ಕಾರ್ಕಳ : ಶ್ರೀ ಬೈಲೂರು ಮಹಿಷಮರ್ದಿನಿ ದೇವಸ್ಥಾನದ ಸಭಾಂಗಣದಲ್ಲಿ ದಿನಾಂಕ 12 ಜೂನ್ 2026 ಶುಕ್ರವಾರ ಸಂಜೆ ಮನಮೋಹಕ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.
ಕರ್ನಾಟಕ ಸಂಗೀತ ಕ್ಷೇತ್ರದ ಹಿರಿಯ ವಿದ್ವಾಂಸ ಕಲಾಶ್ರೀ ವಿದ್ವಾನ್ ಮಧೂರು ಬಾಲಸುಬ್ರಹ್ಮಣ್ಯಂ ಅವರ ಶಿಷ್ಯೆಯರು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ವಿಧಾತ್ರಿ ಮಯ್ಯ, ಚಿನ್ಮಯಿ ಕಾಪು, ಶಾಶ್ವತಿ ಕಾಪು, ಡಾ. ಪೂರ್ಣಿಮಾ, ಸಿಂಚನ ಭಟ್, ಸುದೀಕ್ಷಾ ಭಟ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಲಾವಿದರು. ಇವರಿಗೆ ಸಹವಾದ್ಯ ಕಲಾವಿದರಾದ ಶ್ರೀಮತಿ ಶ್ರೇಷ್ಠ ಇವರು ಕೊಳಲಿನಲ್ಲಿ, ವಯಲಿನ್ ನಲ್ಲಿ ಪ್ರಣೀತ್ ಬಳ್ಳಕ್ಕುರಾಯ ಮತ್ತು ಮೃದಂಗದಲ್ಲಿ ನಾರಾಯಣ ಬಳ್ಳಕ್ಕುರಾಯ ಸಹಕರಿಸಿದರು.

ಸುಮಾರು ಎರಡು ಗಂಟೆಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ ಶಿಷ್ಯರು ವರ್ಣ, ಕೃತಿಗಳು, ದೇವರನಾಮಗಳು ಹಾಗೂ ದಾಸರ ಪದಗಳನ್ನು ಸುಶ್ರಾವ್ಯವಾಗಿ ಪ್ರಸ್ತುತಪಡಿಸಿ ಭಕ್ತರ ಮನಸೂರೆಗೊಂಡರು. ಸಂಗೀತದ ಮಾಧುರ್ಯದಿಂದ ದೇವಸ್ಥಾನದ ವಾತಾವರಣ ಭಕ್ತಿರಸಪೂರ್ಣವಾಗಿ ಕಂಗೊಳಿಸಿತು. ಕಾರ್ಯಕ್ರಮದ ಕೊನೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿಯವರು ಎಲ್ಲ ಕಲಾವಿದರನ್ನು ಅಭಿನಂದಿಸಿ, ಅವರ ಸಂಗೀತ ಸೇವೆಯನ್ನು ಶ್ಲಾಘಿಸಿ ಶುಭ ಹಾರೈಸಿದರು. ಅಮ್ಮನ ಅನುಗ್ರಹದಿಂದ ಇಂತಹ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ ಎಂಬುದು ಎಲ್ಲರ ಹಾರೈಕೆ.
