ಮುಂಬೈ : ಹೊರನಾಡಾದ ಮುಂಬಯಿಯಲ್ಲಿ ನೆಲೆಸಿ ಐದು ದಶಕಗಳಿಗಿಂತಲೂ ಹೆಚ್ಚು ಕಾಲ ಕನ್ನಡ ಸಾಹಿತ್ಯವನ್ನು ವಿಭಿನ್ನ ನೆಲೆಗಳಲ್ಲಿ ಬಲಗೊಳಿಸಿದ ಹೆಸರಾಂತ ಸಾಹಿತಿ ವ್ಯಾಸರಾಯ ಬಲ್ಲಾಳ ಇವರ ನೆನಪಿನಲ್ಲಿ ವ್ಯಾಸರಾಯ ಬಲ್ಲಾಳ ಪ್ರತಿಷ್ಠಾನ ಮುಂಬೈ ಕೊಡಮಾಡುವ 2026ರ ಸಾಲಿನ ವ್ಯಾಸರಾಯ ಬಲ್ಲಾಳ ಶ್ರೇಷ್ಠ ವಿದ್ಯಾರ್ಥಿ ಪುರಸ್ಕಾರಕ್ಕೆ ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಎಂ.ಎ. ದ್ವಿತೀಯ ವರ್ಷದ ವಿದ್ಯಾರ್ಥಿ ಸುಮಿತ್ರಾ ಉಮೇಶ್ ಗೌಡ ಇವರು ಆಯ್ಕೆಯಾಗಿದ್ದಾರೆ. ಈ ಪುರಸ್ಕಾರವು ನಗದು ಬಹುಮಾನ, ಗ್ರಂಥ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ.
ಮುಂಬಯಿ ವಿಶ್ವವಿದ್ಯಾಲಯದಲ್ಲಿ ಡಿಸೆಂಬರ್ ಮೊದಲ ವಾರದಲ್ಲಿ ನಡೆಯಲಿರುವ ವ್ಯಾಸರಾಯ ಬಲ್ಲಾಳ ಪ್ರತಿಷ್ಠಾನದ ಕಾರ್ಯಕ್ರಮದಲ್ಲಿ ಸುಮಿತ್ರಾ ಗೌಡ ಇವರಿಗೆ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ಜಿ.ಎನ್. ಉಪಾಧ್ಯ ಹಾಗೂ ವ್ಯಾಸರಾಯ ಬಲ್ಲಾಳ ಪ್ರತಿಷ್ಠಾನದ ಸಂಚಾಲಕರಾದ ಕುಸುಮಾ ಬಲ್ಲಾಳ ತಿಳಿಸಿದ್ದಾರೆ. ಸುಮಿತ್ರಾ ಉಮೇಶ್ ಗೌಡ ಇವರು ಕಳೆದ 21 ವರ್ಷಗಳಿಂದ ಮುಳಂದ್ನ ವಿ.ಪಿ.ಎಂ. ಕನ್ನಡ ಶಾಲೆಯಲ್ಲಿ ಇಂಗ್ಲೀಷ್ ಮತ್ತು ಸಮಾಜಶಾಸ್ತ್ರ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದು, ಮಂಗಳೂರು ವಿಶ್ವವಿದ್ಯಾಲಯದಿಂದ ಬಿ.ಎ. ಮತ್ತು ಬಿ.ಎಡ್. ಪದವಿಗಳನ್ನು ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಇಂಗ್ಲೀಷ್ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.
