Subscribe to Updates

    Get the latest creative news from FooBar about art, design and business.

    What's Hot

    ಕಲಾ ವೈಭವದೊಂದಿಗೆ ‘ನಾಟ್ಯಂ ಅವಧಾರಯೇ–ನಟರಾಜ ಪೂಜನ’

    August 5, 2026

    ನೃತ್ಯ ವಿಮರ್ಶೆ | ಕರಾವಳಿ ಕಲಾ ವಲಯದಲ್ಲೊಂದು ಆಪ್ತ ಕಲಾನುಭವ, ‘ಕಲಾಭವ’

    August 5, 2026

    ಕಾರ್ಕಳದ ಕ್ರಿಯೇಟಿವ್ ಪುಸ್ತಕ ಮನೆಯ ವತಿಯಿಂದ ವೆಬ್ ಸೈಟ್ ನಲ್ಲಿ ಭರ್ಜರಿ ಆಫರ್

    August 5, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ವಿಶೇಷ ಲೇಖನ | ಕನ್ನಡ ಸಾಹಿತ್ಯದ ನಾದಕ್ಕೆ ಹೊಸ ರಾಗ ತುಂಬಿದ ‘ನಾದಾ’
    Article

    ವಿಶೇಷ ಲೇಖನ | ಕನ್ನಡ ಸಾಹಿತ್ಯದ ನಾದಕ್ಕೆ ಹೊಸ ರಾಗ ತುಂಬಿದ ‘ನಾದಾ’

    August 2, 2026Updated:August 3, 2026No Comments3 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ತಾನಿದ್ದೆಡೆಯಲ್ಲಿ ನಗುವಿನ ಬುಗ್ಗೆ ಚಿಮ್ಮಿಸಿ, ಎಲ್ಲರನ್ನೂ ನಗಿಸಿ, ತಾನೂ ಮನಪೂರ್ತಿ ನಗುತ್ತಾ ‘ನಾದಾ’ ಎನ್ನುವ ಮಾಂತ್ರಿಕ ನಾದದ ಮೂಲಕ ಮೋಡಿಯಿಂದ ಸೆಳೆಯುತ್ತಾ ಸರ್ವರ ಹೃದಯದಲ್ಲಿ ಸಂತಸದ ನಾದ ತುಂಬುವ ಕನ್ನಡದ ‘ನಾದಾ’ರವರ ಜನುಮ ದಿನವಿಂದು. ಹೌದು ಇವರು ಎಲ್ಲರ ಪ್ರೀತಿಯ ನಾದಾ; ಉರುಫ್ ಡಾಕ್ಟರ್ ನಾಯಿಕಾಪು ದಾಮೋದರ ಶೆಟ್ಟಿ. ಕನ್ನಡ ಸಾಹಿತ್ಯದ ನಾದಕ್ಕೆ ಹೊಸ ರಾಗ ತುಂಬಿದ ಮೋಡಿಗಾರ.
    ನಾದಾ ಕೈಯಾಡಿಸದ ಕ್ಷೇತ್ರವಿಲ್ಲ. ಸಾಹಿತ್ಯ, ನಾಟಕ, ಸಿನಿಮಾ, ನಟನೆ ಹೀಗೆ ಚಟುವಟಿಕೆಯಿಂದ ಚುರುಕಾಗಿ ಸದಾ ಓಡಾಡುತ್ತಾ, ಬಗಲಿಗೆ ಒಂದಷ್ಟು ಜವಾಬ್ದಾರಿಗಳನ್ನು ಹೇರಿಕೊಂಡು ನಡೆದಾಡುವ ಈ ಮೋಡಿಗಾರ ನಾದಣ್ಣನಿಗೀಗ 75ರ ಹರಯ. ಆ ಮನಸ್ಸಿಗಿನ್ನೂ ತುಂಬು ಯೌವ್ವನ! ಅವರನ್ನು ಕಂಡಾಗ ಎಷ್ಟೋ ಬಾರಿ ಅನ್ನಿಸಿದ್ದಿದೆ, “ಇವರಿಗೆ ಸಾಕು ಎಂದು ಅನಿಸುವುದಿಲ್ಲವೇ?” ಎಂದು. ಜತೆಗೆ ಒಂದಿಷ್ಟು ಆತಂಕವೂ ಕಾಡಿದ್ದಿದೆ.

    ಎಲ್ಲಿಗೆ ಹೋದರೂ ಒಂದಷ್ಟು ಮಂದಿಯನ್ನು ಸೇರಿಸಿಕೊಂಡು ಒಂದು ಸಕಾರಾತ್ಮಕ ಗುಂಪು ಕಟ್ಟಿ ಏನೇನೋ ಒಳ್ಳೊಳ್ಳೆಯ ಕೆಲಸಗಳನ್ನು ಮಾಡುವುದು ಇವರ ಖಯಾಲಿ. ಈ ಮಹಾನುಭಾವರಿಗೆ ಎಲ್ಲವೂ ಬೇಕು. ಎಲ್ಲರೂ ಬೇಕು. ಎಲ್ಲರಿಗೂ ಇವರೇ ಬೇಕು. ಇವರಿದ್ದಲ್ಲಿ ಬೆಲ್ಲವಿರುವಲ್ಲಿ ಇರುವೆ ಮುತ್ತಿದಂತೆ ಎಲ್ಲರೂ ಮುತ್ತಿಕೊಳ್ಳುವುದು‌ ಒಂದು ವಿಶೇಷ. ಆ ನಿಟ್ಟಿನಲ್ಲಿ ನಾದಾ ಎಂದರೆ ಕೇವಲ ಸಕಲಕಲಾವಲ್ಲಭ ಮಾತ್ರವಲ್ಲ, ಸರ್ವಜನಪ್ರಿಯರೂ ಹೌದು.
    ಪ್ರತಿಭೆ ಎನ್ನುವುದು ಇವರಿಗೆ ಜನ್ಮದಿಂದಲೇ ಅಂಟಿಕೊಂಡು ಬಂದ ಗುಣ. ಅದು ವಂಶಪಾರಂಪರ್ಯವಾಗಿ ದಕ್ಕಿದ ಸಂಪತ್ತು. ಆ ಕುಟುಂಬವೇ ಹಾಗೆ. ಅಪ್ಪ- ಅಮ್ಮ, ಅಪ್ಪನ ಸೋದರರು, ಅವರ ಮಕ್ಕಳು, ನಾದಾರ ಸಹೋದರ, ಸಹೋದರಿಯರು ಮಾತ್ರವಲ್ಲ, ಈಗ ಅವರ ಮಕ್ಕಳು, ಮೊಮ್ಮಕ್ಕಳು ಎಲ್ಲರೂ ಒಂದಲ್ಲ ಒಂದು ವಿಶೇಷ ಪ್ರತಿಭೆಯನ್ನು ಮಗುವಾಗಿ ಜನಿಸುವಾಗಲೇ ಬಿಗಿದೆರಡು ಮುಷ್ಠಿಗಳಲ್ಲಿ ಗಟ್ಟಿಯಾಗಿ ಹಿಡಿದುಕೊಂಡೇ ಹುಟ್ಟಿಬಂದವರು. ಆ ಬಗ್ಗೆ ಬರೆಯಹೊರಟರೆ ಆ ಕುಟುಂಬದ ಸಾಧಕರ ಒಬ್ಬೊಬ್ಬರ ಕತೆಯೇ ಒಂದೊಂದು ಪುಸ್ತಕವಾದೀತು.‌

    ಒಂದೊಮ್ಮೆ ನಾಟಕ ತಂಡವನ್ನು ಕಟ್ಟಿಕೊಂಡು ಮಂಗಳೂರಲ್ಲಿ ಓಡಾಡಿ, ಒಂದಷ್ಟು ನಾಟಕಗಳನ್ನು ಆಡಿ, ಆಡಿಸಿ ಗೆದ್ದರೆ, ಮತ್ತೊಮ್ಮೆ ನಾಲ್ಕು ಮಂದಿ‌ ಜೀವದ ಗೆಳೆಯರು ಸೇರಿ ಚತುರ್ಮುಖ ಬ್ರಹ್ಮರಾಗಿ ‘ದಾಸಜನ’ ಎನ್ನುವ ಗುಂಪು ರೂಪಿಸಿ, ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ವರ್ಷಾನುಗಟ್ಟಲೆ ನಿರಂತರ ನಡೆಸಿಕೊಂಡು ಬಂದವರು. ಮತ್ತೊಂದಷ್ಟು ಪುಸ್ತಕ ಪ್ರಕಟಣೆಗಳಿಗೆ ಕಾರಣಕರ್ತರಾಗಿ ಹಿರಿಕಿರಿಯ ಸಾಹಿತಿಗಳಿಗೆ ವೇದಿಕೆ ಒದಗಿಸಿದವರು.
    ನಿವೃತ್ತಿಯಾದ ಮೇಲೆ ತಮ್ಮ ಕಾರ್ಯಕ್ಷೇತ್ರವನ್ನು ಇನ್ನಷ್ಟು ವಿಸ್ತರಿಸಿಕೊಳ್ಳಲು ಬೆಂಗಳೂರಿಗೆ ಹಾರಿದರೂ, ಬೆಂಗಳೂರು ಮಂಗಳೂರುಗಳ ನಡುವಿನ ಸ್ನೇಹಬಾಂಧವ್ಯವನ್ನು ಹಾಗೇ ಉಳಿಸಿಕೊಂಡು, ಒಮ್ಮೆ ಅಲ್ಲಿ ಮತ್ತೊಮ್ಮೆ ಇಲ್ಲಿ ಗೆಳೆಯರೊಂದಿಗೆ ವಿವಿಧ ಕಾರ್ಯಕ್ರಮಗಳಲ್ಲಿ ಪ್ರತ್ಯಕ್ಷವಾಗುತ್ತಿರುವವರು.

    ಕರ್ನಾಟಕದ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಿಗೆ ಕೈತುಂಬಾ ಬಾಚಿ ಬಾಚಿ ತುಂಬಿದ ಈ ಮೇಧಾವಿ‌ ಕೈಹಾಕದ ಕ್ಷೇತ್ರಗಳೇ ಇಲ್ಲ. ರಾಶಿ ರಾಶಿ ಪುಸ್ತಕಗಳನ್ನು ಬರೆಬರೆದು ಒಟ್ಟುಹಾಕಿದ ಇವರಿಗೆ ದಣಿವೇ ಇಲ್ಲ. ಅವೆಷ್ಟೊಂದು ಕೃತಿಗಳು ಆ ಅಕ್ಷಯಹಸ್ತದಿಂದ ಹೊರಲೋಕ ಕಂಡಿವೆ! ಕತೆ, ಕವಿತೆ, ವಿಮರ್ಶೆ, ಕಾದಂಬರಿ, ಅನುವಾದಗಳೆನ್ನುವ ಸಾಹಿತ್ಯಕ್ಷೇತ್ರದ ಯಾವ ಪ್ರಕಾರವನ್ನೂ ಇವರು ಬಿಟ್ಟುಕೊಟ್ಟವರಲ್ಲ. ಅವುಗಳನ್ನೆಲ್ಲಾ ಪಟ್ಟಿಮಾಡುತ್ತಾ ಹೋದರೆ, ಅದು ಹನುಮಂತನ ಬಾಲದ ಹಾಗೆ ಬೆಳೆಯುತ್ತಲೇ ಹೋಗುತ್ತದೆ.

    ತಾನು ಕೈಹಾಕಿದ ಕ್ಷೇತ್ರಗಳಲ್ಲಿ, ‘ನಾದಾ’ ಎನ್ನುವ ಛಾಪನ್ನು ಇವರು ಒತ್ತಿದರು ಎಂದರೆ, ಅಲ್ಲೊಂದಷ್ಟು ಪ್ರಶಸ್ತಿ, ಸನ್ಮಾನಗಳು ಇವರಿಗೆ ಕಟ್ಟಿಟ್ಟ ಬುತ್ತಿ. ಅದು ಕೇಂದ್ರ ಸಾಹಿತ್ಯ ಅಕಾಡೆಮಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಹೀಗೆ ಲೆಕ್ಕವಿಲ್ಲದಷ್ಟು‌ ಎಲ್ಲಾ ಕಡೆಗಳಿಂದಲೂ ಬಂದು ಬಂದು ದೊಡ್ಡ ರಾಶಿಯೇ ಆಗಿದೆ.
    ಎಲ್ಲೆಲ್ಲಿಯೂ ಸಹಸ್ರಬಾಹುವಿನಂತೆ ಬಾಹುಗಳನ್ನು ಚಾಚುತ್ತಲೇ ಇರುವ ‘ನಾದಣ್ಣ’ ನಲ್ಲಿ ಯಾವಾಗಲೂ ಹೊಸತನದ ತುಡಿತ. ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದು, ವಿಭಾಗ ಬೆಳೆಸಲು ವಿದ್ಯಾರ್ಥಿಗಳೊಂದಿಗೆ ತಿರುಕನಂತೆ ಜೋಳಿಗೆ ಹಾಕಿಕೊಂಡು ಸಾಹಿತಿಗಳ ಮನೆಯಿಂದ ಪುಸ್ತಕ ಬೇಡಿ ತಂದು ವಿಭಾಗದ ಗ್ರಂಥಾಲಯದಲ್ಲಿ‌ ಸುಮಾರು 5,600 ಪುಸ್ತಕಗಳನ್ನು ತುಂಬಿದವರು.

    ಯಕ್ಷಗಾನದ ಮತ್ತು ಭರತನಾಟ್ಯ ತಂಡದೊಂದಿಗೆ ಇಂಗ್ಲೆಂಡಿಗೆ ಹಾರಿ ತಾನೂ ಕುಣಿದು, ಇತರರನ್ನು ಕುಣಿಸಿದ ಕಲಾರಾಧಕರು. ಆಗಾಗ ಬೆಳ್ಳಿ ತೆರೆಯಲ್ಲೂ ಮಿಂಚಿದವರು. ಸಾಹಿತ್ಯ ಹಾಗೂ ಸಿನಿಮಾ ಕ್ಷೇತ್ರದ ಘಟಾನುಘಟಿಗಳ ಜತೆಗೆ ಬಿಡುವಿಲ್ಲದೆ ಓಡಾಡುತ್ತಿರುವವರು. ವೇದಿಕೆಯಲ್ಲಿ ಅವರಿದ್ದರೆ ಸಾಕು. ಆ ವೇದಿಕೆಗೊಂದು ಶೋಭೆ. ಅವರಲ್ಲಿ ಮಾತಿಗಿಳಿದರೆ, ಆ ಮಾತಿನ ಮೋಡಿಗೆ ಒಳಗಾಗದವರು ಯಾರೂ ಇಲ್ಲ. ಕಾರ್ಯಕ್ರಮಗಳಲ್ಲಿ ಅವರು ಹಾಜರಿದ್ದರೆ ಅದಕ್ಕೊಂದು ಮೆರುಗು.

    ಕಣ್ಣಿನಲ್ಲಿಯೇ ಸ್ನೇಹ ಸೂಚಿಸಿ, ಬಾಯ್ತುಂಬಾ ಮಾತನಾಡಿ ಎಲ್ಲರನ್ನೂ ಸೆಳೆಯುವ ಅವರ ಗುಣ ಅದೊಂದು ವಿಸ್ಮಯ. ಅವರೇ ಒಂದು ವಿಸ್ಮಯದ ಜಗತ್ತು. ಅ ನಿಷ್ಕಲ್ಮಷ ಜಗತ್ತಿನೊಳಗೆ ಒಮ್ಮೆ ಪ್ರವೇಶಿಸಿದವರಿಗೆ ಮತ್ತೆ ಅಲ್ಲಿಯೇ ಇದ್ದುಬಿಡೋಣವೆನ್ನುವ ಮನಸ್ಸು. ಎಲ್ಲರನ್ನೂ ಸಮಾನವಾಗಿ ಕಾಣುವ ಗುಣ. ಮೊಗೆದಷ್ಟೂ ಚಿಮ್ಮುವ ಈ ಪ್ರೀತಿಯ ಒರತೆಗೆ ಎಂದೂ ಬರವಿಲ್ಲ. ಮಾತುಗಳಿಗೆ ಸಿಲುಕದ ನಿಲುಕದ ಸರ್ವಜನಪ್ರಿಯ ಪ್ರೀತಿಯ ನಾದಾ ಅಣ್ಣನಿಗೆ ಸರ್ವರಿಂದಲೂ ಹುಟ್ಟುಹಬ್ಬದ ಸಾವಿರಾರು ಶುಭಾಶಯಗಳು.

    • ಡಾ. ಮೀನಾಕ್ಷಿ ರಾಮಚಂದ್ರ,
      ನಿವೃತ್ತ ಪ್ರಾಧ್ಯಾಪಕರು

    Share. Facebook Twitter Pinterest LinkedIn Tumblr WhatsApp Email
    Previous Articleಬೆಂಗಳೂರಿನ ನಯನ ರಂಗಮಂದಿರದಲ್ಲಿ ‘ಕರ್ಣಾಂತರಂಗ’ ಏಕವ್ಯಕ್ತಿ ಪ್ರಸ್ತುತಿ | ಆಗಸ್ಟ್ 02
    Next Article ಶ್ರೀ ಭ್ರಾಮರೀ ನಾಟ್ಯಾಲಯದ ‘ಗೆಜ್ಜೆಯೊಂದಿಗೆ ಬೆಳ್ಳಿ ಹೆಜ್ಜೆ –12’ | ಆಗಸ್ಟ್ 04
    roovari

    Add Comment Cancel Reply


    Related Posts

    ಕಲಾ ವೈಭವದೊಂದಿಗೆ ‘ನಾಟ್ಯಂ ಅವಧಾರಯೇ–ನಟರಾಜ ಪೂಜನ’

    August 5, 2026

    ನೃತ್ಯ ವಿಮರ್ಶೆ | ಕರಾವಳಿ ಕಲಾ ವಲಯದಲ್ಲೊಂದು ಆಪ್ತ ಕಲಾನುಭವ, ‘ಕಲಾಭವ’

    August 5, 2026

    ಕಾರ್ಕಳದ ಕ್ರಿಯೇಟಿವ್ ಪುಸ್ತಕ ಮನೆಯ ವತಿಯಿಂದ ವೆಬ್ ಸೈಟ್ ನಲ್ಲಿ ಭರ್ಜರಿ ಆಫರ್

    August 5, 2026

    ಪುರಾಣಲೋಕ – ನೀರಾಜನ ಅವಳಿ ಕಾರ್ಯಕ್ರಮಗಳ ಲೋಕಾರ್ಪಣೆ

    August 5, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.