ಹಾಸನ : “ಸಾಹಿತ್ಯವು ಸಮಾಜದ ಕನ್ನಡಿ; ಅದು ಕಾಲದ ಮುಖವನ್ನು ಪ್ರತಿಬಿಂಬಿಸುತ್ತದೆ” ಎನ್ನುವ ಆಶಯದೊಂದಿಗೆ ತಮ್ಮ ಬರವಣಿಗೆಯನ್ನು ಆರಂಭಿಸಿದ ಕಂಸ (ಕಂಚುಗಾರನಹಳ್ಳಿ ಸತೀಶ್) ಅವರ ಇಲ್ಲಿಯವರೆಗಿನ ಸಾಹಿತ್ಯದ ಬದುಕು ಮತ್ತು ಬರಹವನ್ನು ಗಮನಿಸಿದ ಹಾಸನದ ಚುಟುಕು ಸಾಹಿತ್ಯ ಪರಿಷತ್ ‘ಹೇಮಾದ್ರಿ ಸಾಹಿತ್ಯ ಶಾಶ್ವತ ಸ್ಮೃತಿ ದತ್ತಿ ಪ್ರಶಸ್ತಿ’ ನೀಡಿ ಗೌರವಿಸುತ್ತಿದೆ. ಹಾಸನದ ಚುಟುಕು ಸಾಹಿತ್ಯ ಪರಿಷತ್ ನ ಅಧ್ಯಕ್ಷರಾದ ನಾಡಶ್ರೀ ಬಾ. ನಂ. ಲೋಕೇಶ್ ಇವರು ಅಭಿನಂದನೆಗಳನ್ನು ಸಲ್ಲಿಸುವುದರ ಜೊತೆಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮಕ್ಕೆ ಕಂಸ ಇವರನ್ನು ಆಹ್ವಾನಿಸಿದ್ದಾರೆ. ದಿನಾಂಕ 28 ಜೂನ್ 2026ರಂದು ಹಾಸನದ ಎ.ವಿ.ಕೆ. ಕಾಲೇಜಿನ ಹಾರನಹಳ್ಳಿ ರಾಮಸ್ವಾಮಿ ಸುಶೀಲಮ್ಮ ಸಭಾಂಗಣದಲ್ಲಿ ನಡೆಯುವ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಪರಿಷತ್ ನ ಅಧ್ಯಕ್ಷರು ತಿಳಿಸಿದ್ದಾರೆ.
ಕಂಸ ಇವರು ಮೂಲತಃ ಚಿಕ್ಕಮಗಳೂರಿನ ಕಂಚುಗಾರನಹಳ್ಳಿ ಗ್ರಾಮದವರು. ವೃತ್ತಿಯಲ್ಲಿ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದು, ಪ್ರವೃತ್ತಿಯಾಗಿ ತಮ್ಮ ಸಾಹಿತ್ಯ ಸೇವೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಸಾಹಿತ್ಯದ ವಿವಿಧ ಪ್ರಕಾರಗಳಾದ ಕಥೆ, ಕವನ, ಗಜಲ್, ಕಾದಂಬರಿ, ಮಕ್ಕಳ ಸಾಹಿತ್ಯ ಹೀಗೆ ಎಲ್ಲಾ ಪ್ರಕಾರಗಳಲ್ಲೂ ತಮ್ಮ ಕೃತಿಗಳನ್ನು ಹೊರತಂದಿದ್ದಾರೆ. ಇಲ್ಲಿಯವರೆಗೂ ಸುಮಾರು 9 ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿದ್ದು, ಈಗಾಗಲೇ ಅನೇಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಕಂಸ ಇವರ ‘ಸ್ಯಾನಿಟರಿ ಪ್ಯಾಡ್’ ಕಾದಂಬರಿಗೆ ಹಾಸನದ ರಿಷಿ ಪ್ರಕಾಶನದ ವತಿಯಿಂದ ‘ಅಪ್ಪ ಪ್ರಶಸ್ತಿ’ ಲಭಿಸಿದೆ. ‘ಮುಂದೇನಾಯ್ತು?’ (ಕಥಾ ಸಂಕಲನ), ‘ನನ್ನವಳು ನಕ್ಕಾಗ’ (ಗಜಲ್ ಸಂಕಲನ), ‘ನೆನಪುಗಳ ಮಾತು ಮಧುರ’ (ಕಾವ್ಯ), ‘ಬಂಗಾರದ ಹನಿಗಳು’ (ಕವನ ಸಂಕಲನ) ಹೀಗೆ ಹಲವಾರು ಕೃತಿಗಳ ರೂವಾರಿಗಳಾದ ಇವರು ಮಕ್ಕಳ ಸಾಹಿತ್ಯ ರಚನೆಯಲ್ಲೂ ನಿಸ್ಸೀಮರು. ಈಗಾಗಲೇ ‘ಪೆಪ್ಪರ್ಮೆಂಟು’ (ಮಕ್ಕಳ ಕವಿತೆಗಳು), ‘ಇಲ್ಲೇ ಸ್ವರ್ಗ’ (ಮಕ್ಕಳ ನಾಟಕಗಳು), ‘ಚಿಂಟು ಪಿಂಟು ಮತ್ತು ಮಿಂಚುವಿನ ಸಂಚಲನ’ (ಮಕ್ಕಳ ಕಾದಂಬರಿ) ಹಾಗೂ ‘ಭೈರ’ (ಮಕ್ಕಳ ಕಾದಂಬರಿ) ಮುಂತಾದ ಕೃತಿಗಳನ್ನು ಮಕ್ಕಳಿಗಾಗಿ ಕೊಡುಗೆ ನೀಡಿದ್ದಾರೆ. ಇತ್ತೀಚೆಗೆ ಭೈರ ಕಾದಂಬರಿಯನ್ನು ಕುರಿತು 6-16 ವಯಸ್ಸಿನ ಮಕ್ಕಳಿಗಾಗಿ ರಾಜ್ಯಮಟ್ಟದ ಆನ್ಲೈನ್ ರಸಪ್ರಶ್ನೆ ಕಾರ್ಯಕ್ರಮವನ್ನು ಕೂಡ ನಡೆಸಿದ್ದಾರೆ. ಪ್ರಕೃತಿ ಮತ್ತು ಕಾಡುಪ್ರಾಣಿಗಳ ರಕ್ಷಣೆ ವಿಷಯ ವಸ್ತುವನ್ನಿಟ್ಟುಕೊಂಡು ಬರೆದ ‘ಭೈರ’ ಮಕ್ಕಳ ಕಾದಂಬರಿಗೆ ಈಗಾಗಲೇ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳು ಅರಸಿಕೊಂಡು ಬಂದಿವೆ.
* ಶಿವಮೊಗ್ಗದ ಕರ್ನಾಟಕ ಸಂಘದಿಂದ 2024ನೇ ನಾ. ಡಿಸೋಜ ಮಕ್ಕಳ ಸಾಹಿತ್ಯ ಪ್ರಶಸ್ತಿ
* ಬೆಳಗಾವಿಯ ಹೊಂಬೆಳಕು ಪ್ರತಿಷ್ಠಾನದಿಂದ ರಾಷ್ಟ್ರಕೂಟ ಸಾಹಿತ್ಯ ಶ್ರೀ ಪ್ರಶಸ್ತಿ
* ಬೆಂಗಳೂರಿನ ಕರ್ನಾಟಕ ಸಾಹಿತ್ಯ ಪರಿಷತ್ತು ವತಿಯಿಂದ 2024ನೇ ಸಾಲಿನ ಸಾರಂಗಿ ವೆಂಕಟರಾಮಯ್ಯ ಶ್ರೀನಿವಾಸರಾವ್ ಪುಸ್ತಕ ದತ್ತಿ ಪ್ರಶಸ್ತಿ
ಅಕ್ಷರಗಳು ಅಮರವಾದಾಗ, ಸಾಹಿತ್ಯ ಇತಿಹಾಸವಾಗುತ್ತದೆ. ಕಂಸ ಅವರ ಸಮಗ್ರ ಸಾಹಿತ್ಯಕ್ಕೆ ಸಂದ ಈ ಎಲ್ಲಾ ಪ್ರಶಸ್ತಿಗಳು ನಿಜಕ್ಕೂ ಅರ್ಹ ವ್ಯಕ್ತಿಗೆ ಸಂದ ಪ್ರಶಸ್ತಿಗಳಾಗಿವೆ. ಹೀಗೆ ಅವರ ಸಾಹಿತ್ಯ ಸೇವೆ ಇನ್ನೂ ಮುಂದುವರೆಯಲಿ. ಮತ್ತಷ್ಟು ಪುಸ್ತಕ ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬರಲಿ ಎಂದು ಈ ಮೂಲಕ ಆಶಿಸೋಣ.
ಭುವನೇಶ್ವರಿ ರು. ಅಂಗಡಿ (ನರಗುಂದ)
