ಮಂಗಳೂರು : ಕಾರ್ವಾಲ್ ಮನೆತನ ಮತ್ತು ಮಾಂಡ್ ಸೊಭಾಣ್, ಪ್ರದರ್ಶನ ಕಲೆಗಳಲ್ಲಿ ಶ್ರೇಷ್ಟತೆ ಸಾಧಿಸಿದ ಕಲಾವಿದರಿಗೆ ನೀಡುವ, 22ನೇ ವರ್ಷದ ‘ಕಲಾಕಾರ್ ಪುರಸ್ಕಾರ’ವನ್ನು ಸಂಗೀತಗಾರ, ಸ್ವರ ಸಂಯೋಜಕ, ಕಾರ್ಕಳ ಟೌನ್ ಇಗರ್ಜಿಯ ಧರ್ಮಗುರು ವಂದನೀಯ ಕ್ಲೆಮೆಂಟ್ ಮಸ್ಕರೇನ್ಹಸ್ ಇವರಿಗೆ ಘೋಷಿಸಲಾಗಿದೆ. ಭಕ್ತಿ ಸಂಗೀತಕ್ಕೆ ನೀಡಿದ ಅನನ್ಯ ಕೊಡುಗೆ ಮತ್ತು ಯುವಜನರಿಗೆ ಸಂಗೀತದಲ್ಲಿ ನೀಡಿದ ಪ್ರೋತ್ಸಾಹವನ್ನು ಗುರುತಿಸಿ ಈ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ದಿನಾಂಕ 01 ನವೆಂಬರ್ 2026ರ ಭಾನುವಾರ ಸಂಜೆ 6-00 ಗಂಟೆಗೆ ಮಂಗಳೂರಿನ ಶಕ್ತಿನಗರದ ಕಲಾಂಗಣದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಅನಿವಾಸಿ ಉದ್ಯಮಿ ಮತ್ತು ಕೊಡುಗೈ ದಾನಿ ರೊನಾಲ್ಡ್ ಪಿಂಟೊ ಅಬುಧಾಬಿ ಮುಖ್ಯ ಅತಿಥಿಯಾಗಿ ಹಾಗೂ ಗೌರವ ಅತಿಥಿಯಾಗಿ ಭಾಷಾ ತಜ್ಞ ಡೊ ಪ್ರತಾಪ್ ನಾಯ್ಕ್ ಗೋವಾ ಭಾಗವಹಿಸಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ಲುವಿ ಜೆ. ಪಿಂಟೊ ವಹಿಸಲಿದ್ದು, ಪುರಸ್ಕಾರವು ಶಾಲು, ಫಲ-ಪುಷ್ಪ, ಸ್ಮರಣಿಕೆ, ಪ್ರಮಾಣ ಪತ್ರದೊಂದಿಗೆ ರೂ.50,000/- ನಗದು ಒಳಗೊಂಡಿದೆ.
ಕ್ರೈಸ್ತ ಧರ್ಮಗುರು, ಶಿಕ್ಷಕ, ಸಂಗೀತಗಾರ, ಸ್ವರ ಸಂಯೋಜಕ, ಆಡಳಿತಗಾರ ಹೀಗೆ ಬಹುಮುಖಿ ಪ್ರತಿಭೆಗಳ ಆಗರ ವಂದನೀಯ ಕ್ಲೆಮೆಂಟ್ (1954) ಕೆಂಲ್ಬೆಟ್-ಬೋಳದಲ್ಲಿ ಜನಿಸಿದರು. 1981ರಲ್ಲಿ ಯಾಜಕೀ ದೀಕ್ಷೆ ಪಡೆದ ನಂತರ ವಿವಿಧ ಇಗರ್ಜಿಗಳಲ್ಲಿ ಹಾಗೂ ಶೈಕ್ಷಣಿಕ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರ ಶೈಕ್ಷಣಿಕ ಸೇವೆ ಗುರುತಿಸಿ ದಕ್ಷಿಣ ಕನ್ನಡ ಜಿಲ್ಲಾಡಳಿತವು 2005ನೇ ಸಾಲಿನ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿದೆ. ಉಡುಪಿ ಧರ್ಮ ಪ್ರಾಂತ್ಯದ ಶಿಕ್ಷಣ ಮಂಡಳಿಯ ಪ್ರಥಮ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.
1994ರಲ್ಲಿ ವಂದನೀಯ ವಲೇರಿಯನ್ ಮೆಂಡೊನ್ಹಾ ಇವರೊಡಗೂಡಿ ಸಂಗೀತ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ಇವರು ಕೊಂಕಣಿಯ ಲಕ್ಷ್ಮೀಕಾಂತ್ ಪ್ಯಾರೇಲಾಲ್ ಎಂಬ ಪ್ರಸಿದ್ದಿ ಪಡೆದರು. ಭಕ್ತಿ ಗೀತೆಯ 49 ಧ್ವನಿ ಸುರುಳಿಗಳನ್ನು ಲೋಕಾರ್ಪಣೆ ಮಾಡಿದ್ದಾರೆ. ವಲೇರಿಯನ್ ಇವರ ಮರಣಾ ನಂತರವೂ ತಮ್ಮ ಸಂಗೀತ ಪಯಣ ಮುಂದುವರಿಸಿದ ಕ್ಲೆಮೆಂಟ್ ಇದುವರೆಗೆ 51 ಧ್ವನಿ ಸುರುಳಿಗಳ 500ಕ್ಕೂ ಮಿಕ್ಕಿ ಗೀತೆಗಳಿಗೆ ಸಾಹಿತ್ಯ ರಚಿಸಿ, ಸ್ವರ ಸಂಯೋಜಿಸಿದ್ದಾರೆ.
ಸಂಗೀತದಲ್ಲಿ ಇವರ ಕಾರ್ಯಕ್ಷೇತ್ರದ ವ್ಯಾಪ್ತಿ ವಿಸ್ತಾರವಾದುದು. ಸೇವೆ ಸಲ್ಲಿಸಿದ ಇಗರ್ಜಿಗಳ ಗಾಯನ ಪ್ರತಿಭೆಗಳನ್ನು ಗುರುತಿಸಿ, ಅವರಿಗೆ ಅವಕಾಶ ನೀಡಿದ್ದಾರೆ. ಇಗರ್ಜಿಯ ಧಾರ್ಮಿಕ ಕ್ರಮಗಳಲ್ಲಿ ಹಾಡುವ ಹಲವಾರು ಗೀತೆಗಳನ್ನು ರಚಿಸಿದ್ದಾರೆ. ಹಲವಾರು ಸಾಮಾಜಿಕ ಹಾಡುಗಳನ್ನು ರಚಿಸಿದ್ದು ಅವು ಹಿಂದಿಗೆ ಭಾಷಾಂತರಗೊಂಡಿವೆ. ಯೂ ಟ್ಯೂಬ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲೂ ಅವರ ಹಾಡುಗಳನ್ನು ಕೇಳಬಹುದು. ಶಾಲೆಗಳಲ್ಲಿ ಹಾಗೂ ಇತರ ಕಾರ್ಯಕ್ರಮಗಳಲ್ಲಿ ಅವರು ರಚಿಸಿದ ಪ್ರಾರ್ಥನಾ ಗೀತೆ ಹಾಗೂ ನೃತ್ಯ ಗೀತೆಗಳನ್ನು ಬಳಸುತ್ತಾರೆ. ಸನ್ಮಾನ ಕಾರ್ಯಕ್ರಮದ ನಂತರ ತಿಂಗಳ ವೇದಿಕೆ ಸರಣಿಯ 299ನೇ ಕಾರ್ಯಕ್ರಮವಾಗಿ ನೆಲ್ಲು ಪೆರ್ಮನ್ನೂರ್ ವಿರಚಿತ ಕೊಮಿಡಿ ಕಂಪೆನಿ ಪ್ರಸ್ತುತ ಪಡಿಸುವ ‘ಮೆಲ್ಲ್ಯಾಂಚೆ ಉಪಾದ್ರ್’ ಹೊಸ ಕೊಂಕಣಿ ನಾಟಕದ ಪ್ರಥಮ ಪ್ರದರ್ಶನ ನಡೆಯಲಿದೆ. ಸರ್ವರಿಗೂ ಉಚಿತ ಪ್ರವೇಶ ಎಂದು ಸಂಘಟಕರು ತಿಳಿಸಿದ್ದಾರೆ.
