ಕಾರ್ಕಳ : ಕನ್ನಡ ಸಂಘ ಕಾಂತಾವರ, ಅಲ್ಲಮಪ್ರಭು ಪೀಠ ಕಾಂತಾವರ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ತಾಲೂಕು ಘಟಕ ಇವುಗಳ ಸಹಭಾಗಿತ್ವದಲ್ಲಿ 2026ರ ವರ್ಷಪೂರ್ತಿ ಪ್ರತೀ ತಿಂಗಳು ನಡೆಯುತ್ತಿರುವ ಮಹಾಭಾರತ ಭಾವದೀಪ ಎಂಬ ಉಪನ್ಯಾಸಮಾಲೆಯ ದ್ವಿತೀಯ ಸೋಪಾನದ ಉಪನ್ಯಾಸ ಕಾರ್ಯಕ್ರಮವು ದಿನಾಂಕ 28 ಫೆಬ್ರವರಿ 2026ರಂದು ಕಾರ್ಕಳದ ಹೋಟೆಲ್ ಪ್ರಕಾಶ್ ಇದರ ಸಂಭ್ರಮ ಸಭಾಂಗಣದಲ್ಲಿ ನಡೆಯಿತು.
ವಿದ್ವಾಂಸರಾದ ಡಾ. ವಿನಾಯಕ ಭಟ್ ಗಾಳಿಮನೆಯವರು ‘ವಂಶಾವಾರಿಧಿ ರತ್ನ – ವಿಧುವಂಶ ವಾರಿಧಿ’ ಎಂಬ ಕುರಿತಾಗಿ ಉಪನ್ಯಾಸ ನೀಡುತ್ತಾ “ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ಪುರುಷಾರ್ಥಗಳಲ್ಲಿ ಮೊದಲ ಮೂರು ತ್ರಿವರ್ಗ ಎನಿಸಿಕೊಂಡರೆ ಕೊನೆಯದಾದ ಮೋಕ್ಷವು ಅಪವರ್ಗ ಎನಿಸಿಕೊಳ್ಳುತ್ತದೆ. ತ್ರಿವರ್ಗಗಳನ್ನು ಪಡೆದುಕೊಳ್ಳುವುದೇ ದೊಡ್ಡದು ಎಂದು ನಾವಂದುಕೊಂಡಿದ್ದೇವೆ. ಆದರೆ ಪಡೆದುಕೊಳ್ಳುವುದಕ್ಕಿಂತ ಬಂಧನಗಳಿಂದ ಬಿಡಿಸಿಕೊಂಡು ಮೋಕ್ಷವನ್ನು ಹೊಂದುವುದೇ ಶ್ರೇಷ್ಠ ಎಂಬುದಾಗಿ ಸಮಗ್ರವಾದ ಪುರುಷಾರ್ಥಗಳ ವಿವರಣೆಯನ್ನು ಮಹಾಭಾರತ ನೀಡುತ್ತದೆ” ಎಂಬುದಾಗಿ ತಿಳಿಸಿದರು.
ಡಾ. ನಾ. ಮೊಗಸಾಲೆ, ನಿತ್ಯಾನಂದ ಪೈ, ಏರ್ವೈಸ್ ಮಾರ್ಷೆಲ್ ರಮೇಶ್ ಕಾರ್ಣಿಕ್, ಶ್ರೀಮತಿ ಮಿತ್ರಪ್ರಭಾ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀಮತಿ ಗೀತಾ ಮಲ್ಯ ಪ್ರಾರ್ಥಿಸಿ, ಶ್ರೀಮತಿ ಸುಲೋಚನಾ ಬಿ.ವಿ. ಕಾರ್ಯಕ್ರಮ ನಿರೂಪಿಸಿದರು. ಸದಾನಂದ ನಾರಾವಿ ಸ್ವಾಗತಿಸಿ, ಜಗದೀಶ ಗೋಖಲೆ ವಂದಿಸಿದರು.
