Subscribe to Updates

    Get the latest creative news from FooBar about art, design and business.

    What's Hot

    ಪ್ರವರ ಮತ್ತು ಅಶ್ವಘೋಷ ಥಿಯೇಟರ್ ವತಿಯಿಂದ ‘ಬೆಂಗಳೂರು ಕಿರುನಾಟಕೋತ್ಸವ’ | ಕೊನೆಯ ದಿನಾಂಕ ಜೂನ್ 26

    June 5, 2026

    ಮೈಸೂರಿನ ಕಿರು ರಂಗಮಂದಿರದಲ್ಲಿ ‘ನನ್ನ ಧ್ವನಿ’ ಏಕವ್ಯಕ್ತಿ ನಾಟಕ ಪ್ರದರ್ಶನ | ಜೂನ್ 06

    June 5, 2026

    ಅಮೋಘವಾಗಿ ಸಂಪನ್ನಗೊಂಡ ಸುಮನಸಾ ಕೊಡವೂರು ರಜತ ಮಹೋತ್ಸವ ಸಂಭ್ರಮ

    June 5, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಅಮೋಘವಾಗಿ ಸಂಪನ್ನಗೊಂಡ ಸುಮನಸಾ ಕೊಡವೂರು ರಜತ ಮಹೋತ್ಸವ ಸಂಭ್ರಮ
    Drama

    ಅಮೋಘವಾಗಿ ಸಂಪನ್ನಗೊಂಡ ಸುಮನಸಾ ಕೊಡವೂರು ರಜತ ಮಹೋತ್ಸವ ಸಂಭ್ರಮ

    June 5, 2026No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಉಡುಪಿ : ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆ ಮತ್ತು ಸುಮನಸಾ ಕೊಡವೂರು ರಜತ ಸಂಭ್ರಮ ಸಮಿತಿಯು ದಿನಾಂಕ 31 ಮೇ 2026ರಂದು ಕುಂಜಿಬೆಟ್ಟು ಐ.ವೈ.ಸಿ. ಸಭಾಂಗಣದಲ್ಲಿ 25ನೇ ಸಂವತ್ಸರ ಸಡಗರದ ಪ್ರಯುಕ್ತ ಹಮ್ಮಿಕೊಂಡಿದ್ದ ‘ರಜತ ಸಂಭ್ರಮ’ ಕಾರ್ಯಕ್ರಮ ನಡೆಯಿತು.

    ಈ ರಜತ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿದ ಪಡುಬಿದ್ರಿಯ ಯಸ್ಸೆನ್‌ ಸ್ಪೆಷಲ್‌ ಎಕಾನೋಮಿಕ್‌ ಝೋನ್‌ ಮುಖ್ಯಸ್ಥ ಅಶೋಕ್‌ ಶೆಟ್ಟಿಯವರು ಮಾತನಾಡಿ “ನಿಸ್ವಾರ್ಥ ಸೇವೆ, ಮಾನವೀಯ ಕಳಕಳಿ ಇಟ್ಟುಕೊಂಡು, ಜನರಿಗೆ ಸಹಾಯ ಮಾಡುತ್ತಾ ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಬೆಳೆದು ನಿಂತಿರುವ ಸಂಸ್ಥೆ ಸುಮನಸಾ ಕೊಡವೂರು. ಸಂಸ್ಥೆಯು ಜನ್ಮ ತಾಳಿದ್ದೇ ನೆರವಿನ ಹಸ್ತ ಚಾಚುವ ಘಟನೆಯ ಮೂಲಕ ಎಂಬುದನ್ನು ನೋಡಿದರೆ ಅಚ್ಚರಿಯಾಗುತ್ತದೆ. ಬಡವರೊಬ್ಬರ ಮನೆ ಬೆಂಕಿಗಾಹುತಿಯಾದಾಗ ಅವರಿಗೆ ಮನೆ ಕಟ್ಟಿಕೊಡುವ ಮೂಲಕ ಈ ಸಂಸ್ಥೆ ಆರಂಭವಾಯಿತು. ಅಂದಿನಿಂದ ಇಂದಿನವರೆಗೆ ಸಂಸ್ಥೆ ತನ್ನ ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಿಂದೆ ನೋಡಿದ್ದೇ ಇಲ್ಲ. ಸಂಸ್ಕೃತಿ, ಕಲೆ ಮತ್ತು ಮಾನವೀಯ ದೃಷ್ಟಿ ಇಟ್ಟುಕೊಂಡು ಸಾಂಸ್ಕೃತಿಕ ಸಂಘಟನೆಯಾಗಿ ಇಂದು ಬೆಳೆದಿದೆ. 31 ತುಳು ನಾಟಕ, 32 ಕನ್ನಡ ನಾಟಕ ಪ್ರದರ್ಶಿಸಿದದ್ದಲ್ಲದೇ, ಯಕ್ಷಗಾನವನ್ನೂ ಪ್ರದರ್ಶಿಸುತ್ತಾ, ಪ್ರೋತ್ಸಾಹಿಸುತ್ತಾ ಬಂದಿದೆ. ಅನೇಕ ಸಂಘ ಸಂಸ್ಥೆಗಳು ಹುಟ್ಟುತ್ತವೆ. ಆರಂಭದಲ್ಲಿ ಹುಮ್ಮಸ್ಸಿನಿಂದ ಕೆಲಸ ಮಾಡುತ್ತವೆ. ಮೂರ್ನಾಲ್ಕು ವರ್ಷಕ್ಕೆ ಹುಮ್ಮಸ್ಸು ಕಳೆದುಕೊಂಡು ಮುಚ್ಚಿ ಹೋಗುತ್ತವೆ. ಸುಮನಸಾ ಕೊಡವೂರು ಸಂಘಟನೆಯು 25 ವರ್ಷ ಪೂರೈಸಲು ಅದರ ಪದಾಧಿಕಾರಿಗಳ ತ್ಯಾಗ, ನಿಸ್ವಾರ್ಥ ಸೇವೆ, ಪರಿಶ್ರಮ, ಮುತುವರ್ಜಿ ಕಾರಣ” ಎಂದು ವಿವರಿಸಿದರು.

    ರಜತ ಮಹೋತ್ಸವದ ಕೈಪಿಡಿ ಬಿಡುಗಡೆ ಮಾಡಿದ ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಪೂರ್ಣಿಮಾ ಮಾತನಾಡಿ, “ಉಡುಪಿಯಲ್ಲಿ ಬಹಳಷ್ಟು ಸಾಂಸ್ಕೃತಿಕ, ಸಾಹಿತ್ಯಿಕ, ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ. ಅದರಲ್ಲಿ ಸುಮನಸಾ ಕೊಡವೂರು ಪ್ರಮುಖವಾದುದು. ಉಡುಪಿ ನಗರದ ಮಧ್ಯದಲ್ಲಿ ಇರುವ ಅಜ್ಜರಕಾಡು ಭುಜಂಗ ಉದ್ಯಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ರಂಗಹಬ್ಬ ನಡೆಸುತ್ತಿರುವ ಏಕೈಕ ಸಂಸ್ಥೆ ಇದು. ‘ವಿಭಿನ್ನ ತಂತ್ರಜ್ಞಾನಗಳು ಬಂದಿರುವುದರಿಂದ ಮಕ್ಕಳು ಮನಸ್ಸು ಅತ್ತ ಹೋಗಿದೆ. ಮೊಬೈಲ್‌ ಬಂದು ಮಕ್ಕಳು ಹಾಳಾಗಿದ್ದಾರೆ ಎಂದು ಅನೇಕರು ದೂರುತ್ತಾರೆ. ಆದರೆ, ದೂರುವವರ ಕೈಯಲ್ಲಿಯೂ ಮೊಬೈಲ್ ಇರುತ್ತದೆ. ಕ್ರಿಯಾಶೀಲ ಗುಂಪು ಇದ್ದರೆ ಮಕ್ಕಳನ್ನು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗುವಂತೆ ಮಾಡಬಹುದು ಎಂಬುದನ್ನು ಸುಮನಸಾ ಕೊಡವೂರು ಮಾಡಿ ತೋರಿಸಿದೆ” ಎಂದು ಶ್ಲಾಘಿಸಿದರು.

    ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಉದ್ಯಾವರ ನಾಗೇಶ್‌ ಕುಮಾರ್‌ ಮಾತನಾಡಿ “ಉಡುಪಿಯಲ್ಲಿ ತುಳುಕೂಟವು ತುಳು ನಾಟಕ ಸ್ಪರ್ಧೆಯನ್ನು ಎರಡೂವರೆ ದಶಕದ ಹಿಂದೆ ಆರಂಭಿಸಿತ್ತು. ಅದರ ಎರಡನೇ ವರ್ಷದ ಸ್ಪರ್ಧೆಯಲ್ಲಿ ಸುಮನಸಾ ಕೊಡವೂರಿನ ಕಲಾವಿದರು ‘ಬಂಗಾರ್ದ ಬಂಡಿ’ ಎಂಬ ನಾಟಕವನ್ನು ಪ್ರದರ್ಶಿಸುವ ಮೂಲಕ ಈ ಸಂಸ್ಥೆಯು ನಾಟಕದ ಯಾತ್ರೆ ಆರಂಭಿಸಿತು. ಈಗ ರಾಜ್ಯದಾದ್ಯಂತ ಹೆಸರು ಪಡೆದಿದೆ. ನಾವೆಲ್ಲ ಜನಪರವಾಗಿ, ಜಾತ್ಯತೀತ, ಸಂವಿಧಾನಬದ್ಧವಾಗಿ ಯೋಚನೆ ಮಾಡುತ್ತೇವೆ ಎಂದರೆ ಅದಕ್ಕೆ ಆಧುನಿಕ ರಂಗಭೂಮಿಯು ಕಾರಣವಾಗಿದೆ” ಎಂದರು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಜತ ಸಂಭ್ರಮ ಸಮಿತಿಯ ಅಧ್ಯಕ್ಷ ಹರಿಪ್ರಸಾದ್‌ ರೈ ಮಾತನಾಡಿ “ಸುಮನಸಾ ಕೊಡವೂರು ಸಂಸ್ಥೆ ಆರಂಭವಾಗುವುದಕ್ಕಿಂತ ಮೂರು ವರ್ಷ ಮೊದಲು ಉಡುಪಿ ಜಿಲ್ಲೆಯ ಉದಯವಾಯಿತು. ಅಗಲವಾದ ರಸ್ತೆ, ಕಟ್ಟಡ, ಮಾಲ್‌ಗಳ ಸಹಿತ ಜಿಲ್ಲೆ ಬೆಳೆದಿದೆ. ಆದರೆ, ಜಿಲ್ಲೆಯ ಅಸ್ಮಿತೆ, ಅಸ್ತಿತ್ವಕ್ಕೆ ಇದಷ್ಟೇ ಸಾಲುವುದಿಲ್ಲ. ಕಲೆ, ಸಾಹಿತ್ಯ, ಸಂಸ್ಕೃತಿ ಎಲ್ಲ ಬೇಕಾಗುತ್ತದೆ. ಇವೆರಡು ಒಟ್ಟಿಗೆ ಸಾಗಿದರೆ ಮಾತ್ರ ಸಹನಾಶೀಲ ಜೀವನ ಇರಲು ಸಾಧ್ಯ. ಕಾಲೇಜಿನಲ್ಲಿ ವಿದ್ಯೆ ಮಾತ್ರ ದೊರೆಯಬಹುದು. ವೃತ್ತಿ ಜೀವನದಲ್ಲಿ ಸಂಪರ್ಕ ಕೌಶಲ, ನಾಯಕತ್ವ, ನಿರ್ವಹಣಾ ಕೌಶಲ ಬೇಕಾದರೆ ರಂಗಚಟುವಟಿಕೆ ಅಗತ್ಯ” ಎಂದು ಪ್ರತಿಪಾದಿಸಿದರು. “ಬೆಳ್ಳಿ ಹಬ್ಬ ಕಾರ್ಯಕ್ರಮವನ್ನು ಒಂದು ವರ್ಷ ಮಾಡುತ್ತೇವೆ. ಅದಕ್ಕೆ ಎಲ್ಲರ ಸಹಕಾರ ಬೇಕು” ಎಂದು ಕೋರಿದರು.

    ಬುಡ್ನಾರು ಯಕ್ಷ ಸಂಜೀವ ಟ್ರಸ್ಟಿನ ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣ ಲೋಗೊ ಬಿಡುಗಡೆ ಮಾಡಿದರು. ಸಂಘಟನೆಯ ಅಧ್ಯಕ್ಷ ಪ್ರಕಾಶ್‌ ಜಿ. ಕೊಡವೂರು ಸ್ವಾಗತಿಸಿ, ಗೌರವಾಧ್ಯಕ್ಷ ಎಂ.ಎಸ್‌. ಭಟ್‌ ವಂದಿಸಿ, ದಯಾನಂದ ಕರ್ಕೇರ ನಿರೂಪಿಸಿದರು. ರಜತ ಸಂಭ್ರಮ ಸಮಿತಿ ಗೌರವಾಧ್ಯಕ್ಷ ಎಂ.ಎಲ್. ಸಾಮಗ, ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ ಸಂಚಾಲಕ ಭಾಸ್ಕರ ಪಾಲನ್‌ ಬಾಚನಬೈಲು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಬೇಸಿಗೆ ಶಿಬಿರ ವಿದ್ಯಾರ್ಥಿಗಳಿಂದ ಎರಡು ನಾಟಕ ಪ್ರದರ್ಶನಗೊಂಡಿತು.

    baikady drama roovari theatre
    Share. Facebook Twitter Pinterest LinkedIn Tumblr WhatsApp Email
    Previous Articleತುಳು ನಾಟಕ ತರಬೇತಿ ಕಾರ್ಯಾಗಾರದ ಸಮಾರೋಪದಲ್ಲಿ ನಾಟಕ ಪ್ರದರ್ಶನ
    Next Article ಮೈಸೂರಿನ ಕಿರು ರಂಗಮಂದಿರದಲ್ಲಿ ‘ನನ್ನ ಧ್ವನಿ’ ಏಕವ್ಯಕ್ತಿ ನಾಟಕ ಪ್ರದರ್ಶನ | ಜೂನ್ 06
    roovari

    Add Comment Cancel Reply


    Related Posts

    ಪ್ರವರ ಮತ್ತು ಅಶ್ವಘೋಷ ಥಿಯೇಟರ್ ವತಿಯಿಂದ ‘ಬೆಂಗಳೂರು ಕಿರುನಾಟಕೋತ್ಸವ’ | ಕೊನೆಯ ದಿನಾಂಕ ಜೂನ್ 26

    June 5, 2026

    ಮೈಸೂರಿನ ಕಿರು ರಂಗಮಂದಿರದಲ್ಲಿ ‘ನನ್ನ ಧ್ವನಿ’ ಏಕವ್ಯಕ್ತಿ ನಾಟಕ ಪ್ರದರ್ಶನ | ಜೂನ್ 06

    June 5, 2026

    ತುಳು ನಾಟಕ ತರಬೇತಿ ಕಾರ್ಯಾಗಾರದ ಸಮಾರೋಪದಲ್ಲಿ ನಾಟಕ ಪ್ರದರ್ಶನ

    June 5, 2026

    ಪೊಳಲಿ ಶೀನಪ್ಪ ಹೆಗ್ಗಡೆ ಮತ್ತು ಎಸ್.ಆರ್. ಹೆಗ್ಡೆ ಪ್ರಶಸ್ತಿಗೆ ಹಿರಿಯ ವಿದ್ವಾಂಸ ಡಾ. ಶಿವರಾಮ ಶೆಟ್ಟಿ ಆಯ್ಕೆ

    June 5, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.