ಮಂಗಳೂರು : ಮಾಂಡ್ ಸೊಭಾಣ್ ಇದರ 295ನೇ ‘ತಿಂಗಳ ವೇದಿಕೆ’ (ಮ್ಹಯ್ನ್ಯಾಳಿ ಮಾಂಚಿ) ಕಾರ್ಯಕ್ರಮವು ದಿನಾಂಕ 05 ಜುಲೈ 2026ರಂದು ಭಾನುವಾರ ಕಲಾಂಗಣದಲ್ಲಿ ನಡೆಯಿತು.

ಕಲಾವಿದ ಹಾಗೂ ‘ಸುರಭಿ ಸೌಂಡ್ಸ್’ ಮಾಲೀಕರಾದ ದಾಮೋದರ್ ಭಾಗ್ವತ್ (ದಮ್ಮಿಯಣ್ಣ) ಇವರು ಗಂಟೆ ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಿದರು. ವೇದಿಕೆಯಲ್ಲಿ ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಜೆ. ಪಿಂಟೊ ಮತ್ತು ಕಾರ್ಯದರ್ಶಿ ರೋನಿ ಕ್ರಾಸ್ತಾ ಉಪಸ್ಥಿತರಿದ್ದರು. ಐರಿನ್ ರೆಬೆಲ್ಲೊ ಕಾರ್ಯಕ್ರಮದ ವಿವರ ನೀಡಿದರು.


ಸಭಾ ಕಾರ್ಯಕ್ರಮದ ಬಳಿಕ ‘ಅಸ್ತಿತ್ವ’ ನಾಟಕ ತಂಡದಿಂದ ‘ಜುಗಾರಿ’ ನಾಟಕದ 21ನೇ ಪ್ರದರ್ಶನ ಯಶಸ್ವಿಯಾಗಿ ಮೂಡಿಬಂತು. ವೈಕಂ ಮಹಮ್ಮದ್ ಬಶೀರ್ ಇವರು ಮಲಯಾಳಂನಲ್ಲಿ ರಚಿಸಿರುವ ಈ ನಾಟಕವನ್ನು ರೋಹನ್ ಅಡ್ಕಬಾರೆ ಇವರು ಕೊಂಕಣಿಗೆ ಅನುವಾದಿಸಿದ್ದು, ಕೇರಳದ ಅರುಣ್ ಲಾಲ್ ಈ ನಾಟಕವನ್ನು ವಿನ್ಯಾಸಗೊಳಿಸಿ ನಿರ್ದೇಶನ ಮಾಡಿದ್ದಾರೆ. ಕ್ಲಾನ್ವಿನ್ ಫೆರ್ನಾಂಡಿಸ್, ಲೆಸ್ಟರ್ ಮಿನೇಜಸ್, ಝೀನಾ ಬ್ರ್ಯಾಗ್ಸ್, ಮ್ಯಾಥ್ಯೂ ನಿಕೋಲಸ್, ಆಲ್ವಿನ್ ಸಿ. ವೇಗಸ್, ಸ್ಯಾಮುಯೆಲ್ ಮತಾಯಸ್, ಕ್ಲ್ಯಾರನ್ ಸೆರಾವೊ ಮತ್ತು ಕ್ರಿಸ್ಟೋಫರ್ ಡಿಸೋಜ ನಟಿಸಿ, ಪ್ರೇಕ್ಷಕರಿಗೆ ಹಾಸ್ಯದ ರಸದೌತಣ ಬಡಿಸಿದರು. ಸ್ವೀಡಲ್ ಡಿಸೋಜ ಹಾಗೂ ಕ್ರಿಸ್ಟನ್ ಫೆರ್ನಾಂಡಿಸ್ ಸಂಗೀತ್ ನಿರ್ವಹಣೆ ಮಾಡಿದರು. ಗ್ಲೆನ್ ಡಿಸೋಜ ಬೆಳಕಿನ ವಿನ್ಯಾಸ ಮತ್ತು ಮೆಹಬೂಬ್ ನೀನಾಸಂ, ಸತೀಶ್ ನೀನಾಸಂ ರಂಗ ಸಜ್ಜಿಕೆಯಲ್ಲಿ ಮತ್ತು ಬಿಂದು ಕುಟಿನ್ಹಾ ಹಿನ್ನಲೆ ಗಾಯನದಲ್ಲಿ ಸಹಕರಿಸಿದರು.



