ಬೆಂಗಳೂರು : ಭಾರತೀಯ ನೃತ್ಯರಂಗದಲ್ಲಿ ಸಾಕಷ್ಟು ವಿಶಿಷ್ಟ ಪ್ರಯೋಗಗಳನ್ನು ಮಾಡಿ ತಮ್ಮ ಕರ್ತೃತ್ವ ಶಕ್ತಿಯನ್ನು ಸಾಬೀತುಗೊಳಿಸಿರುವ ಬಹುಮುಖ ವ್ಯಕ್ತಿತ್ವದ ವಿದುಷಿ ಡಾ. ಪದ್ಮಿನಿ ಅಚ್ಚಿ, ಬದ್ಧತೆಯ ಉತ್ತಮ ನೃತ್ಯಕಲಾವಿದೆ ಜೊತೆಗೆ ಅತ್ಯುತ್ತಮ ನಾಟ್ಯಗುರು. ಬೆಂಗಳೂರಿನ ಎ ಜೀಸ್ ಲೇ ಔಟ್ ನಲ್ಲಿರುವ ‘ಅಚ್ಚಿ ಕ್ಲಾಸಿಕಲ್ ಡ್ಯಾನ್ಸ್ ಸೆಂಟರ್’- ನ ಆರ್ಟಿಸ್ಟಿಕ್ ಡೈರೆಕ್ಟರ್ ಆಗಿರುವ ಪದ್ಮಿನಿ ಇವರ ಮಾರ್ಗದರ್ಶನದಲ್ಲಿ ಈಗಾಗಲೇ ನೂರಾರು ಉತ್ತಮ ನೃತ್ಯ ಕಲಾವಿದೆಯರು ಹೊರಹೊಮ್ಮಿ, ರಂಗಪ್ರವೇಶಗಳನ್ನು ನೆರವೇರಿಸಿಕೊಂಡಿದ್ದು, ಕರ್ನಾಟಕ ಸರ್ಕಾರ ನಡೆಸುವ ವಿವಿಧ ನೃತ್ಯ ಪರೀಕ್ಷೆಗಳಲ್ಲಿ ವಿದುಷಿಯರಾಗಿ ಯಶಸ್ವೀ ನರ್ತಕಿಯರಾಗಿದ್ದಾರೆ. ಗುರು ಪದ್ಮಿನಿ ಇವರ ವಿಶಿಷ್ಟ ನೃತ್ಯ ಸಂಯೋಜನೆಗಳು, ನೃತ್ಯರೂಪಕಗಳ ನವ ಪರಿಕಲ್ಪನೆ – ಪ್ರಯೋಗಗಳು ಸಾಕಾರಗೊಂಡು ಅನೇಕಾನೇಕ ಪ್ರದರ್ಶನಗಳನ್ನು ಕಂಡಿದ್ದು ಅವರ ಉತ್ತಮ ಸಾಧನೆಗೆ ಕೈಗನ್ನಡಿಯಾಗಿದೆ.
ವಿದುಷಿ ಪದ್ಮಿನಿ ಅಚ್ಚಿ ಇವರ ಮಾರ್ಗದರ್ಶನದಲ್ಲಿ ಅವರ ಶಿಷ್ಯೆಯರ ಸಮೂಹ ನೃತ್ಯಗಳು ವಿವಿಧ ನೃತ್ಯ ಸ್ಪರ್ಧೆಗಳಲ್ಲಿ ಬಹುಮಾನಗೊಂಡು ಅವರ ಕಲಾತ್ಮಕ ಅರ್ಪಣೆ ನೃತ್ಯರಂಗದಲ್ಲಿ ಖ್ಯಾತಗೊಂಡಿವೆ. ಉದಯೋನ್ಮುಖ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವುದರಲ್ಲಿ ಬಹು ಮುಂದಿರುವ ಅಚ್ಚಿ, ದೇಶಾದ್ಯಂತವಲ್ಲದೆ ಹೊರದೇಶಗಳಲ್ಲೂ ತಮ್ಮ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ಕಾರಣರಾಗಿರಾಗಿದ್ದಾರೆ. ಉತ್ತಮ ಗುರು ಪರಂಪರೆಯನ್ನು ಮುಂದುವರೆಸಿಕೊಂಡು ಬರುತ್ತಿರುವ ಪ್ರತಿಭಾವಂತ ಪದ್ಮಿನಿ ಅಚ್ಚಿ ಇದೀಗ ತಮ್ಮ ನೃತ್ಯಶಾಲೆಯ ಪುಟ್ಟಮಕ್ಕಳ ‘ಚಿಣ್ಣರ ಮೇಳ’ವನ್ನು ಬಸವನಗುಡಿಯ ‘ದಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್’ ನಲ್ಲಿ ದಿನಾಂಕ 09 ಆಗಸ್ಟ್ 2026ರ ಭಾನುವಾರದಂದು ಬೆಳಿಗ್ಗೆ 10-00 ಗಂಟೆಗೆ ನೇರ ಸಂಗೀತ ಸಹಕಾರದಲ್ಲಿ ‘ನೃತ್ಯ ವೈವಿಧ್ಯ’ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ಶಶಿಧರ ಪ್ರಸಾದ್- ಚಾನ್ಸಲರ್ ಮೈಸೂರು ವಿಶ್ವವಿದ್ಯಾನಿಲಯ ಮತ್ತು ಲೇಖಕಿ, ಅಂಕಣಕಾರ್ತಿ, ನೃತ್ಯ – ನಾಟಕ ವಿಮರ್ಶಕಿ ವೈ.ಕೆ. ಸಂಧ್ಯಾ ಶರ್ಮ ಭಾಗವಹಿಸಲಿದ್ದಾರೆ. ಕಣ್ಮನ ತುಂಬುವ ಈ ನೃತ್ಯರಂಜನೆಯ ಕಾರ್ಯಕ್ರಮಕ್ಕೆ ಎಲ್ಲರಿಗೂ ಸುಸ್ವಾಗತ.

ಚಿಕ್ಕಂದಿನಿಂದ ಓದಿನಲ್ಲಿ ಚುರುಕಾಗಿದ್ದ ಪದ್ಮಿನಿ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಭೌತಶಾಸ್ತ್ರದಲ್ಲಿ ಎಂ.ಎಸ್ಸಿ. ಸ್ನಾತಕೋತ್ತರ ಪದವೀಧರೆ. ಎರಡು ವರ್ಷಗಳು ಫಿಸಿಕ್ಸ್ ಲೆಕ್ಚರರ್ ಆಗಿ ಕೆಲಸ ಮಾಡಿದ ಅನುಭವವೂ ಉಂಟು. ಆನಂತರ ಮದುವೆಯಾಗಿ ಬೆಂಗಳೂರು ಸೇರಿದರು. ಮೂಲತಃ ಮೈಸೂರಿನವರಾದ ಇವರು 9ನೆಯ ವಯಸ್ಸಿಗೇ ನೃತ್ಯ ಕಲಿಯಲು ನಾಟ್ಯಗುರು ರಾಮಮೂರ್ತಿ ರಾವ್ ಬಳಿ ಸೇರಿಸಿದರು. ಬದ್ಧತೆಯಿಂದ ನೃತ್ಯ ಕಲಿಯತೊಡಗಿದ ಆಕೆ, ಜ್ಯೂನಿಯರ್, ಸೀನಿಯರ್ ಮತ್ತು ವಿದ್ವತ್ ಪರೀಕ್ಷೆಗಳಲ್ಲಿ ಉತ್ತಮಾಂಕಗಳಿಂದ ತೇರ್ಗಡೆಯಾದರು. ಕಲಿಕೆಯ 12 ವರುಷಗಳ ಅವಧಿಯಲ್ಲಿ ಆಕೆ, ಅನೇಕ ಏಕವ್ಯಕ್ತಿ ನೃತ್ಯ ಪ್ರದರ್ಶನ ಹಾಗೂ ಗುರುಗಳ ತಂಡದೊಂದಿಗೆ ಸಮೂಹ ನೃತ್ಯಗಳಲ್ಲೂ ಭಾಗವಹಿಸಿ ತನ್ನ ಅಸ್ಮಿತೆಯನ್ನು ಪ್ರದರ್ಶಿಸಿದ್ದರು.



ಬೆಂಗಳೂರಿಗೆ ಸ್ಥಳಾಂತರಗೊಂಡ ನಂತರ ತಮ್ಮದೇ ಅದ ‘ಅಚ್ಚಿ ಶಾಸ್ತ್ರೀಯ ನೃತ್ಯ ಕೇಂದ್ರ’ ವಿದ್ಯುಕ್ತವಾಗಿ ಸ್ಥಾಪಿತವಾಗಿ ಪದ್ಮಿನಿ ಸಂಸ್ಥೆಯ ಕಾರ್ಯದರ್ಶಿಯಾದರು. ತಮ್ಮ ಸಂಪೂರ್ಣ ಸಮಯವನ್ನು ನೃತ್ಯಶಿಕ್ಷಣಕ್ಕಾಗಿಯೇ ಮೀಸಲಿರಿಸಿದರು. ನಂತರ ಹೆಚ್ಚಿನ ಕಲಿಕೆಗಾಗಿ ಕೆಲಕಾಲ ವಸುಂಧರಾ ದೊರೆಸ್ವಾಮಿ ಅವರಲ್ಲಿ ವಿಶೇಷ ತರಬೇತಿ ಪಡೆದು ಪ್ರಸ್ತುತ ಅಭಿನಯ ಪ್ರಾವೀಣ್ಯ ಸಾಧನೆಗಾಗಿ ಗುರು ಭಾನುಮತಿ ಅವರಲ್ಲಿ ಕಲಿತರು. ಗಂಗೂಬಾಯಿ ಹಾನಗಲ್ ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಲ್ಲಿ ಭರತನಾಟ್ಯದಲ್ಲಿ ಎಂ.ಎ. ಸ್ನಾತಕೋತ್ತರ ಪದವಿಯಲ್ಲಿ ಮೂರು ಸ್ವರ್ಣ ಪದಕಗಳೊಂದಿಗೆ ಪ್ರಥಮ ರ್ಯಾಂಕ್ ಗಳಿಸಿದ ಅಗ್ಗಳಿಕೆ ಇವರದು. ಇವೇ ಅಲ್ಲದೆ ತಮ್ಮದೇ ಆದ ಅನೇಕ ನೃತ್ಯರೂಪಕಗಳನ್ನು ನಿರ್ಮಿಸಿ ದೇಶಾದ್ಯಂತ ಅನೇಕ ಪ್ರದರ್ಶನಗಳನ್ನು ನೀಡಿರುವ ವಿಶೇಷ ಇವರದು.


* ವೈ.ಕೆ. ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.
