ಬ್ರಹ್ಮಾವರ : ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ, ಬ್ರಹ್ಮಾವರ ತಾಲೂಕು ಘಟಕದ ವತಿಯಿಂದ ಗೀತಾನಂದ ಫೌಂಡೇಶನ್ ಮಣೂರು ಪಡುಕೆರೆ ಮತ್ತು ಕಾರ್ಯನಿರತ ಪತ್ರಕರ್ತರ ಸಂಘ ಬ್ರಹ್ಮಾವರ ತಾಲೂಕು ಇವರ ಸಹಯೋಗದೊಂದಿಗೆ ‘ಬತ್ತದ ಹೆಜ್ಜೆ’ ನಾವೀನ್ಯದ ನಂದಾದೀಪ ಬ್ರಹ್ಮಾವರ ತಾಲೂಕು ಐದನೆಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ದಿನಾಂಕ 04 ಅಕ್ಟೋಬರ್ 2026ರಂದು ಸಾಸ್ತಾನ ಶಿವಕೃಪಾ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ.
ಬೆಳಗ್ಗೆ 8-30 ಗಂಟೆಗೆ ರಾಷ್ಟ್ರ ಧ್ವಜಾರೋಹಣ, ಪರಿಷತ್ ಧ್ವಜಾರೋಹಣ ಮತ್ತು ಅದ್ದೂರಿ ಮೆರವಣಿಗೆ, ಉದ್ಘಾಟನಾ ಸಮಾರಂಭ 10-00 ಗಂಟೆಗೆ ನಡೆಯಲಿದ್ದು, ನರೇಂದ್ರ ಕುಮಾರ್ ಕೋಟ ಇವರು ಸಮ್ಮೇಳನಾಧ್ಯಾಕ್ಷತೆ ವಹಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ, ಪುಸ್ತಕ ಮಳಿಗೆ ಉದ್ಘಾಟನೆ ಮತ್ತು ಪುಸ್ತಕ ಬಿಡುಗಡೆ ನಡೆಯಲಿದೆ. 11-30 ಗಂಟೆಗೆ ಬಹುವಿಧ ಗೋಷ್ಠಿಯಲ್ಲಿ ಕವನ ವಾಚನ, ಜನಪದ ಸ್ಪಂದನ, ಜನಪದ ಸಾಹಿತ್ಯ ಮತ್ತು ಜೀವನ ಮೌಲ್ಯ, ಕಥಾ ವಾಚನ, ಯಕ್ಷ ಸ್ಪಂದನ, ಯಕ್ಷಾಭಿನಯ ವಿಷಯ ಮಂಡನೆ, ಗಂಟೆ 12-45ಕ್ಕೆ ಸ್ನೇಹ ಕೂಟ ಮಣೂರು, ವಿಪ್ರ ಮಹಿಳಾ ವಲಯ ಸಾಲಿಗ್ರಾಮ ಮತ್ತು ಮೀನಾ ಕಾರಂತ ಮತ್ತು ಬಳಗ ಸಾಸ್ತಾನ ಇವರಿಂದ ನೃತ್ಯ ವೈವಿದ್ಯ, 2-00 ಗಂಟೆಗೆ ಕುಂದ್ರಾಪ್ರ ಕನ್ನಡದ ಸೊಗಡು ಮಾತುಕತೆ ಮತ್ತು 3-30 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ.

