Subscribe to Updates

    Get the latest creative news from FooBar about art, design and business.

    What's Hot

    ವಿಶ್ವಭಾರತಿ ಯಕ್ಷ ಸಂಭ್ರಮ ಯಕ್ಷಗಾನ ತಾಳಮದ್ದಳೆ ಸಪ್ತಾಹ

    July 22, 2026

    ಮೈಸೂರಿನ ಸುಗಮ ಸಂಗೀತ ಅಕಾಡೆಮಿಯಿಂದ ‘ಗಾನ ವೈಭವ’ | ಜುಲೈ 24

    July 22, 2026

    ನೃತ್ಯ ವಿಮರ್ಶೆ | ಚೈತನ್ಯಪೂರ್ಣ ಆಹ್ಲಾದಕಾರೀ ‘ಅನನ್ಯ’ ನೃತ್ಯಾಭಿನಯ

    July 22, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ನೃತ್ಯ ವಿಮರ್ಶೆ | ಚೈತನ್ಯಪೂರ್ಣ ಆಹ್ಲಾದಕಾರೀ ‘ಅನನ್ಯ’ ನೃತ್ಯಾಭಿನಯ
    Article

    ನೃತ್ಯ ವಿಮರ್ಶೆ | ಚೈತನ್ಯಪೂರ್ಣ ಆಹ್ಲಾದಕಾರೀ ‘ಅನನ್ಯ’ ನೃತ್ಯಾಭಿನಯ

    July 22, 2026No Comments3 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ರಂಗದ ಮೇಲೆ ಸುಮಾರು ಎರಡು ಗಂಟೆಗಳ ಕಾಲ ನಿರಾಯಾಸವಾಗಿ ಅದ್ಭುತ ಚೈತನ್ಯದಿಂದ ನೃತ್ಯಾಭಿನಯ ಮಾಡಿ ಕಲಾರಸಿಕರನ್ನು ಮೋಡಿ ಮಾಡಿದ ಅದ್ಭುತ ಭರತನಾಟ್ಯ ಕಲಾವಿದೆ ಕುಮಾರಿ ಅನನ್ಯ ಶರ್ಮ ದಿನಾಂಕ 18 ಜುಲೈ 2026ರಂದು ಬೆಂಗಳೂರಿನ ಮಾರುತಹಳ್ಳಿಯ ನ್ಯೂ ಹೊರೈಸನ್ ಎಂಜಿನಿಯರಿಂಗ್ ಕಾಲೇಜ್ ಆಡಿಟೋರಿಯಂನಲ್ಲಿ ವಿದ್ಯುಕ್ತವಾಗಿ ರಂಗಪ್ರವೇಶ ಮಾಡಿ ಕಲಾರಸಿಕರ ಮೆಚ್ಚುಗೆಯನ್ನು ಪಡೆದಳು. ಬೆಂಗಳೂರಿನ ಹೆಸರಾಂತ ‘ನಟರಾಜರಂಗಂ ಸ್ಕೂಲ್ ಆಫ್ ಡ್ಯಾನ್ಸ್’ ನೃತ್ಯಸಂಸ್ಥೆಯ ಬದ್ಧತೆಯ ಪ್ರತಿಭಾವಂತ, ಉತ್ತಮ ನಾಟ್ಯಗುರು ಮತ್ತು ನೃತ್ಯಕಲಾವಿದೆ ಶ್ರೀಮತಿ ಅಭಿನಯ ನಟರಾಜನ್ ಇವರ ಅನುಪಮವಾದ ನೃತ್ಯ ಸಂಯೋಜನೆ ಮತ್ತು ನಾಟ್ಯಶಿಕ್ಷಣದಲ್ಲಿ ಅರಳಿದ ಕಲಾಶಿಲ್ಪ ಕುಮಾರಿ ಅನನ್ಯ ಶರ್ಮ. ಹದಿನೇಳರ ಯುವತಿ ಹಸನ್ಮುಖದ, ಅತ್ಯಂತ ಆತ್ಮವಿಶ್ವಾಸದಿಂದ ಮೆರೆದ ಕಲಾಭಿನಯ – ಸುಮನೋಹರ ನೃತ್ತವಿನ್ಯಾಸಗಳು, ಅಂಗಶುದ್ಧ ನೃತ್ಯದ ವಿವಿಧ ಮಜಲುಗಳಿಂದ ಆಕೆಯ ನೃತ್ಯಪ್ರತಿಭೆ ವೈಶಿಷ್ಟ್ಯವೆನಿಸಿತು.

    ಶುಭಾರಂಭದಲ್ಲಿ ಶ್ರೀ ಮಧುರೈ ಮುರಳೀಧರನ್ – ರಸಿಕಪ್ರಿಯ ರಾಗದಲ್ಲಿ ರಚಿಸಿದ ‘ಪುಷ್ಪಾಂಜಲಿ’ಯನ್ನು ಕಲಾವಿದೆ ಅನನ್ಯ ತನ್ನ ಮನಮೋಹಕ ನೃತ್ತವಿನ್ಯಾಸಗಳಿಂದ ರಂಗಾಕ್ರಮಣದಲ್ಲಿ ದೇವಾನುದೇವತೆಗಳು, ಗುರು-ಹಿರಿಯರು ಮತ್ತು ಕಲಾಭಿಮಾನಿಗಳಿಗೆ ವಿನೀತ ಪ್ರಣಾಮ ಸಲ್ಲಿಸಿದಳು. ಲೀಲಾಜಾಲ ನರ್ತನದಲ್ಲಿ ಅವಳು ತೋರಿದ ವಿಶಿಷ್ಟ ಆಕರ್ಷಕ ನೃತ್ಯ ಭಂಗಿಗಳು ಶಿಲ್ಪಸದೃಶವಾಗಿದ್ದವು. ನಂತರ ತಂಜಾವೂರು ಸಹೋದರ ವಿರಚಿತ ಷಣ್ಮುಖಪ್ರಿಯ ರಾಗದ ‘ಮುರುಗನ ಕೌತ್ವಂ’ -ಮುರುಗನ ಮಹಿಮೆ – ವೈಶಿಷ್ಟ್ಯಗಳನ್ನು ಬಹು ಸೊಗಸಾಗಿ ಅನಾವರಣಗೊಳಿಸಿತು. ಗುರು ತಮ್ಮ ಸುಸ್ಪಷ್ಟ ಕಂಠದಲ್ಲಿ ನಿರೂಪಿಸಿದ ‘ಕವಿತ್ವಂ’ಗೆ ಅನುಗುಣವಾಗಿ ಅನನ್ಯ, ಮಯೂರ ಮುದ್ರೆಗಳಲ್ಲಿ, ನವಿಲಿನ ಬಾಗು-ಬಳಕು ನಡೆಗಳನ್ನು ತನ್ನ ಮನಮೋಹಕ ಅಂಗಿಕಾಭಿನಯ, ಕಣ್ಮನ ಸೆಳೆದ ನೃತ್ತಮಂಜರಿಯನ್ನು ಮನಮುಟ್ಟುವಂತೆ ನಿರೂಪಿಸಿದಳು. ಅವಳ ಸೂಕ್ಷ್ಮ ಪಾದಭೇಧಗಳ ಸೌಂದರ್ಯ, ಸುಲಲಿತ ಭ್ರಮರಿ- ಆಕಾಶಚಾರಿಗಳು ಗಮನಾರ್ಹವಾಗಿದ್ದವು.

    ಮುಂದೆ- ಸರಸ್ವತಿ ರಾಗದ ‘ಜತಿಸ್ವರ’ – ಶುದ್ಧ ನೃತ್ತಬಂಧ, ಭರತನಾಟ್ಯ ನೃತ್ಯ ವ್ಯಾಕರಣದ ಪ್ರತಿಯೊಂದು ಅಂಶಗಳ ಮೇಲೂ ನಿಖರವಾಗಿ ಬೆಳಕು ಚೆಲ್ಲಿತು. ಶುದ್ಧ ನೃತ್ತಗಲ್ಲ ನಿರೂಪಣೆಯೇ ಆದರೂ ಅನನ್ಯ ಅದಕ್ಕೆ ಜೀವದುಂಬಿ ಮೆರುಗಿನಿಂದ ಅರ್ಪಿಸಿದ್ದು ವಿಶೇಷವಾಗಿತ್ತು. ಪ್ರಸ್ತುತಿಯ ಪ್ರಮುಖ ಘಟ್ಟ ‘ವರ್ಣ’ – ಪ್ರಸ್ತುತಿಯ ಆತ್ಮಭಾಗ ಎನ್ನಬಹುದು. ಇದರಲ್ಲಿ ಅನನ್ಯ, ತನ್ನ ತಾಳ- ಲಯಜ್ಞಾನವನ್ನು ವಿಶೇಷವಾಗಿ ಪ್ರದರ್ಶಿಸಿ, ಅಗಾಧ ನೆನಪಿನ ಶಕ್ತಿಯ ಬಲದಿಂದ ನೃತ್ತಾವಳಿಗಳನ್ನು ವೈವಿಧ್ಯಪೂರ್ಣವಾಗಿ ಪ್ರದರ್ಶಿಸಿ ನೋಡುಗರನ್ನು ವಿಸ್ಮಯಗೊಳಿಸಿದಳು. ಮನಮೋಹಕ ಅಷ್ಟೇ ಭಕ್ತಿಪ್ರಧಾನವಾದ, ಸುದೀರ್ಘ ವರ್ಣ (ರಾಗ- ಶಂಕರಾಭರಣ, ರಚನೆ- ದಂಡಾಯುಧ ಪಾಣಿ ಪಿಳ್ಳೈ)ವನ್ನು ಅನುಪಮವಾಗಿ ಸಾಕ್ಷಾತ್ಕರಗೊಳಿಸಿದ್ದು ಚಿರಸ್ಮರಣೀಯ. ‘ಸಖಿಯೇ ಎಂದ ಜಾಲಂ …’ – ವಿರಹೋತ್ಖಂಠಿತ ನಾಯಿಕೆಯ ವಿರಹಾರ್ತ ಭಾವ- ವಿಭಾವಗಳ ಸೂಕ್ಷ್ಮಪದರಗಳನ್ನು ಕಲಾವಿದೆ ತನ್ನ ನುರಿತ ಅಭಿನಯದಲ್ಲಿ ವಿವಿಧ ಮಜಲುಗಳ ಅಭಿವ್ಯಕ್ತಿಯಲ್ಲಿ, ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿ ತಲ್ಲೀನಳಾಗಿ ಸಾಕಾರಗೊಳಿಸಿದಳು.

    ವರ್ಣದ ಸಂಚಾರೀ ಭಾಗದ ಕಥಾನಕದಲ್ಲಿ ‘ಹಾತೀ ರಾಮ್ ಭಾವಾಜಿ’ ಅವರ ಅಸೀಮ ಭಕ್ತಿಯ ಸಾಕ್ಷಾತ್ಕಾರವನ್ನು ಮತ್ತು ಗಜೇಂದ್ರ ಮೋಕ್ಷದ ಕಥೆಯ ಮೂಲಕ ಹರಿಕರುಣೆಯನ್ನು ಕಲಾವಿದೆ, ನಾಟಕೀಯ ಆಯಾಮಗಳಿಂದ ರೋಚಕವಾಗಿ ಕಟ್ಟಿಕೊಟ್ಟಳು. ಗುರು ಅಭಿನಯ ಅವರ ಜಲಪಾತದಂಥ ಕುಣಿಸುವ ಲಯ – ಓಘದ ನಟುವಾಂಗ ನೃತ್ಯಕ್ಕೆ ಸರಿಸಾಟಿಯಾಗಿ ಮೆರಗು ನೀಡಿತು. ಗಾಯಕಿ ವಿದುಷಿ ಜಯಶ್ರೀ ಅಜಯ್ ಕುಮಾರ್ ಭಾವಪೂರ್ಣ ಗಾಯನ – ಪೃಥ್ವೀಕೃಷ್ಣರ ಮೃದಂಗ- ವೇಣುಗೋಪಾಲರ ಮುರಳೀನಾದ, ಅರ್ಜುನ್ – ವಯೊಲಿನ್ ಮತ್ತು ಪ್ರಸನ್ನಕುಮಾರರ ಶಬ್ದ ತರಂಗದ ವಿಶಿಷ್ಟ ನಾದಕುಂಜರ, ಅನನ್ಯಳ ಮುದ ನೀಡುವ ನೃತ್ಯಕ್ಕೆ ಪೋಷಣೆ ನೀಡಿತು. ಅನನ್ಯ ನಿರೂಪಿಸಿದ ಅಂಗಶುದ್ಧ ಆಂಗಿಕಾಭಿನಯದ ಹಸ್ತ ವಿನಿಯೋಗಗಳು, ಖಚಿತ ಅಡವುಗಳ ಹೊಳಪು ಮನಸೆಳೆಯುವಂತಿದ್ದವು.

    ಪ್ರಸ್ತುತಿಯ ದ್ವಿತೀಯ ಭಾಗದಲ್ಲಿ ಶ್ರೀ ಪುರಂದರದಾಸರ (ರಾಗಮಾಲಿಕೆ-ಆದಿತಾಳ) ‘ಚಂದ್ರಚೂಡ ಶಿವಶಂಕರ ಪಾರ್ವತೀ ರಮಣನೇ ನಿನಗೆ ನಮೋ’ –ಕೃತಿಯನ್ನು ಅನನ್ಯ, ಅತ್ಯಂತ ಚೈತನ್ಯ ಪೂರ್ಣವಾಗಿ ಅಭಿನಯಿಸಿ ಆಕರ್ಷಕ ಭಂಗಿಗಳನ್ನು ಪ್ರದರ್ಶಿಸಿ, ದೈವೀಕ ಆಯಾಮದ ಕೃತಿಯ ಜೀವಾಳವನ್ನು ಪರಿಣಾಮಕಾರಿಯಾಗಿ, ಚೇತೋಹಾರಿಯಾಗಿ ಅರ್ಪಿಸಿದಳು. ಅನಂತರ- ಬೆಂಗಳೂರು ನಾಗರತ್ನಮ್ಮ ರಚಿಸಿದ ‘ಜಾವಳಿ’ (ಖಮಾಚ್ ರಾಗ) ‘ಮಾತಾಡಬಾರದೇನೋ …’ – ವಿರಹಾರ್ತ ನಾಯಕಿಯ ಮನದ ವಿಪ್ಲವಗಳನ್ನು ತನ್ನ ನವಿರಾದ ಅಭಿನಯದ ಮೂಲಕ ಎಳೆಎಳೆಯಾಗಿ ಮನಸ್ಪರ್ಶಿಸಿದ ಅನನ್ಯಳ ಕೋಮಲಾಭಿನಯ ಶ್ಲಾಘನೀಯ. ಅಂತ್ಯದಲ್ಲಿ ಶ್ರೀಕೃಷ್ಣನನ್ನು ಕುರಿತ ಸಂಭ್ರಮದ ಹೆಜ್ಜೆ-ಗೆಜ್ಜೆಗಳ ‘ತಿಲ್ಲಾನ’ ಮತ್ತು ‘ಮಂಗಳ’ವನ್ನು ಕಲಾವಿದೆ ಆಹ್ಲಾದಕರವಾಗಿ ರಂಜನೀಯ ಪಲುಕುಗಳಲ್ಲಿ ತನ್ನ ನೃತ್ಯ ಸಮರ್ಪಣೆಯನ್ನು ಚಿರಸ್ಮರಣೀಯವಾಗಿಸಿದಳು.

    *** ವೈ.ಕೆ. ಸಂಧ್ಯಾ ಶರ್ಮ

    ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.

    article baikady bharatanatyam dance Music review roovari
    Share. Facebook Twitter Pinterest LinkedIn Tumblr WhatsApp Email
    Previous Articleಎಸ್. ಜಾನಕಿಯವರು ಸಂಗೀತಲೋಕದ ದಂತಕತೆ – ಡಾ. ಸುರೇಶ ಮಯ್ಯ
    Next Article ಮೈಸೂರಿನ ಸುಗಮ ಸಂಗೀತ ಅಕಾಡೆಮಿಯಿಂದ ‘ಗಾನ ವೈಭವ’ | ಜುಲೈ 24
    roovari

    Add Comment Cancel Reply


    Related Posts

    ವಿಶ್ವಭಾರತಿ ಯಕ್ಷ ಸಂಭ್ರಮ ಯಕ್ಷಗಾನ ತಾಳಮದ್ದಳೆ ಸಪ್ತಾಹ

    July 22, 2026

    ಮೈಸೂರಿನ ಸುಗಮ ಸಂಗೀತ ಅಕಾಡೆಮಿಯಿಂದ ‘ಗಾನ ವೈಭವ’ | ಜುಲೈ 24

    July 22, 2026

    ಎಸ್. ಜಾನಕಿಯವರು ಸಂಗೀತಲೋಕದ ದಂತಕತೆ – ಡಾ. ಸುರೇಶ ಮಯ್ಯ

    July 22, 2026

    ಮಲ್ಲ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪ್ರಶಸ್ತಿ ಪ್ರದಾನ ಮತ್ತು ತಾಳಮದ್ದಳೆ

    July 22, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.