ಮಂಗಳೂರು : ಭಾಷೆ ಮತ್ತು ಸಂಸ್ಕೃತಿ ಅಧ್ಯಯನ ನಿಕೇತನ, ಸೇಂಟ್ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಕನ್ನಡ ವಿಭಾಗ, ಗೆಳೆಯರ ಬಳಗ ಜಂಟಿಯಾಗಿ ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ದಿನಾಂಕ 28 ಆಗಸ್ಟ್ 2026ರಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಹಿತಿ ಪ್ರೊ. ಶ್ರೀಧರ ಬಳಗಾರ ಇವರ ‘ಬಲಿಪಾದ’ ಕಾದಂಬರಿ ಬಿಡುಗಡೆಗೊಂಡಿತು.

ಈ ಕಾರ್ಯಕ್ರಮದಲ್ಲಿ ಕೃತಿ ಅನಾವರಣಗೊಳಿಸಿದ ಚಿಂತಕ ಲಕ್ಷ್ಮೀಶ್ ತೋಳ್ಳಾಡಿ ಮಾತನಾಡಿ “ಆಧುನಿಕ ಪ್ರಪಂಚದ ಸ್ಪರ್ಶವಿಲ್ಲದ, ಆದಿಮ ಸ್ಥಿತಿಯಲ್ಲಿರುವ ಮುಗ್ಧ ಕುಣಬಿ ಸಮುದಾಯದ ಬದುಕನ್ನು ಪರಿಚಯಿಸುವ ‘ಬಲಿಪಾದ’ವು ಪರಿಚಿತ ಪ್ರಪಂಚದಾಚೆಗಿನ ಅಪರಿಚಿತ ಜಗತ್ತಿನ ಸತ್ಯ ದರ್ಶನ ಮಾಡಿಸುತ್ತದೆ. ಅಪರಿಚಿತ ಪ್ರಪಂಚದೊಳಗೆ ಪರಿಚಿತವಾದ ಸಾಹಿತ್ಯ ಪ್ರಜ್ಞೆಯೊಂದರ ಮುಖಾಮುಖಿಯು ಕಾದಂಬರಿಯಾಗಿ ಅರಳಿದೆ. ಮುಗ್ಧ ಸಮುದಾಯದವೊಂದರ ಒಡನಾಟವನ್ನು ಸರಳೀಕರಣಗೊಳಿಸದೆ, ಸೈದ್ದಾಂತಿಕ ಬಂಧನಕ್ಕೂ ಒಳಗಾಗದೆ, ಮಧ್ಯಮ ಸ್ಥಾಯಿಯಲ್ಲಿ ನಿರೂಪಿತವಾಗಿರುವ ಕಾದಂಬರಿಯು ಓದಿನ ಕೊನೆಯಲ್ಲಿ ಜೀವನ ಬಗ್ಗೆ ಆಳವಾದ ಪ್ರಜ್ಞೆ ಮೂಡಿಸುತ್ತದೆ. ಆಧುನಿಕ ನಾಗರಿಕತೆಯ ಸೌಲಭ್ಯಕ್ಕಾಗಿ ಮುಗ್ಧ ಬುಡಕಟ್ಟು ಸಮುದಾಯದ ಬದುಕನ್ನು ಬಲಿಕೊಟ್ಟು ನಾವು ಬೆಲೆ ತೆತ್ತಿರುವ ವಿಷಾದ ಕಾಡುತ್ತದೆ. ಜೀವನಾನುಭವವನ್ನೇ ಪುನರ್ ಅಭಿನಯ ಮಾಡುವುದು ಸಾಹಿತ್ಯದ ಕೆಲಸ. ಆದರೆ, ರಂಜನೆಗಾಗಿ ಈ ಅಭಿನಯ ಮಾಡಿದರೆ ಅದು ಅರ್ಥ ಕಳೆದುಕೊಳ್ಳುತ್ತದೆ. ಅನುಕಂಪವು ಓದುಗನ ಹೃದಯದಲ್ಲಿ ಅನುರಣಿತವಾಗಿ ಕಂಪನ ಮೂಡಿಸಿದರೆ, ಅದು ಸತ್ಯದ ದರ್ಶನವಾಗುತ್ತದೆ. ‘ಬಲಿಪಾದ’ ಕೃತಿಯುದ್ದಕ್ಕೂ ಈ ಸತ್ಯವು ಗಾಢವಾಗಿ ಕಂಡುಬರುತ್ತದೆ” ಎಂದು ಹೇಳಿದರು.

ಕೃತಿಕಾರ ಶ್ರೀಧರ ಬಳಗಾರ ಮಾತನಾಡಿ, “ಲೇಖಕನಾಗಿ ಲಿಪಿಕಾರನ ಪಾತ್ರ ನಿರ್ವಹಿಸಿದ್ದೇನೆ. ಲಿಪಿಕಾರನಿಗೆ ನಿರ್ಲಿಪ್ತತೆ, ಚಿತ್ರಕಾರವಾಗಿ ವರ್ತಿಸುವ ತನ್ಮಯತೆ ಬೇಕು. ಯಾವ ಪಾತ್ರಗಳು ಜೀವಂತ ಸಮುದಾಯವನ್ನು ಪ್ರತಿನಿಧಿಸುತ್ತವೆಯೋ ಅವುಗಳ ಚಿತ್ರಣವನ್ನು ನಾನು ಲಿಪಿಕಾರನಾಗಿ ನಿರ್ವಹಿಸಿದ್ದೇನೆ. ಅಪರಿಚಿತವಾಗಿದ್ದ ಬುಡಕಟ್ಟು ಸಮುದಾಯದ ಪರಿಚಯ ಮಾಡಿಕೊಳ್ಳುವ ಪ್ರಯತ್ನವನ್ನು ನಿರಂತರ 12 ವರ್ಷಗಳಿಂದ ಮಾಡಿಕೊಂಡು ಬಂದೆ. ಊರೊಂದು ಮುಳುಗಡೆಯಾಗಿ ಇಡೀ ಒಂದು ಸಮುದಾಯ ಕಂಗೆಟ್ಟ ಸ್ಥಿತಿಯ ಚಿತ್ರಣ ಕಾದಂಬರಿಯಲ್ಲಿದೆ” ಎಂದರು. ಶ್ರೀಪೂರ್ಣ ಜನಪದ ಗೀತೆ ಹಾಡಿದರು. ಪ್ರೊ. ಮಹಾಲಿಂಗ ಭಟ್ ಸ್ವಾಗತಿಸಿದರು.

