ಕಾಸರಗೋಡು : ಲಕ್ಷ್ಮೀ ಟೀಚರ್ ಕಣ್ಣಪ್ಪ ಮಾಸ್ಟರ್ ಮೆಮೋರಿಯಲ್ ಟ್ರಸ್ಟ್ ಮತ್ತು ನಾಟ್ಯನಿಕೇತನ ಕಲಾ ಅಕಾಡೆಮಿ ಕೊಲ್ಯ ಇದರ ಜಂಟಿ ಆಯೋಜಕತ್ವದಲ್ಲಿ ದಿನಾಂಕ 19 ಜುಲೈ 2026ರಂದು ಕುಂಜತ್ತೂರಿನ ಶ್ರೀಮಾತಾ ಕಲಾಮಂದಿರ ವೈಶಾಲಿಯಲ್ಲಿ ಕರ್ನಾಟಕ ಶಾಸ್ತ್ರೀಯ ನೃತ್ಯದ ವಸ್ತ್ರ ವಿನ್ಯಾಸ ಮತ್ತು ಕೇಶ ವಿನ್ಯಾಸದ ಬಗ್ಗೆ ಉಚಿತ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು.

ಕಲಾಶ್ರೀ ವಿದುಷಿ ರಾಜಶ್ರೀ ಉಳ್ಳಾಲ ಇವರ ಪರಿಕಲ್ಪನೆಯಂತೆ ಪೋಷಕರಿಗಾಗಿ ಈ ಕಾರ್ಯಾಗಾರ ಏರ್ಪಡಿಸಲಾಗಿದೆ. ಇವರ ಮಾರ್ಗದರ್ಶನದಲ್ಲಿ ಶ್ರೀಮತಿ ಚಂಚಲಾಕ್ಷಿ ಮತ್ತು ಶ್ರೀಮತಿ ಪ್ರಿಯಾ ಸೋಮೇಶ್ವರ ಇವರು ಸಂಪನ್ಮೂಲ ವ್ಯಕ್ತಿಗಳಾಗಿದ್ದು, ವಸ್ತ್ರ ವಿನ್ಯಾಸ ಮತ್ತು ಕೇಶ ವಿನ್ಯಾಸದ ಪ್ರಾತ್ಯಕ್ಷಿಕೆಯನ್ನು ಎಲ್ಲರಿಗೂ ಮನಮುಟ್ಟುವಂತೆ ಮಾಡುವುದರೊಂದಿಗೆ, ಎಷ್ಟು ಜಾಗ್ರತೆ ವಹಿಸಿದರೂ ಕೆಲವೊಮ್ಮೆ ಕೆಲವು ಚಿಕ್ಕ ಪುಟ್ಟ ಲೋಪದೋಷಗಳು ನೃತ್ಯದ ಒಟ್ಟು ಸೌಂದರ್ಯಕ್ಕೆ ಹೇಗೆ ಲೋಪ ತರುತ್ತದೆ ಎಂಬುದನ್ನು ವಿವರಿಸಿದರು.


ಭಕ್ತಿ ಪ್ರದಾನವಾದ ದಿವಿಶಾಳ ಭಗವತ್ ಪ್ರಾರ್ಥನೆಯೊಂದಿಗೆ ಟ್ರಸ್ಟಿನ ಸದಸ್ಯೆ ಶ್ರೀಮತಿ ಭಾರತಿ ರವೀಂದ್ರನಾಥ್ ಇವರು ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಟ್ರಸ್ಟಿನ ಕಾರ್ಯದರ್ಶಿ ಶ್ರೀಮತಿ ಚಂದ್ರಿಕಾ ಟೀಚರ್ ಪ್ರಾಸ್ತಾವಿಕ ನುಡಿಯೊಂದಿಗೆ ಟ್ರಸ್ಟಿನ ಉದ್ದೇಶ ಮತ್ತು ಇದುವರೆಗಿನ ಚಟುವಟಿಕೆಗಳ ಮಾಹಿತಿಯನ್ನು ನೀಡಿದರು. ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಟ್ರಸ್ಟಿನ ಅಧ್ಯಕ್ಷರಾದ ಶ್ರೀಮತಿ ಜಯಶೀಲ ಟೀಚರ್ ಸ್ವಾಗತಿಸಿ, ನೃತ್ಯದಲ್ಲಿ ಸರಿಯಾದ ವಸ್ತ್ರ ವಿನ್ಯಾಸ ಮತ್ತು ಕೇಶಾಲಂಕಾರದ ಪ್ರಾಧಾನ್ಯತೆಯ ಕುರಿತು ಮಾತನಾಡಿದರು. ಕಲಾಶ್ರೀ ವಿದುಷಿ ರಾಜಶ್ರೀ ಉಳ್ಳಾಲ ಇವರು ಧನ್ಯವಾದ ಸಮರ್ಪಿಸಿದರು. ಟ್ರಸ್ಟಿನ ಸದಸ್ಯ ರವೀಂದ್ರನಾಥರು ಉಪಸ್ಥಿತರಿದ್ದರು. ಮಕ್ಕಳು ಮತ್ತು ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದ ಈ ಕಾರ್ಯಾಗಾರವು ಒಂದು ಅತ್ಯುಪಯುಕ್ತ ಮಾಹಿತಿ ಮತ್ತು ತರಬೇತಿಯನ್ನು ನೀಡುವಲ್ಲಿ ಸಫಲತೆಯನ್ನು ಕಂಡಿದೆ.

