ಕಾಸರಗೋಡು : “ಸಂಗೀತಲೋಕದ ದಂತಕತೆ ಎಂದೇ ಗುರುತಿಸಲ್ಪಟ್ಟಿರುವ ಎಸ್. ಜಾನಕಿ ಅಮ್ಮನವರ ಹಾಡುಗಳನ್ನು ಎಲ್ಲ ವಯೋಮಾನದ ಹಾಡುಗಾರರು ಹಾಡುವ ಮೂಲಕ ‘ಸ್ವರನಮನ’ ಸಲ್ಲಿಸುತ್ತಿರುವುದು ಸ್ತುತ್ಯರ್ಹ ಕೆಲಸವಾಗಿದೆ. ಜಾನಕಿ ಅಮ್ಮನವರು ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ” ಎಂದು ಹಿರಿಯ ಚಿಕಿತ್ಸಕ ಡಾ. ಸುರೇಶ ಮಯ್ಯ ಅವರ ಹೇಳಿದರು.



ಅವರು ಕಾಸರಗೋಡಿನ ಸಾಹಿತ್ಯಕ ಸಾಂಸ್ಕೃತಿಕ ಸಾಮಾಜಿಕ ಸಂಸ್ಥೆ ರಂಗಚಿನ್ನಾರಿ ಕಾಸರಗೋಡು (ರಿ.) ಇದರ ಸಂಗೀತ ಘಟಕ ಸ್ವರಚಿನ್ನಾರಿ ನೇತೃತ್ವದಲ್ಲಿ ಐ.ಎಂ.ಎ. ಕರೋಕೆ ಘಟಕದ ಸಹಯೋಗದೊಂದಿಗೆ ಏರ್ಪಡಿಸಿದ ‘ಅಂತರಧ್ವನಿ – 18’ ಸಂಗೀತ ಕಾರ್ಯಕ್ರಮವನ್ನು ದಿನಾಂಕ 19 ಜುಲೈ 2026ರಂದು ಬೀರಂತಬೈಲಿನಲ್ಲಿರುವ ಐ.ಎಂ.ಎ. ಸಭಾಂಗಣದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಿದ್ದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಕಾಸರಗೋಡು ಮರ್ಚಂಟ್ಸ್ ಅಸೋಸಿಯೇಶನ್ ನ ಅಧ್ಯಕ್ಷ ಎ.ಎ. ಅಜೀಝ್ ಮಾತನಾಡಿ “ಪ್ರತಿಯೊಬ್ಬ ವ್ಯಕ್ತಿಯ ಒಳಗೆ ಸಂಗೀತ ಅಡಗಿರುತ್ತದೆ. ಸುಪ್ತವಾದ ವೇದಿಕೆ ದೊರೆತಾಗ ಅದು ಹೊರಬರುತ್ತದೆ. ಮುಂದಿನ ದಿನಗಳಲ್ಲಿ ವ್ಯಾಪಾರೀ ಘಟಕದ ಜೊತೆ ಸೇರಿ ಅಂತರಧ್ವನಿ ಕಾರ್ಯಕ್ರಮ ಯೋಜಿಸುವುದಾಗಿ ತಿಳಿಸಿದರು.
‘ಕವಿ ಸಿಂಚನ’ ಕಾರ್ಯಕ್ರಮದಲ್ಲಿ ಕಾಸರಗೋಡಿನ ಕವಿ, ಕನ್ನಡ ಅಧ್ಯಾಪಕ, ಹೋರಾಟಗಾರ ಎಂ. ಗಂಗಾಧರ ಭಟ್ಟರನ್ನು ನೆನಪಿಸಿ ಕೋಳಾರು ಸತೀಶ್ಚಂದ್ರ ಭಂಡಾರಿ ಅವರು ಮಾತನಾಡಿದರು. ಸಂಗೀತ ಸಾಮ್ರಾಟಿ, ಪದ್ಮಭೂಷಣ ಎಸ್. ಜಾನಕಿ ಅಮ್ಮನವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ಕೆ.ಕೆ. ಶ್ಯಾನುಭೋಗ್ “ಎಲ್ಲಾ ಜಾತಿ, ಮತ, ಧರ್ಮಗಳನ್ನು ಒಗ್ಗೂಡಿಸುವ ಕೆಲಸ ಸಂಗೀತ ಮಾಡುತ್ತದೆ. ಸ್ವರಚಿನ್ನಾರಿ ಘಟಕದಲ್ಲಿ ಎಲ್ಲಾ ವರ್ಗದ ಅದರಲ್ಲೂ ಅತೀ ಹಿಂದುಳಿದವರಿಗೆ ಕೂಡ ಮುಕ್ತವಾಗಿ ಹಾಡುವ ಅವಕಾಶ ದೊರಕಿದೆ” ಎಂದರು.




ರಂಗಚಿನ್ನಾರಿಯ ನಿರ್ದೇಶಕರೂ, ‘ಅಂತರಧ್ವನಿ’ಯ ಸಂಚಾಲಕರೂ ಆಗಿರುವ ಕಾಸರಗೋಡು ಚಿನ್ನಾರವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಗಾಯಕಿ ಕುಮಾರಿ ಕೀರ್ತನ ಪ್ರಾರ್ಥಿಸಿದರು. ರಂಗಚಿನ್ನಾರಿಯ ನಿರ್ದೇಶಕರುಗಳಾದ ಕೆ. ಸತೀಶ್ಚಂದ್ರ ಭಂಡಾರಿ, ಡಾ. ಸಂತೋಷ ಕಾಮತ್, ನ್ಯಾಯವಾದಿ ಎ.ಎನ್.ಅಶೋಕ ಕುಮಾರ್, ನಾರಿಚಿನ್ನಾರಿಯ ಕಾರ್ಯಾಧ್ಯಕ್ಷೆ ಶ್ರೀಮತಿ ಸವಿತಾ ಟೀಚರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.




ಸಮಾರೋಪ ಸಮಾರಂಭದಲ್ಲಿ ಡಾ. ಹರಿಕಿರಣ್ ಬಂಗೇರ ಮಾತನಾಡಿ ಮುಂದಿನ ದಿನಗಳಲ್ಲಿ ಸ್ವರಚಿನ್ನಾರಿ ಘಟಕದ ಕಾರ್ಯಕ್ರಮಗಳಲ್ಲಿ ಐ.ಎಂ.ಎ. ಕರೋಕೆ ಗಾಯಕರು ಮತ್ತಷ್ಟು ಸಕ್ರಿಯವಾಗಿ ತೊಡಗಿಸುವ ಬಗ್ಗೆ ತಿಳಿಸಿದರು. ರಂಗ ಚಿನ್ನಾರಿಯ ಜನಾರ್ದನ ಅಣಂಗೂರು, ಉದಯ ಕುಮಾರ ಮನ್ನಿಪ್ಪಾಡಿ ವೇದಿಕೆಯಲ್ಲಿದ್ದರು. ‘ಅಂತರಧ್ವನಿ’ಯ ಸಹ ಸಂಚಾಲಕಿ, ಗಾಯಕಿ ಶ್ರೀಮತಿ ಬಬಿತಾ ಆಚಾರ್ಯ ವಂದಿಸಿದರು.
