ಮಂಗಳೂರು : ಸಂಗೀತ ಭಾರತಿ ಪ್ರತಿಷ್ಠಾನ (ರಿ) ಮಂಗಳೂರು ಇವರ ಆಶ್ರಯದಲ್ಲಿ ದಿನಾಂಕ 12 ಜುಲೈ 2026ರಂದು ಸಂಜೆ 5-30 ಗಂಟೆಗೆ ‘ಬ್ಯಾಂಕ್ ಆಫ್ ಮಾಹಾರಾಷ್ಟ್ರ ರಿಸ್ಟ್ರಿಮ್’ ಎಂಬ ‘ಸಿತಾರ್ ವಾದನ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಗಾಯನ’ ಕಾರ್ಯಕ್ರಮವು ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ.
ಪೂರ್ವಾಧದಲ್ಲಿ ಶ್ರೇಷ್ಠ ಸಿತಾರ್ ವಾದಕರಾದ ಬೆಂಗಳೂರಿನ ಶ್ರೀ ಸಂಜೀವ್ ಕೊರ್ತಿ ಇವರಿಂದ ‘ಸಿತಾರ್ ವಾದನ’ ನಡೆಯಲಿದ್ದು, ಉತ್ತರಾರ್ಧದಲ್ಲಿ ರಾಷ್ಟ್ರಮಟ್ಟದ ಖ್ಯಾತಿಯ ಪಂಡಿತ್ ಶಶಾಂಕ್ ಮಕ್ತೇದಾರ್, ಗೋವಾ ಇವರಿಂದ ಶಾಸ್ತ್ರೀಯ ಗಾಯನ ಕಾರ್ಯಕ್ರಮ ನಡೆಯಲಿದೆ ಎಂದು ಸಂಗೀತ ಭಾರತಿ ಫೌಂಡೇಶನ್ ಉಪಾಧ್ಯಕ್ಷರಾದ ಪ್ರೊ. ನರೇಂದ್ರ ಎಲ್. ನಾಯಕ್ ಅವರು ತಿಳಿಸಿದರು. ತಬ್ಲಾದಲ್ಲಿ ಗೋವಾದ ಶ್ರೀ ಮಯಾಂಕ್ ಬೆಡೆಕರ್ ಹಾಗೂ ಹಾರ್ಮೋನಿಯಂನಲ್ಲಿ ಶಿರಸಿಯ ಶ್ರೀ ಗುರುಪ್ರಸಾದ್ ಹೆಗೆಡೆ ಇವರು ಸಾಥ್ ನೀಡಲಿದ್ದಾರೆ.

ಭಾರತದ ಸಮೃದ್ಧ ಶಾಸ್ತ್ರೀಯ ಸಂಗೀತ ಪರಂಪರೆಯನ್ನು ಉಳಿಸಿ ಮುಂದಿನ ತಲೆಮಾರಿಗೆ ಪರಿಚಯಿಸುವ ಉದ್ದೇಶದಿಂದ ‘ಸಂಗೀತ ಭಾರತಿ ಫೌಂಡೇಶನ್’ 2026ರಲ್ಲಿ ಹಮ್ಮಿಕೊಂಡಿರುವ ಶಾಸ್ತ್ರೀಯ ಸಂಗೀತದ ಏಳು ಕಾರ್ಯಕ್ರಮಗಳ ಸರಣಿಯ ಮೊದಲ ಕಾರ್ಯಕ್ರಮ ಇದಾಗಿದೆ. ಈ ಮಹೋತ್ಸವಕ್ಕೆ ಮುಖ್ಯ ಪ್ರಯೋಜಕರಾಗಿ ಬ್ಯಾಂಕ್ ಆಫ್ ಮಹಾರಾಷ್ಟ್ರ, ಸಹಪ್ರಯೋಜಕರಾಗಿ ಡಾ. ಪಿ. ದಯಾನಂದ ಪೈ, ನಿರ್ದೇಶಕರು ಸಂಚುರಿ ಗ್ರೂಪ್ ಆಫ್ ಬೆಂಗಳೂರು, ಕರ್ಣಾಟಕ ಬ್ಯಾಂಕ್, ಕೆನರಾ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಶ್ರೀನಿಧಿ ಬಿಲ್ಡರ್ಸ್, ಮುದ್ರ ಪ್ರಿಂಟ್ರರ್ಸ್, ಎಕ್ಸ್ ಪರ್ಟ್ ಸಮೂಹ ಶಿಕ್ಷಣ ಸಂಸ್ಥೆಗಳು ಇವರುಗಳು ಸಹಕಾರ ನೀಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸಂಗೀತಾಸಕ್ತರೆಲ್ಲರಿಗೂ ಮುಕ್ತ ಪ್ರವೇಶಾವಕಾಶವಿದ್ದು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಂಗೀತ ಭಾರತಿ ಪ್ರತಿಷ್ಠಾನದ ಉಪಾಧ್ಯಕ್ಷ ಪ್ರೊ. ನಾಯಕ್ ರವರು ಕೋರಿದ್ದಾರೆ. ಸಂಗೀತ ಭಾರತಿ ಫೌಂಡೇಶನ್ ನ ಕಾರ್ಯದರ್ಶಿ ಡಾ. ಉಷಾಪ್ರಭಾ ಎನ್. ನಾಯಕ್, ಟ್ರಸ್ಟಿಗಳಾದ ಅಂಕುಶ್ ಎನ್. ನಾಯಕ್ ಮುರಳೀಧರ್ ಜಿ. ಶೆಣೈ, ಖಜಾಂಚಿ ಕರುಣಾಕರ ಬಳ್ಕೂರು ಉಪಸ್ಥಿತರಿದ್ದರು.

