ಶಿವಮೊಗ್ಗ : ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಜಿಲ್ಲಾ ಘಟಕ ಹಾಗೂ ರೋಟರಿ ಮಿಡ್ ಟೌನ್ ವತಿಯಿಂದ ದಿನಾಂಕ 28 ಮಾರ್ಚ್ 2026ರಂದು ಶಿವಮೊಗ್ಗ ವಿನಾಯಕ ನಗರದ ರೋಟರಿ ಕ್ಲಬ್ ರಕ್ತನಿಧಿ ಸಭಾಂಗಣದಲ್ಲಿ ಏರ್ಪಡಿಸಿದ್ದ 248ನೇ ತಿಂಗಳ ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮ ಹಾಗೂ ಸಾಹಿತ್ಯ ವೇದಿಕೆಗೆ ರೋಟರಿ ನೀಡಿದ ವಿಶೇಷ ‘ಸೇವಾ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ಈ ಸಮಾರಂಭವನ್ನು ಉದ್ಘಾಟಿಸಿದ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷರಾದ ಡಿ. ಮಂಜುನಾಥ ಇವರು ಮಾತನಾಡಿ “ಸೃಜನಶೀಲತೆಯ ಆಕರ್ಷಣೆಗೆ ಸಾಹಿತ್ಯ ಹುಣ್ಣಿಮೆ ಪ್ರೇರಕ ಶಕ್ತಿಯಾಗಿದೆ. 248 ತಿಂಗಳಿಂದ ಇದನ್ನು ಆಚರಿಸಿಕೊಂಡು ಬಂದಿದ್ದೇವೆ. ಆತಿಥ್ಯ ನೀಡುವ ಬಡಾವಣೆಗಳಲ್ಲಿರುವ ಪ್ರತಿಯೊಂದು ಮನೆಗಳಿಗೆ ತೆರಳಿ, ನಮ್ಮ ತಂಡ ಸಾಹಿತ್ಯ ಹುಣ್ಣಿಮೆಯ ಆಹ್ವಾನ ಪತ್ರಿಕೆ ನೀಡುತ್ತದೆ. ಈ ಮೂಲಕ ಸಾಹಿತ್ಯ ಹುಣ್ಣಿಮೆಯತ್ತ ಸೃಜನಶೀಲತೆಯ ಆಕರ್ಷಣೆಯ ಪ್ರಯತ್ನ ಮಾಡುತ್ತಿದ್ದೇವೆ. ಶಿವಮೊಗ್ಗ ಜಿಲ್ಲೆಯ ಸತ್ವಕ್ಕೆ ಇರುವ ಶಕ್ತಿ, ನಮ್ಮಲ್ಲಿ ಸದಾ ಕ್ರಿಯಾಶೀಲ ಸಂಘಟನೆಯ ನಿತ್ಯೋತ್ಸವಕ್ಕೆ ಪ್ರೇರಣೆ ನೀಡುತ್ತಾ ಬಂದಿದೆ” ಎಂದು ಹೇಳಿದರು.
“ಸಮಾಜದ ಮಾನಸಿಕ ಸ್ಥಿತಿ ಸರಿಯಾಗಿಡಲು ಸಾಂಸ್ಕೃತಿಕ ವಾತಾವರಣ ಅತ್ಯವಶ್ಯಕ. ಅಂತಹ ವಾತಾವರಣ ನಿರ್ಮಾಣ ಮಾಡುವಲ್ಲಿ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ನಿರಂತರವಾಗಿ ಶ್ರಮಿಸುತ್ತಿದೆ” ಎಂದು ರೋಟರಿ ಮಿಡ್ ಟೌನ್ ಅಧ್ಯಕ್ಷರಾದ ಹರ್ಷಾ ಕಾಮತ್ ವಿವರಿಸಿದರು.
ರೋಟರಿ ಕ್ಲಬ್ ಮಿಡ್ ಟೌನ್ ಯಾನ್ಸ್ ಅಧ್ಯಕ್ಷೆ ಪವಿತ್ರ ಹರ್ಷಾ ಕಾಮತ್, ಪ್ರೀತಿ ದೀಪಕ್ ಸಾರಥಿ, ಉಜ್ವಲ ರವಿಕುಮಾರ್, ಸಹ ಕಾರ್ಯದರ್ಶಿ ಸಂತೋಷ, ನಿವೃತ್ತ ಪ್ರಾಂಶುಪಾಲ ಧನಂಜಯ್ ಉಪಸ್ಥಿತರಿದ್ದರು. ಭದ್ರಾವತಿಯ ಚೌಡಿಕೆ ಕಲಾವಿದ ಲಕ್ಷ್ಮಣರಾವ್ ಮತ್ತು ತಂಡ ಚೌಡಿಕೆ ಪದ ಹಾಡಿದರು. ಗಾಯಕರಾದ ಎಸ್. ನಾರಾಯಣ, ಯಶಸ್ವಿನಿ, ಸಂದೇಶ್ ಭಾವಗೀತೆಗಳನ್ನು ಹಾಡಿದರು. ಡಾ. ನಾಗೇಂದ್ರ ಆಚಾರ್ಯ ಕಥೆ ಹೇಳಿದರು. ಪಿ.ಕೆ. ಸತೀಶ್ ಕವನ ವಾಚಿಸಿ, ವಿನಯಾ ಶ್ರೀನಿವಾಸ್ ಚುಟುಕು ವಾಚಿಸಿದರು.
