ಉಡುಪಿ : ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ ನಾಟಕೋತ್ಸವ ‘ರಂಗಹಬ್ಬ-14’ರ ಸಮಾರೋಪ ಸಮಾರಂಭವು ದಿನಾಂಕ 28 ಫೆಬ್ರವರಿ 2026ರಂದು ನಡೆಯಿತು.
ಈ ಸಮಾರಂಭದಲ್ಲಿ ಭಾಗವಹಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಇವರು ಮಾತನಾಡಿ “ಮೊಬೈಲ್ನಲ್ಲಿ ಮಕ್ಕಳು ಇರುತ್ತಾರೆ ಎಂದು ಹಿರಿಯರು ದೂರುವುದಿದೆ. ಆದರೆ, ರಂಗಹಬ್ಬವನ್ನು ನೋಡಲು ಬಹಳಷ್ಟು ಮಕ್ಕಳು ಬಂದಿದ್ದಾರೆ. ಅಲ್ಲದೇ ಸುಮನಸಾ ಸಂಸ್ಥೆಯಲ್ಲಿಯೂ ಬಹಳಷ್ಟು ಮಕ್ಕಳನ್ನು ಎಳವೆಯಲ್ಲಿಯೇ ಕಲಿಸಿದರೆ ಅವರಲ್ಲಿ ಸದಭಿರುಚಿ ಬೆಳೆಯುತ್ತದೆ. ನಮ್ಮ ಜವಾಬ್ದಾರಿಯನ್ನು ಕಿರಿಯರಿಗೆ ಕೊಡಬೇಕು. ಆಗ ಅವರನ್ನು ಮೊಬೈಲ್ನಿಂದ ದೂರ ಇಡಲು ಸಾಧ್ಯ. ಸುಮನಸಾವು ಕಿರಿಯರಿಗೂ ಜವಾಬ್ದಾರಿಗಳನ್ನು ನೀಡುವ ಮೂಲಕ ಆ ಕೆಲಸ ಮಾಡಿದೆ. ನಾವು ಆರ್ಥಿಕವಾಗಿ ಮಾತ್ರ ಸಬಲರಾದರೆ ಸಾಲದು. ಸಾಮಾಜಿಕವಾಗಿ, ಆರೋಗ್ಯಕರವಾಗಿಯೂ ಸಬಲರಾಗಬೇಕು. ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಆರೋಗ್ಯಕರ ಮನಸ್ಥಿತಿ ಇರಲು ಸಾಧ್ಯ” ಎಂದು ಪ್ರತಿಪಾದಿಸಿದರು.
ಉದ್ಯಮಿ ಪ್ರಸಾದ್ರಾಜ್ ಕಾಂಚನ್ ಮಾತನಾಡಿ, “ಬಹಳ ಸಾಂಸ್ಕೃತಿಕ ಚಟುವಟಿಕೆಯನ್ನು ಮುಂದಿನ ಪೀಳಿಗೆಗೆ ದಾಟಿಸುವುದು ಹೇಗೆ ದಾಟಿಸುವುದು ಎಂಬ ಪ್ರಶ್ನೆ ನಮ್ಮ ಮುಂದಿದೆ. ಸಮಾಜಮುಖಿಯಾಗಿ ಬೆಳೆಯಬೇಕಾದರೆ ಇಂಥ ಸಮಾಜಮುಖಿ ಕೆಲಸಗಳು ಅಗತ್ಯ. ನಾಟಕ ಎಂಬುದು ಶಾಲಾ ಪಠ್ಯದಲ್ಲಿಯೇ ಅಳವಡಿಸಬೇಕು. ಆಗ ಶಾಲೆಯಲ್ಲಿಯೇ ರಂಗಚಟುವಟಿಕೆ ಆರಂಭವಾಗುತ್ತದೆ. ಅದು ಮಕ್ಕಳ ಚಿಂತನೆಯನ್ನು ಉತ್ತಮಗೊಳಿಸುತ್ತದೆ. ಮುಂದಿನ ಪೀಳಿಗೆ ಅರ್ಥಪೂರ್ಣವಾಗಿ ಬೆಳೆಯಲು ಸಾಧ್ಯ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಉದ್ಯಮಿ ಶೇಖರ್ ಜಿ. ಕೋಟ್ಯಾನ್ ಮಾತನಾಡಿ, “ಒಳ್ಳೆಯ ಕಾರ್ಯಕ್ರಮದ ಸದುಪಯೋಗವನ್ನು ಇಂದಿನ ಯುವಕ, ಯುವತಿಯರು ಪಡೆದುಕೊಂಡರೆ ಅವರ ಬದುಕು ಬೆಳಗಲಿದೆ” ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಕಾರ್ತಿಕ್ ಗ್ರೂಪ್ ಪ್ರವರ್ತಕ ಹರಿಯಪ್ಪ ಕೋಟ್ಯನ್ ಮಾತನಾಡಿ, “ಬೆರಳೆಣಿಕೆಯ ರಂಗ ತಂಡಗಳು ಬಿಟ್ಟರೆ ಹೆಚ್ಚು ತಂಡಗಳು ಸಕ್ರಿಯವಾಗಿಲ್ಲ. ವಾರ್ಷಿಕವಾಗಿ ಒಂದು ಕಾರ್ಯಕ್ರಮ ಮಾಡುತ್ತಾರೆ ಬಿಟ್ಟರೆ ಹೆಚ್ಚಿನ ಕಾರ್ಯಕ್ರಮಗಳನ್ನು ಮಾಡುತ್ತಿಲ್ಲ. ಆದರೆ, ಸುಮನಸಾ ಸಂಘಟನೆಯು ವರ್ಷದಲ್ಲಿ ಅನೇಕ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ. ಈ ಸಂಘಟನೆಯ 25ನೇ ವರ್ಷದ ಕಾರ್ಯಕ್ರಮ ಅವರ ಸ್ವಂತ ರಂಗಮಂಟಪದಲ್ಲಿ ನಡೆಯಲಿ” ಎಂದು ಹಾರೈಸಿದರು.
ಯಕ್ಷಗುರು ದಿವಂಗತ ಯು. ದುಗ್ಗಪ್ಪ ಅವರ ನೆನಪಿನಲ್ಲಿ ನೀಡುವ ‘ಯಕ್ಷಸುಮ‘ ಪುರಸ್ಕಾರವನ್ನು ಕೃಷ್ಣ ಜೋಶಿಯವರಿಗೆ ಪ್ರದಾನ ಮಾಡಲಾಯಿತು. ನ್ಯಾಚುರಲ್ ಗ್ರಾನೈಟ್ ಮಾಲೀಕ ನೀಲೇಶ್, ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ ಗೌರವಾಧ್ಯಕ್ಷ ಎಂ.ಎಸ್. ಭಟ್, ಸಂಚಾಲಕ ಭಾಸ್ಕರ ಪಾಲನ್ ಉಪಸ್ಥಿತರಿದ್ದರು. ಸಂಘಟನೆಯ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ಸ್ವಾಗತಿಸಿ, ಅಕ್ಷತ್ ಅಮೀನ್ ವಂದಿಸಿ, ನಾಗೇಶ್ ಮತ್ತು ವಸುಪ್ರದಾ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಮೈಸೂರು ರಂಗವಲ್ಲಿ ತಂಡದವರು ರವಿ ಪ್ರಸಾದ್ ಇವರ ನಿರ್ದೇಶನದಲ್ಲಿ ‘ಪರಮೇಶಿ ಪೇಮಪ್ರಸಂಗ’ ಕನ್ನಡ ನಾಟಕ ಪ್ರದರ್ಶನ ನೀಡಿದರು.
