‘ಕಾಗೆ ಬಣ್ಣದ ಕವಿತೆ’ ಈ ಶೀರ್ಷಿಕೆಯೇ ಧ್ವನಿಪೂರ್ಣವಾಗಿದೆ. ಕಪ್ಪು ಬಣ್ಣ ಅವಮಾನದ ಸಂಕೇತ ಎಂಬುದನ್ನು ನಿರಾಕರಿಸುವ ಮೂಲಕ ಆತ್ಮಗೌರವ ಹಾಗೂ ಸ್ವಾಭಿಮಾನಗಳನ್ನು ಇಲ್ಲಿ ಎತ್ತಿ ಹಿಡಿಯಲಾಗಿದೆ.
‘ಕಾಗೆ ಬಣ್ಣದ ಕವಿತೆ’
ಡಾ. ಮರಿಯಪ್ಪ ನಾಟೇಕರ್
ಅಭಿಜಿತ್ ಪ್ರಕಾಶನ, ಮುಂಬೈ
ಬೆಲೆ ರೂ.100/-
ಸಂಪರ್ಕ : 9632757194
‘ಕಾಗೆ ಬಣ್ಣದ ಕವಿತೆ’ ಇದು ಡಾ. ಮರಿಯಪ್ಪ ನಾಟೇಕರ್ ಅವರ ಇತ್ತೀಚಿನ ಕವನ ಸಂಕಲನ. ಇದರಲ್ಲಿ ಸಣ್ಣ ದೊಡ್ಡ ವೈವಿಧ್ಯಮಯವಾದ ಬಹುವಾಗಿ ಕಾಡುವ 35 ಕವಿತೆಗಳಿವೆ. ಮರಿಯಪ್ಪ ನಾಟೇಕರ್ ಅವರು ನಮ್ಮ ನಡುವಿನ ಪ್ರಜ್ಞಾವಂತ, ಪ್ರತಿಭಾವಂತ ಕವಿ, ಲೇಖಕರಲ್ಲಿ ಒಬ್ಬರು. ಕಾವ್ಯ ಅವರ ಮುಖ್ಯ ಅಭಿವ್ಯಕ್ತಿ ಮಾಧ್ಯಮ. ಕನ್ನಡ ದಲಿತ ಸಾಹಿತ್ಯಕ್ಕೆ ಅವರ ಕೊಡುಗೆಯೂ ಅವಲೋಕನೀಯವಾಗಿದೆ. ಅವರು ವಾಸ್ತವ ಪ್ರಜ್ಞೆಯ ಕವಿ, ಸೂಕ್ಷ್ಮ ಜಿಜ್ಞಾಸು. ದಲಿತ ವರ್ಗದ ಜನ ಬದುಕನ್ನು ಕವಿ ಇಲ್ಲಿ ಕಣ್ಣಿಗೆ ಕಟ್ಟುವ ಹಾಗೆ ಚಿತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ ಶೋಷಣೆ, ಗುಲಾಮಗಿರಿ, ಜಾತೀಯತೆ, ಅನಕ್ಷರತೆ, ಬಡತನ, ಅಸಮಾನತೆಗಳ ವಿರುದ್ಧ ಚಾಟಿ ಬೀಸಿ ನೊಂದ ಬೆಂದ ಸಮುದಾಯದ ಊರು ಕೇರಿಗಳ ಧ್ವನಿಯಾಗಿ ಕಾವ್ಯದ ಮೂಲಕ ಬೆಳಕಾಗುತ್ತಾ ಬಂದವರು. ಸಾಂಪ್ರತ ‘ಕಾಗೆ ಬಣ್ಣದ ಕವಿತೆ ‘ಈ ಕೃತಿಯ ಶೀರ್ಷಿಕೆಯೇ ಧ್ವನಿಪೂರ್ಣವಾಗಿದೆ.
ಕಪ್ಪು ಬಣ್ಣ ಅವಮಾನದ ಸಂಕೇತ ಎಂಬುದನ್ನು ದಿಟ್ಟವಾಗಿ ನಿರಾಕರಿಸುವ ಮೂಲಕ ಆತ್ಮಗೌರವ ಹಾಗೂ ಸ್ವಾಭಿಮಾನಗಳನ್ನು ಇಲ್ಲಿ ಎತ್ತಿ ಹಿಡಿಯಲಾಗಿದೆ. ಇದೊಂದು ಬಗೆಯ ರೂಪಕದಂತಿದ್ದು, ತಮ್ಮನ್ನು ತುಳಿಯುತ್ತಾ ಬಂದವರಿಗೆ ನೀಡಿದ ಬಲವಾದ ಇದಿರೇಟು ಸಹ ಆಗಿದೆ. ಇಲ್ಲಿ ಕವಿ ತೋರುವ ಸಂಯಮ, ವಸ್ತುನಿಷ್ಠತೆ ಅಸಾಧಾರಣವಾದದ್ದು.
ಕ್ರಿಯಾಶೀಲತೆಗೆ ಹೆಸರಾಗಿರುವ ಡಾ. ಮರಿಯಪ್ಪ ನಾಟೇಕರ್ ಅವರದು ಸೃಜನಶೀಲ ಮನಸ್ಸು. ಅವರು ಚಳುವಳಿಯ ಮೂಲಕ ರಾಜಕೀಯ ಪ್ರಜ್ಞೆಯನ್ನು ಸಹ ಮೈಗೂಡಿಸಿಕೊಂಡವರು. ಸೃಷ್ಟಿಶೀಲ ಮನಸ್ಸು ನಮ್ಮ ಕಣ್ಣುಗಳನ್ನು ಮರೆ ಮಾಡುವ ಪರೆಗಳನ್ನು ಸಮರ್ಥವಾಗಿ ಕಳಚಿ ಹಾಕಬಲ್ಲದು. ಕವಿಯಾಗಿ ಮರಿಯಪ್ಪ ಅವರು ಮಾಡಿರುವುದು ಸಹ ಇದನ್ನೇ.
ಬದುಕನ್ನು ನಿರೂಪಿಸುತ್ತಲೇ ಜತೆ ಜತೆಯಲ್ಲೇ ಅದನ್ನು ರೂಪಿಸುವ ಕೆಲಸವನ್ನು ಅವರು ಸಶಕ್ತವಾಗಿ ಮಾಡುತ್ತಾ ಬಂದವರು. ಹೀಗಾಗಿ ಅವರ ಕಾವ್ಯದಲ್ಲಿ ಒಂದು ಬಗೆಯ ಅಂತ:ಸಾರವಿದೆ, ಸೊಬಗಿದೆ. ಸರಳ ರೀತಿಯಲ್ಲಿ ಗಹನವಾದ ತತ್ವವನ್ನು ಅವರು ಸಮರ್ಥವಾಗಿ ಬಿಂಬಿಸಬಲ್ಲರು ಎಂಬುದಕ್ಕೆ ಈ ಕವನ ಸಂಕಲನವೂ ಸಾಕ್ಷಿಯಾಗಿದೆ. ಮೇಲು ಸಂಸ್ಕೃತಿಯ ಪುರಾಣ ಇತಿಹಾಸ ನಂಬಿಕೆಗಳನ್ನೆಲ್ಲ ಅವರು ಬುಡಮೇಲು ಮಾಡುತ್ತಾ ಸಾಂಸ್ಕೃತಿಕ ಲಾಂಛನಗಳನ್ನು ಭಂಜಿಸುತ್ತ ಸಾಗುತ್ತಾರೆ. ಈ ಮೂಲಕ ಹೊಸ ವಿನ್ಯಾಸದಲ್ಲಿ ಹೊಸ ಮನುಷ್ಯನನ್ನು ಕಾಣ ಬಯಸುತ್ತಾರೆ. “ನನ್ನಜ್ಜ ಕ್ಯಾಕರಿಸಿ ಉಗಿದ ಕಫದಂತೆ ಚಂದ್ರ, ಜಗತ್ತು ಎನ್ನುವುದು ಕಾಮದ ಉಂಡೆ, ಪ್ರೀತಿ ಪ್ರೇಮ ಎನ್ನುವುದು ಕಲ್ಲುಬಂಡೆ, ಹೊಲೆ ಮಾದಿಗರ ತಾಯಿಯ ಗರ್ಭಕ್ಕೆ ಬ್ರಹ್ಮಾಂಡದ ಆಯಸ್ಸು, ತಂದೆಯ ವೀರ್ಯಕ್ಕೆ ಸೂರ್ಯನ ತೇಜಸ್ಸು” ಮೊದಲಾದ ಸಾಲುಗಳು ದಲಿತ ಕಾವ್ಯದ ಹೊಸ ಹಾದಿಯನ್ನು ತೆರೆದು ತೋರುತ್ತಿವೆ.
‘ಸರಸ್ವತಿ ನೀನೊಮ್ಮೆ ನನಗೂ ಹೆಂಡತಿಯಾಗು’ ಎಂಬ ಕವಿತೆ ಬಹು ಮಾರ್ಮಿಕವಾಗಿದೆ. ‘ಶತಶತಮಾನಗಳಿಂದ ಕಾದು ಕಾದು ಹಸಿದಿದ್ದೇನೆ ಸರಸ್ವತಿ/ನೀನೊಮ್ಮೆ ನನಗೂ ಹೆಂಡತಿಯಾಗು/ ನನ್ನರಿವಿನ ಕುರುಹಿಗಾಗಿ ಒದ್ದಾಡಿದ್ದೇನೆ/ ಎದ್ದು ಬಂದು ಮುದ್ದು ಮಾಡು ವೀಣಾಪಾಣಿ/ ರೂಪವಿಲ್ಲದ ರಾಣಿ ಪವಿತ್ರವಾಗಲಿ ಅಸ್ಪೃಶ್ಯ ಓಣಿ’ ಕವಿಯ ವ್ಯಂಗ್ಯಾತ್ಮಕ ನಿವೇದನೆ ಒಂದು ಗಟ್ಟಿಯಾದ ಪ್ರತಿಮೆಯಾಗಿ ಪಡಿಮೂಡಿದೆ. ಕವಿ ಇಲ್ಲಿ ತಮ್ಮ ಸಮುದಾಯದ ಜನರ ಮಡುಗಟ್ಟಿದ ನೋವು ಯಾತನೆಗಳನ್ನು ಬಿಚ್ಚಿಡುತ್ತಾ ಇದಕ್ಕೆಲ್ಲ ಕಾರಣ ಏನು ಎಂಬುದನ್ನು ಪರಿಣಾಮಕಾರಿಯಾಗಿ ತೆರೆದಿಟ್ಟಿದ್ದಾರೆ. ಇದೊಂದು ಬಗೆಯ ಜನ ಕಾವ್ಯ, ಕಲ್ಯಾಣ ದೃಷ್ಟಿಯೂ ಹೌದು. ದಲಿತ ಸಂವೇದನೆ ಸೀಮಿತ ಜನಾಂಗಕ್ಕೆ ಮಾತ್ರ ಸಂಬಂಧಿಸಿದ್ದಲ್ಲ, ಅದು ಜಗತ್ತಿನ ಮಾನವೀಯತೆಯನ್ನು ಪ್ರತಿಪಾದಿಸುವ ಸಂವೇದನೆಯೂ ಆಗಬಲ್ಲದು ಎಂಬುದನ್ನು ಈ ಕೃತಿ ಮನದಟ್ಟು ಮಾಡಿಕೊಡುವಲ್ಲಿ ಯಶ ಕಂಡಿದೆ.
ಕಾವ್ಯ ಬದುಕಿನ ತವಕತಲ್ಲಣಗಳ ರಸಾನುಭವ. ಅದು ಕಾಲದ ಜೊತೆಗೆ ನಡೆಸುವ ಸಂಘರ್ಷವೂ ಅನು ಸಂಧಾನವೂ ಹೌದು. ಮರಿಯಪ್ಪ ಅವರು ಸ್ವಂತಿಕೆ ಇರುವ ಸಮಚಿತ್ತದ ಲೇಖಕ. ‘ಇತಿಹಾಸ ಮರೆತವರು’ ಅವರ ಚೊಚ್ಚಲ ಕವಿತಾ ಸಂಕಲನ. ‘ಬದುಕು ಕರಗುವ ಮುನ್ನ’, ‘ಸುಗತ ಸಂವಾದ’ ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟ ಕಾವ್ಯ ಕೃತಿಗಳು. ಕಳೆದ ಎರಡು ದಶಕಗಳಿಂದ ಸತತವಾಗಿ ಕಾವ್ಯ ಕೃಷಿಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿರುವ ಅವರ ನಾಲ್ಕನೆಯ ಕಾವ್ಯ ಸಂಕಲನ ‘ಕಾಗೆ ಬಣ್ಣದ ಕವಿತೆ’ ಕೃತಿಯಲ್ಲಿ ಇದೀಗ ತಮ್ಮ ಸುತ್ತಲಿನ ಸಮುದಾಯದ ಗಾಢವಾದ ಅನುಭವವನ್ನು ಕಾವ್ಯವಾಗಿಸಿ ಸೈಯೆನಿಸಿಕೊಂಡಿದ್ದಾರೆ. ಮನುಷ್ಯತ್ವದ ಹುಡುಕಾಟ ಅವರ ಕಾವ್ಯದ ಮುಖ್ಯ ಗುರಿ. ವರ್ತಮಾನದ ದಾರುಣತೆ, ದಲಿತ ಜಗತ್ತಿನ ನೋವು ನಲಿವು, ಬದುಕಿನ ವಾಸ್ತವ ದರ್ಶನ, ಅಲ್ಲಿನ ಅದಮ್ಯ ಜೀವನೋತ್ಸಾಹವನ್ನು ನಾವು ಇಲ್ಲಿನ ಕವಿತೆಗಳಲ್ಲಿ ನೋಡಬಹುದಾಗಿದೆ.
ಪಟ್ಟಪಾಡನ್ನು ಹುಟ್ಟು ಹಾಡಾಗಿಸಿದ ಹಿರಿಮೆ ಮರಿಯಪ್ಪ ಅವರಿಗೆ ಸಲ್ಲುತ್ತದೆ. ಅವರದು ನಾನಾ ಭಾಷೆಗಳ ಸಂವೇದನೆ. ಮರಿಯಪ್ಪ ಅವರದು ಹೋರಾಟದ ಬದುಕು. ಶ್ರಮಸಂಸ್ಕೃತಿಯ ಹಿನ್ನೆಲೆಯಿಂದ ಬಂದ ಅವರು ಮುಂಬೈ ವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದರು. ಎಂ.ಫಿಲ್ ಹಾಗೂ ಡಾಕ್ಟರೇಟ್ ಪದವಿಯನ್ನು ಮುಂಬೈ ವಿಶ್ವವಿದ್ಯಾಲಯದಿಂದ ಪಡೆದ ಅವರು ಒಂದು ದಶಕ ಕಾಲ ಈ ಮಾಯಾನಗರಿ ಮುಂಬೈಯಲ್ಲಿ ಕನ್ನಡದ ಬಾವುಟವನ್ನು ಎತ್ತಿ ನಿಲ್ಲಿಸಲು ಬಹುವಾಗಿ ಶ್ರಮಿಸಿದ್ದಾರೆ. ಸದ್ಯ ತಮ್ಮೂರಿನಲ್ಲಿ ನೆಲೆಸಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಲೇ ನಿಚ್ಚ ಕನ್ನಡ ಕೈಂಕರ್ಯದಲ್ಲಿಯೂ ನಿರತರಾಗಿದ್ದಾರೆ. ಅವರು ರಂಗಭೂಮಿಯಲ್ಲಿ ಪಳಗಿದವರು. ತಮ್ಮ ಪರಿಸರದ ವಿದ್ಯಮಾನಗಳನ್ನು ಕತೆಯಾಗಿಸಿದವರು : ಹಾಗೆಯೇ ಸಮುದಾಯದ ಹಿತಕ್ಕೆ ಕಟ್ಟಿಬದ್ದರಾದವರು. ಈ ಕಾವ್ಯ ಸಹ ದಲಿತ ಸಮುದಾಯದ ಘನ ಪ್ರತಿಕೃತಿಯೇ ಆಗಿರುವುದು ವಿಶೇಷ. ಈ ಕೃತಿ ಪ್ರಸಿದ್ಧ ಕವಿ ಸಿದ್ಧಲಿಂಗಯ್ಯ ಅವರ ಕವಿತೆಗಳ ಮುಂದುವರಿದ ರೂಪಗಳಂತೆ ಕಾಣುತ್ತಿರುವುದು ವಿಶೇಷ. ಮತ್ತೆ ಮತ್ತೆ ಓದಿಕೊಳ್ಳಬೇಕಾದ ಕೆಲವು ಒಳ್ಳೆಯ ಕವಿತೆಗಳು ಇಲ್ಲಿವೆ. ನೋವು, ವಿಷಾದ ಭಾವ ಈ ಕಾವ್ಯದಲ್ಲಿ ಒಡೆದು ಕಾಣುತ್ತವೆಯಾದರೂ ಅವನ್ನು ನಲಿವಾಗಿಸುವ ಕಡೆಗೆ ಅವರ ತುಡಿತವಿದೆ. ನೋವನ್ನು ಆ ಸ್ಥಾಯಿಯಲ್ಲೇ ಉಳಿಸಿಕೊಳ್ಳುವ ಇಚ್ಛೆ ಕವಿಗಿಲ್ಲ. ವ್ಯಂಗ್ಯ ವಿಡಂಬನೆಗಳಿಂದ ಕೂಡಿರುವ ತೀವ್ರವಾಗಿ ಕಾಡುವ ಅನುಭವಗಳು ಅವರ ಕಾವ್ಯದೊಳಗೆ ಹಾಸು ಹೊಕ್ಕಾಗಿವೆ. ರೂಪಕ, ಪ್ರತಿಮೆ, ಪ್ರತೀಕಗಳ ಮೂಲಕ ಅವರು ಕಾವ್ಯದೊಳಗೆ ನಡೆಸುವ ಸಂವಾದ ಅತಿಶಯವೇ ಆಗಿದೆ. ಸಮಾಜದ ಪುನಾರಚನೆಯ ಆದರ್ಶವಾಗಿ ಸಹ ಈ ಕೃತಿ ನಮಗೆ ಮುಖ್ಯವಾಗುತ್ತದೆ.
ಬದುಕನ್ನು ಕಟ್ಟಿದಂತೆ ಕಾವ್ಯವನ್ನು ಕಟ್ಟುವ ಕಸುಬು ಕವಿಯದು. ಬದುಕಿನ ಶೋಧನೆ, ವಿಶ್ಲೇಷಣೆ ಮರಿಯಪ್ಪ ಅವರ ಕಾವ್ಯದಲ್ಲಿ ಕಣ್ಣಿಗೆ ರಾಚುವ ಅಂಶ. ‘ನೀವು ರುಚಿ ಮಾಡಿ ತಿನ್ನುವ ಉಪ್ಪು /ನನ್ನ ಕಣ್ಣೀರಿನ ಸಮುದ್ರದ್ದು/ನನ್ನನ್ನು ಕಣ್ಣೀರಿಡುವಂತೆ ಮಾಡಿ/ ಉಪ್ಪು ತಿಂತೀರಲ್ಲ /ನಾಚಿಕೆ ಆಗೋದಿಲ್ಲೇನು ನಿಮಗ’ ಅವರ ರಚನೆಗಳಲ್ಲಿ ಕಮನೀಯತೆ, ಹೃದ್ಯ ಕಾವ್ಯ ಗುಣವಿದೆ, ಒಳ್ಳೆಯ ಸಂವಹನ ಸಾಮರ್ಥ್ಯವಿದೆ, ಜತೆಗೆ ಆತ್ಮ ಸ್ಪಂದನ ಶಕ್ತಿ ವಿಶೇಷ. ವರ್ತಮಾನದ ವೇದನೆ ಸಂವೇದನೆಗಳ ಅಭಿವ್ಯಕ್ತಿ ಅವರ ಕಾವ್ಯ. ಸಾಮಾಜಿಕ ಉತ್ಥಾನ, ಪರಿವರ್ತನೆಯನ್ನು ಅದು ಗುರಿಯಾಗಿಸಿಕೊಂಡಿದೆ.
ಒಳ್ಳೆಯ ಕಾವ್ಯಕ್ಕೆ ವಿವರಣೆ ಬೇಕಾಗಿಲ್ಲ. ಕಲೆಗಾರಿಕೆಯನ್ನು ಬಿಟ್ಟುಕೊಡದ ಅವರ ಕಾವ್ಯ ಸಮಾಜಮುಖಿ ಜನಮುಖಿಯಾಗಿ ಸಾಗಿ ಬಂದಿರುವ ಪಯಣ ಬಹು ಹೃದ್ಯವಾಗಿದೆ. ನಮ್ಮ ಅರಿವು ಅನುಭವಗಳ ಸೀಮೆಯನ್ನು ಹಿಗ್ಗಿಸುವ ಹೆಚ್ಚಿಸುವ ತಾಕತ್ತು ಅವರ ಬರವಣಿಗೆಗೆ ಇದೆ ಎಂಬುದು ಮೆಚ್ಚುವಂತಹದು. ಅವರ ಕಾವ್ಯನಿಷ್ಠೆ, ಸಾಮಾಜಿಕ ಕಳಕಳಿ, ಜೀವನ ಪ್ರೀತಿ, ನಿರಾಡಂಬರವಾದ ಶೈಲಿ, ವಾಸ್ತವ ನಿರೂಪಣೆ ಈ ಕೃತಿಯ ಬಲ್ಮೆ. ಜೀವನಪರ ದೃಷ್ಟಿಯೇ ಉತ್ತಮ ಕಾವ್ಯದ ತಾತ್ವಿಕತೆ ಎಂಬ ಮಾತು ಪ್ರಸ್ತುತ ಕೃತಿಗೆ ಚೆನ್ನಾಗಿ ಅನ್ವಯಿಸುತ್ತದೆ. ಕನ್ನಡ ಕಾವ್ಯ ವಾಹಿನಿಗೆ ಇದೊಂದು ಒಳ್ಳೆಯ ಸೇರ್ಪಡೆ.


ಪ್ರೊ. ಜಿ.ಎನ್. ಉಪಾಧ್ಯ, ಮುಂಬೈವಿಶ್ವವಿದ್ಯಾಲಯ
ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಹಿರಿಯ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವ ಪ್ರೊ. ಜಿ.ಎನ್. ಉಪಾಧ್ಯ ಅವರು ಮುಂಬೈ ಮಹಾನಗರದಲ್ಲಿ ಕನ್ನಡದ ಪ್ರಸಾರ ಮತ್ತು ಪ್ರಚಾರದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಸಂಶೋಧನೆ, ವಿಮರ್ಶೆ, ಪತ್ರಿಕೋದ್ಯಮ, ಭಾಷಾವಿಜ್ಞಾನ ಅವರ ಆಸಕ್ತಿಯ ಕ್ಷೇತ್ರಗಳು. ವೈವಿಧ್ಯಮಯವಾದ 100ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಅವರು ತಮ್ಮದೇ ಆದ ‘ಅಭಿಜಿತ್’ ಪ್ರಕಾಶನವನ್ನು ಮುಂಬೈಯಲ್ಲಿ ಆರಂಭಿಸಿ 130ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿ ಸಾಹಿತ್ಯ ವಲಯವಾಗಿ ಮುಂಬೈ ಇಂದಿಗೂ ಬೆಳಗುವಂತೆ ಮಾಡಿದ್ದಾರೆ. ‘ಮಹಾರಾಷ್ಟ್ರದ ಕನ್ನಡ ಶಾಸನಗಳು’, ‘ಗೋದಾವರಿ ತೀರದಲ್ಲಿ ಕನ್ನಡದ ಕುರುಹು’, ‘ಮಹಾರಾಷ್ಟ್ರದ ಕನ್ನಡ ಸ್ಥಳನಾಮಗಳು’, ‘ಸಿದ್ಧರಾಮನ ಸೊನ್ನಲಿಗೆ’, ‘ಮುಂಬೈ ಕನ್ನಡ ಪರಿಸರ’, ‘ಮುಂಬೈ ಕನ್ನಡ ಸಾಹಿತ್ಯ ಚರಿತ್ರೆ’ ಮೊದಲಾದ ಕೃತಿಗಳು ವಿದ್ವತ್ ವಲಯದಲ್ಲಿ ಸಾಕಷ್ಟು ಜನಪ್ರಿಯವಾಗಿವೆ. ಅವರ ಮಾರ್ಗದರ್ಶನದಲ್ಲಿ ಈವರೆಗೆ 74 ಮಂದಿ ಎಂ.ಫಿಲ್ ಹಾಗೂ ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ. ಗುರುನಾರಾಯಣ ಸಾಹಿತ್ಯ ಪ್ರಶಸ್ತಿ, ನರಹಳ್ಳಿ ಪ್ರಶಸ್ತಿ, ಕರ್ನಾಟಕ ಶ್ರೀ ಪುರಸ್ಕಾರ ಮೊದಲಾದ ಗೌರವಕ್ಕೂ ಡಾ. ಉಪಾಧ್ಯ ಇವರು ಪಾತ್ರರಾಗಿದ್ದು, ಮುಂಬೈ ವಿವಿಯಲ್ಲಿ ಕನ್ನಡ ವಿಭಾಗಕ್ಕೆ ‘ಎ’ ಗ್ರೇಡ್ ತಂದುಕೊಡುವಲ್ಲಿ ಇವರು ಸಫಲರಾಗಿದ್ದಾರೆ.
