Subscribe to Updates

    Get the latest creative news from FooBar about art, design and business.

    What's Hot

    ನೀನಾಸಂ ರಂಗಶಿಕ್ಷಣಕ್ಕೆ ಅರ್ಜಿ ಆಹ್ವಾನ

    June 6, 2026

    ಬೈಲೂರು ದೇವಸ್ಥಾನದಲ್ಲಿ ಅರ್ಥಪೂರ್ಣ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ

    June 6, 2026

    ಯಕ್ಷಗಾನ ಮಾರ್ಗದರ್ಶಿ ಶಿಬಿರದ ಸಮಾರೋಪ ಸಮಾರಂಭ ಮತ್ತು ಪ್ರಶಸ್ತಿ ಪ್ರದಾನ

    June 6, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಪುಸ್ತಕ ವಿಮರ್ಶೆ | ಇಂಗ್ಲೀಷ್ ಗೆ ಅನುವಾದಿಸಿದ ತುಳು ನಾಟಕ ‘ಪಿಂಗಾರದ ಬಾಲೆ ಸಿರಿ’
    Article

    ಪುಸ್ತಕ ವಿಮರ್ಶೆ | ಇಂಗ್ಲೀಷ್ ಗೆ ಅನುವಾದಿಸಿದ ತುಳು ನಾಟಕ ‘ಪಿಂಗಾರದ ಬಾಲೆ ಸಿರಿ’

    June 5, 2026Updated:June 6, 2026No Comments3 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಸಿರಿ ಮಹಾಕಾವ್ಯ ಅಥವಾ ಸಿರಿ ಪಾಡ್ದನವು ಇಂದು ತುಳುವಿನಲ್ಲಿ ಲಭ್ಯವಿರುವ ಒಂದು ಪ್ರಮುಖ ಕೃತಿ. 15,683 ಪದ್ಯಗಳನ್ನು ಒಳಗೊಂಡಿರುವ ಈ ಕೃತಿ ತುಳುವರ ಹೆಮ್ಮೆ. ಇದರಲ್ಲಿರುವುದು ಸಿರಿ ಎಂಬ ಬಂಟ ಸಮುದಾಯದ ರಾಜಕುಮಾರಿಯು ತನ್ನ ಸತ್ಯ-ನ್ಯಾಯ-ನಿಷ್ಠೆಗಳ ಪಾಲನೆಯಿಂದ ದೈವತ್ವಕ್ಕೆ ಏರುವ ಕಥೆ. ಪಿತೃಪ್ರಧಾನ ಪದ್ದತಿಯು ಹೆಣ್ಣುಮಕ್ಕಳನ್ನು ತನ್ನ ಕಪಿಮುಷ್ಠಿಯೊಳಗಡೆ ಹಿಡಿದುಕೊಂಡು ನಲುಗಿಸುತ್ತಿದ್ದ ಒಂದು ಕಾಲದಲ್ಲಿ ತನ್ನ ಪತಿ ಸುಳ್ಳು ಹೇಳಿ ವಂಚಿಸಿದಾಗ ಸೆಟೆದು ನಿಂತು ಯಾರಿಗೂ ಹೆದರದೆ ಪ್ರತಿಭಟಿಸಿದ ದಿಟ್ಟ ಹೆಣ್ಣು ಸಿರಿ. ಇಂದು ಅನ್ಯಾಯಕ್ಕೊಳಗಾದ ಸ್ತ್ರೀಯರು ಆಶ್ರಯ ಬೇಡಿ ಬರುವುದು ಸಿರಿ ಎಂಬ ತಮ್ಮ ಆರಾಧ್ಯ ದೇವತೆಯ ಬಳಿಗೇ. ಅಂತಹ ಮಹಾನ್ ಸ್ತ್ರೀಯ ಕುರಿತಾದ ‘ಸಿರಿ ಮಹಾಕಾವ್ಯ’ ಕಥೆಯನ್ನು ಆಧರಿಸಿ ಲೇಖಕ ಗಂಗಾಧರ ಕಿದಿಯೂರು ‘ಪಿಂಗಾರದ ಬಾಲೆ ಸಿರಿ’ ಎಂಬ ಸುಂದರ ನಾಟಕವನ್ನು ತುಳು ಭಾಷೆಯಲ್ಲಿ ರಚಿಸಿದ್ದಾರೆ. ಅದನ್ನು ಗೋವಾದಲ್ಲಿರುವ ಲೇಖಕ ಪ್ರೊ. ಎಸ್.ಎನ್.ಡಿ. ಪೂಜಾರಿಯವರು ಅತ್ಯಂತ ಸಮರ್ಥವಾಗಿ ಇಂಗ್ಲೀಷ್ ಗೆ ಅನುವಾದಿಸಿದ್ದಾರೆ.

    ಕಾವ್ಯರೂಪದಲ್ಲಿರುವ ಒಂದು ಕಥೆಯನ್ನು ನಾಟಕ ರೂಪಕ್ಕೆ ತರುವುದು ಸುಲಭದ ಕೆಲಸವಲ್ಲ. ನಾಟಕ ಬರೆಯುವುದು ಬೇರೆಯೇ ಅದ ಒಂದು ಪ್ರತಿಭೆ. ಇಲ್ಲಿ ಕಥೆ ಕೈಯಲ್ಲಿದ್ದರೆ ಸಾಲದು. ಕಥೆಯನ್ನು ನೇರವಾಗಿ ನಿರೂಪಿಸುತ್ತ ಹೋಗುವ ಅವಕಾಶ ನಾಟಕಕಾರನಿಗೆ ಇಲ್ಲ. ನಾಟಕದಲ್ಲಿ ಎಲ್ಲವೂ ಸಂಭಾಷಣೆ ಹಾಗೂ ಸಂಭಾಷಣೆಗಳ ನಡುವಣ ಮೌನಗಳ ಮೂಲಕ ಸಂವಹನವಾಗಬೇಕು. ಸಂಭಾಷಣೆಗಳು ಹೇಗಿರಬೇಕು, ಅವುಗಳ ಧ್ವನಿಗಳಲ್ಲಿ ಏರಿಳಿತಗಳು ಹೇಗಿರಬೇಕು ಮತ್ತು ಮೌನಗಳಿಗೆ ಎಲ್ಲೆಲ್ಲಿ ಅವಕಾಶ ನೀಡಬೇಕು, ದೃಶ್ಯಗಳು ಎಷ್ಟಿರಬೇಕು, ದೃಶ್ಯಗಳನ್ನು ಎಲ್ಲಿ ತುಂಡರಿಸಿ ಮುಂದಿನ ದೃಶ್ಯವನ್ನು ಆರಂಭಿಸಬೇಕು ಎಂಬಿತ್ಯಾದಿ ಅಂಶಗಳ ಬಗ್ಗೆ ನಾಟಕಕಾರನ ಸೃಜನಶೀಲತೆ ಕೆಲಸ ಮಾಡಬೇಕಾಗುತ್ತದೆ. ‘ಪಿಂಗಾರದ ಬಾಲೆ ಸಿರಿ’ಯಲ್ಲಿ ಗಂಗಾಧರ ಕಿದಿಯೂರು ಈ ಎಲ್ಲ ವಿಷಯಗಳ ಬಗ್ಗೆ ಚಿಂತನೆ ನಡೆಸಿಯೇ ಈ ನಾಟಕ ರಚನೆಯ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಇದರಲ್ಲಿ 34 ದೃಶ್ಯಗಳಿವೆ. ನಾಟಕದುದ್ದಕ್ಕೂ ಸರಳವೂ ಅರ್ಥಪೂರ್ಣವೂ ಸಂದರ್ಭೋಚಿತ ಧ್ವನಿಗಳೂ ಇರುವ ಸಂಭಾಷಣೆಗಳನ್ನು ಅವರು ಬರೆದಿದ್ದಾರೆ. ಮೂಲಕಥೆಯ ಮುಖ್ಯ ಅಂಶಗಳು ಸೋರಿಹೋಗಬಾರದು ಅನ್ನುವ ಉದ್ದೇಶದಿಂದ ದೃಶ್ಯ-ದೃಶ್ಯಗಳ ನಡುವೆ ಒಬ್ಬ ನಿರೂಪಕ ಬಂದು ದೃಶ್ಯಾಂತರದಲ್ಲಿ ಏನು ನಡೆಯಿತು ಅನ್ನುವುದನ್ನು ಚುಟುಕಾಗಿ ಹೇಳುವ ಜಾಣ ತಂತ್ರವನ್ನೂ ಅವರು ಅಳವಡಿಸಿಕೊಂಡಿದ್ದಾರೆ. ನಾಟಕದಲ್ಲಿ ನಿರೂಪಕನೂ ಒಂದು ಪಾತ್ರ.

    ಎಸ್.ಎನ್.ಡಿ. ಪೂಜಾರಿಯವರ ಅನುವಾದದ ಬಗ್ಗೆ ಹೇಳುವುದಾದರೆ ಸಾಮಾನ್ಯವಾಗಿ ಅನುವಾದಕರು ತಮಗೆ ಚಿರಪರಿಚಿತವಿರುವ ಒಂದು ಭಾಷೆಯನ್ನು ಲಕ್ಷ್ಯ ಭಾಷೆಯಾಗಿ ಆಯ್ದುಕೊಳ್ಳುತ್ತಾರೆ. ಯಾಕೆಂದರೆ ಪೂರ್ತಿಯಾಗಿ ನಮ್ಮದಲ್ಲದ ಒಂದು ಭಾಷೆಗೆ ಅನುವಾದಿಸುವುದು ಕಷ್ಟ. ಅಪರಿಚಿತ ಅಥವಾ ಕಡಿಮೆ ಪರಿಚಯವಿರುವ ಒಂದು ಭಾಷೆಯ ಸಹಜವಾದ ಶೈಲಿ, ಪದ ವೈವಿಧ್ಯಗಳು, ಪದಪುಂಜಗಳು, ನುಡಿಗಟ್ಟುಗಳು, ಗಾದೆಮಾತುಗಳು, ಆಚರಣೆಗಳು, ನಂಬಿಕೆ- ಸಂಪ್ರದಾಯಗಳ ಪೂರ್ತಿ ಪರಿಚಯ ನಮಗೆ ಇರುವುದಿಲ್ಲ. ಅದರಲ್ಲೂ ಇಂಗ್ಲೀಷ್ ನಂಥ ಒಂದು ಭಾಷೆಯ ವ್ಯಾಕರಣವೇ ಬೇರೆ. ನಮ್ಮ ಪ್ರಾದೇಶಿಕ ಭಾಷೆಯಿಂದ ಇಂಗ್ಲೀಷಿಗೆ ಅನುವಾದಿಸುವಾಗ ಪಾಂಡಿತ್ಯ ಮಾತ್ರವಲ್ಲದೆ ತುಂಬಾ ಎಚ್ಚರಿಕೆಯೂ ಇರಬೇಕು. ಮೂಲ ಕೃತಿಯಲ್ಲಿ ವ್ಯಕ್ತವಾದ ಆಶಯಕ್ಕೆ ಒಂದಿಷ್ಟೂ ಚ್ಯುತಿ ಬಾರದಂತೆ ಜಾಗ್ರತೆ ವಹಿಸಬೇಕು. ಮೂಲ ಕೃತಿಯಲ್ಲಿ ಹೇಳಿದ್ದನ್ನು ಸರಿಯಾಗಿ ಅರ್ಥಮಾಡಿಕೊಂಡು ಲಕ್ಷ್ಯ ಭಾಷೆಯಲ್ಲಿ ಅದಕ್ಕೆ ಅಭಿವ್ಯಕ್ತಿ ನೀಡುವುದು ಹರಸಾಹಸದ ಕೆಲಸ. ಒಬ್ಬ ಸೃಜನಶೀಲ ಬರಹಗಾರನಿಂದ ಮಾತ್ರವೇ ಇದು ಸಾಧ್ಯ.

    ಪ್ರೊ. ಎಸ್.ಎನ್.ಡಿ. ಪೂಜಾರಿಯವರು ಅತ್ಯಂತ ಯಶಸ್ವಿಯಾಗಿ ಈ ಕೆಲಸವನ್ನು ಮಾಡಿದ್ದಾರೆ. ಅಲ್ಲದೆ, ಮೂಲ ನಾಟಕವು ಜಾನಪದ ಶೈಲಿಯ ಭಾಷೆಯಲ್ಲಿರುವುದು ಇನ್ನೊಂದು ಸಮಸ್ಯೆ. ಜಾನಪದ ಶೈಲಿಯ ಪದಗಳಿಗೆ ಇಂಗ್ಲೀಷ್ ನಲ್ಲಿ ಪರ್ಯಾಯಗಳನ್ನು ಹುಡುಕುವುದು ತುಂಬಾ ಶ್ರಮ ಬೇಡುವ ಕೆಲಸ. ಪ್ರೊ. ಪೂಜಾರಿಯವರು ಅದನ್ನು ಸವಾಲಾಗಿ ತೆಗೆದುಕೊಂಡು ತಮ್ಮ ಸರಳ-ಸುಂದರ ಇಂಗ್ಲೀಷಿನಲ್ಲಿ ‘ಪಿಂಗಾರದ ಬಾಲೆ ಸಿರಿ’ ನಾಟಕವನ್ನು ಅನುವಾದಿಸಿದ್ದಾರೆ. ತುಳು ಭಾಷೆ ತಿಳಿಯದವರಿಗೆ ‘ಸಿರಿ’ ಎಂಬ ಮಹಾನ್ ಸ್ತ್ರೀಯ ಕಥೆಯನ್ನು ತಿಳಿದುಕೊಳ್ಳುವ ಅವಕಾಶ ಮಾಡಿಕೊಟ್ಟಿದ್ದಾರೆ.

    ವಿಮರ್ಶಕಿ | ಡಾ. ಪಾರ್ವತಿ ಜಿ. ಐತಾಳ್

    ಡಾ. ಪಾರ್ವತಿ ಗಂಗಾಧರ ಐತಾಳರು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕದವರು. ಕಣ್ಣೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದ ಇವರು ಮುಲ್ಕಿಯ ವಿಜಯಾ ಕಾಲೇಜು ಹಾಗೂ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಮತ್ತು ಇಂಗ್ಲೀಷ್ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

    ಶ್ರೀಮತಿ ಪಾರ್ವತಿ ಜಿ. ಐತಾಳರು ಸಣ್ಣ ಕಥೆ, ಕವನ, ನಾಟಕ ಬರೆದಿರುವುದರೊಂದಿಗೆ ಅನುವಾದ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಉದ್ಯೋಗದೊಂದಿಗೆ ದಿನ ಪತ್ರಿಕೆಗಳಲ್ಲಿ ಲೇಖನ ಬರೆಯಲಾರಂಬಿಸಿದ ಇವರು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಕನ್ನಡ ಮಾತೃಭಾಷೆಯಾಗಿರುವ ಇವರು ಸ್ನೇಹಿತರಿಂದ ಮಲಯಾಳಂ ಭಾಷೆಯನ್ನು ಕಲಿತು, ಕನ್ನಡ, ಹಿಂದಿ, ಇಂಗ್ಲಿಷ್, ಮಲಯಾಳಂ ಮತ್ತು ತುಳು ಭಾಷೆಗಳನ್ನು ತಿಳಿದ ಪಂಚಭಾಷಾ ಪ್ರವೀಣೆಯಾಗಿದ್ದಾರೆ.

    ಡಾ. ಪಾರ್ವತಿಯವರು ಸ್ವತಂತ್ರ ಸಾಹಿತ್ಯದೊಂದಿಗೆ ವಿವಿಧ ಸಾಹಿತಿಗಳ ಹಿಂದಿ, ಮಲಯಾಳಂ, ಇಂಗ್ಲೀಷ್ ಮೂಲದ ನಾಟಕ, ಕಾದಂಬರಿ, ಸಣ್ಣ ಕತೆ ಇತ್ಯಾದಿಗಳನ್ನು ಅನುವಾದ ಮಾಡಿದ ಖ್ಯಾತಿ ಇವರದು. ಮಲ್ಲಿಕಾ ಪ್ರಶಸ್ತಿ, ಗೋವಿಂದರಾವ್ ದತ್ತಿನಿಧಿ ವಿಮರ್ಶಾ ಲೇಖನ ಬಹುಮಾನ ಮತ್ತು ಎಚ್. ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ ಇವುಗಳು ಸಾಹಿತ್ಯ ಕ್ಷೇತ್ರದ ಇವರ ಸಾಧನೆಗೆ ಬಂದ ಪ್ರಶಸ್ತಿಗಳು.

     

    article baikady Literature review roovari
    Share. Facebook Twitter Pinterest LinkedIn Tumblr WhatsApp Email
    Previous Articleತುಳು ನಾಟಕ ತರಬೇತಿ ಕಾರ್ಯಾಗಾರದ ಸಮಾರೋಪದಲ್ಲಿ ನಾಟಕ ಪ್ರದರ್ಶನ
    Next Article ಅಮೋಘವಾಗಿ ಉದ್ಘಾಟನೆಗೊಂಡ ಸುಮನಸಾ ಕೊಡವೂರು ರಜತ ಮಹೋತ್ಸವ ಸಂಭ್ರಮ
    roovari

    Add Comment Cancel Reply


    Related Posts

    ನೀನಾಸಂ ರಂಗಶಿಕ್ಷಣಕ್ಕೆ ಅರ್ಜಿ ಆಹ್ವಾನ

    June 6, 2026

    ಬೈಲೂರು ದೇವಸ್ಥಾನದಲ್ಲಿ ಅರ್ಥಪೂರ್ಣ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ

    June 6, 2026

    ಯಕ್ಷಗಾನ ಮಾರ್ಗದರ್ಶಿ ಶಿಬಿರದ ಸಮಾರೋಪ ಸಮಾರಂಭ ಮತ್ತು ಪ್ರಶಸ್ತಿ ಪ್ರದಾನ

    June 6, 2026

    ಉತ್ಕೃಷ್ಟವಾದ ವೇಣುವಾದನ ಕಚೇರಿ ‘ರಾಗರತ್ನ ಮಾಲಿಕೆ-49’

    June 6, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.