Subscribe to Updates

    Get the latest creative news from FooBar about art, design and business.

    What's Hot

    ಕನಕ ಕಾವ್ಯ ಗಮಕ ಸ್ಪರ್ಧೆಗೆ ಅರ್ಜಿ ಆಹ್ವಾನ

    July 10, 2026

    ಬೋಂದೆಲ್ ಕಲಾಗ್ರಾಮದಲ್ಲಿ ‘ಮಾರಿಕಾಡು’ ನಾಟಕ ಪ್ರದರ್ಶನ | ಜುಲೈ 13

    July 10, 2026

    ಮಹಮ್ಮಾಯಿ ಯಕ್ಷಗಾನ ಮೇಳದ ಕಲಾವಿದರಿಗೆ ‘ಕೆ.ವಿ. ಪೈ ಪ್ರಶಸ್ತಿ’ ಪ್ರದಾನ

    July 10, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಪುಸ್ತಕ ವಿಮರ್ಶೆ | ‘ಬರಹ-ಬಿಂಬ’ ಸಾಹಿತ್ಯ ಸಿನಿಮಾ ಸಂಬಂಧ ಅನುಬಂಧ
    Article

    ಪುಸ್ತಕ ವಿಮರ್ಶೆ | ‘ಬರಹ-ಬಿಂಬ’ ಸಾಹಿತ್ಯ ಸಿನಿಮಾ ಸಂಬಂಧ ಅನುಬಂಧ

    June 24, 2026No Comments4 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಸಾಹಿತ್ಯ ಮತ್ತು ಚಲನಚಿತ್ರಗಳ ಸಂಬಂಧಗಳ ನಡುವೆ ಯಾವ ಬಗೆಯ ಸಾದೃಶ್ಯ ವೈದೃಶ್ಯಗಳಿವೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಈ ಕೃತಿ ನಮ್ಮ ನೆರವಿಗೆ ಬರುತ್ತದೆ. ‘ಬರಹ-ಬಿಂಬ’ ಒಂದು ವಿಶಿಷ್ಟ ಕೃತಿ. ಸಾಹಿತ್ಯ ಮತ್ತು ಸೆಲ್ಯುಲಾಯ್ಡ್ ಇವುಗಳ ನಡುವಿನ ಅವಿನಾಭಾವ ಸಂಬಂಧವನ್ನು ಇಲ್ಲಿ ವಿಭಿನ್ನ ನೆಲೆಗಳಲ್ಲಿ ವಿಶ್ಲೇಷಣೆಗೊಳಪಡಿಸಲಾಗಿದೆ. ಇದನ್ನು ಉಮಾ ವೆಂಕಟೇಶ್ ಮತ್ತು ಜ್ಯೋತಿ ವೆಂಕಟಸುಬ್ರಹ್ಮಣ್ಯ ಇವರು ಬಹಳ ಕಾಳಜಿಯಿಂದ ಸಂಪಾದಿಸಿಕೊಟ್ಟಿದ್ದಾರೆ. ಈ ಎಲ್ಲ ಲೇಖನಗಳನ್ನು ಬರೆದವರು ಅಮೇರಿಕದ ಪ್ರತಿಭಾವಂತ ಕನ್ನಡಿಗರು ಎಂಬುದು ಗಮನೀಯ ಸಂಗತಿ. ಸಾಹಿತ್ಯ ಭಾಷೆಯ ಮೂಲಕ ಅರಳುವ ಕಲೆಯಾದರೆ ಸಿನಿಮಾ ಎಂಬುದು ನಿರ್ದೇಶಕನ ಕಲಾಸೃಷ್ಟಿ, ಅದು ಒಂದು ರೀತಿಯಲ್ಲಿ ನೆರಳಿನ ಆಟ. ರೂಪ, ಚಲನೆ ಹಾಗೂ ಧ್ವನಿ ಇಲ್ಲಿಯ ಮುಖ್ಯಬಂಡವಾಳ. ಸಿನಿಮಾ ಹಾಗೂ ಸಾಹಿತ್ಯ ಇವುಗಳ ಅನುಸಂಧಾನವನ್ನು ಹೂರಣವಾಗಿಟ್ಟುಕೊಂಡಿರುವ ಈ ಕೃತಿ ಅಮೇರಿಕಾದ ಹನ್ನೆರಡನೆಯ ವಸಂತ ಸಾಹಿತ್ಯೋತ್ಸವದ ಅಂಗವಾಗಿ ಬೆಳಕು ಕಂಡಿರುವುದು ವಿಶೇಷ. ಇಂಥ ಒಂದು ಉತ್ತಮ ಉಪಯುಕ್ತ ಆಕರ ಗ್ರಂಥವನ್ನು ಅಮೇರಿಕದ ‘ಕನ್ನಡ ಸಾಹಿತ್ಯ ರಂಗ’ ಹೊರತಂದಿರುವುದು ಔಚಿತ್ಯಪೂರ್ಣ ಉಪಕ್ರಮ. ಹೆಸರಾಂತ ಪ್ರಕಾಶಕ, ಚಿಂತಕ ಅಭಿನವದ ರವಿಕುಮಾರ್ ಅವರು ಈ ಕೃತಿಯ ಸಂಯೋಜನೆಯಲ್ಲಿ ಕೆಲಸ ಮಾಡಿರುವುದು ಮೆಚ್ಚತಕ್ಕ ಸಂಗತಿ.

    ಸಾಂಪ್ರತ ಕೃತಿಯ ಮೂಲವಸ್ತು ಸಾಹಿತ್ಯ ಮತ್ತು ಚಲನಚಿತ್ರಕ್ಕೆ ಸಂಬಂಧಪಟ್ಟದ್ದು. ಸೃಜನಶೀಲ ಮನಸ್ಸು ಬರೆಹಕ್ಕಿಳಿಸಿದ ಕಥೆಯೊಂದನ್ನು ಚಿತ್ರಕಥೆಯಾಗಿ ಮಾರ್ಪಡಿಸುವ ನೈಪುಣ್ಯ ಒಂದು ರೀತಿಯದಾದರೆ ಆ ಚಿತ್ರಕಥೆಯನ್ನು ತೆರೆಯ ಮೇಗಣ ಊಹಾಪ್ರಪಂಚಕ್ಕೆ ಮಾರ್ಪಡಿಸುವ ತಾಂತ್ರಿಕತೆ ಮತ್ತೊಂದು ರೀತಿಯದು. ಹೀಗೆ ಅಕ್ಷರದಿಂದ ಪ್ರಾರಂಭವಾಗಿ ತೆರೆಯ ಮೇಲೆ ಪ್ರದರ್ಶನ ಕಾಣುವ ಕಲಾಕೃತಿಯೇ ಚಲನಚಿತ್ರ. ಹೀಗಾಗಿ ಸಾಹಿತ್ಯ ಮತ್ತು ಚಲನಚಿತ್ರಗಳ ನಡುವೆ ಅವಿನಾಭಾವ ಸಂಬಂಧ ಉಂಟಾಗಿದೆ ಎಂಬುದನ್ನು ಈ ಕೃತಿ ಅನ್ಯಾನ್ಯ ನೆಲೆಗಳಲ್ಲಿ ವಿವರಣಾತ್ಮಕವಾಗಿ ತೆರೆದುಕೊಂಡಿದೆ.

    ಈ ಅಭ್ಯಾಸಪೂರ್ಣ ಗ್ರಂಥದಲ್ಲಿ ಸಾಹಿತ್ಯ ಹಾಗೂ ಸಿನಿಮಾ ಕ್ಷೇತ್ರಗಳ ಅಂಟುನಂಟಿನ ಕಥೆಯನ್ನು ಹೇಳುವ ಸ್ವಾರಸ್ಯಪೂರ್ಣವಾದ ಚಿಂತನೀಯವಾದ ವಿಚಾರ ವಿಮರ್ಶೆಗಳಿಂದ ಕೂಡಿದ ವೈವಿಧ್ಯಮಯವಾದ 38 ಲೇಖನಗಳಿವೆ. ಇವುಗಳಲ್ಲಿ ಹೆಚ್ಚಿನವು ಕನ್ನಡ ಮತ್ತು ಭಾರತೀಯ ಸಿನಿಮಾಗಳ ರೂಪಾಂತರ, ಅವುಗಳಲ್ಲಿ ಸಾಹಿತ್ಯದ ಮುಖ್ಯಪಾತ್ರಗಳನ್ನು ವಿಶ್ಲೇಷಿಸಿ ಬರೆದ ಲೇಖಗಳು. ಇದರ ಜೊತೆಗೆ, ಪ್ರಪಂಚದ ಮೇರು ಸಾಹಿತ್ಯ ಕೃತಿಗಳನ್ನು ಆಧಾರಿತವಾಗಿಟ್ಟು ತಯಾರಾದ ಅತ್ಯುತ್ತಮ ಚಲನಚಿತ್ರಗಳ ವಿಶ್ಲೇಷಣೆ, ರಂಗಭೂಮಿಯಿಂದ ರೂಪಾಂತರಗೊಂಡ ಕೃತಿಗಳು, ಚಿತ್ರಕಥಾ ವಸ್ತು, ಸಂಭಾಷಣೆ, ಸಂಗೀತ, ಚಲನಚಿತ್ರಗೀತೆಗಳು, ಅಲ್ಲಿ ಬಳಕೆಯಾದ ಭಾಷೆ, ಅಲ್ಲದೆ ಇತ್ತೀಚಿಗೆ ಈ ಬೃಹತ್ ಉದ್ಯಮವನ್ನು ಪ್ರವೇಶಿಸಿದ ಕೃತಕಬುದ್ಧಿಮತ್ತೆ, ಸಾಹಿತ್ಯ ಮತ್ತು ಚಲನಚಿತ್ರ ಕಲಾಪ್ರಕಾರಗಳು ನಡೆದು ಬಂದ ಹಾದಿ, ಜಗದಗಲದ ಸಿನಿಮಾ ಜಗತ್ತಿನ ಹಲವಾರು ಚಾರಿತ್ರಿಕ ಮೈಲಿಗಲ್ಲುಗಳು, ಉನ್ನತ ಮಟ್ಟದ ಕಥಾವಸ್ತುಗಳ ವಿಶ್ಲೇಷಣೆ, ತಾವು ಮೆಚ್ಚಿದ ಚಲನಚಿತ್ರಗಳ ಬಗೆಗೆ ಲೇಖಕರ ಹೃದಯಾಳದಿಂದ ಬಂದ ಭಾವನೆಗಳು, ಭಾರತೀಯ ಚಲನಚಿತ್ರಗಳಲ್ಲಿ ಸಂಗೀತ ಮತ್ತು ಚಿತ್ರಗೀತೆಗಳ ಮುಖ್ಯಪಾತ್ರ ಹೀಗೆ ಹತ್ತು ಹಲವು ಪ್ರಕಾರದ ವಿಷಯಗಳ ಕುರಿತು ಪರಾಮರ್ಶಿಸಿ ಬರೆದ ವಿಚಾರಪೂರ್ಣ ಲೇಖನಗಳು ನಮ್ಮ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ.

    “ಸಾಹಿತ್ಯ ಮತ್ತು ಚಲನಚಿತ್ರಗಳೆರಡೂ ನಮ್ಮ ಬದುಕಿನ ಗುಣಮಟ್ಟವನ್ನು ಹೆಚ್ಚಿಸಿವೆ ಎಂದರೆ ಅತಿಶಯೋಕ್ತಿ ಆಗಲಾರದು. ನಮ್ಮ ಬಿಡುವಿನ ವೇಳೆಯಲ್ಲಿ ನಮಗೆ ಮನರಂಜನೆಯನ್ನು ಕೊಡುವುದರ ಜೊತೆಗೆ ಇವುಗಳು ಜಗತ್ತಿನ ಇತರ ಸಂಸ್ಕೃತಿಗಳ ವೈವಿಧ್ಯತೆಗಳನ್ನು, ವಿಶೇಷತೆಗಳನ್ನು ತೋರಿಸಿಕೊಡುವಲ್ಲಿ ಅತ್ಯಂತ ಯಶಸ್ವಿಯಾಗಿವೆ. ವಿಶ್ವದ ವಿವಿಧ ಭೌಗೋಳಿಕ, ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರ್ಥಿಕ ಸ್ಥಿತಿಗತಿಗಳ ಪರಿಚಯ ಮತ್ತು ತಿಳಿವಳಿಕೆಯನ್ನು ಕೊಡುವುದರಲ್ಲಿ ಸಫಲವಾಗಿವೆ. ಕೇವಲ ಒಂದು ಶತಮಾನದ ಇತಿಹಾಸವಿರುವ ಚಲನಚಿತ್ರಗಳು ನಮ್ಮ ಬದುಕಿನ ಭಾಗವಾಗಿ ಹೋಗಿದೆ. ಚಲನಚಿತ್ರ ಸಾಹಿತ್ಯವು ಪುಸ್ತಕ ಸಾಹಿತ್ಯಕ್ಕಿಂತ ಹೆಚ್ಚು ಬೆಳೆಯುವ ಮತ್ತು ಇನ್ನೂ ಹೆಚ್ಚಿನ ಜನರನ್ನು ತಲುಪುವ ಶಕ್ತಿ ಇದೆ. ತಾಂತ್ರಿಕ ಜ್ಞಾನವೇ ಪ್ರಧಾನವಾಗುತ್ತಿರುವಾಗ ಈ ಕಲೆ ಇನ್ನೂ ಎಲ್ಲೆಲ್ಲಿಗೆ ಹೋಗುವುದೋ ಎನ್ನುವುದು ನಮ್ಮ ಊಹೆಗೂ ನಿಲುಕಲಾರದು” ಎಂಬ ಮಾತು ನಿಜವೇ ಆಗಿದೆ.

    ವಿಶ್ವ ಸಿನಿಮಾರಂಗದ ವರ್ತಮಾನದ ವಿದ್ಯಮಾನಗಳ ವಿವೇಚನೆಯೂ ಇಲ್ಲಿ ದಾಖಲಾಗಿದೆ. “ನಿಸ್ಸಂಶಯವಾಗಿ ಚಲನಚಿತ್ರವು ಸಂಸ್ಕೃತಿವಾಹಕ. ಇಂದಿನ ಪರಿಸ್ಥಿತಿಯಲ್ಲಿ ಅದನ್ನು ಪ್ರಭಾವಶಾಲಿ ಮಾರುಕಟ್ಟೆಯ ಕಪಿಮುಷ್ಠಿಯಿಂದ ಬಿಡಿಸಿ ಸರಳಗೊಳಿಸುವುದು ಕಷ್ಟಸಾಧ್ಯ. ಅದ್ದರಿಂದ ಮಾಧ್ಯಮವೊಂದು ಹಣವಂತರ ಕೈಸೇರಿ ಲಾಭ ಗಳಿಸುವ ಉದ್ಯಮವಾಗಿ ಬೆಳೆದಿದೆ. ವಿದೇಶಗಳಲ್ಲಿ ಶಿಕ್ಷಣ ಕ್ಷೇತ್ರದ ಭಾಗವಾಗಿಯೂ ಸಿನೆಮಾ ಕೆಲಸ ಮಾಡುತ್ತಿದೆ. ನಮ್ಮಲ್ಲಿ ಈ ಕೆಲಸ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ನಮ್ಮ ಶಿಕ್ಷಣ ವ್ಯವಸ್ಥೆ, ದೃಶ್ಯಮಾಧ್ಯಮವನ್ನು ಸಮರ್ಪಕವಾಗಿ ಬಳಸಿಕೊಂಡಿಲ್ಲ. ಸರ್ಕಾರಿ ಅಂಗಸಂಸ್ಥೆಯಾದ ದೂರದರ್ಶನದಲ್ಲಿ ದೃಶ್ಯ ಮಾಧ್ಯಮವನ್ನು ನಾವಿನ್ನೂ ಪರಿಣಾಮಕಾರಿಯಾಗಿ ಬಳಸಿಕೊಂಡಿಲ್ಲ. ಕೆಲವು ಪ್ರಯತ್ನಗಳಾಗಿವೆ. ಆದರೆ ಪ್ರಾಥಮಿಕ ಹಂತದಿಂದ ವಿಶ್ವವಿದ್ಯಾನಿಲಯಗಳವರೆಗೆ ಸಿನೆಮಾ ಅತ್ಯಂತ ಪ್ರಭಾವಶಾಲೀ ಮಾಧ್ಯಮ ಎಂಬ ಮಾತು ಈಗ ಮುಂಚಿಗಿಂತ ಬುದ್ದಿಮತ್ತೆ ತಂತ್ರಜ್ಞಾನವು ಸಿನೆಮಾ ನಿರ್ಮಾಣದಲ್ಲಿ ಇದೀಗ ಪ್ರವೇಶಿಸಿರುವುದರಿಂದ ಮಹತ್ವದ್ದಾಗಿದೆ. ಮನರಂಜನೆಯ ಹೆಸರಿನಲ್ಲಿ ಸುಡುವ ಬೆಂಕಿಯಂತೆ ಬಳಸಿಕೊಳ್ಳುತ್ತಿರುವ ಚಲನಚಿತ್ರ ಉದ್ಯಮವನ್ನು, ಒಂದು ಮಾಧ್ಯಮವಾಗಿ ಬೆಳಗುವ ಹಣತೆಯಂತೆ ಬಳಸಿಕೊಳ್ಳುವ ಹೊಣೆಗಾರಿಕೆ ಸಮಾಜ ಮತ್ತು ಸರ್ಕಾರದ ಮೇಲಿದೆ” ಎಂಬ ನಾಗತಿಹಳ್ಳಿ ಅವರ ಮಾತು ಅವಲೋಕನೀಯವಾಗಿದೆ.

    ಸಾಹಿತ್ಯ ಮತ್ತು ಚಲನಚಿತ್ರಗಳ ಸಂಬಂಧಗಳ ನಡುವೆ ಯಾವ ಬಗೆಯ ಸಾದೃಶ್ಯ ವೈದೃಶ್ಯಗಳಿವೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಈ ಕೃತಿ ನಮ್ಮ ನೆರವಿಗೆ ಬರುತ್ತದೆ “ಸಾಹಿತ್ಯದಲ್ಲಿ ವ್ಯಕ್ತವು ಅವ್ಯಕ್ತವನ್ನು ಉದ್ದೀಪಿಸುತ್ತದೆ. ಸಂಗೀತದಲ್ಲಿ ಶ್ರಾವ್ಯವು, ಅಶ್ರಾವ್ಯವನ್ನು ಉದ್ದೀಪಿಸುತ್ತದೆ. ದೃಶ್ಯಕಲೆಯಲ್ಲಿ ದೃಷ್ಟವು ಅದೃಷ್ಟವನ್ನು ಉದ್ದೀಪಿಸುತ್ತದೆ. ಸಿನೆಮಾ ಈ ಮೂರರ ಕ್ರಿಯಾಶೀಲ ಲಗ್ನದಿಂದ ಮೂಡುವಂಥದ್ದು. ಹೀಗಾಗಿ ಅದು ಕೊಡುವ ದೃಶ್ಯಾನುಭೂತಿಯೇ ವಿಶಿಷ್ಟ !” ಎಂಬ ಜಯಂತ್ ಕಾಯ್ಕಿಣಿ ಅವರ ಮಾತು ಗಮನಾರ್ಹವಾಗಿದೆ. ವಿಶ್ವ ಸಿನಿಮಾಯಾನವನ್ನು ಸಾಂದ್ರವಾಗಿ ಹಿಡಿದಿಟ್ಟಿರುವ ಈ ಒಂದು ವಿಶಿಷ್ಟ ಕೃತಿಗಾಗಿ ಅಮೇರಿಕದ ‘ಕನ್ನಡ ಸಾಹಿತ್ಯ ರಂಗ’ದ ಎಲ್ಲ ಮಿತ್ರರಿಗೆ ಹಾರ್ದಿಕ ಅಭಿನಂದನೆಗಳು.

    ‘ಬರಹ-ಬಿಂಬ’
    (ಸಂ) ಉಮಾ ವೆಂಕಟೇಶ್ ಮತ್ತು ಜ್ಯೋತಿ ವೆಂಕಟಸುಬ್ರಹ್ಮಣ್ಯ,
    ಕನ್ನಡ ಸಾಹಿತ್ಯ ರಂಗ, ಯು.ಎಸ್.ಎ.
    ಬೆಲೆ ರೂ.400/-

    ಪ್ರೊ. ಜಿ.ಎನ್. ಉಪಾಧ್ಯ ಮುಂಬೈ

    ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಹಿರಿಯ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವ ಪ್ರೊ. ಜಿ.ಎನ್. ಉಪಾಧ್ಯ ಅವರು ಮುಂಬೈ ಮಹಾನಗರದಲ್ಲಿ ಕನ್ನಡದ ಪ್ರಸಾರ ಮತ್ತು ಪ್ರಚಾರದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಸಂಶೋಧನೆ, ವಿಮರ್ಶೆ, ಪತ್ರಿಕೋದ್ಯಮ, ಭಾಷಾವಿಜ್ಞಾನ ಅವರ ಆಸಕ್ತಿಯ ಕ್ಷೇತ್ರಗಳು. ವೈವಿಧ್ಯಮಯವಾದ 100ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಅವರು ತಮ್ಮದೇ ಆದ ‘ಅಭಿಜಿತ್’ ಪ್ರಕಾಶನವನ್ನು ಮುಂಬೈಯಲ್ಲಿ ಆರಂಭಿಸಿ 130ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿ ಸಾಹಿತ್ಯ ವಲಯವಾಗಿ ಮುಂಬೈ ಇಂದಿಗೂ ಬೆಳಗುವಂತೆ ಮಾಡಿದ್ದಾರೆ. ‘ಮಹಾರಾಷ್ಟ್ರದ ಕನ್ನಡ ಶಾಸನಗಳು’, ‘ಗೋದಾವರಿ ತೀರದಲ್ಲಿ ಕನ್ನಡದ ಕುರುಹು’, ‘ಮಹಾರಾಷ್ಟ್ರದ ಕನ್ನಡ ಸ್ಥಳನಾಮಗಳು’, ‘ಸಿದ್ಧರಾಮನ ಸೊನ್ನಲಿಗೆ’, ‘ಮುಂಬೈ ಕನ್ನಡ ಪರಿಸರ’, ‘ಮುಂಬೈ ಕನ್ನಡ ಸಾಹಿತ್ಯ ಚರಿತ್ರೆ’ ಮೊದಲಾದ ಕೃತಿಗಳು ವಿದ್ವತ್ ವಲಯದಲ್ಲಿ ಸಾಕಷ್ಟು ಜನಪ್ರಿಯವಾಗಿವೆ. ಅವರ ಮಾರ್ಗದರ್ಶನದಲ್ಲಿ ಈವರೆಗೆ 74 ಮಂದಿ ಎಂ.ಫಿಲ್ ಹಾಗೂ ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ. ಗುರುನಾರಾಯಣ ಸಾಹಿತ್ಯ ಪ್ರಶಸ್ತಿ, ನರಹಳ್ಳಿ ಪ್ರಶಸ್ತಿ, ಕರ್ನಾಟಕ ಶ್ರೀ ಪುರಸ್ಕಾರ ಮೊದಲಾದ ಗೌರವಕ್ಕೂ ಡಾ. ಉಪಾಧ್ಯ ಇವರು ಪಾತ್ರರಾಗಿದ್ದು, ಮುಂಬೈ ವಿವಿಯಲ್ಲಿ ಕನ್ನಡ ವಿಭಾಗಕ್ಕೆ ‘ಎ’ ಗ್ರೇಡ್ ತಂದುಕೊಡುವಲ್ಲಿ ಇವರು ಸಫಲರಾಗಿದ್ದಾರೆ.

    article baikady Literature review roovari
    Share. Facebook Twitter Pinterest LinkedIn Tumblr WhatsApp Email
    Previous Articleಕಯ್ಯಾರು ಶಾಲಾ ವಠಾರದಲ್ಲಿ ಅದ್ದೂರಿಯಾಗಿ ನಡೆದ ಕಿಞ್ಞಣ್ಣ ರೈ ಜನ್ಮ ದಿನಾಚರಣೆ
    Next Article ಕಥಾ ಸ್ಪರ್ಧೆಗೆ ಕಥೆಗಳಿಗೆ ಆಹ್ವಾನ | ಕೊನೆಯ ದಿನಾಂಕ ಆಗಸ್ಟ್ 15
    roovari

    Add Comment Cancel Reply


    Related Posts

    ಕನಕ ಕಾವ್ಯ ಗಮಕ ಸ್ಪರ್ಧೆಗೆ ಅರ್ಜಿ ಆಹ್ವಾನ

    July 10, 2026

    ಬೋಂದೆಲ್ ಕಲಾಗ್ರಾಮದಲ್ಲಿ ‘ಮಾರಿಕಾಡು’ ನಾಟಕ ಪ್ರದರ್ಶನ | ಜುಲೈ 13

    July 10, 2026

    ಮಹಮ್ಮಾಯಿ ಯಕ್ಷಗಾನ ಮೇಳದ ಕಲಾವಿದರಿಗೆ ‘ಕೆ.ವಿ. ಪೈ ಪ್ರಶಸ್ತಿ’ ಪ್ರದಾನ

    July 10, 2026

    ವಿಶೇಷ ಲೇಖನ | ಹವ್ಯಾಸಿ ರಂಗಭೂಮಿಯ ಅಪ್ರತಿಮ ಪ್ರತಿಭಾವಂತ ಕಲಾವಿದ ಆರ್.ಎಸ್. ರಾಜಾರಾಮ್

    July 10, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.