ಉಡುಪಿ : ಯಕ್ಷಗಾನ ಕಲಾರಂಗವು ಸಹೃದಯಿ ಕಲಾ ಪೋಷಕ ಮಟ್ಟಿ ಮುರಲೀಧರ ರಾವ್, ಅರ್ಥಧಾರಿ, ಪಂಡಿತ ಪೆರ್ಲ ಕೃಷ್ಣ ಭಟ್ ಮತ್ತು ಈ ವರ್ಷದಿಂದ ಹೊರನಾಡಿನ ಧರ್ಮಕರ್ತೃ ಡಾ. ಜಿ. ಭೀಮೇಶ್ವರರ ಜೋಶಿಯವರು ತಮ್ಮ ಅಜ್ಜ ಡಿ. ಬಿ. ವೆಂಕಟಸುಬ್ಬಾ ಜೋಯಿಸ್ ಇವರ ನೆನಪಿನಲ್ಲಿ ಸ್ಥಾಪಿಸಿದ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ಗೆ ಅನುಕ್ರಮವಾಗಿ ಡಾ. ಜಿ.ಕೆ. ಹೆಗಡೆ ಹೊನ್ನಾವರ, ಕೋಟೆ ರಾಮ ಭಟ್ ಕಾರ್ಕಳ ಮತ್ತು ವೆಂಕಟರಾಮ ಭಟ್ಟ ಸುಳ್ಯ ಇವರು ಆಯ್ಕೆಯಾಗಿದ್ದಾರೆ.
ದಿನಾಂಕ 11 ಜುಲೈ 2026ರಂದು 4-00 ಗಂಟೆಗೆ ಸಂಸ್ಥೆಯ ಐವೈಸಿ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದ್ದು, ಸಮಾರಂಭದ ಪೂರ್ವದಲ್ಲಿ ಅಪರಾಹ್ನ 1-00ರಿಂದ 4-00ರವರೆಗೆ ಪ್ರಸಿದ್ಧ ಕಲಾವಿದರ ಸಹಯೋಗದೊಂದಿಗೆ ‘ಶ್ರೀರಂಗ ತುಲಾಭಾರ’ ತಾಳಮದ್ದಲೆ’ ಪ್ರಸ್ತುತಗೊಳ್ಳಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿದ್ದಾರೆ. ಪ್ರತಿ ಪ್ರಶಸ್ತಿಯು ರೂ.20,000/- ನಗದು ಪುರಸ್ಕಾರ ಮತ್ತು ಪ್ರಶಸ್ತಿ ಫಲಕಗಳನ್ನೊಳಗೊಂಡಿರುತ್ತದೆ.
