ಕಾಸರಗೋಡು : ಡಾ. ವಾಮನ್ ರಾವ್ ಬೇಕಲ್ – ಸಂದ್ಯಾರಾಣಿ ಟೀಚರ್ ಸಾರತ್ಯದ ಕಾಸರಗೋಡು ನುಳ್ಳಿಪ್ಪಾಡಿಯ ಕನ್ನಡ ಭವನ ಮತ್ತು ಗ್ರಂಥಾಲಯದ ರಜತ ಸಂಭ್ರಮ ಸಮಾರೋಪದ ಪ್ರಯುಕ್ತ ದಿನಾಂಕ 26 ಜುಲೈ 2026 ಭಾನುವಾರದಂದು ಕನ್ನಡ ಭವನದ ‘ಡಾ. ಲಲಿತಾ ಎಸ್.ಎನ್. ಭಟ್’ ವೇದಿಕೆಯಲ್ಲಿ ನಡೆಯಲಿರುವ ‘ಕರ್ನಾಟಕ -ಗಡಿನಾಡು ಕನ್ನಡ ಸಮ್ಮೇಳನ 2026’ದ ಸರ್ವಾಧ್ಯಕ್ಷರಾಗಿ, ಮಾಜಿ ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರೂ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರೂ, ಮುಂಬರುವ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಸೇವಾಕಾಂಕ್ಷಿ ಹಾಗೂ ಕನ್ನಡ ಭವನದ ನಿಕಟ ಅಭಿಮಾನಿಯೂ ಆಗಿರುವ ಡಾ. ಸಿ. ಸೋಮಶೇಖರ್ ಐ.ಎ.ಎಸ್. ಇವರು ಆಯ್ಕೆಯಾಗಿದ್ದಾರೆ.
ಇವರ ಮುತುವರ್ಜಿಯಲ್ಲಿ ಕರ್ನಾಟಕ ವ್ಯಾಪ್ತಿಯ ಹಲವು ಕಲಾ ತಂಡಗಳು ಹಾಗೂ ಹಲವು ಕನ್ನಡ ಮುಖಂಡರು ಗಡಿನಾಡು ಕಾಸರಗೋಡಿಗೆ ಆಗಮಿಸಲಿದ್ದಾರೆ. ಈ ಸಮ್ಮೇಳನದಲ್ಲಿ ಸುಮಾರು 50 ವಿವಿಧ ಸಂಘಟನೆಗಳ ರೂವಾರಿಗಳಿಗೆ ಹಾಗೂ ಸುಮಾರು 50 ಮಂದಿ ಕನ್ನಡ ಸಾಹಿತಿ, ಕವಿ, ವಿದ್ವಾಂಸರುಗಳಿಗೆ ಪ್ರಶಸ್ತಿ ನೀಡುವ ಮೂಲಕ ಕಾಸರಗೋಡು-ಕರ್ನಾಟಕ ಸಮ್ಮಿಲನ ಆಗಲಿರುವುದು. ಈ ಸಮ್ಮೇಳನದಲ್ಲಿ ಕರ್ನಾಟಕದ ವಿವಿಧ ಸಾಂಸ್ಕೃತಿಕ ಕಲಾ ಸಂಪತ್ತಿನ ಪ್ರದರ್ಶನ, ಸರ್ವಾಧ್ಯಕ್ಷರಿಗೆ ಕನ್ನಡ ಮೆರವಣಿಗೆ, ಕನ್ನಡ ಸಾಹಿತ್ಯ ಪರಿಷತ್ ಸಂಸ್ಥಾಪಕ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ, ಗಡಿನಾಡು ಕನ್ನಡ ಜನತೆಯ ಪರವಾಗಿ ಕನ್ನಡ ಭವನ ನೀಡಿ ಗೌರವಿಸಲಿದೆ. ಈ ಸಮ್ಮೇಳನದಲ್ಲಿ ಶ್ರೀಮದ್ ಎಡನೀರು ಮಠ ಅದೀಶರಾದ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಶ್ರೀ ಸ್ವಾಮೀಜಿಗಳವರ ದಿವ್ಯಉಪಸ್ಥಿತಿ ಹಾಗೂ ಆಶೀರ್ವಚನ ಇರುವುದಾಗಿ ಸಮ್ಮೇಳನ ಸಮಿತಿ ಅಧ್ಯಕ್ಷರಾದ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ ಹಾಗೂ ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ತಿಳಿಸಿದ್ದಾರೆ.
