ಬಂಟ್ವಾಳ : ವಿದುಷಿ ಶ್ರೀಮತಿ ವಿದ್ಯಾ ಮನೋಜ್ ಇವರ ನಿರ್ದೇಶನದ ಕಲಾನಿಕೇತನ ಡ್ಯಾನ್ಸ್ ಫೌಂಡೇಶನ್ (ರಿ) ಕಲ್ಲಡ್ಕ ಭರತನಾಟ್ಯ ಸಂಸ್ಥೆಯು 25 ವರ್ಷಗಳ ಸಾರ್ಥಕ ಪಯಣವನ್ನು ಪೂರ್ಣಗೊಳಿಸಿದೆ. ಈ ಸಲುವಾಗಿ ದಿನಾಂಕ 26 ಅಕ್ಟೋಬರ್ 2025ರಂದು ರಜತಕಲಾಯಾನ ಎಂಬ ಶೀರ್ಷಿಕೆಯೊಂದಿಗೆ ಉದ್ಘಾಟನಾ ಸಮಾರಂಭವು ನಡೆದು ವರ್ಷಪೂರ್ತಿ ಭರತನಾಟ್ಯ ಸಂಬಂಧಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸಲಾಯಿತು. ರಜತ ಕಲಾಯಾನದ ಸಮಾರೋಪ ಕಾರ್ಯಕ್ರಮವನ್ನು ದಿನಾಂಕ 23 ಮತ್ತು 24 ಅಕ್ಟೋಬರ್ 2026ರಂದು ಸ್ಪರ್ಶ ಕಲಾಮಂದಿರದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾಯಿತು.

ರಜತ ಕಲಾಯಾನ ಸಂಭ್ರಮದ ಎರಡನೆಯ ದಿನ ಮುಖ್ಯ ಅತಿಥಿಗಳಾಗಿ ಗೋಮಂತಕ್ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಕೇಂದ್ರ, ಶಿರೋಡ, ಗೋವ ಇಲ್ಲಿನ ಪ್ರಾಂಶುಪಾಲರಾದ ಡಾ. ನೀಲೇಶ್ ಪಿ. ಕೊರ್ಡೆ ಇವರು ಭಾಗವಹಿಸಿ ಜೀವನದಲ್ಲಿ ಕಲೆಯ ಮಹತ್ವದ ಕುರಿತು ಮಾತನಾಡಿದರು. ಮೊದಲ ಪ್ರಸ್ತುತಿಯಾಗಿ ಮುಂಬೈಯ ಖ್ಯಾತ ಭರತನಾಟ್ಯ ಕಲಾವಿದರೂ, ಉಸ್ತಾದ್ ಬಿಸ್ಮಿಲ್ಲಾ ಖಾನ್ ಪ್ರಶಸ್ತಿ ಪುರಸ್ಕೃತರೂ ಆದ ಶ್ರೀಯುತ ಪವಿತ್ರ ಕೃಷ್ಣ ಭಟ್ ಇವರಿಂದ ನೃತ್ಯಾವಳಿ ಭರತನಾಟ್ಯ ಕಾರ್ಯಕ್ರಮವು ನಡೆಯಿತು.


ನಂತರ ಶ್ರೀಯುತ ಶೀಜಿತ್ ನಂಬಿಯಾರ್ ಇವರ ಪರಿಕಲ್ಪನೆ ಮತ್ತು ಸಂಯೋಜನೆಯಲ್ಲಿ ಮೂಡಿಬಂದಿರುವ ‘ಕಾವ್ಯಂ : ಅಂತರಾಳದ ಕವಿತೆ’ಯ ಪ್ರಸ್ತುತಿಯು ಶ್ರೀಮತಿ ಪಾರ್ವತಿ ಮೆನನ್ ಮತ್ತು ತಂಡದವರಿಂದ ನಡೆಯಿತು. ಈ ಎರಡೂ ಪ್ರಸ್ತುತಿಗಳು ಪ್ರೇಕ್ಷಕರನ್ನು ನೃತ್ಯ ಲೋಕಕ್ಕೆ ಕೊಂಡೊಯ್ದು ಆಧ್ಯಾತ್ಮಿಕ ಅನುಭೂತಿಯನ್ನು ನೀಡಿರುವುದರಲ್ಲಿ ಅತಿಶಯೋಕ್ತಿಯಿಲ್ಲ. ಕಾರ್ಯಕ್ರಮಗಳಲ್ಲಿ ಹಲವಾರು ನೃತ್ಯ ಗುರುಗಳು, ಕಲಾಭಿಮಾನಿಗಳು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಮೆಚ್ಚುಗೆಯನ್ನು ಸೂಚಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ವಿದುಷಿ ಡಾ. ಮಹಿಮ ಎಂ. ಫಣಿಕ್ಕರ್ ಇವರು ನಡೆಸಿಕೊಟ್ಟರು.

