ಮುಂಬಯಿ : ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಆಯೋಜನೆಯಲ್ಲಿ ಕವಿ ಡಾ. ಮರಿಯಪ್ಪ ನಾಟೇಕರ್ ಇವರ ‘ಕಾಗೆ ಬಣ್ಣದ ಕವಿತೆ’ ಕವನ ಸಂಕಲನವು ದಿನಾಂಕ 13 ಫೆಬ್ರವರಿ 2026ರ ಶುಕ್ರವಾರದಂದು ಲೋಕಾರ್ಪಣೆಗೊಳ್ಳಲಿದೆ. ಈ ಕೃತಿಯನ್ನು ಅಭಿಜಿತ್ ಪ್ರಕಾಶನ ಪ್ರಕಟಿಸಿದೆ.
ಈ ಕಾರ್ಯಕ್ರಮವು ಸಾಂತಾಕ್ರೂಜ್ (ಪೂ) ವಿದ್ಯಾನಗರಿ ಕಲೀನಾದ ಇಂಗ್ಲೀಷ್ ವಿಭಾಗದ ನೆಲಮಹಡಿಯಲ್ಲಿ ಮಧ್ಯಾಹ್ನ 2-00 ಗಂಟೆಗೆ ನಡೆಯಲಿದ್ದು, ಸಂಘಟಕರು ಉದ್ಯಮಿಗಳು ಆಗಿರುವ ಶ್ರೀ ಪೇಟೆಮನೆ ಪ್ರಕಾಶ ಶೆಟ್ಟಿ ಇವರು ಈ ಕೃತಿಯನ್ನು ಬಿಡುಗಡೆ ಮಾಡುವರು. ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥರು ಹಾಗೂ ಹಿರಿಯ ಪ್ರಾಧ್ಯಾಪಕರು ಆದ ಪ್ರೊ. ಜಿ.ಎನ್. ಉಪಾಧ್ಯ ಇವರು ಅಧ್ಯಕ್ಷತೆ ವಹಿಸುವರು. ಕೃತಿಯ ಪರಿಚಯವನ್ನು ವಿಭಾಗದ ಸಂಶೋಧನ ವಿದ್ಯಾರ್ಥಿ ಲೇಖಕಿ ಕಲಾ ಭಾಗ್ವತ್ ಅವರು ಮಾಡುವರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಪೂರ್ಣಿಮಾ ಸುಧಾಕರ್ ಶೆಟ್ಟಿ ಇವರು ಕಾರ್ಯಕ್ರಮವನ್ನು ಸಂಯೋಜಿಸಿ ನಿರೂಪಿಸಲಿದ್ದಾರೆ.
ಡಾ. ಮರಿಯಪ್ಪ ನಾಟೇಕರ್ : ಇವರು ಮೂಲತಃ ಯಾದಗಿರಿ ಜಿಲ್ಲೆಯ ವಡಗೇರಾದವರು.ಇವರು ಮುಂಬಯಿ ವಿವಿಯ ಕನ್ನಡ ವಿಭಾಗದ ಹಿರಿಯ ವಿದ್ಯಾರ್ಥಿ. ಎಂ ಎ. ಎಂ ಫಿಲ್.ಪಿಎಚ್. ಡಿ.ಪದವಿಗಳನ್ನು ಮುಂಬಯಿ ವಿವಿಯಿಂದ ಪಡೆದಿದ್ದಾರೆ.ಸಾಹಿತ್ಯದ ವಿದ್ಯಾರ್ಥಿ ಆದ ಇವರು ವಿದ್ಯಾರ್ಥಿದೆಸೆಯಲ್ಲೇ ‘ಇತಿಹಾಸ ಮರೆತವರು’ ‘ಬದುಕು ಕರಗುವ ಮುನ್ನ..’ ‘ಅಂಬಲಿ’ ‘ಸುಗತ ಸಂವಾದ’ ಕೃತಿಗಳನ್ನು ಪ್ರಕಟಿಸಿದ್ದಾರೆ.ಪ್ರಸ್ತುತ “ಕಾಗೆ ಬಣ್ಣದ ಕವಿತೆ” ಬಿಡುಗಡೆಗೊಳ್ಳುತ್ತಿದೆ. ಇವರ ಎಲ್ಲಾ ಕೃತಿಗಳನ್ನು ಮುಂಬಯಿಯ “ಅಭಿಜಿತ್ ಪ್ರಕಾಶನ” ಪ್ರಕಟಿಸಿರುವುದು ಗಮನಾರ್ಹ ಸಂಗತಿ.ಮರಿಯಪ್ಪ ನಾಟೇಕರ್ ಅವರು ಮುಂಬಯಿಯಲ್ಲಿ ಒಂದು ದಶಕದ ಕಾಲ ಸಾಂಸ್ಕೃತಿಕ ವಲಯದಲ್ಲಿ ಗುರುತಿಸಿಕೊಂಡು ಭರವಸೆಯ ಕವಿ ಎಂದೇ ಮುಂಬಯಿ ಕನ್ನಡಿಗರಿಗೆ ಚಿರಪರಿಚಿತರಾದವರು.ಹಲವು ಸಂಘ ಸಂಸ್ಥೆಗಳಲ್ಲಿ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದ ಅನುಭವವೂ ಇವರಿಗಿದೆ.ಹಲವು ನಾಟಕಗಳಲ್ಲಿ ನಟಿಸಿ ರಂಗಭೂಮಿಯಲ್ಲೂ ಸೈ ಎನಿಸಿಕೊಂಡವರು.ಪ್ರಸ್ತುತ ಕರ್ನಾಟಕದ ಯಾದಗಿರಿ ಜಿಲ್ಲೆಯ ಗುರುಮಠಕಲ್ ನ ಸರಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
