ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಉರ್ವ ಎಸ್.ಸಿ.ಎಸ್. ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ಹಮ್ಮಿಕೊಂಡಿದ್ದ ತುಳು ನಾಟಕ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭ ಹಾಗೂ ನಾಟಕ ಪ್ರದರ್ಶನ ಕಾರ್ಯಕ್ರಮವು ದಿನಾಂಕ 03 ಜೂನ್ 2026ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಈ ಸಮಾರೋಪ ಸಮಾರಂಭವನ್ನು ನಟ ಸಾಯಿ ಚೇತನ್ ಇವರು ಉದ್ಘಾಟಿಸಿ “ರಂಗಭೂಮಿಯ ಕಲಿಕೆ ನಿರಂತರವಾಗಿದ್ದು, ಸದಾ ಹೊಸತನದ ಅನ್ವೇಷಣೆ ನಡೆಯುತ್ತಿರುತ್ತದೆ. ವಿದ್ಯಾರ್ಥಿಗಳಿಗೆ ತುಳು ನಾಟಕ ತರಬೇತಿ ಕೈಗೊಂಡ ತುಳು ಸಾಹಿತ್ಯ ಅಕಾಡೆಮಿಯ ಕಾರ್ಯ ಶ್ಲಾಘನೀಯ” ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಮಾತನಾಡಿ, “ಕಾಲೇಜಿನಲ್ಲಿ ರಂಗಾಭ್ಯಾಸ ವಿದ್ಯಾರ್ಥಿಗಳಿಗೆ ಸೃಜನಾತ್ಮಕ ಯೋಚನೆ ಮೂಲಕ ಪಠ್ಯ ಅಧ್ಯಯನಕ್ಕೂ ಪೂರಕವಾಗುತ್ತದೆ” ಎಂದರು.
ತರಬೇತಿ ಕಾರ್ಯಾಗಾರದ ನಿರ್ದೇಶಕ ಯೋಗೀಶ್ ಶೆಟ್ಟಿ, ರಂಗ ನಿರ್ದೇಶಕ ಜಗನ್ ಪವಾರ್, ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥೆ ಸುಚಿತ್ರಾ ಪಿ. ಶೆಟ್ಟಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ರಿತೇಶ್ ಪೂಜಾರಿ ಹಾಗೂ ಶಶಾಂಕ್ ಇವರು ನಾಟಕ ಕಾರ್ಯಾಗಾರದ ಅನುಭವ ಹಂಚಿಕೊಂಡರು. ಪ್ರಾಂಶುಪಾಲ ಹಾರ್ದಿಕ್ ಪಿ. ಚೌಹಾಣ್ ಸ್ವಾಗತಿಸಿ, ವಿದ್ಯಾರ್ಥಿನಿ ಮೇಘ ನಿರೂಪಿಸಿದರು. ಕಾಲೇಜು ತುಳು ಸಂಘದ ಸಂಚಾಲಕಿ ದೀಕ್ಷಿತಾ ವಂದಿಸಿದರು.
