ಮಂಗಳೂರು : ತೆಲುಗಿಗೆ ಅನುವಾದವಾದ ಡಾ. ವಸಂತಕುಮಾರ ಪೆರ್ಲ ಇವರ ‘ನಾಕೂರು’ ಕೃತಿಯು ದಿನಾಂಕ 07 ಜುಲೈ 2026ರಂದು ಮಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಲೋಕಾರ್ಪಣೆಗೊಂಡಿತು.
ಕೃತಿ ಬಿಡುಗಡೆಗೊಳಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಪೂರ್ವಾಧ್ಯಕ್ಷ ಡಾ. ಹರಿಕೃಷ್ಣ ಪುನರೂರು ಇವರು ಮಾತನಾಡಿ “ಅನುವಾದ ಕಾರ್ಯ ಸಾಹಿತ್ಯಕ್ಷೇತ್ರವನ್ನು ಶ್ರೀಮಂತಗೊಳಿಸುತ್ತದೆ. ಅನುವಾದಕ್ಕೆ ಒಳಗಾದ ಭಾಷೆ ಮತ್ತು ಅನುವಾದ ಮಾಡಲಾದ ಭಾಷೆ ಎರಡೂ ಪರಸ್ಪರ ಪೂರಕವಾಗಿ ಬೆಳೆಯುತ್ತವೆ. ಇದೇ ಮೊದಲ ಬಾರಿ ತುಳು ಸಣ್ಣಕಥೆಗಳ ಸಂಕಲನವೊಂದು ತೆಲುಗಿಗೆ ಅನುವಾದವಾಗಿ ಹೈದರಾಬಾದ್ ನ ಪ್ರಸಿದ್ಧ ಪ್ರಕಾಶನ ಸಂಸ್ಥೆಯೊಂದರ ಮೂಲಕ ಪ್ರಕಟವಾಗಿ ಹೊರಬರುತ್ತಿದೆ. ಇದು ತುಳುವರಿಗೆ ಹೆಮ್ಮೆಯ ಸಂಗತಿ” ಎಂದು ಹೇಳಿದರು.

ಕೃತಿಯನ್ನು ಪರಿಚಯಿಸಿ ಮಾತಾಡಿದ ಪ್ರಸಿದ್ಧ ತೆಲುಗು ಮತ್ತು ಇಂಗ್ಲೀಷ್ ಸಾಹಿತಿ ಡಾ. ಜಿ.ಆರ್. ಕೃಷ್ಣ ಇವರು, “ನಾಕೂರು ಕೃತಿಯಲ್ಲಿ ಡಾ. ಪೆರ್ಲರವರು ತುಳುನಾಡಿನ ಸಂಸ್ಕೃತಿ, ಜನಜೀವನವನ್ನು ತುಂಬ ಉತ್ತಮವಾಗಿ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ಕಳೆದ ಒಂದು ಶತಮಾನದ ಕರಾವಳಿಯ ಜೀವನದ ಸಂಗತಿಗಳು ಅತ್ಯಂತ ಹತ್ತಿರದಿಂದ ಚಿತ್ರಿತವಾಗಿದೆ. ತೆಲುಗಿಗೆ ಅನುವಾದ ಮಾಡಿದ ಹೈದರಾಬಾದ್ ನ ಸಾಹಿತಿ ರಂಗನಾಥ ರಾವ್ ಇವರು ತುಳು ಸಂಸ್ಕೃತಿಯನ್ನು ವಿಶಾಲಾಂಧ್ರಕ್ಕೆ ಪರಿಚಯಿಸುವ ದೃಷ್ಟಿಯಿಂದ ಈ ಅಪರೂಪದ ಅನುವಾದ ಕಾರ್ಯ ಮಾಡಿದ್ದಾರೆ. ಅನುವಾದವಿ ತೆಲುಗಿನಲ್ಲಿ ಉತ್ತಮವಾಗಿ ಮೂಡಿಬಂದಿದೆ” ಎಂದರು.

ಮೂಲ ಕೃತಿಕಾರರಾದ ಕವಿ – ಸಾಹಿತಿ ಡಾ. ವಸಂತಕುಮಾರ ಪೆರ್ಲ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. “ನಾಕೂರು ಎಂಬುದು ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಕುಮಾರಾಧಾರಾ ನದಿಯಲ್ಲಿರುವ ಒಂದು ಆಳ ನೀರಿನ ಗಯ. ಅದು ಈಗ ಪುಣ್ಯಕ್ಷೇತ್ರವಾಗಿದೆ. ಅದನ್ನು ಸಂಕೇತವಾಗಿ ಇಟ್ಟುಕೊಂಡು ನಾಕೂರು, ವಿಷ್ಣುಮಂಗಲ ಮುಂತಾದ ಕಥೆಗಳ ಮೂಲಕ ಕರಾವಳಿಯ ತುಳು ಜನಜೀವನ ಮತ್ತು ಸಂಸ್ಕೃತಿಯನ್ನು ಬಿಂಬಿಸಲಾಗಿದೆ” ಎಂದರು.

ತೆಲುಗು ಕವಯಿತ್ರಿ ಡಾ. ಮೈಥಿಲಿ ಮತ್ತು ಸಂಗೀತ ಕಲಾವಿದ ಆಗಮ ಪೆರ್ಲ ಅತಿಥಿಗಳಾಗಿ ಆಗಮಿಸಿದ್ದರು. ಡಾ. ಪೆರ್ಲ ಇವರು ಅತಿಥಿಗಳಿಗೆ ಗೌರವಾರ್ಪಣೆ ಮಾಡಿದರು. ಲೇಖಕ ಸದಾನಂದ ನಾರಾವಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತಾಡಿದರು. ಕವಯಿತ್ರಿ ಕೆ. ಶೈಲಾಕುಮಾರಿ ವಂದಿಸಿದರು.
