ಭಾರತೀಯ ಜ್ಞಾನ ಪರಂಪರೆ- ಇದು ಮುಂಬೈ ವಿಶ್ವವಿದ್ಯಾಲಯದ ವಿನೂತನ ಕನ್ನಡ ಕೃತಿ. ಈ ಮಹತ್ವದ ಆಕರ ಗ್ರಂಥವನ್ನು ಡಾ. ಮಾಧವ ರಾಜವಾಡೆ ಇವರು ಸಂಪಾದಿಸಿಕೊಟ್ಟಿದ್ದಾರೆ. ಇದರ ಕನ್ನಡ ಆವೃತ್ತಿಯನ್ನು ಡಾ. ಜಿ.ಎನ್. ಉಪಾಧ್ಯ ಇವರು ಸಂಕಲನಗೊಳಿಸಿಕೊಟ್ಟಿದ್ದಾರೆ. ಭಾರತದ ಭವ್ಯ ಪ್ರಾಚೀನ ಜ್ಞಾನ ಪರಂಪರೆಯ ದರ್ಶನ ಈ ಕೃತಿಯಲ್ಲಿ ಮಡುಗಟ್ಟಿದೆ.
ಭಾರತೀಯ ಜ್ಞಾನಪರಂಪರೆ ಎಂದರೆ ಪ್ರಾಚೀನ ಕಾಲದಿಂದ ಭಾರತದಲ್ಲಿ ಉನ್ನತ ಮಟ್ಟದ ಸೌಷ್ಠವವನ್ನು ಪಡೆದ ಎಲ್ಲ ವ್ಯವಸ್ಥಿತ ಜ್ಞಾನಶಾಖೆಗಳು. ಇವು ಮೂಲ ನಿವಾಸಿ ಸಮುದಾಯಗಳನ್ನು ಒಳಗೊಂಡಂತೆ ದೇಶದ ವಿವಿಧ ಸಮುದಾಯಗಳು ತಲೆಮಾರುಗಳಿಂದ ಅಭಿವೃದ್ಧಿಪಡಿಸಿ, ಸಂಸ್ಕರಿಸಿ, ಸಂರಕ್ಷಿಸಿಕೊಂಡು ಬಂದ ಆಚರಣೆಗಳು ಮತ್ತು ಪರಂಪರೆಗಳು. ಇವುಗಳ ಪಠ್ಯಕ್ರಮಕ್ಕಾಗಿ ಬಳಸುವ ವಿಷಯಗಳು ಮೂಲಗ್ರಂಥಗಳು, ಇತಿಹಾಸದ ದಾಖಲೆಗಳು, ಶಾಸನಗಳು, ವಸ್ತುನಿಷ್ಠ ಸಾಕ್ಷ್ಯಗಳು ಮತ್ತು ಪ್ರಸ್ತುತ ಆಚರಣೆಗಳ ಕುರಿತು ಕಟ್ಟುನಿಟ್ಟಾದ ಸಮಾಜಶಾಸ್ತ್ರೀಯ ದಾಖಲೆಗಳ, ಆಧಾರಗಳ ಮೇಲೆ ಈ ಕೃತಿ ರಚನೆಯಾಗಿರುವುದು ವಿಶೇಷ.
ವಿವಿಧತೆಯಲ್ಲಿ ಏಕತೆ ನಮ್ಮ ರಾಷ್ಟ್ರದ ವೈಶಿಷ್ಟ್ಯ. ನಮ್ಮ ಹಿರಿಯರು ಈ ವಿಶಾಲ ಭೂಖಂಡವನ್ನು ಭರತವರ್ಷ ಎಂದು ಕರೆದರು. ಪ್ರಾಚೀನ ಭಾರತವು ಜೀವನದ ಹಲವಾರು ಕ್ಷೇತ್ರಗಳಲ್ಲಿ ಮಹತ್ವದ ಸಾಧನೆಯನ್ನು ಮಾಡಿತ್ತು. ಪ್ರಾಚೀನ ಭಾರತದ ಸಾಂಸ್ಕೃತಿಕ ಇತಿಹಾಸವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯೂ ಅಹುದು. ಗತಕಾಲದ ಇತಿಹಾಸವನ್ನು ಅರಿತು ದೇಶದ ಪ್ರಗತಿಯ ವೇಗವನ್ನು ಹೆಚ್ಚಿಸಲು ಪ್ರಾಚೀನ ಭಾರತದ ಸಾಂಸ್ಕೃತಿಕ ಇತಿಹಾಸದ ಅಧ್ಯಯನವು ಪ್ರಸ್ತುತ ಮತ್ತು ಅತ್ಯಗತ್ಯ. ನಮ್ಮ ಪೂರ್ವಜರು ಯಾವ ರೀತಿಯಲ್ಲಿ ಸಂಸ್ಕೃತಿಯನ್ನು ರೂಪಿಸಿದರು, ವ್ಯವಸಾಯವನ್ನು ಅಭಿವೃದ್ಧಿ ಪಡಿಸಿದರು, ಸುತ್ತಲಿನ ಪರಿಸರ ಪ್ರಕೃತಿ ಸಂಪತ್ತನ್ನು ಬಳಸಿಕೊಂಡು ವಿವಿಧ ಕಸುಬುಗಳನ್ನು ಮಾಡಿ ಹೊಸ ನಾಗರಿಕತೆಯ ಕಡೆಗೆ ಮುಖ ಮಾಡಿದರು ಎಂಬುದನ್ನು ತಿಳಿದುಕೊಳ್ಳಲು ಜ್ಞಾನ ಪರಂಪರೆಯ ಇತಿಹಾಸದ ಅಧ್ಯಯನ ಅತಿ ಅಗತ್ಯ.
ಪ್ರಾಚೀನ ಕಾಲದಿಂದಲೂ ಭಾರತವು ಅನೇಕತೆಯಲ್ಲಿ ಏಕತೆಯನ್ನು ಕಾಪಾಡಿಕೊಂಡು ಬಂದಿತ್ತು ಎಂಬುದನ್ನು ನಾವು ಈ ಬಗೆಯ ಸಾಂಸ್ಕೃತಿಕ ಅಧ್ಯಯನದಿಂದ ತಿಳಿದುಕೊಳ್ಳಲು ಸಾಧ್ಯ. ಹೊಸ ತಲೆಮಾರಿನಲ್ಲಿ ರಾಷ್ಟ್ರದ ಕುರಿತು ಅಭಿಮಾನವನ್ನು ಮೂಡಿಸುವ ನಿಟ್ಟಿನಲ್ಲಿ ಈ ಕೃತಿ ಮಹತ್ತ್ವದ್ದಾಗಿದೆ. ದೇಶದ ಮೊದಲ ವಿಶ್ವವಿದ್ಯಾಲಯ ಎಂಬ ಕೀರ್ತಿಗೆ ಪಾತ್ರವಾಗಿರುವ ಮುಂಬೈ ವಿಶ್ವವಿದ್ಯಾಲಯವು ಪ್ರಕಟಿಸಿರುವ ಈ ಕೃತಿ ಭಾರತೀಯ ಜ್ಞಾನ ಪರಂಪರೆಯ ವಿರಾಟ್ ಸ್ವರೂಪವನ್ನು ಬಿಂಬಿಸುವ ಒಂದು ಘನ ಪ್ರಯತ್ನವೂ ಆಗಿದೆ. ಇದು ನಮ್ಮ ದೇಸೀ ಬೇರುಗಳ ಗುರುತಿಸುವಿಕೆಯ ಮಹತ್ತ್ವದ ಜರೂರಿನ ಉಪಕ್ರಮವೂ ಹೌದು. ಅನ್ಯಾನ್ಯ ಕಾರಣಗಳಿಂದ ನೆಮ್ಮೆಡೆಗೆ ದ್ರುತಗತಿಯಲ್ಲಿ ಧಾವಿಸಿ ಬರುತ್ತಿರುವ ಜಾಗತೀಕರಣಕ್ಕೆ ಮುಖಾಮುಖಿಯಾಗಿ ನಮ್ಮ ದೇಶೀಯ ಜ್ಞಾನ ಪರಂಪರೆಯನ್ನು ಮರುಶೋಧಿಸಿ ಆ ಮೂಲಕ ಕುಸಿಯುತ್ತಿರುವ ನಮ್ಮ ಬೇರುಗಳನ್ನು ಬಲಗೊಳಿಸಿಕೊಳ್ಳಬೇಕಾಗಿದೆ.
ಸ್ಥಳೀಯ ಆಯುರ್ವೇದ, ಭಾಷೆ, ಸಾಹಿತ್ಯ, ವ್ಯಾಕರಣ, ಛಂದಸ್ಸು, ಚರಿತ್ರೆ, ಕೃಷಿ, ವೈದ್ಯ, ಪರಿಸರ ಮುಂತಾದ ಅಧ್ಯಯನ ವಿಷಯಗಳನ್ನು ಹೊಸ ಆಲೋಚನೆಯ ನೆಲೆಯಲ್ಲಿ ವಿಶ್ಲೇಷಿಸಬೇಕಾಗಿದೆ ಎಂಬ ಆಶಯ ಈ ಕೃತಿಯ ವಿವಿಧ ಲೇಖನಗಳಲ್ಲಿ ಢಾಳಾಗಿ ಕಾಣಸಿಗುತ್ತದೆ. ಆಧುನಿಕ ವಿಜ್ಞಾನ, ತಂತ್ರಜ್ಞಾನವೇ ‘ಜ್ಞಾನ’; ಉಳಿದದ್ದೆಲ್ಲ ಸುಳ್ಳು ಎಂದು ರೂಪಿಸಿರುವ ಇಂದಿನ ಆಲೋಚನೆಗೆ ಪ್ರತಿಯಾಗಿ ಈ ಜ್ಞಾನ ಶಾಖೆಗಳಲ್ಲಿ ಹುದುಗಿರುವ ದೇಶಿ ಪರಂಪರೆಯ ಜ್ಞಾನದ ಹುಡುಕಾಟ ನಡೆಯಬೇಕಾದುದು ವರ್ತಮಾನದ ತುರ್ತು ಸಹ ಹೌದು. ಅಂತಹ ಪ್ರಯತ್ನಗಳಿಗೆ ಬೇಕಾದ ಮಾರ್ಗದರ್ಶಕ ಸೂತ್ರಗಳ ಹಾಗೂ ಆಕರ ಪರಿಕರಗಳ ನಿರ್ಮಾಣದ ನೆಲೆ ತುಂಬ ಮುಖ್ಯವಾಗಿದೆ. ಈ ಎಲ್ಲ ಆಶಯಗಳು ಈಡೇರಲು ಈ ಪಠ್ಯ ಕೈದೀವಿಗೆಯಂತಿದೆ.
ಜಗತ್ತಿನ ಪ್ರಾಚೀನ ರಾಷ್ಟ್ರಗಳಲ್ಲಿ ಭಾರತವೂ ಒಂದು. ನಮ್ಮದು ಬಹುಭಾಷೆ ಬಹುಸಂಸ್ಕೃತಿಗಳ ನಾಡು. ಬಹುತ್ವ ನಮ್ಮ ನಾಡಿನ ಜೀವಾಳ. ‘ಸರ್ವ ಭಾಷಾಮಯೀ ಶಾರದಾ’ ಎಂಬ ನಿಲುವು ನಮ್ಮ ಹಿರಿಯರಾದಾಗಿತ್ತು. ಭಾರತದ ಪ್ರಾಚೀನ ಭಾಷೆಗಳಾದ ಸಂಸ್ಕೃತ, ಪ್ರಾಕೃತ, ಪಾಲಿ ಮೊದಲಾದ ಭಾಷೆಗಳ ಕೃತಿಗಳಲ್ಲಿ ಸಮೃದ್ಧ ಜ್ಞಾನಧಾರೆ ಹರಿದು ಬಂದಿದೆ. ಜೊತೆಗೆ ಇತರ ಭಾಷೆಗಳಲ್ಲೂ ಪರಂಪರೆಯ ಜ್ಞಾನಕ್ಕೆ ಕೊರತೆ ಇಲ್ಲ. ಅವನ್ನೆಲ್ಲ ಸಂಕಲಿಸಿ ಈ ಕೃತಿಯಲ್ಲಿ ಕನ್ನಡ ಓದುಗರಿಗೆ ಕೊಡಲಾಗಿದೆ. ಪ್ರಾಚೀನ ಭಾರತದ ಅಭಿವೃದ್ಧಿಗೆ ಕರ್ನಾಟಕ ಕೊಟ್ಟ ಜ್ಞಾನ ಮೀಮಾಂಸೆಯ ಚಿಂತನೆ ಸಾಂಪ್ರತ ಗ್ರಂಥದಲ್ಲಿ ನೆಲೆ ಪಡೆದಿದೆ.
ಭಾರತೀಯ ಜ್ಞಾನ ಪರಂಪರೆ (ಐಕೆಎಸ್) ಎಂಬುದು ಬರೇ ಪುಸ್ತಕವಲ್ಲ. ಅದು ಭಾರತದ ಆಳವಾದ ಬೌದ್ಧಿಕ ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಪ್ರತಿನಿಧಿಸುತ್ತದೆ. ಡಿ.ವಿ.ಜಿ.ಯವರು ಹೇಳುವಂತೆ ಹಳೆ ಬೇರು ಹೊಸ ಚಿಗುರುಗಳ ಸಶಕ್ತ ಸಮನ್ವಯ ಅನುಸಂಧಾನ ಇಲ್ಲಿ ನಡೆದಿದೆ. ಇದೊಂದು ಆಂದೋಲನದ ಮಾದರಿಯಲ್ಲಿ ರಾಷ್ಟ್ರೀಯ ಶಿಕ್ಷಣ ಯೋಜನೆ -2020ರ ಮೂಲಕ ನಾಳಿನ ಹೊಸ ತಲೆಮಾರಿಗೆ ಪರಿಚಯಿಸುವ ಭಗೀರಥ ಪ್ರಯತ್ನವೂ ಇಲ್ಲಿ ನಡೆದಿದೆ.
ಶಿಕ್ಷಣದ ಎಲ್ಲ ಹಂತಗಳಲ್ಲಿ ಭಾರತೀಯ ಜ್ಞಾನಪರಂಪರೆಯನ್ನು ಅಳವಡಿಸುವಂತೆ 2020ರ ರಾಷ್ಟ್ರೀಯ ಶಿಕ್ಷಣ ನೀತಿಯು ಶಿಫಾರಸು ಮಾಡುತ್ತದೆ. ಪ್ರಾಚೀನ ಮತ್ತು ನಿರಂತರವಾದ ಭಾರತೀಯ ಜ್ಞಾನಪರಂಪರೆಯು ಈ ಶಿಕ್ಷಣ ನೀತಿಗೆ ದಾರಿದೀಪವಾಗಿದೆ. ಭಾರತೀಯ ಚಿಂತನೆಯು ಜ್ಞಾನ, ಪ್ರಜ್ಞೆ, ಸತ್ಯ ಇವುಗಳ ಅನ್ವೇಷಣೆಯನ್ನು ಮಾನವನ ಉನ್ನತ ಗುರಿಯೆಂದು ಪರಿಗಣಿಸಿದೆ. ಚರಕ, ಸುಶ್ರುತ, ಆರ್ಯಭಟ, ವರಾಹಮಿಹಿರ, ಭಾಸ್ಕರಾಚಾರ್ಯ, ಬ್ರಹ್ಮಗುಪ್ತ, ಚಾಣಕ್ಯ, ಚಕ್ರಪಾಣಿದತ್ತ, ಮಾಧವ, ಪಾಣಿನಿ, ಪತಂಜಲಿ, ನಾಗಾರ್ಜುನ, ಗೌತಮ, ಪಿಂಗಲ, ಶಂಕರದೇವ, ಮೈತ್ರೇಯಿ, ಗಾರ್ಗಿ, ತಿರುವಳ್ಳುವರ್, ಆಚಾರತ್ರಯರು ಮೊದಲಾಗಿ ಅನೇಕ ಪಂಡಿತರು ಗಣಿತ, ಖಗೋಳಶಾಸ್ತ್ರ, ಲೋಹಶಾಸ್ತ್ರ, ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸೆ, ಇಂಜಿನಿಯರಿಂಗ್, ವಾಸ್ತುಶಿಲ್ಪ, ನೌಕಾನಿರ್ಮಾಣ ಮತ್ತು ನೌಕಾಯಾನ, ಯೋಗ, ಸೌಂದರ್ಯಕಲೆ, ತತ್ತ್ವಶಾಸ್ತ್ರ, ಚದುರಂಗ ಮುಂತಾದ ಕ್ಷೇತ್ರಗಳಲ್ಲಿ ಜಗತ್ತಿಗೆ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ. ಭಾರತೀಯ ಸಂಸ್ಕೃತಿ ಮತ್ತು ತತ್ತ್ವಶಾಸ್ತ್ರವು ಜಗತ್ತಿನ ಮೇಲೆ ಆಳವಾದ ಪ್ರಭಾವವನ್ನು ಬೀರಿದೆ. ಈ ಶ್ರೀಮಂತ ಪರಂಪರೆಯನ್ನು ಮುಂದಿನ ತಲೆಮಾರುಗಳಿಗಾಗಿ ಸಂರಕ್ಷಿಸಿ, ಸಂಶೋಧಿಸಿ, ವೃದ್ಧಿಸಿ ಶಿಕ್ಷಣದ ಮೂಲಕ ಹೊಸ ಬಳಕೆಗೆ ತರಬೇಕೆಂದು ಶಿಕ್ಷಣ ಯೋಜನೆಯು ಒತ್ತಿ ಹೇಳುತ್ತದೆ. ಅದಕ್ಕೆ ಬೇಕಾದ ಪೂರಕ ಪಠ್ಯಪುಸ್ತಕವೂ ಇದಾಗಿದೆ.
ವಸಾಹತುಶಾಹಿ ಆಡಳಿತದಿಂದ ಭಾರತದ ಭವ್ಯ ಸಂಸ್ಕೃತಿ ವಿಸ್ಮೃತಿಗೆ ಸಂದಿತು. ಭಾರತೀಯರಾದ ನಾವು ಎಂಥ ಭವ್ಯ ಸಂಸ್ಕೃತಿಯ ವಾರಸುದಾರರು ಎಂಬುದನ್ನು ‘ಭಾರತೀಯ ಜ್ಞಾನ ಪರಂಪರೆ’ ಕೃತಿಯು ಅನಾವರಣಗೊಳಿಸಿದೆ. ಇದೊಂದು ಬಗೆಯ ಸಾಂಸ್ಕೃತಿಕ ಪುನರ್ ನಿರ್ಮಾಣವೂ ಹೌದು. ಮುಂಬೈ ವಿಶ್ವವಿದ್ಯಾಲಯದ ಕುಲಪತಿಗಳ ದೂರದೃಷ್ಟಿಯಿಂದ ದೇಶದ ಎಲ್ಲ ಪ್ರಮುಖ ಭಾಷೆಗಳಲ್ಲಿ ಈ ಭಾರತೀಯ ಜ್ಞಾನ ಪರಂಪರೆಯು ಗ್ರಂಥ ರೂಪದಲ್ಲಿ ಪ್ರಕಟವಾಗುತ್ತಿರುವುದು ಶತಮಾನದ ತುರ್ತು ಸಹ ಆಗಿದೆ. ಈ ಮೂಲಕ ಕಾಶ್ಮೀರದಿಂದ ಕನ್ಯಾಕುಮಾರಿಯ ತನಕ ಒಂದು ಬಗೆಯ ಭಾಷಾ ಸಾಮರಸ್ಯ, ಭಾಷಾ ಬಾಂಧವ್ಯವನ್ನು, ರಾಷ್ಟ್ರೀಯ ಏಕತೆಯನ್ನು ಎತ್ತಿ ಹಿಡಿಯಲು ಸಾಧ್ಯ. ನಮ್ಮ ನಿನ್ನೆ ಇಂದು ನಾಳೆಗಳ ಅನುಸಂಧಾನ ಈ ಕೃತಿಯ ಮೂಲಕ ಸಾಧ್ಯವಿದೆ. ಇದೊಂದು ಬರೇ ಅನುವಾದ ಕೃತಿಯಲ್ಲ. ಮೂಲ ಅಸ್ಥಿಪಂಜರಕ್ಕೆ ಕನ್ನಡದ, ಕರ್ನಾಟಕದ ಉಸಿರು ತುಂಬಿ ಬಣ್ಣ ಸೊಗಡು ಸೊಬಗನ್ನು ನೀಡಲಾಗಿದೆ. ಇದು ಮುಂಬೈ ವಿಶ್ವವಿದ್ಯಾಲಯದ ಹೆಮ್ಮೆಯ ಕೊಡುಗೆ. ಇಂಗ್ಲೀಷ್ ಹಾಗೂ ಮರಾಠಿಯಲ್ಲಿ ಈಗಾಗಲೇ ಬೆಳಕು ಕಂಡು ಜನಪ್ರಿಯವಾಗಿರುವ ಈ ಕೃತಿಯನ್ನು ಈಗ ಕನ್ನಡ ಸಾರಸ್ವತ ಜಗತ್ತಿಗೆ ಪರಿಚಯಿಸಲಾಗಿದೆ. ಇದು ಎಲ್ಲರಿಗೂ ಉಪಯುಕ್ತವಾದ ಅಧ್ಯಯನಪೂರ್ಣ ಗ್ರಂಥವೂ ಹೌದು.
ಈ ಮಹತ್ವದ ಕೃತಿರಚನೆಗೆ ಮಾರ್ಗದರ್ಶನವನ್ನು ಮಾಡಿದ ಮುಂಬೈ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಪ್ರೊ. ರವೀಂದ್ರ ಕುಲಕರ್ಣಿ, ಈ ಕೃತಿಯ ಮುಖ್ಯ ಸಂಪಾದಕರಾದ ಡಾ. ಎಂ.ಆರ್. ರಾಜವಾಡೆ. ಸಂಪಾದಕರಾದ ಡಾ. ಪ್ರಕಾಶ್ ಮಸರಾಮ್ ಹಾಗೂ ಇದನ್ನು ಕನ್ನಡಕ್ಕೆ ತರುವಲ್ಲಿ ಸಹಕರಿಸಿದ ವಿಭಾಗದ ಮಿತ್ರರಾದ ಡಾ. ಪೂರ್ಣಿಮಾ ಶೆಟ್ಟಿ, ಕಲಾ ಭಾಗ್ವತ್, ಸವಿತಾ ಅರುಣ್ ಶೆಟ್ಟಿ ಇವರಿಗೆ ಅನಂತ ವಂದನೆಗಳು. ವಿಷಯತಜ್ಞರಾಗಿ ಈ ಕೃತಿಯನ್ನು ಪರಿಶೀಲಿಸಿಕೊಟ್ಟ ವಿಭಾಗದ ಸಂದರ್ಶಕ ಪ್ರಾಧ್ಯಾಪಕರಾದ ಡಾ. ಉಮಾ ರಾಮರಾವ್ ಇವರ ಶ್ರಮ ಸಾರ್ಥಕ. ಈ ಕೃತಿಯ ಪ್ರಾಯೋಜಕತ್ವವನ್ನು ಶತಮಾನೋತ್ಸವದ ಸಂಭ್ರಮದಲ್ಲಿರುವ ಮೈಸೂರು ಅಸೋಸಿಯೇಷನ್ ಮುಂಬೈ ವಹಿಸಿಕೊಂಡಿರುವುದು ಹೆಮ್ಮೆಯ ಸಂಗತಿ. ಇದಕ್ಕಾಗಿ ಅಸೋಸಿಯೇಷನ್ನಿನ ಗೌರವ ಕಾರ್ಯದರ್ಶಿಗಳಾದ ಡಾ. ಗಣಪತಿ ಶಂಕರಲಿಂಗ ಹಾಗೂ ಇತರ ಎಲ್ಲ ಮಿತ್ರರಿಗೆ ಅನಂತ ಧನ್ಯವಾದಗಳು, ಮುಂಬೈ ವಿಶ್ವವಿದ್ಯಾಲಯದಲ್ಲಿ ಕನ್ನಡ ಸ್ಥಾಪನೆಯಾಗಿ 125 ವರ್ಷಗಳು ತುಂಬಿದ ಶುಭ ಸಂದರ್ಭದಲ್ಲಿ ಕನ್ನಡ ಕೃತಿ ಬೆಳಕು ಕಂಡಿರುವುದು ಅತ್ಯಂತ ಸಂತೋಷದ ಸಂಗತಿಯಾಗಿದೆ.
‘ಭಾರತೀಯ ಜ್ಞಾನ ಪರಂಪರೆ’
ಪ್ರಧಾನ ಸಂಪಾದಕರು : ಡಾ. ಮಾಧವ ರಾಜವಾಡೆ.
ಕನ್ನಡ ಅವೃತ್ತಿ ಸಂಪಾದಕರು : ಡಾ. ಜಿ.ಎನ್. ಉಪಾಧ್ಯ,
ಪ್ರಕಟಣೆ : ಮುಂಬೈ ವಿಶ್ವವಿದ್ಯಾಲಯ, ಮುಂಬೈ,
ಬೆಲೆ : ರೂ.200/-
ಸಂಪರ್ಕ : 9220212578

ಪ್ರೊ. ಜಿ.ಎನ್. ಉಪಾಧ್ಯ
ಪ್ರಾಧ್ಯಾಪಕ ಮತ್ತು ಮುಖ್ಯಸ್ಥರು, ಕನ್ನಡ ವಿಭಾಗ, ಮುಂಬೈ ವಿಶ್ವವಿದ್ಯಾಲಯ
ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಹಿರಿಯ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವ ಪ್ರೊ. ಜಿ.ಎನ್. ಉಪಾಧ್ಯ ಅವರು ಮುಂಬೈ ಮಹಾನಗರದಲ್ಲಿ ಕನ್ನಡದ ಪ್ರಸಾರ ಮತ್ತು ಪ್ರಚಾರದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಸಂಶೋಧನೆ, ವಿಮರ್ಶೆ, ಪತ್ರಿಕೋದ್ಯಮ, ಭಾಷಾವಿಜ್ಞಾನ ಅವರ ಆಸಕ್ತಿಯ ಕ್ಷೇತ್ರಗಳು. ವೈವಿಧ್ಯಮಯವಾದ 100ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಅವರು ತಮ್ಮದೇ ಆದ ‘ಅಭಿಜಿತ್’ ಪ್ರಕಾಶನವನ್ನು ಮುಂಬೈಯಲ್ಲಿ ಆರಂಭಿಸಿ 130ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿ ಸಾಹಿತ್ಯ ವಲಯವಾಗಿ ಮುಂಬೈ ಇಂದಿಗೂ ಬೆಳಗುವಂತೆ ಮಾಡಿದ್ದಾರೆ. ‘ಮಹಾರಾಷ್ಟ್ರದ ಕನ್ನಡ ಶಾಸನಗಳು’, ‘ಗೋದಾವರಿ ತೀರದಲ್ಲಿ ಕನ್ನಡದ ಕುರುಹು’, ‘ಮಹಾರಾಷ್ಟ್ರದ ಕನ್ನಡ ಸ್ಥಳನಾಮಗಳು’, ‘ಸಿದ್ಧರಾಮನ ಸೊನ್ನಲಿಗೆ’, ‘ಮುಂಬೈ ಕನ್ನಡ ಪರಿಸರ’, ‘ಮುಂಬೈ ಕನ್ನಡ ಸಾಹಿತ್ಯ ಚರಿತ್ರೆ’ ಮೊದಲಾದ ಕೃತಿಗಳು ವಿದ್ವತ್ ವಲಯದಲ್ಲಿ ಸಾಕಷ್ಟು ಜನಪ್ರಿಯವಾಗಿವೆ. ಅವರ ಮಾರ್ಗದರ್ಶನದಲ್ಲಿ ಈವರೆಗೆ 74 ಮಂದಿ ಎಂ.ಫಿಲ್ ಹಾಗೂ ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ. ಗುರುನಾರಾಯಣ ಸಾಹಿತ್ಯ ಪ್ರಶಸ್ತಿ, ನರಹಳ್ಳಿ ಪ್ರಶಸ್ತಿ, ಕರ್ನಾಟಕ ಶ್ರೀ ಪುರಸ್ಕಾರ ಮೊದಲಾದ ಗೌರವಕ್ಕೂ ಡಾ. ಉಪಾಧ್ಯ ಇವರು ಪಾತ್ರರಾಗಿದ್ದು, ಮುಂಬೈ ವಿವಿಯಲ್ಲಿ ಕನ್ನಡ ವಿಭಾಗಕ್ಕೆ ‘ಎ’ ಗ್ರೇಡ್ ತಂದುಕೊಡುವಲ್ಲಿ ಇವರು ಸಫಲರಾಗಿದ್ದಾರೆ.
