ಬೆಂಗಳೂರು : ಬೆಂಗಳೂರಿನ ಹೆಸರಾಂತ ‘ನಟರಾಜರಂಗಂ ಸ್ಕೂಲ್ ಆಫ್ ಡ್ಯಾನ್ಸ್’ ನೃತ್ಯಸಂಸ್ಥೆಯ ಉತ್ತಮ ನಾಟ್ಯಗುರು ಮತ್ತು ನೃತ್ಯ ಕಲಾವಿದೆ ಶ್ರೀಮತಿ ಅಭಿನಯ ನಟರಾಜನ್ ಇವರ ಬಳಿ ಕಳೆದ ಒಂಭತ್ತು ವರ್ಷಗಳಿಂದ ಬದ್ಧತೆಯಿಂದ ನೃತ್ಯ ಕಲಿಯುತ್ತಿರುವ ಬಹುಮುಖ ಪ್ರತಿಭೆ ಕುಮಾರಿ ಜಾನಕಿ ಸುಬ್ರಮಣ್ಯಂ. ಬೆಂಗಳೂರಿನ ಬಿ.ಎಂ.ಎಸ್. ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಎಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿರುವ ಹತ್ತೊಂಭತ್ತರ ಜಾನಕೀ ಉತ್ತಮ ಉದಯೋನ್ಮುಖ ನೃತ್ಯ ಪ್ರತಿಭೆ. ಸಣ್ಣ ವಯಸ್ಸಿನಿಂದ ನೃತ್ಯ ಕಲಿಯುತ್ತಿರುವ ಜಾನಕಿ ಕರ್ನಾಟಕ ಸರ್ಕಾರ ನಡೆಸುವ ನೃತ್ಯಪರೀಕ್ಷೆಯಲ್ಲಿ ಜ್ಯೂನಿಯರ್ ಮತ್ತು ಡಾ. ಗಂಗೂಬಾಯಿ ಹಾನಗಲ್ ಮ್ಯೂಸಿಕ್ ಮತ್ತು ಪರ್ಫಾರ್ಮಿಂಗ್ ಆರ್ಟ್ಸ್ ಯೂನಿವರ್ಸಿಟಿಯಿಂದ ಸೀನಿಯರ್ ಬೋರ್ಡ್ ಪರೀಕ್ಷೆಯಲ್ಲಿ ‘ಡಿಸ್ಟಿಂಕ್ಷನ್’ ಪಡೆದು ತೇರ್ಗಡೆಯಾಗಿರುವ ಹಿರಿಮೆ ಇವಳದು.

ಚಿತ್ರಕಲೆ ಮತ್ತು ಪೇಯಿಂಟಿಂಗ್ ಹವ್ಯಾಸವುಳ್ಳ ಜಾನಕಿ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನೂ ಕಲಿತಿದ್ದು, ಈಗಾಗಲೇ ದೇಶಾದ್ಯಂತ ಅನೇಕ ನೃತ್ಯಪ್ರದರ್ಶನಗಳನ್ನು ನೀಡಿ ಕಲಾರಸಿಕರ ಮೆಚ್ಚುಗೆ ಪಡೆದಿದ್ದಾಳೆ. ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ. ಪರೀಕ್ಷೆಗಳಲ್ಲಿ ಅತ್ಯುಚ್ಚ ಅಂಕಗಳನ್ನು ಗಳಿಸಿ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾದ ವೈಶಿಷ್ಟ್ಯ ಇವಳದು. ಉತ್ತಮ ವಾಗ್ಮಿಯಾದ ಇವಳು ಅನೇಕ ನೃತ್ಯ ಕಾರ್ಯಕ್ರಮಗಳಲ್ಲಿ ನಿರೂಪಣೆ ಮಾಡಿ ಹೆಸರು ಗಳಿಸಿದ್ದು, ಇದೀಗ, ವಿದುಷಿ ಅಭಿನಯ ನಟರಾಜನ್ ಇವರಲ್ಲಿ ಅಭ್ಯಾಸ ಮಾಡಿರುವ ಭರತನಾಟ್ಯದ ವಿವಿಧ ಆಯಾಮಗಳನ್ನು ಪ್ರದರ್ಶಿಸಲು ದಿನಾಂಕ 08 ಆಗಸ್ಟ್ 2026 ಶನಿವಾರದಂದು ಸಂಜೆ 5-00 ಗಂಟೆಗೆ ಬೆಂಗಳೂರಿನ ಎ.ಡಿ.ಎ. ರಂಗಮಂದಿರದಲ್ಲಿ ವಿದ್ಯುಕ್ತವಾಗಿ ರಂಗಪ್ರವೇಶ ಮಾಡುತ್ತಿದ್ದಾಳೆ. ಈ ಪ್ರತಿಭಾವಂತ ನೃತ್ಯಕಲಾವಿದೆಯ ಸುಮನೋಹರ ನೃತ್ಯದ ಸೊಬಗನ್ನು ಕಣ್ತುಂಬಿಕೊಳ್ಳಲು ಸರ್ವರಿಗೂ ಸುಸ್ವಾಗತ.

ಬೆಂಗಳೂರಿನಲ್ಲಿ ವಾಸವಾಗಿರುವ ಶ್ರೀ ಪಿ.ಎ. ಸುಬ್ರಮಣ್ಯಂ ಮತ್ತು ಆರ್. ಕೃಷ್ಣವೇಣಿಯವರ ಮುದ್ದಿನ ಮಗಳಾದ ಕುಮಾರಿ ಜಾನಕಿ ಸುಬ್ರಮಣ್ಯಂ ಚಿಕ್ಕಂದಿನಿಂದ ಪ್ರತಿಭಾವಂತೆ. ‘ಬೆಳೆಯುವ ಪೈರು ಮೊಳಕೆಯಲ್ಲೇ’ ಎನ್ನುವಂತೆ, ಪುಟ್ಟಮಗುವಾಗಿದ್ದಾಗಲೇ ಹೆಜ್ಜೆ- ಗೆಜ್ಜೆಗಳ ತನ್ನ ನೃತ್ಯಾಸಕ್ತಿಯನ್ನು ವ್ಯಕ್ತಪಡಿಸಿದಂಥ ಬಾಲ ಪ್ರತಿಭೆ. ನೃತ್ಯ ಅವಳ ಬಾಲ್ಯದ ಒಲವು. ಕಥಕ್ ನೃತ್ಯಗುರು ಮಧು ಸೇನ್ ಇವಳ ಪ್ರಥಮ ನೃತ್ಯಗುರು. ಅನಂತರ ಅಂದಿನ ಖ್ಯಾತ ಚಿತ್ರನಟಿ ಪದ್ಮಿನಿ ರಾಮಚಂದ್ರನರ ನೃತ್ಯಶೋಭೆಗೆ ಮನಸೋತು ಜಾನಕಿ, ಭರತನಾಟ್ಯ ಕಲಿಯಲು ಹೆಸರಿಗೆ ಅನ್ವರ್ಥಕರಾಗಿದ್ದ ‘ಅಭಿನಯ ಚತುರೆ’ ಗುರು ಅಭಿನಯರ ಬಳಿ ಬಂದಾಗ ಅವಳಿಗೆ ಹತ್ತು ವರ್ಷ. ಅಲ್ಲಿಂದ ಇಲ್ಲಿಯವರೆಗೆ ಸತತ 9 ವರ್ಷಗಳ ಕಾಲ ಜಾನಕಿ ಏಕಾಗ್ರತೆಯಿಂದ ಪರಿಶ್ರಮಿಸಿ ನೃತ್ಯಾಭ್ಯಾಸ ಮಾಡಿದ್ದಾಳೆ. ಅವಳ ಆಸಕ್ತಿಗೆ ನೀರೆರೆದು, ಪ್ರೋತ್ಸಾಹ ನೀಡಿದ ತನ್ನ ಹೆತ್ತವರ ಬಗ್ಗೆ ಜಾನಕಿಗೆ ಅನನ್ಯ ಕೃತಜ್ಞತೆ.

ಅಭಿನಯ ಇವರ ಸಮರ್ಥ ಮಾರ್ಗದರ್ಶನದಲ್ಲಿ ಉತ್ತಮ ತರಬೇತಿಯನ್ನು ಪಡೆಯುತ್ತಿರುವ ಜಾನಕಿ, ಭರವಸೆಯ ನೃತ್ಯಗಾರ್ತಿಯಾಗಿ ರೂಪುಗೊಳ್ಳುತ್ತಿದ್ದಾಳೆ. ಓದಿನಲ್ಲೂ ಚುರುಕಾಗಿರುವ ಜಾನಕಿ ಇವರು ವಾಗ್ದೇವಿ ವಿಲಾಸ ಶಾಲಾ- ಕಾಲೇಜಿನ ದಿನಗಳಿಂದಲೂ ಎಲ್ಲ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮುಂದು ಮತ್ತು ಅನೇಕ ಬಹುಮಾನಗಳನ್ನು ಗಳಿಸಿದ್ದಾಳೆ. ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಗುರು ಲಕ್ಷ್ಮೀ ಲಾವಣ್ಯರಲ್ಲಿ ಕಲಿತಿದ್ದು, ಕರ್ನಾಟಕ ಮತ್ತು ತಮಿಳು ನಾಡಿನ ಅನೇಕ ದೇವಾಲಯಗಳಲ್ಲಿ ನೃತ್ಯಪ್ರದರ್ಶನ ನೀಡಿದ್ದಾಳೆ. ಓದಿನ ಜೊತೆ ನೃತ್ಯವನ್ನೂ ಮುಂದುವರೆಸಿಕೊಂಡು ಭವಿಷ್ಯದಲ್ಲಿ ಉತ್ತಮ ನರ್ತಕಿಯಾಗಿ ಸಾಧನೆ ಮಾಡುವ ಕನಸು ಇವಳದು.


*** ವೈ.ಕೆ. ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.
