು ದಿ. ಪ್ರಕಾಶ್ಚಂದ್ರ ರಾವ್ ಇವರ ಸ್ಮರಣಾರ್ಥ ಬಾಯಾರು ರಮೇಶ್ ಶೆಟ್ಟಿಯವರಿಗೆ ‘ಯಕ್ಷದೇಗುಲ ಪ್ರಶಸ್ತಿ’ ಪ್ರಧಾನ ನಡೆಯಲಿದೆ. ಬಾರಾಡಿ ಫ್ರೆಂಡ್ಸ್ ನ ಅಧ್ಯಕ್ಷ ಸನತ್ ಕುಮಾರ್ ಹಾಗೂ ಕಾಂತಾವರ ಗೆಳೆಯರ ಬಳಗದ ಅಧ್ಯಕ್ಷ ಆಶಿಕ್ ಸಾಲ್ಯಾನ್ ಉಪಸ್ಥಿತರಿರುವರು. ನಂತರ ಪ್ರಸಿದ್ಧ ಕಲಾವಿದರಿಂದ ‘ಸುಧನ್ವಾರ್ಜುನ’ ತಾಳಮದ್ದಳೆ ಹಾಗೂ ಕಾಂತಾವರ ಯಕ್ಷಬಾಲಕರಿಂದ ‘ಮತ್ಸ್ಯ – ವರಾಹ – ಮಾರಣಾಧ್ವರ’ ಬಯಲಾಟ ನಡೆಯಲಿದೆ. ಎಂದು ಸಂಸ್ಥೆಯ ಪ್ರಧಾನ ಕಾರ್ಯಾಧ್ಯಕ್ಷ ಮಹಾವೀರ ಪಾಂಡಿ ತಿಳಿಸಿರುತ್ತಾರೆ.

