ಉಡುಪಿ : ಕನ್ನಡ ಹಾಗೂ ತುಳು ಭಾಷೆ, ಸಾಹಿತ್ಯ, ಜಾನಪದ, ಸಂಶೋಧನ ಕ್ಷೇತ್ರಗಳಲ್ಲಿ ವಿದ್ವಾಂಸರಲ್ಲೊಬ್ಬರಾದ ಡಾ. ಶಿವರಾಮ ಶೆಟ್ಟಿಯವರು 2026ನೇ ಸಾಲಿನ ಪೊಳಲಿ ಶೀನಪ್ಪ ಹೆಗ್ಗಡೆ ಮತ್ತು ಎಸ್.ಆರ್. ಹೆಗ್ಡೆ ಇವರ ಜಂಟಿ ಹೆಸರಲ್ಲಿ ನೀಡಲಾಗುವ ಪ್ರಶಸ್ತಿ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಪೊಳಲಿ ಶೀನಪ್ಪ ಹೆಗ್ಗಡೆ ಮತ್ತು ಎಸ್.ಆರ್. ಹೆಗ್ಡೆ ಇವರಿಬ್ಬರ ನೆನಪಿನಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಮೂಲಕ ಈ ಪ್ರಶಸ್ತಿಯನ್ನು ನೀಡಲಾಗುವುದು. ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ದಿನಾಂಕ 20 ಜೂನ್ 2026ರಂದು ನಡೆಯಲಿರುವುದು. ಪ್ರಶಸ್ತಿಯು ರೂ.20,000/- ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿರುತ್ತದೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ತಿಳಿಸಿರುತ್ತಾರೆ.
ಡಾ. ಬಿ. ಶಿವರಾಮ ಶೆಟ್ಟಿಯವರು 1957ರ ಅಕ್ಟೋಬರ್ 3ರಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಬೋಳಾರದಲ್ಲಿ ಜನಿಸಿದರು. ತಂದೆ ದಿವಂಗತ ಬೋಳಾರ ಚಂದಪ್ಪ ಶೆಟ್ಟಿ ಹಾಗೂ ತಾಯಿ ದಿವಂಗತ ಸೇಸಮ್ಮ. ಇವರು ಮೈಸೂರು ವಿಶ್ವವಿದ್ಯಾನಿಲಯದಿಂದ ಮಂಗಳಗಂಗೋತ್ರಿಯ ಕನ್ನಡ ಸ್ನಾತಕೋತ್ತರ ಮತ್ತು ಸಂಶೋಧನ ಕೇಂದ್ರದ ಮೂಲಕ ಸ್ನಾತಕೋತ್ತರ ಪದವಿ ಹಾಗೂ ಮಂಗಳೂರು ವಿಶ್ವವಿದ್ಯಾಲಯದಿಂದ ‘ತುಳುನಾಡಿನ ಸಸ್ಯ ಜಾನಪದ’ ವಿಷಯದಲ್ಲಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. 1981ರಿಂದ ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸಂಶೋಧನಾ ಸಹಾಯಕರಾಗಿ, ಉಪನ್ಯಾಸಕರಾಗಿ, ಪ್ರಾಧ್ಯಾಪಕ ಹಾಗೂ ಸಂಸ್ಥೆಯ ಅಧ್ಯಕ್ಷರಾಗಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, 2019ರಲ್ಲಿ ನಿವೃತ್ತರಾದರು.
ಇವರ ಮಾರ್ಗದರ್ಶನದಲ್ಲಿ 10 ಮಂದಿ ವಿದ್ಯಾರ್ಥಿಗಳು ಪಿಎಚ್.ಡಿ. ಪದವಿ ಪಡೆದಿದ್ದಾರೆ. ಕನ್ನಡ ಮತ್ತು ತುಳು ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಗೆ ಸಂಬಂಧಿಸಿದಂತೆ 130ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ವಿಚಾರಸಂಕಿರಣಗಳಲ್ಲಿ ಮಂಡಿಸಿದ್ದಾರೆ. ಇವರ ಸಂಪಾದಕತ್ವದಲ್ಲಿ ಸುಮಾರು 50ಕ್ಕೂ ಅಧಿಕ ಸಂಶೋಧನಾ ಲೇಖನಗಳು ಹಾಗೂ 19ಕ್ಕೂ ಹೆಚ್ಚು ಕೃತಿಗಳು ಪ್ರಕಟಗೊಂಡಿವೆ. ಮಂಗಳೂರು ವಿ.ವಿ. ಕನಕದಾಸ ಅಧ್ಯಯನ ಪೀಠ ಮತ್ತು ಸಂಶೋಧನ ಕೇಂದ್ರದ ಸಂಯೋಜಕರಾಗಿ ಹಲವು ಮಹತ್ವದ ಪ್ರಕಟಣೆಗಳನ್ನು ಹೊರತರುವುದರಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ. ಕನಕ ಚಿಂತನ ಪ್ರಚಾರೋಪನ್ಯಾಸ ಮಾಲಿಕೆಯಂತಹ ಅನೇಕ ಕನಕನಿಗೆ ಸಂಬಂಧಿಸಿದ ಯೋಜನೆಗಳನ್ನು ಜ್ಯಾರಿಗೊಳಿಸಿದ್ದಾರೆ. ಶಿವರಾಮ ಶೆಟ್ಟಿ ಅವರು ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾಗಿ ಕನ್ನಡ ಸಾಹಿತ್ಯ ಸಂಶೋಧನೆಗೆ ಸಂಬಂಧಪಟ್ಟ ವಿನೂತನ ಕಾರ್ಯಕ್ರಮಗಳೊಂದಿಗೆ 1968ರಿಂದ ಇಲ್ಲಿಯವರೆಗಿನ ವಿದ್ಯಾರ್ಥಿಗಳು, ಸಂಶೋಧನ ಪದವೀಧರರು, ಅಧ್ಯಾಪಕರು ಹಾಗೂ ಸಿಬ್ಬಂದಿಗಳನ್ನೊಳಗೊಂಡ ಗಿಳಿವಿಂಡಿನ ಸ್ಥಾಪಕರೂ ಆಗಿದ್ದಾರೆ. ಅಲ್ಲದೆ ಯು.ಜಿ.ಸಿ. ಸ್ಯಾಪ್‌ಯೋಜನೆಯ ಸಂಯೋಜಕರಾಗಿ, ಗ್ಯಾನ್‌ಯೋಜನೆಯ ಸಂಯೋಜಕರಾಗಿ ಕಾರ್ಯನಿರ್ವಹಿಸಿದ್ದಾರೆ. ಹೀಗೆ ನಿರಂತರ ಅಧ್ಯಯನ, ಅಧ್ಯಾಪನ, ಸಂಶೋಧನೆ, ಸಂಪಾದನೆ, ಸಂಘಟನೆಯ ಮೂಲಕ ಕ್ರಿಯಾಶೀಲರಾಗಿರುವ ಇವರು ಕರ್ನಾಟಕ ಸರ್ಕಾರದ ‘ಕನಕ ಗೌರವ’ ಬನ್ನಂಜೆ ಬಾಬು ಅಮೀನ್ ಜಾನಪದ ವಿದ್ವಾಂಸ ಪ್ರಶಸ್ತಿ ಹಾಗೂ ಕರ್ನಾಟಕ ಸರಕಾರದ 2022-23ನೇ ಸಾಲಿನ ‘ಕನಕಶ್ರೀ’ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
