ಮಂಚಿ : ಲಯನ್ಸ್ ಸೇವಾ ಟ್ರಸ್ಟ್ (ರಿ.) ಮಂಚಿ ಹಾಗೂ ಲಯನ್ಸ್ ಕ್ಲಬ್ ಕೊಳ್ನಾಡು–ಸಾಲೆತ್ತೂರು ಇವರ ಸಹಯೋಗದಲ್ಲಿ ವಸುಧಾರಾ ಕಲಾಕೇಂದ್ರ ಬೋಳಂತೂರು–ಮಂಚಿ ವತಿಯಿಂದ ಆಯೋಜಿಸಲಾದ ‘ಕಲಾಧಾರಾ–9’ ಕಾರ್ಯಕ್ರಮವು ದಿನಾಂಕ 29 ಮೇ 2026ರಂದು ಮಂಚಿಯ ಲಯನ್ಸ್ ಸೇವಾ ಮಂದಿರದಲ್ಲಿ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮದ ಕಲಾವಿದೆಯಾಗಿ ಶ್ರೀಮತಿ ಮಧುರ ಪ್ರಖ್ಯಾತ್ ಇವರು ಭರತನಾಟ್ಯದ ವೈವಿಧ್ಯಮಯ ಪ್ರಸ್ತುತಿಗಳ ಮೂಲಕ ಕಲಾರಸಿಕರ ಮೆಚ್ಚುಗೆಗೆ ಪಾತ್ರರಾದರು. ಕಳೆದ 15 ವರ್ಷಗಳಿಂದ ಭರತನಾಟ್ಯವನ್ನು ಅಭ್ಯಾಸ ಮಾಡುತ್ತಿರುವ ಅವರು ವಿದ್ವಾನ್ ಬಿ. ದೀಪಕ್ ಕುಮಾರ್, ವಿದುಷಿ ಪ್ರೀತಿಕಲಾ ಹಾಗೂ ವಿದ್ವಾನ್ ಗಿರೀಶ್ ಕುಮಾರ್ ಇವರ ಮಾರ್ಗದರ್ಶನದಲ್ಲಿ ತಮ್ಮ ನೃತ್ಯಾಭ್ಯಾಸವನ್ನು ಮುಂದುವರಿಸುತ್ತಿದ್ದಾರೆ. ವಿದ್ವತ್ ಪೂರ್ವ ಪರೀಕ್ಷೆಯನ್ನು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವ ಅವರು, ಈ ವರ್ಷ ವಿದ್ವತ್ ಅಂತಿಮ ಪರೀಕ್ಷೆಗೆ ಹಾಜರಾಗಿದ್ದಾರೆ.


ಕಾರ್ಯಕ್ರಮದಲ್ಲಿ ಗುರು ಶ್ರೀಮತಿ ನರ್ಮದಾ ಇವರ ನೃತ್ಯ ಸಂಯೋಜನೆಯ ನಾಟೈ ರಾಗದ ಆದಿತಾಳದ ‘ಆನಂದ ನರ್ತನ ಗಣಪತಿ’ ವಿದ್ವಾನ್ ಬಿ. ದೀಪಕ್ ಕುಮಾರ್ ಇವರ ನೃತ್ಯ ಸಂಯೋಜನೆಯ ಹಾಗೂ ಆರೋಹಧಾರಾ ಸರಣಿ–1 ಕಾರ್ಯಾಗಾರದಲ್ಲಿ ಕಲಿತ ಕಲ್ಯಾಣಿ ರಾಗದ ‘ಶಾರದೆಯ ವರ ತನಯ’, ವಿದುಷಿ ಪ್ರೀತಿಕಲಾ ಇವರ ನೃತ್ಯ ಸಂಯೋಜನೆಯ ಯಮನ್ ಕಲ್ಯಾಣಿ ರಾಗದ ‘ಹರಿ ಸ್ಮರಣೆ ಮಾಡೋ ನಿರಂತರ’ ದೇವರನಾಮ ಹಾಗೂ ಗುರು ಶ್ರೀ ಅಡೆಯರ್ ಲಕ್ಷ್ಮಣನ್ ಇವರ ಮೋಹನ ರಾಗದ ತಿಲ್ಲಾನವನ್ನು ಮನೋಜ್ಞವಾಗಿ ಪ್ರಸ್ತುತಪಡಿಸಿದರು.


ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಡಾ. ಉಜ್ವಲ ಆಚಾರ್ ಎಂ. ಇವರು ಕಲಾವಿದೆಯ ಪ್ರದರ್ಶನವನ್ನು ಶ್ಲಾಘಿಸಿ, ಕಲೆ ಮತ್ತು ಶಿಕ್ಷಣ ಎರಡನ್ನೂ ಸಮನ್ವಯಗೊಳಿಸಿಕೊಂಡು ಸಾಗುವ ಯುವಪೀಳಿಗೆಯು ಸಮಾಜಕ್ಕೆ ಮಾದರಿಯಾಗಬೇಕು ಎಂದು ಅಭಿಪ್ರಾಯಪಟ್ಟರು. ಸಂಗೀತ ಮತ್ತು ಭರತನಾಟ್ಯ ಕ್ಷೇತ್ರಗಳಲ್ಲಿ ತಮ್ಮದೇ ಆದ ಸಾಧನೆ ಮಾಡಿರುವ ಅವರು ಯುವ ಕಲಾವಿದರಿಗೆ ಪ್ರೋತ್ಸಾಹದ ಮಾತುಗಳನ್ನಾಡಿದರು. ಇವರೂ ಕೂಡಾ ವಿದ್ವಾನ್ ದೀಪಕ್ ಕುಮಾರ್ ಇವರ ಶಿಷ್ಯೆಯಾಗಿರುವುದು ವಿಶೇಷ ಸಂಗತಿ.



ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೇ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದರು. ಭೂಮಿಕಾ ಕಾಮತ್ ಓಂಕಾರ, ಪೃಥ್ವಿ ಶಂಖನಾದ, ಬ್ರಾಹ್ಮೀ ಪ್ರಾರ್ಥನೆ, ಸಾನ್ವಿ ಕಾಮತ್ ನಿತ್ಯ ಪಂಚಾಂಗ, ಕನಿಷ್ಕ ಸುಭಾಷಿತ, ಶ್ರೀತಲ್ ಪಿ.ಎಸ್. ಅಭ್ಯಾಗತರ ಪರಿಚಯ ಹಾಗೂ ಖುಷಿ ಕಲಾವಿದರ ಪರಿಚಯವನ್ನು ನೆರವೇರಿಸಿದರು. ಅವನಿ ಪಿ.ಎಸ್. ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಕಲಾರಸಿಕರು ಮಧುರ ಅವರ ನೃತ್ಯ ಪ್ರದರ್ಶನವನ್ನು ಮೆಚ್ಚಿ ಅಭಿನಂದಿಸಿದರು.

