Subscribe to Updates
Get the latest creative news from FooBar about art, design and business.
Author: roovari
ಸುರತ್ಕಲ್ : ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು ಇದರ ಸಹಭಾಗಿತ್ವದಲ್ಲಿ ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿ (ರಿ.) ಇದರ ‘ನಲ್ವತ್ತರ ನಲಿವು -29’ನೇ ಸರಣಿ ಕಾರ್ಯಕ್ರಮವನ್ನು ದಿನಾಂಕ 20 ಡಿಸೆಂಬರ್ 2025ರಂದು ಸಂಜೆ ಗಂಟೆ 5-30ಕ್ಕೆ ನಾಟ್ಯಾಂಜಲಿ ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥ ಇವರು ಉದ್ಘಾಟನೆ ಮಾಡಲಿದ್ದಾರೆ. ಮೂಡುಬಿದಿರೆಯ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ರಂಗಮಾಂತ್ರಿಕ ಡಾ. ಜೀವನ್ ರಾಂ ಸುಳ್ಯ ಇವರ ಸಂಯೋಜನೆಯಲ್ಲಿ ‘ಕನ್ನಡ ಗಾನ ಗುಚ್ಛ’ ಪ್ರಸ್ತುತಗೊಳ್ಳಲಿದೆ. ಡಾ. ಜೀವನ್ ರಾಂ ಸುಳ್ಯ, ವಿದ್ವಾನ್ ಚಿನ್ಮಯ್ ಕೆ. ಭಟ್, ಮಮತಾ ಕಲ್ಮಕಾ, ವಿದ್ವಾನ್ ವಿನೋದ್ ಕೆ.ಪಿ., ಮನುಜ ನೇಹಿಗ ಸುಳ್ಯ, ಸಮನ್ವಿತ್ ಬೆಳ್ತಂಗಡಿ, ಸಮನ್ವಿತ ಹುಬ್ಬಳ್ಳಿ, ನಿಶ್ಮಿತಾ ಬೆಂಗಳೂರು, ಕೃಪಾ ನಾಯಕ್ ತುಮಕೂರು ಮುಂತಾದ ಕಲಾವಿದರು ಭಾಗವಹಿಸಲಿದ್ದಾರೆ.
ಮಂಗಳೂರು : ಕಾರ್ಕಳದ ಕ್ರಿಯೇಟಿವ್ ಪುಸ್ತಕ ಮನೆ ಮತ್ತು ಕನ್ನಡ ವಿಭಾಗ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯ ಮಂಗಳೂರು ಇದರ ಸಹಯೋಗದಲ್ಲಿ ಕ್ರಿಯೇಟಿವ್ ಪುಸ್ತಕ ಮನೆ ಪ್ರಕಾಶನದ ವಿಶೇಷ ಪ್ರಕಟಣೆ ‘ಭೂತಾರಾಧನೆ’ ಮಾಯದ ನಡೆ ಜೋಗದ ನುಡಿ ಡಾ. ಕೆ. ಚಿನ್ನಪ್ಪ ಗೌಡರ ಸಂಶೋಧನಾ ಕೃತಿ ಬಿಡುಗಡೆ ಸಮಾರಂಭವನ್ನು ದಿನಾಂಕ 20 ಡಿಸೆಂಬರ್ 2025ರಂದು ಅಪರಾಹ್ನ 3-00 ಗಂಟೆಗೆ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಎಲ್.ಸಿ.ಆರ್.ಐ. ಬ್ಲಾಕ್ ಎಲ್.ಎಫ್. ರಸ್ಕಿನ್ಹ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹಸಂಸ್ಥಾಪಕರಾದ ಅಶ್ವತ್ ಎಸ್.ಎಲ್. ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಸಾಹಿತಿ ಮತ್ತು ಜಾನಪದ ವಿದ್ವಾಂಸರಾದ ಡಾ. ಬಿ.ಎ. ವಿವೇಕ ರೈ ಇವರು ಕೃತಿ ಅನಾವರಣಗೊಳಿಸಲಿದ್ದಾರೆ. ಸಾಹಿತಿ ಮತ್ತು ವಿಮರ್ಶಕರಾದ ಡಾ. ರಾಜಶೇಖರ್ ಹಳೆಮನೆ ಇವರು ಕೃತಿ ಅವಲೋಕನ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ದೈವ ನರ್ತಕ ಶೇಖರ ಪರವ ಇವರನ್ನು ಸನ್ಮಾನಿಸಲಾಗುವುದು.
ಪುತ್ತೂರು : ಬೆಂಗಳೂರಿನ ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಪುತ್ತೂರಿನ ನೃತ್ಯೋಪಾಸನಾ ಕಲಾ ಅಕಾಡೆಮಿ ಸಹಯೋಗ ಮತ್ತು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಹಕಾರದಲ್ಲಿ ದಿನಾಂಕ 20 ಡಿಸೆಂಬರ್ 2025ರಂದು ಸಂಜೆ 4-30 ಗಂಟೆಗೆ ಪುತ್ತೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆಯುವ ಗಡಿ-ಸಂಸ್ಕೃತಿ ಉತ್ಸವದ ಅಂಗವಾಗಿ ಏರ್ಪಡಿಸುವ ‘ಕಲಾರ್ಣವ-2025’ ಭಾವ ರಾಗ ತಾಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಂಜೆ 4-30 ಗಂಟೆಗೆ ವಿವಿಧ ತಂಡಗಳಿಂದ ‘ಜಾನಪದ ನೃತ್ಯ’ಗಳ ಪ್ರದರ್ಶನ, ಗಂಟೆ 6-15ಕ್ಕೆ ಡಾನ್ಸ್ ಫೆಡರೇಶನ್ ಆಫ್ ಇಂಡಿಯಾದ ಯುವ ಕಲಾ ಪ್ರಶಸ್ತಿ ಪುರಸ್ಕೃತ ಭರತನಾಟ್ಯ ಬಾಲ ಕಲಾವಿದ ಮಾಸ್ಟರ್ ಶಮಂತಕ ಇವರಿಂದ ‘ಭರತನಾಟ್ಯ’ ಮತ್ತು 7-00 ಗಂಟೆಗೆ ಅಂತಾರಾಷ್ಟ್ರೀಯ ಖ್ಯಾತಿಯ ವಯೋಲಿನ್ ಬಾಲ ಕಲಾವಿದೆ ಕುಮಾರಿ ಗಂಗಾ ಶಶಿಧರನ್ ಇವರಿಂದ ‘ವಯೋಲಿನ್ ವೈಭವ’ ಹಾಗೂ ನಡೆಯಲಿದೆ.
ಮಂಗಳೂರು : ಶ್ರೀ ಅಯ್ಯಪ್ಪ ಮಂದಿರ (ರಿ.) ಕಾಪಿಗುಡ್ಡ ಆಕಾಶಭವನ ಕಾವೂರು ಮಂಗಳೂರು ಇದರ 28ನೇ ವಾರ್ಷಿಕೋತ್ಸವದ ಪ್ರಯುಕ್ತ ಚಿತ್ರಕಲಾ ಸ್ಪರ್ಧೆಯನ್ನು ದಿನಾಂಕ 21 ಡಿಸೆಂಬರ್ 2025ರಂದು ಸಂಜೆ 3-00 ಗಂಟೆಗೆ ಅಯ್ಯಪ್ಪ ಮಂದಿರದಲ್ಲಿ ಆಯೋಜಿಸಲಾಗಿದೆ. ಮೂರು ವಿಭಾಗಗಳಲ್ಲಿ ಈ ಸ್ಪರ್ಧೆಯು ನಡೆಯಲಿದ್ದು, ತರಗತಿ 1ರಿಂದ 3 – ಐಚ್ಚಿಕ, ತರಗತಿ 4ರಿಂದ 7 ‘ನಮ್ಮ ಹಬ್ಬಗಳು’ ಮತ್ತು ತರಗತಿ 8ರಿಂದ 10 ‘ತುಳುನಾಡ ಸಂಸ್ಕೃತಿ’ ಎಂಬ ವಿಷಯಗಳಲ್ಲಿ ಚಿತ್ರ ರಚನೆ ಮಾಡಬಹುದು. ಹೆಚ್ಚಿನ ಮಾಹಿತಿ ಹಾಗೂ ನೋಂದಾವಣೆಗೆ ಲೋಹಿತ್ – 98444663861, ಹರೀಶ್ – 9964143032 ಮತ್ತು ವಿಶ್ವನಾಥ್ – 9980311029 ಸಂಖ್ಯೆಗಳನ್ನು ಸಂಪರ್ಕಿಸಿರಿ.
ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇವರಿಂದ ಬನ್ನೂರಿನ ಶ್ರೀ ಬಲಮುರಿ ವಿದ್ಯಾ ಗಣಪತಿ ದೇವಸ್ಥಾನದಲ್ಲಿ ಮಾಸಿಕ ತಾಳಮದ್ದಲೆ ಪಾರ್ತಿಸುಬ್ಬ ವಿರಚಿತ ‘ವಾಲಿಮೋಕ್ಷ’ ಪ್ರಸಂಗದೊಂದಿಗೆ ದಿನಾಂಕ 16 ಡಿಸೆಂಬರ್ 2025ರ ಮಂಗಳವಾರ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಬಟ್ಯಮೂಲೆ ಲಕ್ಷ್ಮೀನಾರಾಯಣ ಭಟ್, ನಿತೀಶ ಕುಮಾರ್ ಎಂಕಣ್ಣಮೂಲೆ ಹಾಗೂ ಚೆಂಡೆ ಮದ್ದಲೆಗಳಲ್ಲಿ ಪಿ.ಟಿ. ಜಯರಾಮ ಭಟ್, ಶ್ರೀಪತಿ ಭಟ್ ಉಪ್ಪಿನಂಗಡಿ, ಅಚ್ಯುತ ಪಾಂಗಣ್ಣಾಯ ಕೋಡಿಬೖಲು, ಅನೀಶ್ ಕೃಷ್ಣ ಪುಣಚ ಭಾಗವಹಿಸಿದರು. ಶ್ರೀರಾಮನಾಗಿ ಭಾಸ್ಕರ ಶೆಟ್ಟಿ ಸಾಲ್ಮರ ಮತ್ತು ಭಾಸ್ಕರ ಬಾರ್ಯ, ವಾಲಿಯಾಗಿ ಗುಡ್ಡಪ್ಪ ಬಲ್ಯ, ಸುಗ್ರೀವನಾಗಿ ಮಾಂಬಾಡಿ ವೇಣುಗೋಪಾಲ ಭಟ್ ಮತ್ತು ತಾರೆಯ ಪಾತ್ರದಲ್ಲಿ ಲಕ್ಷ್ಮೀ ಕಾಂತ ಹೆಗ್ಡೆ ಪಾತ್ರಪೋಷಣೆ ಮಾಡಿದರು. ಭಾಸ್ಕರ ಬಾರ್ಯರ ಸಂಯೋಜನೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಬಡೆಕ್ಕಿಲ ಚಂದ್ರಶೇಖರ ಭಟ್ ಪ್ರಾಯೋಜಿಸಿದರು. ಭಾಸ್ಕರ ಬಾರ್ಯ ಸ್ವಾಗತಿಸಿ, ವಂದಿಸಿದರು.
ಬೆಂಗಳೂರು : ಒಡನಾಡಿ ಬಂಧು ಸಿಜಿಕೆ 75ರ ಮಾಸದ ನೆನಪು ಕಾರ್ಯಕ್ರಮದಲ್ಲಿ ದೃಶ್ಯಕಾವ್ಯ ತಂಡವು ಕೆ.ವೈ. ನಾರಾಯಣ ಸ್ವಾಮಿಯವರ ರಚನೆಯ ‘ಮಾಯಾ ಬೇಟೆ’ ನಾಟಕ ಪ್ರದರ್ಶನವನ್ನು ದಿನಾಂಕ 20 ಡಿಸೆಂಬರ್ 2025ರಂದು ಸಂಜೆ 6-30 ಗಂಟೆಗೆ ಬೆಂಗಳೂರು ಬನಶಂಕರಿ ಸುಚಿತ್ರ ಸಿನೆಮಾ ಮತ್ತು ಸಾಂಸ್ಕೃತಿಕ ಅಕಾಡೆಮಿಯ ನಾಣಿ ಅಂಗಳದಲ್ಲಿ ಪ್ರಯೋಗಿಸುತ್ತಿದೆ. ಪ್ರಸನ್ನ ಕುಮಾರ ಇವರ ಸಂಗೀತ, ಜಯರಾಜ ಇವರ ಪ್ರಸಾದನ, ಮಂಜು ನಾರಾಯಣ್ ಇವರ ಬೆಳಕಿನ ವಿನ್ಯಾಸ ಮತ್ತು ನಂಜುಂಡೇಗೌಡ ಸಿ. ಇವರ ನಿರ್ದೇಶನದಲ್ಲಿ ಈ ನಾಟಕ ಪ್ರಸ್ತುತಗೊಳ್ಳಲಿದೆ.
ಮಂಗಳೂರು : ಮಂಗಳೂರು ವಿಶ್ವವಿದ್ಯಾಲಯ ಮತ್ತು ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆ ಮಂಗಳ ಗಂಗೋತ್ರಿ ಇದರ ವತಿಯಿಂದ ದಿನಾಂಕ 22ರಿಂದ 24 ಡಿಸೆಂಬರ್ 2025ರಂದು ಹಂಪನಕಟ್ಟೆಯಲ್ಲಿರುವ ವಿಶ್ವವಿದ್ಯಾಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಸಂಜೆ 5-30ಗಂಟೆಗೆ ಉಪನ್ಯಾಸ ನಡೆಯಲಿದೆ. ಪಂಪಾ ಪ್ರಶಸ್ತಿ ಪುರಸ್ಕೃತ, ವಿಶ್ರಾಂತ ಕುಲಪತಿ ಪ್ರೊ. ಬಿ.ಎ. ವಿವೇಕ ರೈ ಇವರು ಪಂಪ ಕವಿಯ ಆದಿ ಪುರಾಣ ಕಾವ್ಯ ಕುರಿತು ಮೂರು ಉಪನ್ಯಾಸಗಳನ್ನು ನೀಡಲಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ಗಣೇಶ್ ಸಂಜೀವ್ ಮತ್ತು ವಿಶ್ವವಿದ್ಯಾಲಯ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಗಣಪತಿ ಗೌಡ ಇವರ ಗೌರವ ಉಪಸ್ಥಿತಿಯಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಪ್ರೊ. ಪಿ. ಎಲ್. ಧರ್ಮ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ಪ್ರಧಾನಮಂತ್ರಿ ಉಚ್ಛತರ ಶಿಕ್ಷಾ ಅಭಿಯಾನ ಯೋಜನೆ ಪ್ರಾಯೋಜಿತ ಕಾರ್ಯಕ್ರಮ ಇದಾಗಿದ್ದು, ಶ್ರೀಸಾಮಾನ್ಯರಿಗೆ ಪ್ರಾಚೀನ ಕನ್ನಡ ಸಾಹಿತ್ಯ ಎಂಬ ಉದ್ದೇಶದೊಂದಿಗೆ ನಡೆಯುವ ಈ ಮಾಲಿಕೆಯ ಎರಡನೇ ಸಂಚಿಕೆಯ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸುವವರು ಉಚಿತವಾಗಿ ನೋಂದಣಿ ಮಾಡಿಕೊಳ್ಳಬಹುದು…
ಮಂಗಳೂರು : ಅಮೃತ ಪ್ರಕಾಶ ಪತ್ರಿಕೆ ಮಂಗಳೂರು ಹಾಗೂ ಶ್ರೀ ರಾಮಾಶ್ರಮ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಕೊಂಚಾಡಿ ಇವರ ಜಂಟಿ ಆಶ್ರಯದಲ್ಲಿ 115ನೇ ‘ಸಾಹಿತ್ಯ ಅಭಿರುಚಿ ಕಾರ್ಯಕ್ರಮ’ವನ್ನು ದಿನಾಂಕ 17 ಡಿಸೆಂಬರ್ 2025ರಂದು ಅಪರಾಹ್ನ 02-00 ಗಂಟೆಗೆ ಕೊಂಚಾಡಿ ಶ್ರೀ ರಾಮಾಶ್ರಮ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಕೊಂಚಾಡಿ ಶ್ರೀ ರಾಮಾಶ್ರಮ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾದ ಬಾಲಚಂದ್ರ ಕೆ. ಇವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ದ.ಕ. ಜಿಲ್ಲಾ ಪ್ರಶಸ್ತಿ ವಿಜೇತ ಶಿಕ್ಷಕಿ ಶ್ರೀಮತಿ ನಳಿನಾಕ್ಷಿ ಉದಯರಾಜ್ ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರಾದ ಬೆನೆಟ್ ಜೆ. ಅಮ್ಮನ್ನ ಇವರುಗಳು ಮುಖ್ಯ ಸಂಪನ್ಮೂಲ ಅತಿಥಿಗಳಾಗಿ ಭಾಗವಹಿಸಲಿರುವರು.
ಮೂಡುಬಿದಿರೆ : ಎಕ್ಸಲೆಂಟ್ ಸಮೂಹ ಸಂಸ್ಥೆಗಳು ಇದರ ವತಿಯಿಂದ ‘ತೊರೆದು ಜೀವಿಸಬಹುದೇ’ ಎಕ್ಸಲೆಂಟ್ ಸಂಗೀತ ಸಂಜೆ ಕಾರ್ಯಕ್ರಮವನ್ನು ದಿನಾಂಕ 18 ಡಿಸೆಂಬರ್ 2025ರಂದು ಸಂಜೆ 5-00 ಗಂಟೆಗೆ ಎಕ್ಸಲೆಂಟ್ ರಾಜ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಅಂತರಾಷ್ಟ್ರೀಯ ಹಿಂದೂಸ್ಥಾನಿ ಗಾಯಕರಾದ ಪದ್ಮಶ್ರೀ ಪಂ. ಎಮ್. ವೆಂಕಟೇಶ್ ಕುಮಾರ್ ಇವರ ಹಾಡುಗಾರಿಕೆಗೆ ಖ್ಯಾತ ಯುವ ಸಿತಾರ್ ವಾದಕ ಅಂಕುಶ್ ಎನ್. ನಾಯಕ್, ನರೇಂದ್ರ ಎಲ್. ನಾಯಕ್, ಕೇಶವ ಜೋಶಿ, ಹೇಮಂತ್ ಜೋಶಿ ಮತ್ತು ಶ್ರೀದತ್ ಪ್ರಭು ಸಹಕರಿಸಲಿದ್ದಾರೆ. ಆಸಕ್ತರು ದಿನಾಂಕ 17 ಡಿಸೆಂಬರ್ 2025ರೊಳಗೆ ನೋಂದಾಯಿಸಿಕೊಳ್ಳಬೇಕಾಗಿ ವಿನಂತಿ.
ಕುಂದಾಪುರ : ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಕೊಡಮಾಡುವ, ಮುಂಗಾರು ಪತ್ರಿಕೆಯ ಸಂಪಾದಕ, ಹಿರಿಯ ಪತ್ರಕರ್ತ ‘ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ’ಗೆ ವಡ್ಡರ್ಸೆಯವರ ಒಡನಾಡಿ, ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಆಯ್ಕೆಯಾಗಿದ್ದಾರೆ. ಕಳೆದ ಒಂಭತ್ತು ವರ್ಷಗಳಿಂದ ನಾಡಿನ ಗಣ್ಯ ಪತ್ರಕರ್ತರಿಗೆ ಬ್ರಹ್ಮಾವರ ಪತ್ರಕರ್ತರ ಸಂಘ ಈ ಪ್ರಶಸ್ತಿ ನೀಡುತ್ತ ಬಂದಿದ್ದು, 2025ನೇ ಸಾಲಿನ ಪ್ರಶಸ್ತಿಗೆ ಬೈಕಂಪಾಡಿಯವರನ್ನು ಆಯ್ಕೆ ಮಾಡಿದೆ. ದಿನಾಂಕ 27 ಡಿಸೆಂಬರ್ 2025ರಂದು ಶನಿವಾರ ಸಂಜೆ ಬ್ರಹ್ಮಾವರ ಬಂಟರ ಭವನದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ನೆರವೇರಲಿದೆ. ಬೈಕಂಪಾಡಿಯವರು ವಡ್ಡರ್ಸೆಯವರ ಒಡನಾಡಿಯಾಗಿ ಹತ್ತು ವರ್ಷ ಕಾಲ ಮುಂಗಾರು ಪತ್ರಿಕೆಯಲ್ಲಿ ಸೇವೆ ಸಲ್ಲಿಸಿ ಅವರ ಆಶಯಗಳಿಗೆ ಜೀವ ತುಂಬಿದ್ದರು. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಅಮೃತ ವಾರಪತ್ರಿಕೆಯಲ್ಲಿ 2 ವರ್ಷ, ದಿವ್ಯವಾಣಿ ವಾರಪತ್ರಿಕೆಯಲ್ಲಿ 3 ವರ್ಷ, ಮುಂಗಾರು ದಿನಪ್ರತಿಕೆ 10 ವರ್ಷ ಮುಖ ವರದಿಗಾರರಾಗಿ, ಕನ್ನಡಪ್ರಭ ದಿನಪ್ರತಿಕೆಯಲ್ಲಿ 15 ವರ್ಷ ಪ್ರಧಾನ ವರದಿಗಾರರಾಗಿ, ‘ಬಿಂಬಧ್ವನಿ’ ಪತ್ರಿಕೆಯ ಪ್ರಧಾನ ಸಂಪಾದಕರಾಗಿ ಹೀಗೆ ಹತ್ತು…