ತಮ್ಮ ಜೀವಿತಕಾಲದಲ್ಲಿ ನೂರಾರು ವಿಷಯಗಳ ಕುರಿತು ಅಗಾಧ ಜ್ಞಾನವನ್ನು ಸಂಪಾದಿಸಿ, ನಡೆದಾಡುವ ವಿಶ್ವಕೋಶವೆಂದು ಪ್ರಸಿದ್ಧರಾದ ಮಹಾನ್ ಲೇಖಕ ಕೋಟ ಶಿವರಾಮ ಕಾರಂತರ ಜೀವನ ಚರಿತ್ರೆಯು ಅವರ ಮಕ್ಕಳಾದ ಮಾಲವಿಕಾ, ಉಲ್ಲಾಸ ಮತ್ತು ಕ್ಷಮಾ ಇವರಿಂದ ಇಂಗ್ಲೀಷ್ ನಲ್ಲಿ ‘ಗ್ರೋಯಿಂಗ್ ಅಪ್ ಕಾರಂತ್’ ಎಂಬ ಶೀರ್ಷಿಕೆಯಲ್ಲಿ 2021ರಲ್ಲಿ ಪ್ರಕಟವಾಗಿದ್ದು, ಅದರ ಕನ್ನಡ ಅನುವಾದ ‘ಕಾರಂತರ ಸುಳಿಯಲ್ಲಿ’ ಈಗ 2026ರಲ್ಲಿ ಪ್ರಕಟವಾಗಿದೆ. ನವಿರಾದ ಕನ್ನಡದಲ್ಲಿ ಸರಾಗವಾಗಿ ಓದಿಸಿಕೊಂಡು ಹೋಗುವ ಖ್ಯಾತ ಲೇಖಕ ಹಾಗೂ ಪತ್ರಿಕೋದ್ಯಮಿ ವಿಶ್ವೇಶ್ವರ ಭಟ್ಟರು ಮಾಡಿದ ಅನುವಾದ ಹೃದ್ಯವಾಗಿದೆ.
ಮಕ್ಕಳೇ ಬರೆದ ಜೀವನ ಚರಿತ್ರೆ ಅನ್ನುವುದೇ ಈ ಕೃತಿಯ ವೈಶಿಷ್ಟ್ಯ. ಇದುವರೆಗೆ ಕಾರಂತರ ಬಗ್ಗೆ ಬಂದಿರುವ ಜೀವನ ಚರಿತ್ರೆಗಳಿಗಿಂತ ಪೂರ್ತಿ ಭಿನ್ನವಾಗಿರುವ ಇದು ಕಾರಂತರು ಮತ್ತು ಅವರ ಮಡದಿ ಲೀಲಾ ಕಾರಂತರ ಬೆಚ್ಚನೆಯ ಮಡಿಲಲ್ಲಿ ಬೆಳೆದು ತಮ್ಮ ಜೀವನವನ್ನೂ ವ್ಯಕ್ತಿತ್ವವನ್ನೂ ವೃತ್ತಿಗಳನ್ನೂ ಯಶಸ್ವಿಯಾಗಿ ರೂಪಿಸಿಕೊಂಡ ಮಕ್ಕಳು ತಮ್ಮ ಅನುಭವಗಳನ್ನು ನಿರ್ಭಿಡೆಯಿಂದ ನೇರವಾಗಿ ನಿರೂಪಿಸಿದ ಕೃತಿಯಿದು. ಅಪ್ಪನನ್ನು ಇತರರಿಗಿಂತ ಭಿನ್ನವಾಗಿ ‘ತಾತ’ ಎಂದು ಕರೆಯುತ್ತಿದ್ದ ಅವರು ತಮ್ಮ ತಾತ ಮಹಾನ್ ಮುಂಗೋಪಿ ಎಂಬ ಒಂದು ದೋಷವನ್ನು ಬಿಟ್ಟರೆ ಮಕ್ಕಳನ್ನು ಸದಾ ಪ್ರೀತಿಸಿದ ಮತ್ತು ಪ್ರೋತ್ಸಾಹಿಸಿದ ಓರ್ವ ಅತ್ಯುತ್ತಮ ತಂದೆ ಎಂದು ಚಿತ್ರಿಸುತ್ತಾರೆ. ಹುಟ್ಟೂರು ಕೋಟವನ್ನು ಎಳೆಯ ವಯಸ್ಸಿನಲ್ಲಿಯೇ ಬಿಟ್ಟು ‘ಪ್ರಕೃತಿಯ ನಡುವೆ ಶಿಕ್ಷಣ’ ಎಂಬ ಆದರ್ಶದ ಬೆನ್ನು ಹತ್ತಿ ಪುತ್ತೂರಿಗೆ ಹೋಗಿ ಅಲ್ಲಿ ಹಸಿರಿನಿಂದಾವೃತ ಆರು ಎಕರೆ ಸ್ಥಳದಲ್ಲಿ ‘ಬಾಲವನ’ವನ್ನು ಸ್ಥಾಪಿಸಿದ ತಾತನ ಬಗ್ಗೆ ಮೂವರು ಮಕ್ಕಳಿಗೂ ಅಪಾರ ಹೆಮ್ಮೆಯಿದೆ. ಜಾತಿ-ಧರ್ಮಗಳಲ್ಲಿ ನಂಬಿಕೆಯಿಡದೆ ಸಮಾಜದಲ್ಲಿ ಜಾತಿಭಾವನೆಗಳು ಪ್ರಖರವಾಗಿದ್ದ ಕಾಲದಲ್ಲಿ ಬಂಡ ಜಾತಿಯ ಹೆಣ್ಣು ಲೀಲಾ ಆಳ್ವರನ್ನು ಮದುವೆಯಾದ ದಿಟ್ಟತನ ಅವರದ್ದು. ಲೀಲಾ ಅವರೂ ಧೈರ್ಯ-ಸಾಹಸಗಳಲ್ಲಿ ಕಾರಂತರಿಗೆ ಯಾವ ರೀತಿಯಲ್ಲೂ ಕಡಿಮೆ ಇದ್ದವರಲ್ಲ. ಬಾಲವನದಲ್ಲಿ ಕಾರಂತರು ನಡೆಸುವ ಎಲ್ಲಾ ಚಟುವಟಿಕೆಗಳಲ್ಲೂ ಅವರೊಂದಿಗೆ ಹೆಗಲು ಕೊಡುವ ಮಡದಿಯ ಜತೆಗೆ ಬಾಲವನದಲ್ಲಿ ಹಲವಾರು ವರ್ಷಗಳ ಕಾಲ ಮಕ್ಕಳ ಶಿಕ್ಷಣ ಅತ್ಯಂತ ವಿಶಿಷ್ಟ ರೀತಿಯಲ್ಲಿ ನಡೆಯುತ್ತದೆ. ತರಗತಿ ಕೋಣೆಯ ಪಾಠಗಳನ್ನೂ ಎಂದೂ ಬೆಂಬಲಿಸದ ಕಾರಂತರು ಬಾಲವನಕ್ಕೇ ಸೇರಿದ ಮಕ್ಕಳನ್ನು ಸದಾ ಹೊರಗೆ ಕರೆದುಕೊಂಡು ಹೋಗಿ ಪ್ರಕೃತಿಯ ಮಧ್ಯೆ ಸ್ವಚ್ಛಂದವಾಗಿ ಆಡಲು ಬಿಡುತ್ತಿದ್ದರು. ಪ್ರಾಣಿ-ಪಕ್ಷಿಗಳನ್ನು ನೋಡಿ ಅವುಗಳ ಬಗ್ಗೆ ತಿಳಿಯಲು ಬಿಡುತ್ತಿದ್ದರು. ಈ ರೀತಿ ಪಾಠಗಳ ಮೂಲಕ ನೈಜ ಶಿಕ್ಷಣವನ್ನು ಪಡೆಯುತ್ತಿದ್ದ ಮಕ್ಕಳ ಊಟ-ವಸತಿಗಳ ವ್ಯವಸ್ಥೆಯನ್ನೂ ಕಾರಂತರು ನೋಡಿಕೊಳ್ಳುತ್ತಿದ್ದರೂ ಹೊಸತನ್ನು ಸ್ವೀಕರಿಸುವ ಎದೆಗಾರಿಕೆಯಿಲ್ಲದ ಕೆಲವು ಮಂದಿ ಹೆತ್ತವರಿಂದಾಗಿ ಮತ್ತು ಆರ್ಥಿಕ ಅಡಚಣೆಯಿಂದಾಗಿ ಬಾಲವನವನ್ನು ಮುಚ್ಚಬೇಕಾಗಿ ಬಂತು ಎಂದು ಉಲ್ಲಾಸ ಕಾರಂತರು ಹೇಳುತ್ತಾರೆ. ಆದರೂ ಕಾರಂತರು ತಮ್ಮ ಪ್ರಯೋಗವನ್ನು ತಮ್ಮ ಮೂವರು ಮಕ್ಕಳ ಮೇಲೆ ಧೈರ್ಯದಿಂದ ಮಾಡಿ ಅವರ ಹನ್ನೊಂದನೆಯ ವರ್ಷಕ್ಕೆ ಅವರನ್ನು ಶಾಲೆಗೆ ಸೇರಿಸುತ್ತಾರೆ. ಇದು ತಮ್ಮ ಜೀವನದ ಯಶಸ್ಸಿಗೆ ಕಾರಣವಾಯಿತು ಎಂದು ಕ್ಷಮಾ ಹೇಳುತ್ತಾರೆ.
ಆರಂಭದಲ್ಲಿ ಅವರ ಕುಟುಂಬವು ಆರ್ಥಿಕ ಮುಗ್ಗಟ್ಟಿನಿಂದ ಕಷ್ಟಪಟ್ಟರೂ ಕ್ರಮೇಣ ಎಲ್ಲವೂ ಸರಿಹೋಗುತ್ತದೆ. ತಾತ ತಮಗೆ ಏನಾದರೂ ಕಾರ್ಯ ಕೈಗೊಳ್ಳುವ ಆಲೋಚನೆ ಬಂದರೆ ಸಾಕು, ಅದನ್ನು ಮುಗಿಸದೆ ಬಿಡುವವರಲ್ಲ. ಅದಕ್ಕೆ ಎಷ್ಟೇ ಖರ್ಚಾಗಲಿ, ಚಲ ಬಿಡದ ತ್ರಿವಿಕ್ರಮನಂತೆ ಕಡಿಮೆ ಬೀಳುವ ಹಣವನ್ನು ಸಾಲ ಮಾಡಿಯಾದರೂ ಹೊಂದಿಸಿಕೊಳ್ಳುವ ಬುದ್ಧಿ ಅವರದ್ದು. ಇದರಿಂದಾಗಿ ವಿಪರೀತ ಚಿಂತೆಯ ಹೊರೆಯನ್ನು ಹೊತ್ತುಕೊಂಡವರು ಅಮ್ಮ. ಲೀಲಾ ಅವರೂ ಬಹಳ ಪ್ರತಿಭಾವಂತ ಲೇಖಕಿಯೂ ಕಲಾವಿದೆಯೂ ಆಗಿದ್ದರು. ಚುರುಕು ನಡೆಯ ಲವಲವಿಕೆಯ ಮಹಿಳೆ. ಆದರೆ ತಾತನಿಗೋಸ್ಕರ ಆಕೆ ತನ್ನೆಲ್ಲಾ ಆಸೆಗಳನ್ನು ಬದಿಗಿಟ್ಟು ತಾತನನ್ನು ಸದಾ ಬೆಂಬಲಿಸಿದರು. ದೈಹಿಕವಾಗಿಯೂ ತುಂಬಾ ಪರಿಶ್ರಮಪಟ್ಟರು.ತಾತನ ಅತಿ ಎನ್ನುವಂಥ ಮುಂಗೋಪಕ್ಕೆ ಹೊಂದಿಕೊಳ್ಳಲು ಅವರು ತುಂಬಾ ಕಷ್ಟಪಟ್ಟರು. ಹಾಗೆಂದು ತಾತ ಹಗುರ ಮನಸ್ಥಿತಿಯಲ್ಲಿದ್ದಾಗ ಮಕ್ಕಳನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಪ್ರೀತಿ ಮಾಡುತ್ತಿದ್ದರು. ಅವರು ಕೇಳಿದ ಪ್ರಶ್ನೆಗಳಿಗೆಲ್ಲ ಉತ್ತರ ಹೇಳುತ್ತಿದ್ದರು. ದೊಡ್ಡವರಾದ ಮೇಲೂ ಒಳ್ಳೆಯ ಸಲಹೆಗಳನ್ನು ನೀಡುತ್ತಿದ್ದರು. ಇದನ್ನು ಹೇಳುವಾಗ ಇಲ್ಲಿ ಮೂವರಿಗೂ ತಾತನ ಬಗೆಗಿರುವ ಕೃತಜ್ಞತಾ ಭಾವ ನಿಚ್ಚಳವಾಗಿ ಕಾಣುತ್ತದೆ.
ಈ ಕೃತಿಯಲ್ಲಿ ಮಾಲವಿಕಾ ಕಪೂರ್, ಉಲ್ಲಾಸ ಕಾರಂತ್ ಮತ್ತು ಕ್ಷಮಾ ರಾವ್ ಮೂವರೂ ತಾತನ ಮತ್ತು ಅಮ್ಮನ ಜತೆಗಿನ ತಮ್ಮ ಸಂಬಂಧಗಳ ಕುರಿತು ಹಲವು ವಿವರಗಳನ್ನು ನೀಡಿದ್ದಾರೆ. ಹಲವಾರು ಘಟನೆಗಳನ್ನು ನೆನಪಿಸಿಕೊಂಡಿದ್ದಾರೆ. ಸಾಂಸ್ಕೃತಿಕ ಮತ್ತು ಸಾಹಿತ್ಯ ಜಗತ್ತಿನಲ್ಲಿ ತಾತ ಎತ್ತರಕ್ಕೇರುವಲ್ಲಿ ತಮ್ಮದೇ ಆದ ಕೊಡುಗೆಗಳನ್ನಿತ್ತ ಹಲವಾರು ಮಂದಿಯ ಹೆಸರುಗಳನ್ನೂ ಉಲ್ಲೇಖಿಸಿದ್ದಾರೆ. ಅಮ್ಮ ತನ್ನ ನಲ್ವತ್ತನೇ ವಯಸ್ಸಿನಲ್ಲೇ ಕಾಡಿದ ದೈಹಿಕ ಹಾಗೂ ಮಾನಸಿಕ ಅನಾರೋಗ್ಯದಿಂದ ತನ್ನ 67ನೇ ವಯಸ್ಸಿನಲ್ಲಿ ಸಾಯುವ ತನಕವೂ ಅನುಭವಿಸಿದ ನೋವು, ತಳಮಳ, ಸಂಕಷ್ಟಗಳ ಕುರಿತು ನೋವಿನಿಂದ ಬರೆದಿದ್ದಾರೆ. ಆಕೆಯ ಮಾನಸಿಕ ದುಸ್ಥಿತಿ ಕೊನೆಗಾಲದಲ್ಲಿ ಇನ್ನಷ್ಟು ಬಿಗಡಾಯಿಸಲು ಕಾರಣರಾದ ಒಬ್ಬ ಹೆಂಗಸಿನ ಕುರಿತು ಕೊನೆಯಲ್ಲಿ ಮೂವರೂ ಜತೆಗೂಡಿ ಬರೆದ ಅಧ್ಯಾಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. 1974ರಲ್ಲಿ ಪುತ್ತೂರಿನಿಂದ ಸಾಲಿಗ್ರಾಮಕ್ಕೆ ವಾಸ್ತವ್ಯ ಬದಲಾಯಿಸಿದ ನಂತರ ತಾತನ ಲಿಪಿಕಾರ್ತಿ ಮತ್ತು ಟೈಪಿಸ್ಟ್ ಆಗಿ ಸೇರಿಕೊಂಡ ಹೆಂಗಸನ್ನು ‘ಮ’ ಎಂಬ ಹೆಸರಿನಿಂದ ಕರೆಯುತ್ತ ಆಕೆ ತಾತನ ಪ್ರಸಿದ್ಧಿ ಮತ್ತು ಸಾಹಿತ್ಯಕ ಆಸ್ತಿಗಳನ್ನು ವಶ ಪಡಿಸಿಕೊಳ್ಳುವುದಕ್ಕೋಸ್ಕರ ಮಾಡಿದ ಹುನ್ನಾರಗಳಿಂದ ತಾತ ಬದಲಾಗಿ ಆಕೆಯ ಕಡೆ ವಾಲಿದಾಗ ಅಮ್ಮನಿಗೂ ತಾತನಿಗೂ ನಡೆಯುತ್ತಿದ್ದ ಜಗಳದ ನೆನಪು ಅವರಿಗೆ ಅಸಹನೀಯವೆನ್ನಿಸುತ್ತದೆ. ಆಕೆಯ ಬಣ್ಣದ ಮಾತುಗಳ ಮಾಂತ್ರಿಕತೆಗೆ ಮರುಳಾಗಿ ತಾತ ಅಮ್ಮನ ಮಾತನ್ನು ನಿರ್ಲಕ್ಷಿಸುವುದನ್ನು ಅವರಿಂದ ನೋಡಲಿಕ್ಕಾಗುವುದಿಲ್ಲ. ಕೊನೆಗೂ ತಾತನ ಎಲ್ಲ ಭೌತಿಕ ಮತ್ತು ಬೌದ್ಧಿಕ ಆಸ್ತಿಗಳ ಹಕ್ಕು ಆಕೆಯ ಕೈವಶವಾದಾಗ ಉಲ್ಲಾಸ ಕಾರಂತರು “ನೀವು ನಮ್ಮನ್ನು ಚೆನ್ನಾಗಿ ಬೆಳೆಸಿ ಈ ನಮ್ಮ ಕಾಲ ಮೇಲೆ ನಿಲ್ಲುವಂತೆ ಮಾಡಿದ್ದೀರಿ. ನಮಗೆ ಅಷ್ಟೇ ಸಾಕು” ಎಂದು ತಾತನಿಗೆ ಪತ್ರ ಬರೆಯುತ್ತಾರೆ. ಕೃತಿಯ ಈ ಭಾಗ ಓದುವಾಗ ಮನಸ್ಸು ಭಾರವಾಗುತ್ತದೆ.
ತಾತನಿಗೆ ತಮ್ಮ ಮಾತು-ಕೃತಿ-ಪ್ರೀತಿಗಳ ಮೂಲಕ ಸಹಕಾರ ನೀಡಿದ ಅನೇಕ ಪ್ರತಿಷ್ಠಿತ ವ್ಯಕ್ತಿಗಳ ಮತ್ತು ಸಾಮಾನ್ಯರ ಒಂದು ಪಟ್ಟಿಯೇ ಈ ಕೃತಿಯಲ್ಲಿದೆ. ಆದರೂ ಇದು ಪರ್ಯಾಪ್ತವೆಂದು ಹೇಳಲಾಗದು. ಮಕ್ಕಳಿಗೆ ಗೊತ್ತಿಲ್ಲದ ಇನ್ನೂ ಎಷ್ಟೋ ಮಂದಿ ಸ್ನೇಹಿತರು ಕಾರಂತರಿಗೆ ಇದ್ದಿರಬಹುದು. ತಾರಾಪಟ್ಟಕ್ಕೇರಿ ಜಗತ್ಪ್ರಸಿದ್ಧಿ ಪಡೆದವರ ಮಕ್ಕಳೇ ತಮ್ಮ ತಂದೆಯ ಜತೆಗಿನ ಬಂಧ ಮತ್ತು ಒಡನಾಟಗಳ ಬಗ್ಗೆ ನೇರವಾಗಿ ಮತ್ತು ಮುಕ್ತವಾಗಿ ಬರೆದಿರುವ ಜೀವನ ಚರಿತ್ರೆ ಜಗತ್ತಿನಲ್ಲಿ ಬೇರೆಲ್ಲೂ ಇಲ್ಲ. ಆದರೆ ಇಲ್ಲಿ ಎರಡು ಪ್ರಶ್ನೆಗಳು ಉಳಿಯುತ್ತವೆ. ತಾತ ತಮ್ಮ ಬದುಕನ್ನು ರೂಪಿಸಿದವರು ಎಂದು ಮತ್ತೆ ಮತ್ತೆ ಅವರಿಗೆ ಮಾತಿನ ಗೌರವ ಸಲ್ಲಿಸುತ್ತ ಬರುವ ಮಕ್ಕಳು ಅದೇಕೆ “ತಾತ ಇಷ್ಟೆಲ್ಲ ದೊಡ್ಡ ಸ್ಥಾನಕ್ಕೇರಲು ಅವರ ಪ್ರತಿಭೆ-ಪರಿಶ್ರಮಗಳು ಮಾತ್ರ ಕಾರಣವಲ್ಲ. ಅದರಲ್ಲಿ ಅಮ್ಮನ ಮತ್ತು ಇನ್ನೂ ಹಲವರ ಪಾತ್ರವಿದೆ” ಎಂದು ಮತ್ತೆ ಮತ್ತೆ ಹೇಳುತ್ತಾರೆ? ಹಾಗೆ ನೋಡಿದರೆ ನಮ್ಮಲ್ಲಿ ಪ್ರತಿಯೊಬ್ಬರು ಮಾಡುವ ಸಾಧನೆಗಳ ಹಿಂದೆಯೂ ಕುಟುಂಬದವರ ಮತ್ತು ಇನ್ನೂ ಹಲವರ ಕೊಡುಗೆ ಇದ್ದೇ ಇರುತ್ತದೆ ಅನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಇಲ್ಲಿ ಯಾಕೆ ಹಾಗೆ ಹೇಳಿದ್ದಾರೆನ್ನುವುದು ಅರ್ಥವಾಗುವುದಿಲ್ಲ. ಇನ್ನೊಂದು – ಕನ್ನಡ ಅನುವಾದದ ಶೀರ್ಷಿಕೆಯ ಬಗ್ಗೆ. ‘ಸುಳಿ’ ಅಂದರೆ ಋಣಾತ್ಮಕ ಅರ್ಥವಿರುವ ಒಂದು ಪದ. ‘ಸುಳಿಯಲ್ಲಿ ಸಿಲುಕಿದವರು’ ಯಾವಾಗಲೂ ಒದ್ದಾಡುತ್ತಾರೆ. ಇಲ್ಲಿ ಕಾರಂತರ ಸುಳಿಯಲ್ಲಿ ಸಿಲುಕಿದವರು ಯಾರು? ಮಕ್ಕಳೆಲ್ಲರೂ ಕಾರಂತರ ನೆರಳಿನಾಶ್ರಯದಲ್ಲಿ ಬೆಳೆದು ಅನಂತರ ಸ್ವತಂತ್ರವಾಗಿ ತಮ್ಮ ಬದುಕನ್ನು ರೂಪಿಸಿಕೊಂಡವರು. ಆದ್ದರಿಂದ ಈ ಶೀರ್ಷಿಕೆ ಕೃತಿಗೆ ಒಪ್ಪುತ್ತದೆಯೇ ಅನ್ನುವುದು ಪ್ರಶ್ನೆ.
ಕೆಲವೆಡೆ ವಾಕ್ಯ ರಚನೆಯ ಆಭಾಸ ಮತ್ತು ಅಕ್ಷರ ತಪ್ಪುಗಳನ್ನು ಬಿಟ್ಟರೆ ಕೃತಿಯ ಅನುವಾದ ಬಹಳ ಸುಂದರವಾಗಿ ಬಂದಿದೆ. ಮುದ್ರಣ, ರಕ್ಷಾಪುಟ, ಕಾಗದದ ಗುಣಮಟ್ಟ-ಎಲ್ಲವೂ ಅತ್ಯುತ್ತಮವಾಗಿದೆ. ಕೃತಿಯಲ್ಲಿ ಉಲ್ಲೇಖಿಸಿದ ವ್ಯಕ್ತಿಗಳಿಗೆ ಸರಿಯಾಗಿ ಕಾರಂತರ ಜತೆಗೆ ಅವರೆಲ್ಲರ ಭಾವಚಿತ್ರಗಳನ್ನು ಕೊಟ್ಟಿದ್ದು ಕೃತಿಗೆ ಮೆರುಗು ನೀಡಿದೆ.

ಡಾ. ಪಾರ್ವತಿ ಜಿ. ಐತಾಳ್
ಡಾ. ಪಾರ್ವತಿ ಗಂಗಾಧರ ಐತಾಳರು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕದವರು. ಕಣ್ಣೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದ ಇವರು ಮುಲ್ಕಿಯ ವಿಜಯಾ ಕಾಲೇಜು ಹಾಗೂ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಮತ್ತು ಇಂಗ್ಲೀಷ್ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶ್ರೀಮತಿ ಪಾರ್ವತಿ ಜಿ. ಐತಾಳರು ಸಣ್ಣ ಕಥೆ, ಕವನ, ನಾಟಕ ಬರೆದಿರುವುದರೊಂದಿಗೆ ಅನುವಾದ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಉದ್ಯೋಗದೊಂದಿಗೆ ದಿನ ಪತ್ರಿಕೆಗಳಲ್ಲಿ ಲೇಖನ ಬರೆಯಲಾರಂಬಿಸಿದ ಇವರು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಕನ್ನಡ ಮಾತೃಭಾಷೆಯಾಗಿರುವ ಇವರು ಸ್ನೇಹಿತರಿಂದ ಮಲಯಾಳಂ ಭಾಷೆಯನ್ನು ಕಲಿತು, ಕನ್ನಡ, ಹಿಂದಿ, ಇಂಗ್ಲಿಷ್, ಮಲಯಾಳಂ ಮತ್ತು ತುಳು ಭಾಷೆಗಳನ್ನು ತಿಳಿದ ಪಂಚಭಾಷಾ ಪ್ರವೀಣೆಯಾಗಿದ್ದಾರೆ.
ಡಾ. ಪಾರ್ವತಿಯವರು ಸ್ವತಂತ್ರ ಸಾಹಿತ್ಯದೊಂದಿಗೆ ವಿವಿಧ ಸಾಹಿತಿಗಳ ಹಿಂದಿ, ಮಲಯಾಳಂ, ಇಂಗ್ಲೀಷ್ ಮೂಲದ ನಾಟಕ, ಕಾದಂಬರಿ, ಸಣ್ಣ ಕತೆ ಇತ್ಯಾದಿಗಳನ್ನು ಅನುವಾದ ಮಾಡಿದ ಖ್ಯಾತಿ ಇವರದು. ಮಲ್ಲಿಕಾ ಪ್ರಶಸ್ತಿ, ಗೋವಿಂದರಾವ್ ದತ್ತಿನಿಧಿ ವಿಮರ್ಶಾ ಲೇಖನ ಬಹುಮಾನ ಮತ್ತು ಎಚ್. ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ ಇವುಗಳು ಸಾಹಿತ್ಯ ಕ್ಷೇತ್ರದ ಇವರ ಸಾಧನೆಗೆ ಬಂದ ಪ್ರಶಸ್ತಿಗಳು.
