ವತ್ಸಲಾ ಬದರಿ ನಾರಾಯಣ ಬಾಳೆಲೆ ಇವರು ಮೈಸೂರಿನ ಎಂ.ವಿ. ರಾಮಚಂದ್ರ ರಾವ್ ಮತ್ತು ಮಧುರಾ ದಂಪತಿಗಳ ಸುಪುತ್ರಿ. ತಮ್ಮ ವಿದ್ಯಾಭ್ಯಾಸವಾಗಿ ಲಲಿತ ಕಲೆಗಳ ಕಾಲೇಜು ಮೈಸೂರಿನಲ್ಲಿ B-MUSIC ಪದವಿ ಪಡೆದಿದ್ದಾರೆ. ಸಂಗೀತ ಗುರುಗಳಾದ ಸಾವಿತ್ರಮ್ಮ ಗೋವಿಂದರಾವ್, ಡಾ. ಕೆ. ಶ್ರೀನಿವಾಸ್ ಮೈಸೂರು ಇವರಿಂದ ತಮ್ಮ 5ನೆಯ ತರಗತಿಯಲ್ಲಿ ಓದುತ್ತಿರುವಾಗಲೇ ಸಂಗೀತ ಪಾಠಗಳನ್ನು ಕಲಿಯತೊಡಗಿದ್ದಾರೆ. ಪ್ರಾಥಮಿಕ ಸಂಗೀತ ಶಿಕ್ಷಕ ಮತ್ತು ನಾಟಕ ನಿರ್ದೇಶಕರಾದ ತಂದೆ ರಾಮಚಂದ್ರ ರಾವ್ ನಾಟಕಗಳ ತರಬೇತುದಾರರಾಗಿದ್ದರು. ಹಾಗಾಗಿ ಎಳವೆಯಲ್ಲಿಯೇ ತಂದೆಯ ನಾಟಕಗಳಲ್ಲಿ ನಟಿಸುವ ಅವಕಾಶ ದೊರಕುತ್ತಿತ್ತು, ಜೊತೆಗೆ ನಾಟಕ ಗುರು ಸಿಂಧುವಳ್ಳಿ ಅನಂತಮೂರ್ತಿ ಇವರ ಪ್ರೋತ್ಸಾಹ ಹಾಗೂ ಮಾರ್ಗದರ್ಶನದಿಂದ ಪದವಿಪೂರ್ವ ಶಿಕ್ಷಣ ಪಡೆಯುತ್ತಿದ್ದ ವೇಳೆಯಲ್ಲಿ ಧ್ವನಿ ಪರೀಕ್ಷೆ ಉತ್ತೀರ್ಣಗೊಂಡು ಆಕಾಶವಾಣಿ ಮೈಸೂರಿನ ನಾಟಕ ಕಲಾವಿದೆಯಾಗಿ 20 ವರ್ಷಗಳ ಪಯಣ ಮಾಡಿದ್ದಾರೆ.

ಆಕಾಶವಾಣಿಯ ದಿಗ್ಗಜ ನಿರ್ದೇಶಕರ ನಾಟಕಗಳ ಯಯಾತಿ, ಮಂಡೋದರಿ, ಪಾರಿಜಾತ, ಶಾಕುಂತಲ ನಾಟಕದ ತಾರಾ, ಸಹನಾ ಬೆಕ್ಕಿನ ಕಣ್ಣು, ಕಾಡುಪ್ರಾಣಿ, ಅನುಭವ ಮಂಟಪದ ಅಕ್ಕಮಹಾದೇವಿ ಪಟ್ಟಿ ಮಾಡಲು ಸಾಧ್ಯವಿಲ್ಲದಷ್ಟು ಅಭಿನಯಿಸಿದ ಅನುಭವ. ಪೌರಾಣಿಕ, ಚಾರಿತ್ರಿಕ, ಸಾಮಾಜಿಕ, ರೂಪಕಗಳು, ಗೀತೆ ನಾಟಕ ಪರಿಪೂರ್ಣ ಕಲಾವಿದೆಯಾಗಿ ವಿದ್ಯಾರ್ಥಿ ದೆಸೆಯಿಂದಲೇ ಅವಕಾಶಗಳು ಇವರಿಗೆ ದೊರೆತಿದೆ. 1982ರಲ್ಲಿ ವಿವಾಹವಾಗಿ ಕೊಡಗಿಗೆ ಬಂದ ಬಳಿಕ ಪತಿಯ ಒತ್ತಾಸೆಯ ಮೇರೆಗೆ ಕರೆ ಬಂದಾಗ ಮೈಸೂರಿಗೆ ಹೋಗಿ ರೇಡಿಯೋ ರೆಕಾರ್ಡಿಂಗ್ ಮುಗಿಸಿ ಬರುತ್ತಿದ್ದರು. 1996ರಿಂದ ಪ್ರಸ್ತುತದವರೆಗೆ ಆಕಾಶವಾಣಿ ಮಡಿಕೇರಿಯಲ್ಲಿ ಕಲಾವಿದೆಯಾಗಿದ್ದಾರೆ. 1989ನೆಯ ಇಸವಿಯಲ್ಲಿ ಬಾಳೆಲೆಯ ಸಂಗೀತ ಶಾಲೆ ಪ್ರಾರಂಭಿಸಿದ್ದಾರೆ. 1996ರಲ್ಲಿ ಸಮಾನ ಮನಸ್ಕರೊಡನೆ ಕೂಡಿ ಕಾವೇರಿ ಕಲಾಸಮಿತಿಯನ್ನು ಆರಂಭಿಸಿದ್ದಾರೆ. ಆ ಮೂಲಕ ಹಿರಿಕಿರಿಯರಿಗೆ ಭಜನೆ ಮತ್ತು ಸಂಗೀತ ಶಾಲೆಯನ್ನು ನಡೆಸುತ್ತಿದ್ದರು. 30 ವರ್ಷಗಳ ಕಾಲ ನಿರಂತರವಾಗಿ ತ್ಯಾಗರಾಜರು, ಕನಕದಾಸರು, ಪುರಂದರದಾಸರ ಆರಾಧನೆಯನ್ನು ಮಾಡಿದ್ದಾರೆ. 2004ರಿಂದ 2009ರವರೆಗೆ ಗೋಣಿಕೊಪ್ಪಲಿನ ಮಹಿಳಾ ಸಮಾಜದ ಸಂಗೀತ ಶಾಲೆಯ ಸಂಗೀತ ಶಿಕ್ಷಕಿಯಾಗಿ ದುಡಿದಿದ್ದಾರೆ.
2014ನೆಯ ಇಸವಿ ಮಡಿಕೇರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ. ತಮ್ಮ ಶಿಷ್ಯರೊಡಗೂಡಿ ಕೊಡಗಿನಾದ್ಯಂತ ಸಂಗೀತ ಕಛೇರಿಗಳನ್ನು ನೀಡಿದ್ದಾರೆ. ಇವರಿಗೆ ರಾಮಕೃಷ್ಣಾಶ್ರಮ ಪೊನ್ನಂಪೇಟೆ, ಕ್ಷೇಮಾಭಿವೃದ್ಧಿ ಸಂಘ ಕೈಕೇರಿ, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪ್ರಥಮ ದಾಸಸಾಹಿತ್ಯ ಪ್ರಶಸ್ತಿ, ಪೊನ್ನಂಪೇಟೆ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗಾಯನ ಗೋಷ್ಠಿಯ ಅಧ್ಯಕ್ಷತೆ ಹೀಗೆ ಹಲವಾರು ಸಂಘಟನೆಗಳಿಂದ ಕಲಾಸೇವೆಗೆ ಪುರಸ್ಕಾರ ದೊರಕಿದೆ. ಆಕಾಶವಾಣಿ ಮಡಿಕೇರಿಯಲ್ಲಿ ನೀಡುತ್ತಿದ್ದ ಸಂದರ್ಭೋಚಿತ ಕಾರ್ಯಕ್ರಮಗಳಿಗೆ ಸ್ವರಚಿತ ಸೋದಾಹರಣ ವಿಮರ್ಶೆಗಳು, ಪುರಂದರದಾಸರು, ಕನಕದಾಸರು, ಹರಿದಾಸರು ಮತ್ತು ಜನಪದರು ಕಂಡ ಹೆಣ್ಣಿನ ನೋವು ನಲಿವು, ಆರಾಧನೆಗಳು,ಹಬ್ಬ ಹರಿದಿನಗಳು ಕುರಿತು ಭಾಷಣ ಮಾಡಿದ್ದಾರೆ. ಸ್ವರಚಿಸಿದ ಅನೇಕ ವಿವಿಧ ಕಾರ್ಯಕ್ರಮಗಳನ್ನು ಶಿಷ್ಯವೃಂದದ ಜೊತೆಗೂಡಿ ಪ್ರಸ್ತುತಪಡಿಸಿದ್ದಾರೆ. ಸಂದರ್ಭನುಸಾರ ಕವನ, ಗೀತೆಗಳನ್ನು ರಚಿಸಿ ರಾಗಸಂಯೋಜಿಸುವ ಹವ್ಯಾಸ ಉಳ್ಳವರಾಗಿದ್ದಾರೆ. ಸಾಕಷ್ಟು ಗಾಯನ ಸ್ಪರ್ಧೆಗಳಲ್ಲಿ ತೀರ್ಪುಗಾರರಾಗಿದ್ದಾರೆ.

“ಮನೆಯೇ ಮೊದಲ ಪಾಠಶಾಲೆ ಜನನಿ ತಾನೇ ಮೊದಲ ಗುರು”ವೆಂಬ ನಾಣ್ಣುಡಿಯಂತೆ ಕಲಾವಿದರ ಕುಟುಂಬದಲ್ಲಿ ಜನಿಸಿದ ನನಗೆ ಮನೆಯೇ ಮೊದಲ ಕಲಾ ಶಾಲೆ. ಸಣ್ಣ ವಯಸ್ಸಿನಿಂದಲೇ ಸಂಗೀತ, ನಾಟಕಗಳ ಬಹುಮುಖ ಪ್ರತಿಭೆಯ ಅನಾವರಣಕ್ಕೆ ಕುಟುಂಬದ ಸಹಕಾರವೇ ಅತಿಮುಖ್ಯಕಾರಣವೆಂದು” ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಆಕಾಶವಾಣಿಯ ಮಹಿಳಾ ಲೋಕದಲ್ಲಿ ಕನ್ನಡಪರ ರಾಜ್ಯೋತ್ಸವ, ವಿರಾಜಪೇಟೆ ಅರಮೇರಿ ಕಳಂಚೇರಿ ಮಠದಲ್ಲಿ ವಚನ ಗಾಯನ, ತಲಕಾವೇರಿ ಜಾತ್ರೋತ್ಸವ, ಮಡಿಕೇರಿ ರಾಮೋತ್ಸವದಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ಇವರ ಶಿಷ್ಯರಾಗಿ ಸಾಕಷ್ಟು ಮಂದಿ ಇದ್ದರೂ ಸಹ ಅನನ್ಯ ಶರ್ಮ ಹಾಗೂ ಅಭಿನವ್ ಶರ್ಮ ಮತ್ತು ಅನ್ವಿತ್, ಆಶಿತಾ ಶಂಕರ್, ಅಮೃತ್ ಕುಮಾರ್ ಇವರು ಮಾತ್ರ ವೃತ್ತಿಜೀವನದಲ್ಲಿ ಸಂಗೀತವನ್ನು ಅಳವಡಿಸಿಕೊಂಡು ಸಾಕಷ್ಟು ಹೆಸರು ಗಳಿಸಿದ್ದಾರೆ. ಆಕಾಶವಾಣಿ ಮಡಿಕೇರಿ ಭಾವಯಾನ ಕಾರ್ಯಕ್ರಮವು 13 ಕಂತುಗಳಲ್ಲಿ ಪ್ರಸಾರವಾಯಿತು. ಅದರ ಬರವಣಿಗೆ ಭಾವಗೀತೆಗಳ ಹಾಡುಗಾರಿಕೆ ಸ್ವರಚಿತವಾಗಿತ್ತು, “ಓರ್ವ ಸಂಗೀತ ಶಿಕ್ಷಕಿಯಾಗಿ ಹೆಸರು ಮಾಡಿರುವುದಕ್ಕಿಂತ ಶಿಷ್ಯರು ಈ ಶಿಕ್ಷಕಿಗೆ ಹೆಸರು ಕೀರ್ತಿ ತಂದಿದ್ದಾರೆ ಆ ತೃಪ್ತಿ ನನಗಿದೆ” ಎನ್ನುತ್ತಾರೆ.
ಕಲಾವಿದರು ವಂದನೆ-ನಿಂದನೆಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಆಕಾಶದಲ್ಲಿ ಅವಕಾಶವನ್ನು, ಅವಕಾಶದಲ್ಲಿ ಆಕಾಶವನ್ನು ಮುಟ್ಟಬೇಕು. ಕಲಾ ಪರಿಪೂರ್ಣತೆಗೆ ಕಲಾವಿದರು ಮಾತ್ರ ಸಾಲದು ಕಲಾರಸಿಕರು ಇರಲೇಬೇಕು ಸನ್ಮಾನ, ಪ್ರಶಸ್ತಿಗಳಿಗೆ ಕಲಾವಿದರು ಕೈ ಚಾಚಬಾರದು. ಕಲೆಯಲ್ಲಿ ನಿರಂತರ ಪ್ರಯತ್ನ, ಶ್ರದ್ಧೆ, ಭಕ್ತಿ ಇದ್ದಾಗ ಎಲ್ಲವೂ ತಾನಾಗಿಯೇ ಒದಗಿ ಬರುತ್ತದೆ. ಉತ್ತಮ ಗುರು ದೊರೆತರೆ ಗುರಿ ತಲುಪಲು ಸಾಧ್ಯ. ಕುಟುಂಬದವರ ಸಹಕಾರವಿದ್ದರೆ ಮಾತ್ರ ಗೃಹಿಣಿಯರು ಯಾವುದೇ ಕ್ಷೇತ್ರದಲ್ಲಿ ಯಶಸ್ವು ಸಾಧಿಸಲು ಸಾಧ್ಯ. ಭಗವಂತ ಕೊಟ್ಟ ಕಲಾಭಾಗ್ಯವನ್ನು- ಕಲೆಗಾಗಿ ಸಮಯವನ್ನು ಮೀಸಲಿಟ್ಟರೇ ಕಲಾವಿದರಾಗಿ ಉಳಿಯಬಹುದು. ಶಿಷ್ಯರ ಉನ್ನತಿಯೇ ಶಿಕ್ಷಕರ ಗೆಲುವು” ಎಂದು ಇಂದಿನ ಕಲಾಸಕ್ತರಿಗೆ ನುಡಿಮುತ್ತುಗಳನ್ನು ಹೇಳುತ್ತಾರೆ. ಕಾಫಿ ಬೆಳೆಗಾರ ಪತಿ ಬದರಿ ನಾರಾಯಣ, ಮಗ, ಸೊಸೆ, ಮೊಮ್ಮಗ, ಮಗಳು, ಅಳಿಯರೊಂದಿಗೆ ಬಾಳೆಲೆಯಲ್ಲಿ ಪ್ರಸ್ತುತ ಸುಖಿ ಜೀವನ ನಡೆಸುತ್ತಿದ್ದಾರೆ. ಇವರ ಮುಂದಿನ ಬದುಕು ಮತ್ತು ಸಂಗೀತ ಕಲಾಸೇವೆ ಇನ್ನಷ್ಟು ಉನ್ನತಿಗೇರಲೆಂದು ಹಾರೈಸೋಣ.

ವೈಲೇಶ ಪಿ.ಎಸ್. ಕೊಡಗು
ಮೊ. : 88614 05738
