ಕಾಸರಗೋಡು : ಮೈಸೂರಿನ ಹೊಯ್ಸಳ ಕನ್ನಡ ಸಂಘ ಮತ್ತು ಸವಿಗನ್ನಡ ಪತ್ರಿಕಾ ಬಳಗವು, ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ದಿನಾಂಕ 05 ಏಪ್ರಿಲ್ 2026ರ ಭಾನುವಾರದಂದು ಸಂಸ್ಥೆಯ 26ನೇ ವಾರ್ಷಿಕೋತ್ಸವ ಹಾಗೂ 2025ನೇ ಸಾಲಿನ ‘ಹೊಯ್ಸಳ ಪ್ರಶಸ್ತಿ’ ಪ್ರದಾನ ಸಮಾರಂಭ ನಡೆಯಿತು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಪುಸ್ತಕ ಪ್ರೇಮಿ ಅಂಕೆಗೌಡ ಕಾರ್ಯಕ್ರಮ ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಕರ್ನಾಟಕದ ಹಾಗೂ ಗಡಿನಾಡು ಕಾಸರಗೋಡಿನ ಕನ್ನಡ ಭವನ ಸಮೂಹ ಸಂಸ್ಥೆಗಳ ರೂವಾರಿ, ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಸಂಸ್ಥಾಪಕರೂ, ಕರ್ನಾಟಕದ ಸುಮಾರು 18 ಜಿಲ್ಲೆಗಳಲ್ಲಿ ಘಟಕಗಳನ್ನು ಸ್ಥಾಪಿಸಿ ಒಳನಾಡಿನಲ್ಲಿಯೂ ಕನ್ನಡ ಸೇವೆ ಮಾಡುತ್ತಿರುವ ಡಾ. ವಾಮನ್ ರಾವ್ ಬೇಕಲ್ (ಗಡಿನಾಡ ಕನ್ನಡ ಸೇವೆ) ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ನಾಡು-ನುಡಿಗೆ ಅನುಪಮ ಸೇವೆ ಸಲ್ಲಿಸುತ್ತಿರುವ ಹದಿನೈದು ಮಂದಿಗೆ ಹೊಯ್ಸಳ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮೈಸೂರು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ಡಾ. ವಿ. ಲಕ್ಷ್ಮಿನಾರಾಯಣ, ಡಾ. ಕೆ. ಲೀಲಾ ಪ್ರಸಾದ್ ಮುಖ್ಯ ಅತಿಥಿಗಳಾಗಿದ್ದರು. ನಾಡು ನುಡಿಗೆ ದುಡಿಯುತ್ತಿರುವ ಹದಿನೈದು ಮಂದಿ ಸಾಧಕರಿಗೆ 2025ನೇ ಸಾಲಿನ ಪ್ರತಿಷ್ಠಿತ ರಾಜ್ಯ ಮಟ್ಟದ ‘ಹೊಯ್ಸಳ ಪ್ರಶಸ್ತಿ’ ಯನ್ನು ಮೈಸೂರು ಜಿಲ್ಲಾಧಿಕಾರಿ ಡಾ. ಪಿ. ಶಿವರಾಜು ಹಾಗೂ ಹಿರಿಯ ಸಮಾಜ ಸೇವಕ ರಘುರಾಮ್ ವಾಜಪೇಯಿ ಪ್ರದಾನ ಮಾಡಿದರು. ಹೊಯ್ಸಳ ಕನ್ನಡ ಸಂಘ ಅಧ್ಯಕ್ಷರಾದ ರಂಗನಾಥ್ ಮೈಸೂರು ಸ್ವಾಗತಿಸಿ, ಪ್ರಸ್ತಾವನೆ ಗೈದರು. ವಿಜಯಲಕ್ಷ್ಮಿ ರಂಗನಾಥ್ ಪ್ರಾರ್ಥನೆ ಗೈದರು. ಮಾನುಷ ನಿರೂಪಿಸಿದರು.
