Subscribe to Updates

    Get the latest creative news from FooBar about art, design and business.

    What's Hot

    ಬೊಳುವಾರು ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದಲ್ಲಿ ಪತ್ತನಾಜೆ ತಾಳಮದ್ದಳೆ ಕೂಟ

    May 25, 2026

    ಗಂಟಾಲ್‌ಕಟ್ಟೆಯ ಚರ್ಚ್‌ ಸಭಾಂಗಣದಲ್ಲಿ ಗುಮಟೆ ಕಾರ್ಯಾಗಾರ

    May 25, 2026

    ‘ಒಂದು ಕಥೆ-ಒಂದು ಪ್ರೇರಣೆ’ ಕಥೆ ಹೇಳುವ ಸ್ಪರ್ಧೆ | ಕೊನೆಯ ದಿನಾಂಕ ಮೇ 30

    May 25, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಪುಸ್ತಕ ವಿಮರ್ಶೆ | ಮಹಾಶ್ವೇತಾದೇವಿಯವರ ‘ರುಡಾಲಿ’
    Article

    ಪುಸ್ತಕ ವಿಮರ್ಶೆ | ಮಹಾಶ್ವೇತಾದೇವಿಯವರ ‘ರುಡಾಲಿ’

    April 30, 2026Updated:May 5, 2026No Comments7 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಭಾರತದ ಪ್ರಸಿದ್ಧ ಲೇಖಕಿಯರಲ್ಲಿ ಒಬ್ಬರಾದ ಮಹಾಶ್ವೇತಾದೇವಿಯವರು (14.01.1926 – 28.07.2016) ಬಂಗಾಳಿ ಸಾಹಿತ್ಯದಲ್ಲಿ ಹೊಸ ಶಕೆಯನ್ನು ಆರಂಭಿಸಿದವರು. ನೂರಕ್ಕೂ ಹೆಚ್ಚು ಕಾದಂಬರಿ ಮತ್ತು ಇಪ್ಪತ್ತಕ್ಕಿಂತ ಹೆಚ್ಚು ಕಥಾಸಂಕಲನಗಳನ್ನು ಹೊರತಂದಿರುವ ಇವರು ಆದಿವಾಸಿಗಳ ಬದುಕು ಮತ್ತು ಹಕ್ಕುಗಳಿಗಾಗಿ ಹೋರಾಡಿದ ಅಪರೂಪದ ಚಿಂತಕಿಯಾಗಿದ್ದರು. ಸಾಹಿತ್ಯ ಅಕಾಡೆಮಿ (1979), ಪದ್ಮಶ್ರೀ (1986), ಜ್ಞಾನಪೀಠ (1996), ರಮೋನ್ ಮ್ಯಾಗ್ಸೆಸೆ (1997), ಪದ್ಮವಿಭೂಷಣ (2006) ಮುಂತಾದ ಪ್ರಶಸ್ತಿಗಳನ್ನು ಪಡೆದಿದ್ದ ಇವರು ಪ್ರಶಸ್ತಿಗಿಂತ ಸೈದ್ಧಾಂತಿಕ ಬದ್ಧತೆ ಮುಖ್ಯ ಎಂದು ನಂಬಿದ್ದ ನಿರ್ಭೀತ ನಡೆನುಡಿಯ ಬರಹಗಾರ್ತಿಯಾಗಿದ್ದರು. ಇವರು 1940ರ ದಶಕದಲ್ಲಿ ಆರಂಭಗೊಂಡ ಪ್ರಗತಿಶೀಲ ಚಳುವಳಿಯಿಂದ ಸ್ಫೂರ್ತಿಯನ್ನು ಪಡೆದಿದ್ದು, ಬರವಣಿಗೆಯನ್ನು ಕೇವಲ ಕಲೆಯಾಗಿ ನೋಡದೆ ಸಾಮಾಜಿಕ ಬದಲಾವಣೆ ಮತ್ತು ಶೋಷಿತ ಪರ ಹೋರಾಟಕ್ಕೆ ಬಳಸಿಕೊಂಡರು. ಅವರ ಕೃತಿಗಳು ಹಲವು ಭಾಷೆಗಳಿಗೆ ಅನುವಾದವಾಗಿದ್ದು ‘ರುಡಾಲಿ’ ಎಂಬ ಕಾದಂಬರಿಯನ್ನು ಎಚ್.ಎಸ್. ಶ್ರೀಮತಿಯವರು ಕನ್ನಡಕ್ಕೆ ಅನುವಾದಿಸಿದ್ದಾರೆ.

    ಬಂಗಾಳ, ಒರಿಸ್ಸಾ, ಮಧ್ಯಪ್ರದೇಶದ ಬುಡಕಟ್ಟು ಜನಾಂಗದವರ ಬದುಕು ಮಹಾಶ್ವೇತಾದೇವಿಯವರ ಹಲವು ಕತೆ ಕಾದಂಬರಿಗಳಿಗೆ ವಸ್ತುವಾಗಿದೆ. ಆ ಪೈಕಿ ‘ರುಡಾಲಿ’ಯು ಕೆಳಜಾತಿಗೆ ಸೇರಿದ ಹೆಣ್ಣುಮಕ್ಕಳ ಬದುಕಿನ ಹೋರಾಟದ, ಬವಣೆಯ ಕಥನವಾಗಿದೆ. ಅಳುವುದನ್ನೇ ವೃತ್ತಿಯಾಗಿ ಮಾಡಿಕೊಂಡವರನ್ನು ರುಡಾಲಿ ಎನ್ನುತ್ತೇವೆ. ಉತ್ತರ ಭಾರತದ ಕೆಲವು ಭಾಗಗಳಲ್ಲಿ ಜಮೀನ್ದಾರನು ತೀರಿಕೊಂಡರೆ ಶೋಕಾಚರಣೆಗಾಗಿ ಅಳುವವರನ್ನು ನೇಮಿಸಲಾಗುತ್ತದೆ. ಅವನು ಇಟ್ಟುಕೊಂಡಿದ್ದ ಅಥವಾ ಪೇಟೆಯಲ್ಲಿರುವ ಸೂಳೆಯರನ್ನು ಇಲ್ಲವೇ ಗಿರಾಕಿಗಳನ್ನು ಕಳೆದುಕೊಂಡ ಮುದಿಸೂಳೆಯರನ್ನು ಇದಕ್ಕಾಗಿ ಕರೆತರಲಾಗುತ್ತದೆ. ಶವಸಂಸ್ಕಾರದ ಸಂದರ್ಭದಲ್ಲಿ ಅವರಿಗೆ ಬಹಳ ಬೇಡಿಕೆ ಇರುತ್ತದೆ. ಸತ್ತವನ ಅಂತಸ್ತು, ಅನುಕೂಲಕ್ಕೆ ತಕ್ಕಂತೆ ಅಳುವ ಹೆಂಗಸರ ಸಂಖ್ಯೆಯನ್ನು ನಿರ್ಧರಿಸಲಾಗುತ್ತದೆ. ದೊಡ್ಡದನಿಯಲ್ಲಿ ಅಳುವವರಿಗೆ ಹೆಚ್ಚಿನ ಮಾನ್ಯತೆ ಮತ್ತು ಅಧಿಕ ಮೊತ್ತದ ಹಣವನ್ನು ನೀಡಲಾಗುತ್ತದೆ. ಬರೇ ಅಳುವವರಿಗೆ, ಜೋರಾಗಿ ಅಳುವವರಿಗೆ, ಎದೆ ಬಡಿದುಕೊಂಡು ಅಳುವವರಿಗೆ, ನೆಲಕ್ಕೆ ಹಣೆಚಚ್ಚಿಕೊಂಡು ಗೋಳಾಡುವವರಿಗೆ, ನೆಲದ ಮೇಲೆ ಹೊರಳಾಡಿಕೊಂಡು ಅಳುವವರಿಗೆ ಇಂತಿಷ್ಟು ಹಣವೆಂದು ನಿಗದಿಪಡಿಸಲಾಗುತ್ತದೆ. ಸತ್ತವನಿಂದ ಕಷ್ಟಕೋಟಲೆಗಳನ್ನು ಅನುಭವಿಸಿದ್ದರೂ ಅವನ ಹೆಣದೆದುರು ಅತ್ತು ಗೋಳಾಡಿ ಗುಣಗಾನವನ್ನು ಮಾಡಬೇಕು.

    ಈ ಕೃತಿಯ ನಾಯಕಿ ಶನಿಚರಿಯು ರಾಜಸ್ಥಾನದ ತಹದ್ ಎಂಬ ಹಳ್ಳಿಯಲ್ಲಿ ನೆಲೆಸಿದ ಗಂಜರ್‌ಜಾತಿಗೆ ಸೇರಿದ ಶ್ರಮಜೀವಿ ಮಹಿಳೆಯೇ ಹೊರತು ಸೂಳೆಯಲ್ಲ. ಅಪಶಕುನದ ದಿನವಾದ ಶನಿವಾರದಂದು ಹುಟ್ಟಿದ್ದರಿಂದ ಆಕೆಗೆ ಶನಿಚರಿ ಎಂಬ ಹೆಸರಿಟ್ಟಿದ್ದರು. ಆಕೆಯು ತನ್ನ ಬಂಧುಗಳು, ಅತ್ತೆಯವರು ಸತ್ತಾಗ ಕೂಡ ಅಳುವುದಿಲ್ಲ. ಅತ್ತೆ ನಿಧನಳಾದ ಸಮಯದಲ್ಲಿ ಗಂಡ ಮತ್ತು ಮೈದುನರು ಗೋಧಿಕದ್ದ ಆರೋಪಕ್ಕೊಳಗಾಗಿ ಸೆರೆಮನೆ ಸೇರಿದ್ದು, ಕ್ರಿಯಾಕರ್ಮಗಳ ಭಾರವೆಲ್ಲ ಶನಿಚರಿಯ ಮೇಲೆ ಬಿದ್ದಿದ್ದುದರಿಂದ ಆ ತಲೆಬಿಸಿಯ ನಡುವೆ ಆಕೆಗೆ ಅಳುವುದಕ್ಕೂ ಸಮಯವಿರಲಿಲ್ಲ. “ಮುದುಕಿ ತಾನು ಇದ್ದಷ್ಟು ದಿನವೂ ಶನಿಚರಿಯನ್ನು ಎಷ್ಟು ಗೋಳು ಹುಯ್ದಿದ್ದಳೆಂದರೆ ಶನಿಚರಿ ಕೂತು ಕಣ್ಣು ಚಿವುಟಿಕೊಂಡು ಪ್ರಯತ್ನಿಸಿದರೂ ಅವಳ ಕಣ್ಣುಗಳಿಂದ ನೀರು ಸುರಿಯುವುದು ಅಷ್ಟರಲ್ಲೇ ಇದೆ.” (ಪುಟ 2) ಗಂಡನು ಕಾಲರಾಕ್ಕೆ ಬಲಿಯಾಗಿ ತೀರಿಕೊಂಡಾಗಲೂ ಆಕೆ ಅಳಲಿಲ್ಲ. ಯಾಕೆಂದರೆ “ಸರ್ಕಾರಿ ಅಧಿಕಾರಿಗಳು ಅವಳಿಗೆ ಕಣ್ಣೀರು ಹಾಕುತ್ತಾ ಕೂರಲು ಅವಕಾಶ ಕೊಡಲಿಲ್ಲ. ಕೂಡಲೇ ಹೆಣವನ್ನು ಸುಟ್ಟುಹಾಕಿ ಬಿಟ್ಟರು” (ಪುಟ 4) ಸರಕಾರವೇ ಗಂಡನ ಸಂಸ್ಕಾರವನ್ನು ಮಾಡಿದರೂ ತೊಹರಿಯ ಪಂಡನು “ನಿನ್ನ ಗಂಡ ಸತ್ತದ್ದು ಇಲ್ಲೇ ತಾನೇ ಎಂದು ಪಟ್ಟು ಹಿಡಿದುಕೂತ. ಅವನ ಒತ್ತಾಯಕ್ಕೆ ಮಣಿದು ಅವಳು ತನ್ನಲ್ಲಿದ್ದ ಅಮೂಲ್ಯವಾದ ಒಂದೂ ಕಾಲು ರೂಪಾಯಿಯನ್ನು ಖರ್ಚು ಮಾಡಿ ಹಿಟ್ಟು ಮತ್ತು ಮರಳುಗಳನ್ನು ಕೂಡಿಸಿ ಪಿಂಡವನ್ನು ಕಟ್ಟಿಸಿ ಬುಧುವನ ಕೈಯಿಂದ ಹಾಕಿಸಲೇ ಬೇಕಾಯಿತು.” (ಪುಟ 4 – 5) ಊರಿಗೆ ಮರಳಿದ ಮೇಲೆ ಆಕೆಯು ಅಲ್ಲಿನ ಪೂಜಾರಿಯ ಕೆಂಗಣ್ಣಿಗೆ ಗುರಿಯಾಗುತ್ತಾಳೆ. ಸತ್ತವನು ಆ ಊರಿನವನಾಗಿರುವುದರಿಂದ ಅಲ್ಲಿನ ಪದ್ಧತಿಯ ಪ್ರಕಾರ ಕ್ರಿಯಾಕರ್ಮಗಳಾಗಬೇಕೆಂದು ಆತನು ದಬಾಯಿಸುತ್ತಾನೆ. ಆದ್ದರಿಂದ ಆಕೆ ಜಮೀನ್ದಾರನ ಬಳಿಯಿಂದ ಇಪ್ಪತ್ತು ರೂಪಾಯಿಗಳ ಸಾಲವನ್ನು ಪಡೆದು, ಐವತ್ತು ರೂಪಾಯಿಯ ರಶೀದಿಗೆ ಹೆಬ್ಬೆಟ್ಟು ಒತ್ತಬೇಕಾಗುತ್ತದೆ. ಆ ಹಣವನ್ನು ಅವನ ಹೊಲದಲ್ಲಿ ಬಿಟ್ಟಿಯಾಗಿ ದುಡಿದು ತೀರಿಸಬೇಕಾಗುತ್ತದೆ. ಈ ರೀತಿಯಲ್ಲಿ ವರ್ಗ, ಜಾತಿ, ಆರ್ಥಿಕ ಮತ್ತು ಧಾರ್ಮಿಕ ನೆಲೆಗಳಲ್ಲಿ ಕಾಣಿಸಿಕೊಳ್ಳುವ ಶೋಷಣೆಯನ್ನು ಸಹಜವೆಂಬಂತೆ ಒಪ್ಪಿಕೊಂಡು ಬದುಕುವ ಪಾತ್ರಗಳನ್ನು ಕಾಣುತ್ತೇವೆ. ಕಾದಂಬರಿಯಲ್ಲಿ ಶೋಷಣೆಯ ವಿರುದ್ಧ ದನಿಯಿದ್ದರೂ ಲೇಖಕಿಯು ಹೋರಾಟದ ಪರಿಭಾಷೆಯಲ್ಲಿ ಮಾತನಾಡದಿರುವುದು ಗಮನಾರ್ಹವಾಗಿದೆ.

    ಮನೆಯಲ್ಲೂ ಸುಖವನ್ನು ಕಾಣದ ಶನಿಚರಿಯು ಅದೃಷ್ಟಹೀನ ಹೆಣ್ಣು. ಮಗ ಬುಧುವನಿಗೆ ಮದುವೆಯನ್ನು ಮಾಡಿದರೆ ಅವನ ಹೆಂಡತಿಯು ತನ್ನ ವಿಲಾಸಿ ಜೀವನಕ್ಕಾಗಿ ಅವರ ದುಡಿಮೆಯ ಹಣವನ್ನು ಪೋಲು ಮಾಡುತ್ತಾಳೆ. ಬುಧುವನು ಕ್ಷಯರೋಗಕ್ಕೆ ತುತ್ತಾಗಿ ತೀರಿಕೊಂಡಾಗ ಹಸುಗೂಸನ್ನು ಬಿಟ್ಟು ಓಡಿಹೋಗಿ ಪೇಟೆಯಲ್ಲಿ ಸೂಳೆಗಾರಿಕೆಯನ್ನು ಮಾಡುತ್ತಾಳೆ. ಇಂಥ ದುಃಖ ಯಾತನೆಗಳ ಸಂದರ್ಭದಲ್ಲೂ ಶನಿಚರಿಗೆ ಅಳಲು ಸಮಯ ವ್ಯವಧಾನಗಳು ಒದಗದಿರುವುದು ಇಲ್ಲಿನ ಕ್ರೂರ ವ್ಯಂಗ್ಯವಾಗಿದೆ. ಆದರೆ ಈ ಬೆಳವಣಿಗೆಗಳಿಂದ ಶನಿಚರಿ ಕುಗ್ಗಿಹೋಗುವುದಿಲ್ಲ. ಅವಳಷ್ಟೇ ಬಡವರೂ, ಶೋಷಿತರೂ ಆದ ನೆರೆಹೊರೆಯವರು ಆಕೆಗೆ ಧೈರ್ಯವನ್ನು ತುಂಬಿ, ಬದುಕುವ ಉಪಾಯಗಳನ್ನು ಹೇಳಿಕೊಡುತ್ತಾರೆ. ಮೊಮ್ಮಗ ಹರೋದನು ಮನೆಬಿಟ್ಟು ಹೋದ ಸಂದರ್ಭದಲ್ಲಿ ತನ್ನಂತೆಯೇ ಒಂಟಿಯಾಗಿರುವ ಬಾಲ್ಯದ ಗೆಳತಿ ಭಿಕನಿಯ ಭೇಟಿಯಾಗುತ್ತದೆ. ಒಬ್ಬರಿಗೊಬ್ಬರು ಒತ್ತಾಸೆಯಾಗಿ ಬದುಕು ಸಾಗಿಸುತ್ತಾರೆ. ಕ್ರಮೇಣ ಅವರಲ್ಲಿದ್ದ ಹಣ ಕರಗಿ ಹೋಗುತ್ತದೆ.

    ಭೈರವ ಸಿಂಗ್ ಎಂಬ ಸಾಹುಕಾರನು ತೀರಿಕೊಂಡಾಗ ರುಡಾಲಿಗಳ ಕೊರತೆ ತಲೆದೋರುತ್ತದೆ. ಅದು ಸಾಹುಕಾರನ ಪ್ರತಿಷ್ಠೆಗೆ ಕಡಿಮೆಯೆನಿಸುತ್ತದೆ. ಶನಿಚರಿ ಮತ್ತು ಭಿಕನಿ ಈ ಸಂದರ್ಭವನ್ನು ಬಳಸಿಕೊಳ್ಳಬೇಕೆಂದು ಸಮುದಾಯದ ಹಿರಿಯನಾದ ದುಲನ್ ಸೂಚಿಸುತ್ತಾನೆ. ಶನಿಚರಿಯು ಇದನ್ನು ಒಪ್ಪದಿದ್ದಾಗ ಆತ ಕೊಡುವ ಉತ್ತರದಲ್ಲಿ ಅವನ ತತ್ವಜ್ಞಾನ ಅಡಗಿದೆ. “ಬುಧುವ ಸತ್ತಾಗಲೇ ಹರಿಸಲು ಸಾಧ್ಯವಾಗದೆ ಹೋದ ಕಣ್ಣೀರನ್ನು ಈಗ ನೀನು ಹರಿಸು ಎಂದೇನೂ ನಾನು ಹೇಳುತ್ತಿಲ್ಲ ಕಣೇತಾಯಿ. ಈಗ ನೀನು ಹರಿಸಲಿರುವ ಕಣ್ಣೀರು ನಿನ್ನ ಹೊಟ್ಟೆಪಾಡಿಗಾಗಿ. ಗೋಧಿ ಕುಯ್ಲಿನ ಕೆಲಸ, ಹೊಲ ಉಳುವ ಕೆಲಸದಷ್ಟೇ ಸಲೀಸಾಗಿ ನೀನು ಕಣ್ಣೀರು ಹರಿಸಬಲ್ಲೆ ಎಂದು ಅಲ್ಲಿಗೆ ಹೋದಾಗ ನಿನಗೆ ತಿಳಿಯುತ್ತೆ” (ಪುಟ 27) ಶನಿಚರಿ ಮತ್ತು ಭಿಕನಿಯರು ಯಶಸ್ವಿ ರುಡಾಲಿಗಳೆನಿಸಿಕೊಳ್ಳುತ್ತಾರೆ. ಅವರಿಗೆ ಎಲ್ಲರಿಂದ ಬೇಡಿಕೆ ಬರುತ್ತದೆ. ಇದರಿಂದಾಗಿ ಅವರು ರುಡಾಲಿಗಳನ್ನು ಒದಗಿಸಿಕೊಡುವ ಯಜಮಾನತಿಯರಾಗಿ ತಮ್ಮ ಮಟ್ಟವನ್ನು ಹೆಚ್ಚಿಸಿಕೊಳ್ಳುತ್ತಾರೆ. ಭಿಕನಿ ಸೂಳೆಗೇರಿಗೆ ಹೋಗಿ ರುಡಾಲಿಗಳನ್ನು ಒಟ್ಟುಗೂಡಿಸುವ ಜವಾಬ್ದಾರಿಯನ್ನು ಕೈಗೆತ್ತಿಕೊಳ್ಳುತ್ತಾಳೆ. ಸಾಹುಕಾರರ ಸಿರಿವಂತಿಕೆಗೆ ತಕ್ಕಂತೆ ಶುಲ್ಕ ನಿಗದಿಯಾಗುತ್ತದೆ. ಶ್ರೀಮಂತ ಕುಟುಂಬದವರು ಜಿದ್ದಿಗೆ ಬಿದ್ದವರಂತೆ ರುಡಾಲಿಗಳನ್ನು ಕರೆಸಿಕೊಳ್ಳುತ್ತಾರೆ. ಶನಿಚರಿ ಮತ್ತು ಭಿಕನಿಯ ಕೌಶಲ್ಯದಿಂದ ಊರಿನ ಬಡ ಪರಿತ್ಯಕ್ತ ಹೆಂಗಸರ ಅರ್ಥಿಕ ಪರಿಸ್ಥಿತಿ ಉತ್ತಮವಾಗುತ್ತದೆ. ಜಮೀನ್ದಾರರ ಮುಂದೆ ಕೆಲಸ ಬೇಡುತ್ತಿದ್ದ ಶನಿಚರಿ ಅನೇಕರಿಗೆ ಕೆಲಸ ಕೊಡುವ ಹಂತವನ್ನು ತಲುಪುತ್ತಾಳೆ. ಹಂತಹಂತವಾಗಿ ಪ್ರಗತಿಯನ್ನು ಹೊಂದಿದರೂ ಆಕೆ ಸುತ್ತುಮುತ್ತಲಿನವರ ಮೇಲೆ ಅನಾದರ, ಅನಾಸ್ಥೆ, ದರ್ಪಗಳನ್ನು ತೋರಿಸಿ ಮಾನವೀಯತೆಯನ್ನು ಮರೆಯುವುದಿಲ್ಲ. ಹಣ, ಅಧಿಕಾರ ಮತ್ತು ಅಂತಸ್ತು ದೊರೆತರೂ ಮಾಲೀಕತನವನ್ನು ತೋರುವುದಿಲ್ಲ.

    ಮದುವೆಯಲ್ಲಿ ಭಾಗವಹಿಸಲು ಬೇರೆ ಊರಿಗೆ ಹೋದ ಭಿಕನಿ ಅಲ್ಲೇ ಮರಣ ಹೊಂದುತ್ತಾಳೆ. ಆಗ ಶನಿಚರಿ ಹೀಗೆಂದುಕೊಳ್ಳುತ್ತಾಳೆ. “ದುಃಖ? ಖಂಡಿತಾ ದುಃಖವಲ್ಲ, ಭಯವೆನಿಸುತ್ತದೆ. ಗಂಡನನ್ನು ಕಳೆದುಕೊಂಡಿದ್ದಳು. ಮಗ ಸತ್ತಿದ್ದ. ಮೊಮ್ಮಗ ಓಡಿಹೋದ. ಸೊಸೆ ಓಡಿಹೋದಳು. ಜೀವನದುದ್ದಕ್ಕೂ ದುಃಖ ಸಾಲುಗಟ್ಟಿ ಬಂದಿತ್ತು. ಆದರೆ ಹಿಂದೆಂದೂ ಈಗಿನಂತೆ ತಲ್ಲಣಗೊಳಿಸುವ ಭಯ ಅವಳನ್ನಾವರಿಸಿರಲಿಲ್ಲ. ಭಿಕನಿಯ ಸಾವು ಅವಳ ತುತ್ತಿನ ಸಂಪಾದನೆಗೆ ಭಂಗತಂದಿತ್ತು. ವೃತ್ತಿಗೆ ಅಪಾಯವನ್ನು ಒಡ್ಡಿತ್ತು. ಅದಕ್ಕೇ ಅವಳಿಗೆ ಇಂಥ ಭಯದ ಅನುಭವವಾಗುತ್ತದೆ. ಹೌದೆ? ಹಾಗೇಕೆ ಆಗಬೇಕು? ಯಾಕೆ ಅಂದ್ರೆ ಅವಳೀಗ ಮುದುಕಿಯಾಗಿದ್ದಾಳೆ. ಅವಳ ಜನರಲ್ಲಿ ಯಾರೇ ಆಗಲಿ, ಸಾವಿನ ಕೊನೆಯ ಕ್ಷಣದವರೆಗೂ ದುಡಿದೇ ಸಾಯಬೇಕು. ದುಡಿಯಲು ಸಾಧ್ಯವಾದರೆ ಸರಿ. ಇಲ್ಲವಾದರೆ? ವಯಸ್ಸಾಯಿತು ಅಂದರೆ ಮುದುಕಿಯಾದೆ ಅಂತ. ಮುದುಕಿಯಾಗುವುದು ಎಂದರೆ ಇನ್ನು ದುಡಿಯಲು ಸಾಧ್ಯವಾಗದು ಎಂದರ್ಥ. ಇದಕ್ಕಿರುವ ಒಂದೇ ಅರ್ಥ ಎಂದರೆ ಸಾವು ಬಂದೇ ಬಿಟ್ಟಿತು” (ಪುಟ 57) ಬದುಕಿನ ಇಳಿಗಾಲದಲ್ಲಿ ಕಾಡುವ ಮೃತ್ಯು ಪ್ರಜ್ಞೆಯ ನೆರಳನ್ನು ಇಲ್ಲಿ ಕಾಣುತ್ತೇವೆ. ಆದರೆ ಶನಿಚರಿ ಅದನ್ನು ಮೀರಿ ನಿಲ್ಲುತ್ತಾಳೆ. “ಈಗ ಸಾಯುವಂಥದ್ದೇನಾಗಿದೆ? ಗಂಡ ಸತ್ತ. ಮಗ ಸತ್ತ. ಆ ದುಃಖದಲ್ಲೇನೂ ಅವಳು ಸತ್ತು ಹೋಗಿಲ್ಲವಲ್ಲ. ಅಷ್ಟಕ್ಕೆಲ್ಲ ಯಾರೂ ಸಾಯುವುದಿಲ್ಲ. ನಡೆಯಬಾರದ ದುರಂತ ನಡೆದೇ ಹೋಗುತ್ತದೆ. ಆಮೇಲೆ ಜನ ನಿಧಾನವಾಗಿ ಚೇತರಿಸಿಕೊಂಡು ಸ್ನಾನ ಮಾಡುತ್ತಾರೆ. ಊಟ ಮಾಡುತ್ತಾರೆ. ಆದರೆ ಹೊಟ್ಟೆಪಾಡನ್ನು ನೋಡದೇ ಹೋದರೆ ಮಾತ್ರ ಸತ್ತು ಹೋಗುತ್ತಾರೆ. ಶನಿಚರಿ ಇಷ್ಟೆಲ್ಲಾ ದುಃಖಗಳನ್ನು ಸಹಿಸಿ ಬದುಕಿಯೇ ಇದ್ದಾಳೆಂದ ಮೇಲೆ ಈಗ ಭಿಕನಿಯ ಸಾವನ್ನು ಹೇಗೋ ನುಂಗಿ ಬದುಕುತ್ತಾಳೆ. ಆದರೆ ಅವಳು ಅಳುವುದಿಲ್ಲ. ಕಾಸು, ಅಕ್ಕಿ, ಹೊಸಬಟ್ಟೆ ಸಿಗುವುದಿಲ್ಲವೆಂದ ಮೇಲೆ ಕಣ್ಣೀರನ್ನೇಕೆ ಪೋಲು ಮಾಡಬೇಕು?” (ಪುಟ 58) ಸಾವೂ ಸೇರಿದಂತೆ ಬದುಕಿನ ಆಗುಹೋಗುಗಳನ್ನು ಸಹಜವಾಗಿ ಸ್ವೀಕರಿಸುವ ಮನೋಭಾವವನ್ನು ಗಮನಿಸಬಹುದು. ನಿಜಜೀವನದಲ್ಲಿ ಗಂಡ ಮತ್ತು ಮಗನಿಂದ ಬೇರ್ಪಟ್ಟರೂ ತಳವರ್ಗದ ಜನರೊಂದಿಗೆ ಬೆರೆತು, ಕ್ರಿಯಾತ್ಮಕ ಬದುಕನ್ನು ಸಾಗಿಸಿದ ಮಹಾಶ್ವೇತಾದೇವಿಯವರ ವ್ಯಕ್ತಿತ್ವದ ಅಭಿವ್ಯಕ್ತಿಯಾಗಿ ಈ ಸನ್ನಿವೇಶವನ್ನು ಪರಿಭಾವಿಸಲು ಅಡ್ಡಿಯಿಲ್ಲ.

    ಸೂಳೆಗೇರಿಗೆ ಹೋಗಿ ರುಡಾಲಿಗಳನ್ನು ಒಟ್ಟು ಸೇರಿಸಬೇಕೆಂದು ದುಲನ್ ಶನಿಚರಿಯಲ್ಲಿ ಹೇಳುತ್ತಾನೆ. ಅಲ್ಲಿ ತನ್ನ ಸೊಸೆ ಇರುವಳೆಂದು ಆಕೆ ಹಿಂಜರಿದಾಗ ‘ಅವಳಿಗೂ ಹೊಟ್ಟೆಯಿದೆ’ ಎನ್ನುತ್ತಾನೆ. ಪರಿಸ್ಥಿತಿಯನ್ನು ಅರ್ಥಮಾಡಿಕೊಂಡ ಶನಿಚರಿಯು ಅಲ್ಲಿಗೆ ಹೋಗಿ ಸೊಸೆಯನ್ನು ಮಾತನಾಡಿಸುವ ಮೂಲಕ ತನ್ನ ಸಿಟ್ಟು, ನಿರಾಶೆ, ಅವಮಾನಗಳನ್ನು ಮರೆತು, ಸೊಸೆಯನ್ನು ಸಹೋದ್ಯೋಗಿಯಾಗಿ ಒಪ್ಪಿಕೊಳ್ಳುತ್ತಾಳೆ. ಬಡತನದ ಬೇಗೆಯಲ್ಲೂ ಸೂಳೆಗಾರಿಕೆಯ ಹಾದಿಯನ್ನು ಹಿಡಿಯದಿದ್ದ ಆಕೆಗೆ ಸೂಳೆಯರನ್ನು ಪ್ರೀತಿ ಕಾಳಜಿಯಿಂದ ಕಾಣಲು ಸಾಧ್ಯವಾಗುತ್ತದೆ. ಇಲ್ಲಿ ಆಕೆಯ ವ್ಯಕ್ತಿತ್ವದ ವಿವೇಕ ಪೂರ್ಣವಾದ ಮುಖವನ್ನು ಕಾಣುತ್ತೇವೆ. ಇದು ಆಕೆಗೆ ಬಾಳುವೆಯು ಕಲಿಸಿದ ಪಾಠ. ಎಳೆಹರೆಯದ ಸೂಳೆಯರು ತಾವೂ ಬರುವ ಆಸೆಯನ್ನು ವ್ಯಕ್ತಪಡಿಸಿದಾಗ “ಬನ್ನಿ, ಎಲ್ಲರೂ ಬನ್ನಿ. ವಯಸ್ಸಾದ ಮೇಲೆ ಹೇಗೂ ಇದನ್ನೇ ಅಲ್ವಾ ನೀವು ಮಾಡಬೇಕಾಗಿರೋದು? ಕೈ ಇನ್ನೂ ನಡೀತಾ ಇದೆ ಅನ್ನುವಾಗಲೇ ಇದನ್ನೆಲ್ಲ ಚೆನ್ನಾಗಿ ಕಲಿತುಬಿಡಿ” (ಪುಟ 57) ಎಂದು ಹುರಿದುಂಬಿಸುತ್ತಾಳೆ. ಆಕೆಯ ಸರಳ ಮಾತು ವರ್ತನೆಗಳಲ್ಲಿ ಜೀವನದರ್ಶನ ಕಾಣಿಸಿಕೊಳ್ಳುತ್ತದೆ. ಕಾದಂಬರಿಯ ಅಂತ್ಯ ನಾಟಕೀಯವಾಗಿದ್ದು, ಕ್ರೂರಹಾಸ್ಯ ಕಂಡುಬರುತ್ತದೆ. “ಗಂಭೀರನ ಹೆಣ ಕೊಳೆತು ಗಬ್ಬು ನಾರುತ್ತಿತ್ತು. ರಂಡೆ, ರುಡಾಲಿಯರೆಲ್ಲರೂ ಹೆಣದ ಸುತ್ತ ಮುಕುರಿಕೊಂಡು ರೋದಿಸಲಾರಂಭಿಸಿದರು. ನೆಲಕ್ಕೆ ಹಣೆಹಚ್ಚಿಕೊಂಡು ಗೋಳಾಡಲು ಪ್ರಾರಂಭಿಸಿದ್ದನ್ನು ನೋಡಿಯಂತೂ ಗುಮಾಸ್ತ ಗಾಬರಿಯಾಗಿ ಬಿಟ್ಟ. ನುಗ್ಗಿ ಬಂದ ದುಃಖದಲ್ಲಿ ಅವನು ನಿಜಕ್ಕೂ ಕಣ್ಣೀರು ಸುರಿಸಲಾರಂಭಿಸಿದ. ಎಂಥ ನರಿ ಈ ಶನಿಚರಿ! ತಲೆ ಚಚ್ಚಿಕೊಳ್ಳಲೂ ಹೇಳಿಕೊಟ್ಟಿದ್ದಾಳೆ. ಎಲ್ಲರಿಗೂ ಎರಡರಷ್ಟು ಕೊಡಬೇಕು. ಆದರೆ ಏನೂ ಮಾಡುವಂತಿಲ್ಲ. ಅಣ್ಣನ ಮಗ ಮತ್ತು ಗುಮಾಸ್ತ ಇಬ್ಬರೂ ಅಸಹಾಯರಾಗಿ ನೋಡುತ್ತಾ ನಿಲ್ಲಬೇಕಾಯಿತು. ನೆಲಕ್ಕೆ ತಲೆ ಚಚ್ಚಿಕೊಳ್ಳುತ್ತಾ ಗೋಳಾಡುತ್ತಿದ್ದ ಗುಲಬದನ್ ಹಾಗೆಯೇ ಶುಷ್ಕವಾದ ತನ್ನ ಕಣ್ಣುಗಳನ್ನು ಅಣ್ಣನ ಮಗನ ಕಡೆ ತಿರುಗಿಸಿ ನೋಡಿದಳು. ಕಣ್ಣುಹೊಡೆದು ಕಿಸಕ್ಕನೆ ನಕ್ಕಳು. ಆಮೇಲೆ ಶನಿಚರಿಯ ಅಳುವಿಗೆ ತನ್ನ ದನಿಯನ್ನೂ ಕೂಡಿಸಿ ಅಳುವಿನ ಮೇಳದಲ್ಲಿ ಒಂದಾದಳು” (ಪುಟ 62 – 63) ಎಂಬ ಸಾಲುಗಳು ಲೇಖಕಿಯ ಕಥನ ಪ್ರತಿಭೆಗೆ ಉತ್ತಮ ಉದಾಹರಣೆಗಳಾಗಿವೆ. ಇವರ ಹಿರಿಯ ತಲೆಮಾರಿನ ಲೇಖಕರಾದ ಪ್ರೇಮಚಂದರ ‘ಹೆಣದ ಬಟ್ಟೆ’ (ಕಫನ್) ಎಂಬ ಕತೆಯಲ್ಲೂ ಹೆಣವನ್ನು ಮುಂದಿಟ್ಟುಕೊಂಡು ಬದುಕಿನ ಕ್ರೂರಹಾಸ್ಯವನ್ನು ವಿವರಿಸುವ ಧಾಟಿಯನ್ನು ಕಾಣಬಹುದು.

    ಹಣವಿದ್ದರೆ ಬಡವರ ಕಣ್ಣೀರನ್ನೂ ಕೊಂಡುಕೊಳ್ಳಬಹುದು ಎಂಬ ಶ್ರೀಮಂತರ ಸೊಕ್ಕು ರುಡಾಲಿ ವೃತ್ತಿಯನ್ನು ಸೃಷ್ಟಿಸಿದೆ. ಬಡವರ ದುಡಿಮೆ, ಸ್ವಾತಂತ್ರ್ಯ ಮತ್ತು ಅವರ ದೇಹವಷ್ಟೇ ಅಲ್ಲ ಅದರೊಳಗಿನ ಕಣ್ಣೀರು ಕೂಡ ಮಾರಾಟದ ವಸ್ತುವಾಗಬಲ್ಲ ಭೀಕರ ಪರಿಸ್ಥಿತಿಯನ್ನು ಕಟ್ಟಿಕೊಡುವ ಕಾದಂಬರಿಯು ಧನಿಕರ ಕೊಳ್ಳುಬಾಕತನದಿಂದಾಗಿ ಸಮಾಜ ಅಧಃಪತನಕ್ಕೊಳಗಾಗಿರುವ ರೀತಿಯನ್ನು ತಿಳಿಸುತ್ತದೆ. ಕಷ್ಟಕಾರ್ಪಣ್ಯಗಳ ನಡುವೆಯೂ ಘನತೆ ಮತ್ತು ಸ್ವಾಭಿಮಾನದಿಂದ ಬದುಕುವ ಮನುಷ್ಯನ ಅಂತಃಸತ್ವವನ್ನು ತೋರಿಸುವ ಮೂಲಕ ಶನಿಚರಿ ರುಡಾಲಿಯಾದ ಬಗೆ, ಆಕೆಯ ಜೀವನ ಕ್ರಮವನ್ನು ಶೋಧಿಸುವಲ್ಲಿ ಲೇಖಕಿಯು ಯಶಸ್ವಿಯಾಗಿದ್ದಾರೆ. ಶೋಷಣೆಯನ್ನು ವಸ್ತುವನ್ನಾಗಿಟ್ಟುಕೊಂಡ ಕಾದಂಬರಿಯಲ್ಲಿ ಶೋಷಣೆಯನ್ನು ಸಮರ್ಪಕವಾಗಿ ನಿರ್ವಹಿಸುವುದು ಕಷ್ಟ. ಸಿದ್ಧಾಂತಕ್ಕೆ ಬದ್ಧರಾಗಿ ನಡೆದುಕೊಳ್ಳುವುದರಿಂದ ಬರವಣಿಗೆಯಲ್ಲಿ ಏಕತಾನತೆ, ಅಸಹಜಕಲ್ಪನೆ, ಅಂತಃಸತ್ವವಿಲ್ಲದ ಪಾತ್ರಚಿತ್ರಣ, ಉದ್ವಿಗ್ನತೆಯಿಂದ ಕೂಡಿದ ನಿರೂಪಣೆ, ಅತಿಭಾವುಕತೆಗಳಿಂದ ಸೊರಗುವುದೇ ಹೆಚ್ಚು. ವರ್ಗ ಸಂಘರ್ಷವಿದ್ದರೂ ತಿಳುವಳಿಕೆಯ ಬಲವಿರುವುದಿಲ್ಲ. ಸಿದ್ಧಾಂತದ ಆಳದಲ್ಲಿರುವ ಮಾನವೀಯ ಸ್ಪಂದನವನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಆದರೆ ‘ರುಡಾಲಿ’ಯು ಈ ದೋಷಗಳಿಂದ ಹೊರತಾಗಿದೆ. ಸಾಮಾಜಿಕ ಕಾರ್ಯಕರ್ತೆಯಾಗಿ ಸಕ್ರಿಯರಾಗಿದ್ದ ಲೇಖಕಿಯು ಬಡಜನರ ಬದುಕನ್ನು ಹತ್ತಿರದಿಂದ ಕಂಡಿರುವುದರಿಂದ ಸಮಸ್ಯೆಯ ಆಳಕ್ಕಿಳಿದು ಚಿಂತಿಸಲು ಅವರಿಗೆ ಸಾಧ್ಯವಾಗಿದೆ. ಅವರ ಹೆಚ್ಚಿನ ಕೃತಿಗಳಂತೆ ಈ ಕಾದಂಬರಿ ಕೂಡ ಕೆಳವರ್ಗದ ಜನರ ದನಿಯಾಗಿದೆ. ಬರವಣಿಗೆಯಲ್ಲಿ ನಯ – ನುಣುಪು, ಮಾದಕತೆ – ಚಿತ್ರಮಯತೆ ಇಲ್ಲದಿದ್ದರೂ ಅಸಾಧಾರಣ ಶಕ್ತಿಯಿದೆ. ಎದ್ದು ಕಾಣುವ ಆಶಾ ಭಾವನೆ, ಬದುಕು ಉತ್ತಮಗೊಳ್ಳುವುದೆಂಬ ಭರವಸೆ, ಬದುಕಿನ ಉರಿಯಲ್ಲೂ ಬತ್ತದ ಪ್ರೇಮ ಅಂತಃಕರಣಗಳು ಕಾದಂಬರಿಯ ಧನಾತ್ಮಕ ಅಂಶಗಳಾಗಿವೆ. ಲೇಖಕಿಯು ಕ್ರಾಂತಿಕಾರಿ ಮನೋಧರ್ಮದವರಾಗಿದ್ದರೂ ಕೋಪ ಮತ್ತು ಆವೇಶವನ್ನು ಬಿಟ್ಟುಕೊಟ್ಟು ಬರೆದಿರುವುದರಿಂದ, ಅನುಭವವು ಚಿಂತನೆಯನ್ನು ಆಹ್ವಾನಿಸಿದ್ದರಿಂದ ಇಂಥ ಉತ್ತಮ ಕೃತಿಯನ್ನು ರಚಿಸಲು ಅವರಿಗೆ ಸಾಧ್ಯವಾಗಿದೆ.

    ವಿಮರ್ಶಕರು : ಡಾ. ಸುಭಾಷ್ ಪಟ್ಟಾಜೆ

    ಡಾ. ಸುಭಾಷ್ ಪಟ್ಟಾಜೆಯವರು ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದಲ್ಲಿ ಡಾ. ಯು. ಮಹೇಶ್ವರಿ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ‘ಕನ್ನಡ ಮತ್ತು ಮಲಯಾಳಂ ಸಣ್ಣ ಕತೆಗಳಲ್ಲಿ ಪರಕೀಯ ಪ್ರಜ್ಞೆಯ ನೆಲೆಗಳು- ಒಂದು ತೌಲನಿಕ ಅಧ್ಯಯನ’ ಎಂಬ ಸಂಶೋಧನ ಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ. ಗೋಡೆ ಮೇಲಿನ ಗೆರೆಗಳು (ಕಥಾ ಸಂಕಲನ) ಅನುಪಮ ಅಕ್ಷರೋಪಾಸಕ ಎ. ನರಸಿಂಹ ಭಟ್, ಸುನಂದಾ ಬೆಳಗಂವಕರ ಜೀವನ ಮತ್ತು ಸಾಹಿತ್ಯ, ಬಹುಮುಖಿ: ಮೋಹನ ಕುಂಟಾರ್ ಬದುಕು ಮತ್ತು ಸಾಧನೆ (ವ್ಯಕ್ತಿ ಚಿತ್ರಣ) ಕಥನ ಕಾರಣ (ಸಂಶೋಧನ ಕೃತಿ) ಶ್ರುತಿ ಹಿಡಿದು ಜೊತೆ ನಡೆದು (ವಿಮರ್ಶಾ ಲೇಖನಗಳ ಸಂಗ್ರಹ) ನುಡಿದು ಸೂತಕಿಗಳಲ್ಲ, ಇಹಪರದ ಧ್ಯಾನ, ಪ್ಲಾಸಿಬೋ (ಸಂಪಾದಿತ) ಎಂಬ ಕೃತಿಗಳನ್ನು ಹೊರತಂದಿರುವ ಇವರು ಕಾಸರಗೋಡು ಜಿಲ್ಲೆಯ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆ ಶೇಣಿಯಲ್ಲಿ ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಧಾರವಾಡದ ಸಾಹಿತ್ಯ ಗಂಗಾ ಸಂಸ್ಥೆಯ ಸಂಚಾಲಕರಾಗಿ, ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯ ಸದಸ್ಯರಾಗಿ ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಗಳನ್ನು ನಡೆಸುತ್ತಿದ್ದಾರೆ.

    article baikady Literature review roovari
    Share. Facebook Twitter Pinterest LinkedIn Tumblr WhatsApp Email
    Previous Articleಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಜಿಲ್ಲಾ ಘಟಕ ಬೆಳಗಾವಿ ವತಿಯಿಂದ ಬೇಸಿಗೆ ಕವಿಗೋಷ್ಠಿ
    Next Article ಸುರತ್ಕಲ್ಲಿನ ಶ್ರೀ ವಿಶ್ವೇಶತೀರ್ಥ ಸಭಾಂಗಣದಲ್ಲಿ ಸಂಗೀತ ಕಛೇರಿ ಮತ್ತು ಭರತನಾಟ್ಯ | ಮೇ 03
    roovari

    Add Comment Cancel Reply


    Related Posts

    ಬೊಳುವಾರು ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದಲ್ಲಿ ಪತ್ತನಾಜೆ ತಾಳಮದ್ದಳೆ ಕೂಟ

    May 25, 2026

    ಗಂಟಾಲ್‌ಕಟ್ಟೆಯ ಚರ್ಚ್‌ ಸಭಾಂಗಣದಲ್ಲಿ ಗುಮಟೆ ಕಾರ್ಯಾಗಾರ

    May 25, 2026

    ‘ಒಂದು ಕಥೆ-ಒಂದು ಪ್ರೇರಣೆ’ ಕಥೆ ಹೇಳುವ ಸ್ಪರ್ಧೆ | ಕೊನೆಯ ದಿನಾಂಕ ಮೇ 30

    May 25, 2026

    ಉದಯೋನ್ಮುಖ ನೃತ್ಯ ಕಲಾವಿದೆ ಕುಮಾರಿ ವೈಷ್ಣವಿ ಜಯಶಂಕರ್ ರಂಗಪ್ರವೇಶ

    May 25, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.