ಮಂಗಳೂರು : ತುಳು ಚಳುವಳದ ನೇತಾರ ಸಾಹಿತಿ ಎಸ್.ಯು. ಪಣಿಯಾಡಿಯವರ ಜನ್ಮದಿನದ ನೆನಪಿನಲ್ಲಿ ಮಂಗಳೂರಿನ ಕವಿ ಮಿತ್ರರು ಇವರ ವತಿಯಿಂದ ದಿನಾಂಕ 04 ಏಪ್ರಿಲ್ 2026ರಂದು ಸುಲ್ತಾನ ಬತ್ತೇರಿಯ ಬೋಳೂರು ಬೇಯಲ್ಲಿ ಪಣಿಯಾಡಿ ನೆನಪು ಮತ್ತು ತುಳು ಕವಿಗೋಷ್ಠಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ಕನ್ನಡ ತುಳು ಸಾಹಿತಿ ಮತ್ತು ಪತ್ರಕರ್ತ ಯಶವಂತ ಬೋಳೂರು “ತುಳುವರು ತಮ್ಮ ನಾಡು ನುಡಿ, ಸಾಹಿತ್ಯ ಸಂಸ್ಕೃತಿಗಳ ಕುರಿತು ಅಭಿಮಾನವಂತರಾಗಿ ದುಡಿಯಬೇಕಾಗಿದೆ. ಎಸ್.ಯು. ಪಣಿಯಾಡಿಯವರು ಹಾಕಿಕೊಟ್ಟ ತುಳುವ ಚಳುವಳದ ಆಶಯಗಳನ್ನು ಅರಿತುಕೊಂಡು ಮುನ್ನಡೆಸಬೇಕು” ಎಂದು ನುಡಿದರು.
ಸುರತ್ಕಲ್ ಗೋವಿಂದ ದಾಸ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಪ್ರೊ. ಕೃಷ್ಣಮೂರ್ತಿ ಪಿ. ಮಾತನಾಡಿ “ಕನ್ನಡದ ನವೋದಯ ಸಾಹಿತ್ಯದ ಕಾಲಘಟ್ಟದಲ್ಲಿಯೇ ಪಣಿಯಾಡಿಯವರು ತುಳುವಿನ ಸಾಹಿತ್ಯ ರಚನೆ ಮಾಡಿದರು. ತುಳುವ ಮಹಾ ಸಭೆ, ತುಳುನಾಡ್ ಪ್ರೆಸ್, ತುಳುನಾಡ್ ಬ್ಯಾಂಕ್, ಅಂತರಂಗ ಪತ್ರಿಕೆಗಳನ್ನು ನಡೆಸುವ ಜೊತೆಗೆ ಸ್ವಾತಂತ್ರ್ಯ ಹೋರಾಟ ಮತ್ತು ತುಳು ಚಳುವಳಿಗಳನ್ನು ಮುನ್ನಡೆಸಿದವರು” ಎಂದರು.

ಕವಿ, ಪತ್ರಕರ್ತರಾದ ಯಶವಂತ ಬೋಳೂರ್ ಅವರು ‘ತುಳುನಾಡು’, ಪಿಂಗಾರ ಪತ್ರಿಕೆ ಸಂಪಾದಕ ರೇಮಂಡ್ ಡಿಕೂನಾ ತಾಕೊಡೆ ‘ದೂರುನ ಅಭ್ಯಾಸ’, ಲೇಖಕಿ ಕವಯತ್ರಿ ಸುಧಾ ನಾಗೇಶ್ ‘ಮದೆಕ್ ಪೋತುಂಡು’, ಕವಿ ವೆಂಕಟೇಶ್ ಗಟ್ಟಿ ‘ನಮ ತುಳುವೆರ್’, ತುಳುವೆರೆ ಕಲ ಅಧ್ಯಕ್ಷೆ ಗೀತಾ ಲಕ್ಷ್ಮೀಶ್ ಅವರು ಎಸ್.ಯು. ಪನಿಯಾಡಿ ಕುರಿತ ‘ಕನನನ ಆವೊಡು’, ಅಮೃತ ಪ್ರಕಾಶ ಪತ್ರಿಕೆ ಸಂಪಾದಕಿ ಮಾಲತಿ ಶೆಟ್ಟಿ ಮಾಣೂರು ‘ಪೆರ್ಮೆ’, ಕವಿ ಎನ್. ಸುಬ್ರಾಯ ಭಟ್ ‘ಉಲ್ಲೆರಪ್ಪಾ ಉಲ್ಲೆರ್’, ರಘು ಇಡ್ಕಿದು ಪಣಿಯಾಡಿ ಕಾಲದಲ್ಲಿ ಮುದ್ರಣಗೊಂಡ ನಾರಾಯಣ ಶೆಟ್ಟಿ ಕಿಲ್ಲೆಯವರ ‘ಕಾನಿಗೆ’ ಕವನ ಸಂಕಲನದಿಂದ ಆಯ್ದ ಕವಿತೆಗಳನ್ನು ಪ್ರಸ್ತುತಪಡಿಸಿದರು.
ಸಾಹಿತಿ ರಘು ಇಡ್ಕಿದು ಅವರು ತುಳುವ ಸಾಹಿತ್ಯ ಮಾಲೆಯಲ್ಲಿ ಪ್ರಕಟವಾಗಿದ್ದ ನಾರಾಯಣ ಕಿಲ್ಲೆಯವರ ‘ಕಾನಿಗೆ’ ಕವನ ಸಂಕಲನದ ತುಳುನಾಡ್ ಕವನ ಹಾಗೂ ಮಾಧವ ತಿಂಗಳಾಯರ ‘ಜನ ಮರ್ಲ್’ ನಾಟಕದ ಮಂಗಲ ಪದ್ಯ ವಾಚಿಸಿ ಪಣಿಯಾಡಿಯವರ ಕಾಲಘಟ್ಟದ ತುಳುವ ಸಾಹಿತ್ಯದ ವಿಶೇಷತೆಗಳನ್ನು ತಿಳಿಸಿದರು. ನಾಗೇಶ್, ದೇವದಾಸ ಬೋಳೂರು ಮತ್ತಿತರರು ಸಹಕರಿಸಿದರು. ರಘು ಇಡ್ಕಿದು ಕಾರ್ಯಕ್ರಮ ನಿರೂಪಿಸಿ,ವಂದಿಸಿದರು. ಯಶವಂತ ಬೋಳೂರು ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜನೆಯಾಗಿತ್ತು.
