ಕನ್ನಡ ಸಾಹಿತ್ಯ ಲೋಕದಲ್ಲಿ ‘ಜಿ.ವಿ.’ ಎಂದೇ ಆತ್ಮೀಯವಾಗಿ ಪರಿಚಿತರಾದ ವೆಂಕಟಸುಬ್ಬಯ್ಯನವರು ಓರ್ವ ನಿಘಂಟುಕಾರ, ಭಾಷಾ ವಿಜ್ಞಾನಿ, ವ್ಯಾಕರಣ ತಜ್ಞ, ಸಂಶೋಧಕ, ವಿಮರ್ಶಕ, ಸಂಪಾದಕ, ಅನುವಾದಕ ಹಾಗೂ ಅಧ್ಯಾಪಕರಾಗಿ ಬಹುಮುಖ ಸೇವೆ ಸಲ್ಲಿಸಿದವರು. ಅವರ ನಿಘಂಟು ಕಾರ್ಯವು ಕನ್ನಡ ಭಾಷೆಯ ಪದಸಂಪತ್ತನ್ನು ದಾಖಲಿಸುವುದರಲ್ಲಿ ಯಶಸ್ವಿಯಾಗಿದೆ. ಪದದ ಅರ್ಥವನ್ನು ಅದರ ಉಪಯೋಗದ ಸಂದರ್ಭದಲ್ಲಿ ಗುರುತಿಸುವುದು, ಭಾಷೆಯ ಬದಲಾವಣೆಯನ್ನು ಗಮನಿಸುವುದು, ಹೊಸ ಪದಗಳ ಪ್ರವೇಶವನ್ನು ದಾಖಲಿಸುವುದು ಮತ್ತು ಆಡುಭಾಷೆಗೆ ಗೌರವ ನೀಡುವುದು ಇವರ ಭಾಷಾಚಿಂತನೆಯ ಪ್ರಮುಖ ಲಕ್ಷಣಗಳಾಗಿದ್ದವು. ‘ನುಡಿಗಾರುಡಿಗ’, ‘ಶಬ್ದಬ್ರಹ್ಮ’, ‘ನಿಘಂಟುಬ್ರಹ್ಮ’, ‘ನಡೆದಾಡುವ ನಿಘಂಟು’ ಮುಂತಾದ ಗೌರವ ಪದಗಳಿಂದ ಅವರನ್ನು ಸಂಬೋಧಿಸುತ್ತಿದ್ದರು. ಇವು ಕೇವಲ ಹೊಗಳಿಕೆಯ ಮಾತುಗಳಾಗಿರದೆ, ಕನ್ನಡ ನಿಘಂಟುಶಾಸ್ತ್ರದಲ್ಲಿ ಇವರು ನಿರ್ಮಿಸಿದ ವಿಶಿಷ್ಟ ಸ್ಥಾನಕ್ಕೆ ದೊರೆತ ಸಾಮಾಜಿಕ ಗೌರವ. ಅವರ ಬದುಕು ಮತ್ತು ಕೃತಿಗಳನ್ನು ಪರಿಶೀಲಿಸಿದಾಗ, ಭಾಷಾ ಅಧ್ಯಯನದ ಶಿಸ್ತು ಒಬ್ಬ ವ್ಯಕ್ತಿಯ ವೈಯಕ್ತಿಕ ಪ್ರತಿಭೆಯ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದು ಸ್ಪಷ್ಟವಾಗುತ್ತದೆ. ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕರಾಗಿ, ಕೆಲಸ ಮಾಡುತ್ತಿದ್ದ ಕಾಲದಲ್ಲಿ ಅದೇ ಕಾಲೇಜಿನ ಪ್ರಚಾರೋಪನ್ಯಾಸ ಪುಸ್ತಕ ಮಾಲೆಯಲ್ಲಿ ಹಲವಾರು ಕೃತಿ ರಚನೆ ಮಾಡಿದ್ದಾರೆ. ವಿದ್ಯಾರ್ಥಿ ದೆಸೆಯಲ್ಲಿದ್ದಾಗಲೇ ‘ಬಾಲ ಕರ್ನಾಟಕ’ ಸಂಘವನ್ನು ಸ್ಥಾಪಿಸಿದ ಖ್ಯಾತಿ ಇವರದು. ಎಚ್.ಎಂ. ಶಂಕರ ನಾರಾಯಣರಾಯರು ಹೊರತಂದ ‘ರೋಹಿಣಿ’ ಕೈಬರಹದ ಪತ್ರಿಕೆಗೆ ಬಹಳಷ್ಟು ಸಹಾಯ ನೀಡಿದ್ದಾರೆ.
1913 ಆಗಸ್ಟ್ 23ರಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಾಂಜಾಂ ಗ್ರಾಮದಲ್ಲಿ ಪ್ರೊ. ಜಿ. ವೆಂಕಟಸುಬ್ಬಯ್ಯನವರ ಜನನವಾಯಿತು. ತಂದೆ ಗಾಂಜಾಂ ತಿಮ್ಮಣ್ಣಯ್ಯ ಕನ್ನಡ ಮತ್ತು ಸಂಸ್ಕೃತ ವಿದ್ವಾಂಸರಾಗಿದ್ದರು. ಎಳವೆಯಿಂದಲೇ ವಿದ್ವತ್ ಪರಂಪರೆಯ ವಾತಾವರಣದಲ್ಲಿ ಬೆಳೆದುದು ಮತ್ತು ವಿದ್ವಾಂಸರ ಸಂಪರ್ಕ ಇವು ಸುಬ್ಬಯ್ಯನವರಿಗೆ ಭಾಷೆಯ ಬಗೆಗಿರುವ ಆಸಕ್ತಿಗೆ ಗಟ್ಟಿ ಪಂಚಾಂಗವಾಯಿತು.
ಬಾಲ್ಯದಿಂದಲೇ ಕನ್ನಡ ಮತ್ತು ಸಂಸ್ಕೃತ ಭಾಷೆಗಳ ಅಧ್ಯಯನಕ್ಕೆ ಪ್ರೋತ್ಸಾಹ ದೊರೆಯಿತು. ಉನ್ನತ ಶಿಕ್ಷಣ ಪಡೆದು ಅಧ್ಯಾಪನ ಕ್ಷೇತ್ರಕ್ಕೆ ಪ್ರವೇಶಿಸಿದ ಇವರು ಶಿಕ್ಷಣವು ಕೇವಲ ಉದ್ಯೋಗ ಪಡೆಯಲು ಅಗತ್ಯವಿರುವ ಮಾರ್ಗವಲ್ಲ ಎಂದು ತಿಳಿದಿದ್ದರು. ಭಾಷೆಯನ್ನು ಅರ್ಥಮಾಡಿಕೊಳ್ಳಲು, ಸಾಹಿತ್ಯವನ್ನು ವಿಶ್ಲೇಷಿಸಲು ಮತ್ತು ಪದಗಳ ಸೂಕ್ತ ವ್ಯತ್ಯಾಸಗಳನ್ನು ಗುರುತಿಸಲು ಶಿಕ್ಷಣವನ್ನು ಸಂಶೋಧನಾ ಸಾಧನವಾಗಿ ಬಳಸಿಕೊಂಡರು. ಅಧ್ಯಾಪಕತ್ವದ ಮೇಲೆ ಬಹಳ ಗೌರವವಿದ್ದ ಅವರು ಭಾಷೆಯನ್ನು ಹೇಗೆ ಗಮನಿಸಬೇಕು, ಸಾಹಿತ್ಯವನ್ನು ಹೇಗೆ ಓದಬೇಕು ಎಂಬುದನ್ನು ವಿದ್ಯಾರ್ಥಿಗಳಿಗೆ ಕಲಿಸಿದ ಓರ್ವ ಸಾರ್ಥಕ ಗುರು. ಭಾಷೆಯನ್ನು ಬದುಕಿನೊಂದಿಗೆ ನೋಡಬೇಕು ಎಂಬುದೇ ಅವರ ಭಾಷಾ ಬೋಧನೆಯ ಮೂಲ ಉದ್ದೇಶ. ಆದ್ದರಿಂದಲೇ ಅವರ ನಿಘಂಟುಗಳು ಸಾಮಾನ್ಯ ಓದುಗರಿಗೂ ಉಪಯುಕ್ತವಾಗುವಂತೆ ರೂಪುಗೊಂಡವು.
ಜಿ. ವೆಂಕಟಸುಬ್ಬಯ್ಯನವರ ಅತ್ಯಂತ ಮಹತ್ವದ ಕೊಡುಗೆಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ‘ಕನ್ನಡ ಕನ್ನಡ ನಿಘಂಟು’ ಬಹಳ ಪ್ರಮುಖವಾದದ್ದು. ಅವರು ಈ ಮಹತ್ವದ ನಿಘಂಟು ಯೋಜನೆಯ ಪ್ರಧಾನ ಸಂಪಾದಕರಾಗಿ ಸೇವೆ ಸಲ್ಲಿಸಿದರು. ದಶಕಗಳ ಕಾಲ ಕೆಲಸ ಮಾಡಿ ಎಂಟು ಸಂಪುಟಗಳಲ್ಲಿ ಸುಮಾರು 9000 ಪುಟಗಳ ಈ ನಿಘಂಟು ಯೋಜನೆಯ ಕಾರ್ಯವನ್ನು ಪೂರೈಸಿದರು. ಜಿ. ವಿ. ಅವರ ನಿಘಂಟು ಕಾರ್ಯದಲ್ಲಿ ಅತ್ಯಂತ ವಿಶಿಷ್ಟವಾದ ಕೃತಿ ‘ಇಗೋ ಕನ್ನಡ’ ಇದು ಸಾಮಾನ್ಯ ನಿಘಂಟಿನ ಪರಿಕಲ್ಪನೆಯನ್ನು ಮೀರಿ ಸಾಮಾಜಿಕ ಮತ್ತು ಬಳಕೆಯ ಭಾಷೆಯನ್ನು ದಾಖಲಿಸುವ ಪ್ರಯತ್ನವಾಗಿದೆ. ‘ಇಗೋ ಕನ್ನಡ’ದಲ್ಲಿ ಪದಗಳ ಜೊತೆಗೆ ನುಡಿಗಟ್ಟುಗಳು, ಸಾಮಾಜಿಕ ಸಂದರ್ಭದಲ್ಲಿ ಮತ್ತು ಜೀವನದಲ್ಲಿ ಕಾಣುವ ಭಾಷಾ ಪ್ರಯೋಗಗಳಿಗೆ ಮತ್ತು ವೈವಿಧ್ಯಮಯ ಆಡುಭಾಷಾಗೆ ಮಹತ್ವ ನೀಡಲಾಗಿದೆ. ಈ ಕಾರಣದಿಂದ ಇದನ್ನು ಸಾಮಾಜಿಕ ನಿಘಂಟು ಎಂದು ಗುರುತಿಸಲಾಗುತ್ತದೆ. ಜಿ. ವಿ.ಯವರ ನಿಘಂಟು ಕಾರ್ಯ ಒಂದೇ ಕೃತಿಗೆ ಸೀಮಿತವಾಗಿರಲಿಲ್ಲ. ಹಲವಾರು ಮಹತ್ವದ ನಿಘಂಟುಗಳ ಕರ್ತೃ ಇವರಾಗಿದ್ದಾರೆ.
‘ಕನ್ನಡ – ಕನ್ನಡ ಸಂಕ್ಷಿಪ್ತ ನಿಘಂಟು’, ‘ಕನ್ನಡ – ಕನ್ನಡ – ಇಂಗ್ಲೀಷ್ ನಿಘಂಟು’, ‘ಕನ್ನಡ ನಿಘಂಟು ಶಾಸ್ತ್ರ ಪರಿಚಯ’, ‘ಮುದ್ದಣ್ಣ ಪದ ಪ್ರಯೋಗ ಕೋಶ’, ‘ಪತ್ರಿಕಾ ಪದಕೋಶ’, ‘ಎರವಲು ಪದಕೋಶ’, ‘ಇಗೋ ಕನ್ನಡ – ಸಾಮಾಜಿಕ ನಿಘಂಟು’, ‘ಪ್ರಿಸಂ ಇಂಗ್ಲೀಷ್ – ಕನ್ನಡ ನಿಘಂಟು’, ‘ಕನ್ನಡ ನಿಘಂಟು ಪರಿವಾರ’, ‘ಕನ್ನಡ ಕ್ಲಿಷ್ಟ ಪದ ಕೋಶ’, ‘ಶಬ್ದ ಮತ್ತು ಅರ್ಥ’, ‘ಕನ್ನಡ ನಿಘಂಟುಶಾಸ್ತ್ರ ಮತ್ತು ಇತರ ಲೇಖನಗಳು’ ಇವು ಪ್ರಮುಖವಾದವುಗಳು. ಇವುಗಳಲ್ಲಿ ‘ಪ್ರಿಸಂ ಇಂಗ್ಲೀಷ್ ಕನ್ನಡ ನಿಘಂಟು’ ಬಹಳ ಗಮನಾರ್ಹವಾಗಿದ್ದು, ಇವರ ಭಾಷಾ ದೃಷ್ಟಿಯ ವ್ಯಾಪಕತೆ ಕಂಡು ಬರುತ್ತದೆ. ಬರಹಗಾರರು ಮತ್ತು ಅನುವಾದಕರಿಗೆ ಉಪಯುಕ್ತವಾಗುವ ಹಾಗೆ ಅವರಿಗಾಗಿಯೇ ರಚಿಸಿದ ಕೃತಿ. ಜಿ. ವಿ.ಯವರು ಕೇವಲ ನಿಘಂಟುಗಾರ ಎಂಬ ಒಂದೇ ದೃಷ್ಟಿಕೋನಕ್ಕೆ ಅಂಟಿಕೊಂಡವರಲ್ಲ. ಸಾಹಿತ್ಯದ ವಿವಿಧ ಮಜಲುಗಳಾದ ಸಾಹಿತ್ಯ ವಿಮರ್ಶೆ, ಸಂಶೋಧನೆ, ಅನುವಾದ, ಸಂಪಾದನೆ ಮತ್ತು ಕನ್ನಡ ಸಾಹಿತ್ಯ ಇತಿಹಾಸದ ಕುರಿತು ಬಹಳಷ್ಟು ಕೆಲಸ ಮಾಡಿದ್ದಾರೆ. ‘ವಿಕಾಸ’, ‘ಕಾವ್ಯಲಹರಿ’, ‘ಕಾವ್ಯಸಂಪುಟ’ ಇವುಗಳು ಇತರೊಡನೆ ಸೇರಿ ಸಂಪಾದಿಸಿದ ಕೃತಿಗಳು. ‘ಶಂಕರಾಚಾರ್ಯಲ’, ‘ಕಬೀರ’, ‘ಲಿಂಡನ್ ಜಾನ್ಸನ್’ ಇವು ಇವರ ಅನುವಾದಿತ ಕೃತಿಗಳು. ‘ರಾಬಿನ್‌ಸನ್ ಕ್ರೂಸೋ’, ‘ಕವಿಜನ್ನ’, ‘ಚಾವುಂಡರಾಯ’ ಮಕ್ಕಳಿಗಾಗಿ ಇವರ ರಚನೆ. ‘ನಳಚಂಪು ಸಂಗ್ರಹ’, ‘ಅಕ್ರೂರ ಚರಿತ್ರೆ ಸಂಗ್ರಹ’, ‘ಕರ್ಣ ಕರ್ಣಾಮೃತ’ ಇವು ಕಾವ್ಯಕೃತಿಗಳು. ‘ನಯಸೇನ’, ‘ಕನ್ನಡ ಶಾಸನ ಪರಿಚಯ’, ‘ಕನ್ನಡ ಸಾಹಿತ್ಯ ನಡೆದು ಬಂದ ದಾರಿ’, ‘ಪ್ರೊ. ಟಿ.ಎಸ್. ವೆಂಕಣ್ಣಯ್ಯ’, ‘ಡಿ.ವಿ. ಗುಂಡಪ್ಪ’, ‘ಕನ್ನಡವನ್ನು ಉಳಿಸಿ ಬೆಳೆಸಿದವರು’, ‘ಸಾಹಿತ್ಯ ಮತ್ತು ಶಿಕ್ಷಣ’, ‘ಕನ್ನಡದ ನಾಯಕ ಮಣಿಗಳು’, ‘ಕಾವ್ಯ ಚಿಂತನೆ’, ‘ಸೀಳುನೋಟ’, ‘ಗತಿಪ್ರಜ್ಞೆ’, ‘ಕುಮಾರವ್ಯಾಸನ ಅಂತರಂಗ’ ಮುಂತಾದವುಗಳು ಅವರ ಕೃತಿಗಳ ಪಟ್ಟಿಯಲ್ಲಿವೆ.
ಜಿ. ವಿ.ಯವರು ಸಾಹಿತ್ಯ ಪರಿಷತ್ತಿನ ಕಾರ್ಯಪದರ್ಶಿಯಾಗಿ, ಅಧ್ಯಕ್ಷರಾಗಿ, ಪರಿಷತ್ತಿನ ನಿಘಂಟು ಸಮಿತಿ, ವಿಶ್ವಕೋಶದ ಸಮಿತಿ, ವಿಶ್ವವಿದ್ಯಾಲಯದ ಅಕೆಡಮಿಕ್ ಕೌನ್ಸಿಲ್, ಸೆನೆಟ್, ಪಠ್ಯಪುಸ್ತಕ ಸಮಿತಿ, ಪರೀಕ್ಷಾ ಸಮಿತಿಯ ಸದಸ್ಯರಾಗಿ ಸಕ್ರಿಯ ಸೇವೆಯನ್ನು ಸಲ್ಲಿಸಿದ್ದಾರೆ. ಒಬ್ಬ ಸಂಪಾದಕನ ಕೆಲಸ ಕೇವಲ ಮುದ್ರಣಕ್ಕೆ ಪಠ್ಯ ಸಿದ್ದಪಡಿಸುವುದಲ್ಲ ಎಂಬುದನ್ನು ಚೆನ್ನಾಗಿ ತಿಳಿದಿದ್ದ ಜಿ. ವಿ.ಯವರು ಓರ್ವ ಜವಾಬ್ದಾರಿಯುತ ಸಂಪಾದಕರಾಗಿದ್ದರು. ‘ರಾಜ್ಯೋತ್ಸವ ಪ್ರಶಸ್ತಿ’, ‘ಸಾಹಿತ್ಯ ಅಕಾಡಮಿ ಪ್ರಶಸ್ತಿ’, ‘ಶಂಬಾ ಪ್ರಶಸ್ತಿ’, ‘ಸೇಡಿಯಾಪು ಪ್ರಶಸ್ತಿ’, ‘ಶಿವರಾಮ ಕಾರಂತ ಪ್ರಶಸ್ತಿ’, ‘ಮುದ್ದಣ ಪುರಸ್ಕಾರ’, ‘ರಾಜ್ಯ ಪತ್ರಿಕಾ ಅಕಾಡಮಿ ವಿಶೇಷ ಪ್ರಶಸ್ತಿ’, ‘ಅಂಕಣಶ್ರೀ ಪ್ರಶಸ್ತಿ’, ‘ನಾಡೋಜ ಪ್ರಶಸ್ತಿ’, ‘ಆರ್ಯಭಟ ಪ್ರಶಸ್ತಿ’, ‘ಗೊರೂರು ಪ್ರಶಸ್ತಿ’, ‘ಮಾಸ್ತಿ ಪ್ರಶಸ್ತಿ’, ‘ಅ.ನ.ಕೃ. ಪ್ರತಿಷ್ಠಾನ ಪ್ರಶಸ್ತಿ’ ಮುಂತಾದುವು ಇವರು ಸಾಹಿತ್ಯದ ವಿವಿಧ ಆಯಾಮ ಗಳಲ್ಲಿ ಸಲ್ಲಿಸಿದ ಸೇವೆಗಾಗಿ ಸಂದ ಗೌರವಗಳು.
ನೂರ ಎಂಟು ವರ್ಷಗಳ ಬದುಕನ್ನು ಕಂಡ ಜಿ. ವಿ.ಯವರು 19 ಏಪ್ರಿಲ್ 2021ರಂದು ಬೆಂಗಳೂರಿನಲ್ಲಿ ನಿಧನರಾದರು. ಅವರ ಜನ್ಮದಿನವಾದ ಇಂದು ಸಾಹಿತ್ಯ ಕ್ಷೇತ್ರಕ್ಕೆ ಅವರು ಸಲ್ಲಿಸಿದ ಸೇವೆಯನ್ನು ಸ್ಮರಿಸೋಣ. ಅಗಲಿದ ಆತ್ಮಕ್ಕೆ ಅನಂತ ನಮನಗಳು.
– ಅಕ್ಷರೀ
