Subscribe to Updates

    Get the latest creative news from FooBar about art, design and business.

    What's Hot

    ವಿಶ್ವಭಾರತಿ ಯಕ್ಷ ಸಂಭ್ರಮ ಯಕ್ಷಗಾನ ತಾಳಮದ್ದಳೆ ಸಪ್ತಾಹ

    July 22, 2026

    ಮೈಸೂರಿನ ಸುಗಮ ಸಂಗೀತ ಅಕಾಡೆಮಿಯಿಂದ ‘ಗಾನ ವೈಭವ’ | ಜುಲೈ 24

    July 22, 2026

    ನೃತ್ಯ ವಿಮರ್ಶೆ | ಚೈತನ್ಯಪೂರ್ಣ ಆಹ್ಲಾದಕಾರೀ ‘ಅನನ್ಯ’ ನೃತ್ಯಾಭಿನಯ

    July 22, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಪುಸ್ತಕ ವಿಮರ್ಶೆ | ‘ಪಂಪನ ಕಂಪನ’ ಪಂಪನ ಮೇಲೆ ಹೊಸ ಬೆಳಕು
    Article

    ಪುಸ್ತಕ ವಿಮರ್ಶೆ | ‘ಪಂಪನ ಕಂಪನ’ ಪಂಪನ ಮೇಲೆ ಹೊಸ ಬೆಳಕು

    July 21, 2026Updated:July 22, 2026No Comments4 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಅಜಕ್ಕಳ ಗಿರೀಶ ಭಟ್ಟರ ಕೃತಿ ‘ಪಂಪನ ಕಂಪನ’ ಒಂದು ಅಧ್ಯಯನಾಧಾರಿತ ವಿದ್ವತ್ಪೂರ್ಣ ಗ್ರಂಥ.‌ ಮಹಾಕವಿ ಪಂಪನ ಕುರಿತು ಕಳೆದ ಸುಮಾರು ಐವತ್ತು ವರ್ಷಗಳಲ್ಲಿ ಕನ್ನಡ ಸಾಹಿತ್ಯ ವಲಯದಲ್ಲಿ ಕಾಣಿಸಿಕೊಂಡ ಒಟ್ಟು ವಿಮರ್ಶಾ ಲೇಖನಗಳಿಗೆ ಅವರ ಪ್ರಾಮಾಣಿಕ ಪ್ರತಿಕ್ರಿಯೆ ಇಲ್ಲಿದೆ. ಪಂಪನ ಕುರಿತಾದ ಕೆಲವು ಆಧಾರವಿಲ್ಲದ ಬೀಸು ಹೇಳಿಕೆಗಳು ತಮ್ಮ ಮನಸ್ಸಿನಲ್ಲಿ ಹುಟ್ಟಿಸಿದ ಕಂಪನ ಮತ್ತು ಅಲ್ಲೋಲ ಕಲ್ಲೋಲಗಳನ್ನು (ಮತ್ತು ಸತ್ಯವನ್ನು ಸಾಕ್ಷಿ ಸಮೇತ ಹೇಳದೇ ಉಳಿದರೆ ಅವು ಮುಂದಿನ ತಲೆಮಾರಿನ ಪಂಪನೋದುಗರಲ್ಲಿ ಹುಟ್ಟಿಸಬಹುದಾದ ಗೊಂದಲಗಳನ್ನು) ಅವರು ಓದುಗರೊಂದಿಗೆ ಇಲ್ಲಿ ಹಂಚಿಕೊಂಡಿದ್ದಾರೆ.

    ಪಂಪನ ಸಾಮಾಜಿಕ ಪ್ರಜ್ಞೆ ಅಥವಾ ಅವನ ಕಾವ್ಯಗಳಲ್ಲಿ ಕುಲ, ವರ್ಣ, ಜಾತಿ, ಯುದ್ಧ ಮತ್ತು ವೈದಿಕ ಆಚರಣೆಗಳ ಕುರಿತಾಗಿ ಹೇಳಲಾದ ಅಂಶಗಳ ಬಗ್ಗೆ ವಿದ್ವತ್ ವಲಯದಲ್ಲಿ ನಿರ್ದಿಷ್ಟ ಬಗೆಯ ಕಥನಗಳಿವೆ ಮತ್ತು ಅವುಗಳ ಬಗೆಗಿನ ಭಿನ್ನಾಭಿಪ್ರಾಯಗಳನ್ನು 1974ರಲ್ಲಿ ಜಿ.ಎಸ್. ಶಿವರುದ್ರಪ್ಪನವರು ಸಂಪಾದಿಸಿದ ‘ಪಂಪ-ಒಂದು ಅಧ್ಯಯನ’ ಎಂಬ ಕೃತಿಯಲ್ಲಿ ಅನೇಕ ಲೇಖಕರು ವ್ಯಕ್ತಪಡಿಸಿದ್ದಾರೆ. ಆದರೆ 1970ರ ದಶಕದಲ್ಲಿ ದಲಿತ ಮತ್ತು ಬಂಡಾಯ ಸಾಹಿತಿಗಳು ಈ ವಿಷಯವನ್ನು ಮತ್ತೊಮ್ಮೆ ಎತ್ತಿ, ನೀಡಿದ ಹೇಳಿಕೆಗಳು ಮತ್ತು ಬರೆದ ಲೇಖನಗಳಲ್ಲಿ ಸತ್ಯದೂರವಾದ ವಿಚಾರಗಳನ್ನು ಯಾವುದೇ ಆಧಾರವಿಲ್ಲದೆ ಮತ್ತು ಪಂಪ ಹೇಳಿದ ಇತರ ಸಾಲುಗಳನ್ನು ನಿರ್ಲಕ್ಷಿಸಿ ಹೇಳಿದ್ದಾರೆ ಅನ್ನುವ ಅಸಮಾಧಾನವನ್ನು ಗಿರೀಶ್ ಭಟ್ ವ್ಯಕ್ತಪಡಿಸಿದ್ದಾರೆ. ಮುಖ್ಯವಾಗಿ ಪಂಪನ ಆದಿಪುರಾಣದಲ್ಲಿ ಬರುವ ‘ಮನುಷ್ಯ ಜಾತಿ ತಾನೊಂದೆ ವಲಂ’ ಎಂಬ ಒಂದು ಸಾಲನ್ನು ಮಾತ್ರ ಪ್ರತ್ಯೇಕಿಸಿ ಪಂಪನು ವೈದಿಕ ಆಚರಣೆಗಳು ಹೇಳುವ ಜಾತಿ-ವರ್ಣಗಳ ವಿರುದ್ಧ ನಿಂತು ಮನುಷ್ಯರೆಲ್ಲರೂ ಸಮಾನರು ಅಂತ ಹೇಳುತ್ತಿದ್ದಾನೆಂದು ವ್ಯಾಖ್ಯಾನಿಸಿ ಪಂಪನನ್ನು ತಮ್ಮ ‘ಪ್ರಗತಿಪರ’ ಪಂಥಕ್ಕೆ ಸೇರಿಸಿಕೊಳ್ಳಲು ಹವಣಿಸುತ್ತಿದ್ದಾರೆ ಅನ್ನುವುದು ಅವರ ವಾದ. ಆದರೆ ಆ ‘ಪ್ರಗತಿಪರ’ ನಿಲುವಿನ ಲೇಖಕರಂತೆ ಗಿರೀಶ ಭಟ್ಟರು ಆಧಾರವಿಲ್ಲದ ಹೇಳಿಕೆಗಳನ್ನು ಕೊಡುವುದಿಲ್ಲ. ಅದರ ಹಿಂದಿನ ಸಾಲುಗಳನ್ನೂ ಮುಂದಿನ ಸಾಲುಗಳನ್ನೂ ಉದ್ಧರಿಸಿ ‘ವಿವಾಹಗಳ ಕೊಡುಕೊಳೆಯಲ್ಲಿ ವರ್ಣಸಂಕರವಾಗಬಾರದು’ ಎಂದು ಅವನು ಹೇಳಿದ ಮಾತುಗಳನ್ನು ಎತ್ತಿ ತೋರಿಸುತ್ತಾರೆ.

    ಪಂಪ ಪ್ರಶಸ್ತಿಯನ್ನು ಸ್ವೀಕರಿಸುವ ಸಂದರ್ಭದಲ್ಲಿ ಡಾ. ಬಿ.ಎ. ವಿವೇಕ ರೈಯವರೂ ಪಂಪನನ್ನು ಜಾತಿವಿರೋಧಿಯೆಂದು ವೈಭವೀಕರಿಸಿದ್ದಾರೆ. ಸಾಹಿತ್ಯ ವಲಯದಲ್ಲಿ ವಿದ್ವಾಂಸರೆಂದು ಪದೇ ಪದೇ ಹೆಸರು ಕೇಳುತ್ತಿರುವ ಬರಗೂರು ರಾಮಚಂದ್ರಪ್ಪ, ಪುರುಷೋತ್ತಮ ಬಿಳಿಮಲೆ, ಡಾ. ಎಂ.ಎಂ. ಕಲಬುರ್ಗಿ, ಡಾ. ಹಂಪನಾ ಮೊದಲಾದವರು ಕೂಡಾ ಇದೇ ಅಭಿಪ್ರಾಯವನ್ನು ಅನುಮೋದಿಸುತ್ತ ಅವಕಾಶ ಸಿಕ್ಕಿದೆಡೆಯೆಲ್ಲ ಮಾತನಾಡುತ್ತಾರೆ. ಪಂಪನನ್ನು ಹೇಗೆ ಓದಬೇಕು ಎಂಬುದರ ಬಗ್ಗೆಯೇ ಮಾತನಾಡುವ ಡಾ. ಎಸ್. ಜಯಪ್ರಕಾಶ್ ಶೆಟ್ಟಿಯವರ ‘ಪಂಪನೋದು’ ಕೃತಿಯೂ ಬರೇ ಅಪಹೇಳಿಕೆಗಳನ್ನೂ ಗೊಂದಲಗಳನ್ನೂ ಒಳಗೊಂಡಿದೆ. ವಿದ್ವತ್ ವಲಯದಲ್ಲಿ ಕೆ.ವಿ. ಅಕ್ಷರ, ವೆಂಕಟ್ರಮಣ ಐತಾಳ್, ರಾಜಾರಾಮ ಹೆಗಡೆಯವರು ಇದು ಸರಿಯಾದ ಪರಿವಿಧಾನ ಅಲ್ಲವೆಂದು ವಾದಿಸಿದರೂ ಪಂಪನನ್ನು ಸಮಾನತೆಯ ಹರಿಕಾರ ಮತ್ತು ಜಾತಿವಿರೋಧಿಯೆಂದು ಕೊಂಡಾಡುವ ಪ್ರವೃತ್ತಿ ನಿಲ್ಲಲಿಲ್ಲ. ಅಕಾಡೆಮಿಯು ನಡೆಸುವ ವಿಚಾರ ಸಂಕಿರಣಗಳಲ್ಲೂ ವಿಶ್ವವಿದ್ಯಾಲಯಗಳಲ್ಲಿ ನಡೆಸುವ ಸಂಶೋಧನಾಕಾರ್ಯಗಳಲ್ಲೂ ಇವೇ ವಾದಗಳು ಸರಿಯೆಂದು ಪರಿಗಣಿಸಲ್ಪಟ್ಟಿವೆ.

    ಈ ತಪ್ಪು ಅಭಿಪ್ರಾಯಗಳು ಈ ಸಾಹಿತ್ಯ ರಾಜಕೀಯದ ಅರಿವಿಲ್ಲದ ಅಮಾಯಕ ಓದುಗರ ಮೇಲೆ ಹೇರಲ್ಪಡುತ್ತಿರುವುದು ಇನ್ನಾದರೂ ನಿಲ್ಲಬೇಕೆಂಬ ಉದ್ದೇಶದಿಂದ ಗಿರೀಶ ಭಟ್ಟರು ಪತ್ರಿಕೆಯೊಂದರಲ್ಲಿ ಪುಟ್ಟ ಲೇಖನ ಬರೆದು ಪ್ರಕಟಿಸಿದರು. ಅದರಲ್ಲಿರುವ ವಿಚಾರಗಳನ್ನು ವಿರೋಧಿಸಿ ಡಾ. ಬಿ.ವಿ. ವಸಂತಕುಮಾರ್ ಒಂದು ದೀರ್ಘ ಲೇಖನವನ್ನೂ ಬರೆದರು. ಅವರ ಆಕ್ಷೇಪಗಳಿಗೆ ಗಿರೀಶ ಭಟ್ಟರು ಸಾಧಾರವಾಗಿ ನೀಡಿದ ಉತ್ತರಗಳೂ ಈ ಕೃತಿಯಲ್ಲಿ ಸೇರಿಕೊಂಡಿವೆ.

    ಈ ಕೃತಿಯಲ್ಲಿ ಒಟ್ಟು ನಾಲ್ಕು ಭಾಗಗಳಿವೆ. ಮೊದಲನೆಯ ಭಾಗದಲ್ಲಿ (ಪು.29-35) ಪಂಪ ಮನುಷ್ಯರೆಲ್ಲರೂ ಸಮಾನರೆಂದು ಹೇಳಿದ್ದಾನೆಯೇ ಅಥವಾ ಸ್ಪೃಶ್ಯ-ಅಸ್ಪೃಶ್ಯಗಳ ತಾರತಮ್ಯವಿತ್ತೆಂದು ಹೇಳಿದ್ದಾನೆಯೇ ಎಂಬ ವಿಷಯಗಳ ಕುರಿತು ದೃಷ್ಟಾಂತಗಳ ಮೂಲಕ ವಿವರಣೆಯಿದೆ. ಎರಡನೆಯ ವಿಭಾಗದಲ್ಲಿ (ಪು.36-69) ಅವರು ಪತ್ರಿಕೆಯಲ್ಲಿ ಬರೆದ ಲೇಖನವನ್ನು ಖಂಡಿಸಿ ಬಂದ ಪ್ರತಿಕ್ರಿಯೆಗಳಿಗೆ ಸೋದಾಹರಣ ಉತ್ತರಗಳಿವೆ. ಮೂರನೆಯ ಭಾಗದಲ್ಲಿ (70-83) ಈ ಚರ್ಚೆಯನ್ನು ಮುಂದುವರಿಸಬೇಕಾದ ಅನಿವಾರ್ಯತೆ ಯಾಕೆ ಬಂತು ಎಂಬುದನ್ನು ಆದಿಪುರಾಣದಲ್ಲಿ ವರ್ಣ-ಜಾತಿಗಳು ಗುಣಕರ್ಮಗಳಿಂದ ನಿರ್ಧರಿತವಾಗುತ್ತವೆಯೇ ಅಥವಾ ಹುಟ್ಟಿನಿಂದಲೇ, ಪಂಪನಲ್ಲಿ ‘ಶುದ್ಧಕುಲದ’ ಪರಿಕಲ್ಪನೆ ಹೇಗಿತ್ತು ಅನ್ನುವ ವಿಚಾರಗಳ ಕುರಿತು ವಿವರಗಳಿವೆ. ನಾಲ್ಕನೆಯ ಭಾಗದಲ್ಲಿ (88-244) ಪಂಪನ ಓದು, ಓದುಗಳ ಓದು, ಉತ್ತಮ ಓದು, ಪಂಪನ ಕುರಿತಾದ ಭಿನ್ನ ವ್ಯಾಖ್ಯಾನಗಳು, ಪಂಪನ ಕುರಿತು ವಿವಿಧ ‘ಪ್ರಗತಿಪರ’ ಲೇಖಕರು ಮಂಡಿಸಿದ ಆಧಾರವಿಲ್ಲದ ನಿರ್ಣಯಗಳು, ಪಂಪನ ಜೀವನದೃಷ್ಟಿ ಮತ್ತು ಕಾವ್ಯದೃಷ್ಟಿ, ಪಂಪನನ್ನು ಓದಲೊಂದು ಪರಿವಿಧಾನ, ಯೂನಿವರ್ಸಿಟಿಗಳಲ್ಲಿ ಅಧಿಕಾರಸ್ಥರ ಭಯದಿಂದ ಯುವ ಸಂಶೋಧಕರೂ ಇತರ ಹಲವು ಲೇಖಕರೂ ಪಂಪನ ಬಗೆಗಿನ ಅಪವ್ಯಾಖ್ಯಾನಗಳ ಬಗ್ಗೆ ಮೌನವಾಗಿರುವುದು, ವಿಮರ್ಶೆ-ಸಂಶೋಧನೆಗಳಲ್ಲಿ ಕಾಪಾಡಿಕೊಳ್ಳಬೇಕಾದ ಸತ್ಯವೆಂಬ ಮೌಲ್ಯ-ಮೊದಲಾದ ಮಹತ್ವದ ವಿಚಾರಗಳನ್ನು ಗಿರೀಶ ಭಟ್ಟರು ನಿರ್ಭಿಡೆಯಿಂದ ಮುಂದಿಟ್ಟಿದ್ದಾರೆ.

    ಪುಸ್ತಕಕ್ಕೆ ಬರೆದ ಪೀಠಿಕೆಯಲ್ಲಿ ಕೃತಿಯನ್ನು ಬರೆದ ಹಿನ್ನೆಲೆ, ಸಂದರ್ಭ, ಕಾರಣಗಳು, ಉದ್ದೇಶ, ಕೃತಿಯಲ್ಲಿ ಇರುವ ಮತ್ತು ಇಲ್ಲದಿರುವ ವಿಷಯಗಳು, ಅನುಸರಿಸಲಾದ ವಾದಕ್ರಮ-ಹೀಗೆ ಕೃತಿಯ ಒಂದು ಸಮಗ್ರ ಚಿತ್ರಣವೇ ಸಿಗುತ್ತದೆ. ಯಾರನ್ನೂ ದೂಷಿಸುವುದು ತನ್ನ ಉದ್ದೇಶವಲ್ಲ, ಬದಲಾಗಿ ಮುಂದಿನ ತಲೆಮಾರಿನವರಿಗೆ ಸರಿಯಾದ ಸಂದೇಶ ಸಿಗುವಂತೆ ಮಾಡಲಿಕ್ಕೋಸ್ಕರ ತಾನಿದನ್ನು ಪ್ರಕಟಿಸುತ್ತಿದ್ದೇನೆಂದು ಲೇಖಕರು ಇಲ್ಲಿ ಹೇಳುತ್ತಾರೆ. ಪಂಪನ ಕಾವ್ಯದಲ್ಲಿ ನಿಜವಾಗಿ ಇರುವ ಉತ್ತಮಾಂಶಗಳನ್ನು ಗುರುತಿಸಿ ಅವನನ್ನು ಮಹಾಕವಿ ಎಂದು ಕರೆಯಬೇಕೇ ಹೊರತು ಇಲ್ಲದ ಗುಣಗಳನ್ನು ಆರೋಪಿಸುವುದು ಸರಿಯಲ್ಲ. ಪಂಪನ ಕಾವ್ಯದಲ್ಲಿರುವ ಒಳ್ಳೆಯ ಅಂಶಗಳನ್ನು ಕುರಿತು ಶತಾವಧಾನಿ ಗಣೇಶರಂಥ ಮೇಧಾವಿಗಳು ವ್ಯಾಖ್ಯಾನಿಸಿ ಯೂಟ್ಯೂಬ್ ನಲ್ಲಿ ಪ್ರಕಟಿಸಿದ್ದಾರೆ. ಆಸಕ್ತಿ ಇದ್ದವರು ಅದನ್ನು ನೋಡಬಹುದು ಅನ್ನುತ್ತಾರೆ.

    ಭಟ್ಟರೇ ಹೇಳುವಂತೆ ಇಲ್ಲಿ ವಿಷಯಗಳ ಪುನರಾವರ್ತನೆಯಾಗಿರುವುದು ನಿಜ. ಅವರು ಮೊದಲಿಗೆ ಪತ್ರಿಕೆಯಲ್ಲಿ ಬರೆದ ಲೇಖನದಲ್ಲಿ ಸ್ಥಳಾವಕಾಶದ ಮಿತಿ ಇದ್ದುದರಿಂದ ಎಲ್ಲ ವಿವರಗಳನ್ನು ಬರೆಯಲು ಸಾಧ್ಯವಾಗಿರಲಿಲ್ಲ ಮತ್ತು ಲೇಖನಕ್ಕೆ ತಾನು ಎಣಿಸಿದ್ದಕ್ಕಿಂತಲೂ ಹೆಚ್ಚು ಪ್ರತಿಕ್ರಿಯೆಗಳು ಬಂದವು, ಅವು ಎತ್ತಿದ ಪ್ರಶ್ನೆಗಳಿಗೆ ತಾನು ಈ ಕೃತಿಯ ರೂಪದಲ್ಲಿ ಉತ್ತರ ಕೊಡಬೇಕಾಯಿತು ಅಂದಿದ್ದಾರೆ.

    ಗಿರೀಶ ಭಟ್ಟರ ಭಾಷೆ ಮತ್ತು ನಿರೂಪಣಾಶೈಲಿಗಳು ತುಂಬಾ ಸೊಗಸಾಗಿವೆ. ತಮಗೆ ಅನ್ನಿಸಿದ್ದನ್ನು ವ್ಯಕ್ತಪಡಿಸಲು ಅವರು ಬಳಸುವ ಪದಗಳು ಮತ್ತು ಪದಪುಂಜಗಳು, ಅವುಗಳ ಸಾಂದರ್ಭಿಕ ಸಮತೋಲನ, ಅವು ಹೊಮ್ಮಿಸುವ ಧ್ವನಿ- ಪ್ರತಿಯೊಂದರ ಬಗ್ಗೆ ಅವರು ಬಹಳ ಎಚ್ಚರಿಕೆ ವಹಿಸುತ್ತಾರೆ. ಕ್ಲಿಷ್ಟ ವಿಷಯಗಳನ್ನು ಬೇರೆಬೇರೆ ರೀತಿಯಿಂದ ಅರ್ಥವಾಗುವಂತೆ (ತರಗತಿಯಲ್ಲಿ ಪಾಠ ಮಾಡುವ ರೀತಿಯಲ್ಲಿ) ಸರಳವಾಗಿ ಹೇಳುವ ಸಾಮರ್ಥ್ಯ ಅವರಿಗೆ ಸಿದ್ಧಿಸಿದೆ.

    ಕೊನೆಯದಾಗಿ ಹೇಳಬೇಕಾದರೆ ಅಜಕ್ಕಳ ಗಿರೀಶ ಭಟ್ಟರ ‘ಪಂಪನ ಕಂಪನ’ ಕನ್ನಡ ಸಾಹಿತ್ಯದ ಬೆಳವಣಿಗೆಯ ಬಗ್ಗೆ ಕಾಳಜಿ ಇರುವ ಎಲ್ಲರೂ ಓದಲೇ ಬೇಕಾದ ಕೃತಿ. ಕನ್ನಡ ಸಾಹಿತ್ಯ ಕ್ಷೇತ್ರದ ಪಟ್ಟ ಭದ್ರರಿಂದಾಗಿರುವ ಪ್ರಮಾದಗಳನ್ನು ಎತ್ತಿ ತೋರಿಸಿ ಅವರನ್ನು ಎದುರು ಹಾಕಿಕೊಳ್ಳಬೇಕಾದರೆ ಧೈರ್ಯ ಮಾತ್ರವಲ್ಲದೆ ಅಪರಿಮಿತವಾದ ಆತ್ಮವಿಶ್ವಾಸವೂ ಬೇಕು. ಆ ಗುಣಗಳು ಇರುವುದರಿಂದಲೇ ಗಿರೀಶ ಭಟ್ಟರಿಗೆ ಈ ಪುಸ್ತಕವನ್ನು ಹೊರತರುವುದು ಸಾಧ್ಯವಾಗಿದೆ.

    ಕೃತಿಯ ಹೆಸರು : ‘ಪಂಪನ ಕಂಪನ’
    ಲೇಖಕರು : ಅಜಕ್ಕಳ ಗಿರೀಶ ಭಟ್
    ಪ್ರಕಾಶನ : ಚಿಂತನ ಬಯಲು
    ಪ್ರಕಟಣಾ ವರ್ಷ : 2026
    ಪುಟಗಳು : 244, ಬೆಲೆ : ರೂ.220/-
    ಮೊ.ನಂಬರ್ : 9901413974

    ವಿಮರ್ಶಕಿ : ಡಾ. ಪಾರ್ವತಿ ಜಿ. ಐತಾಳ್

    ಡಾ. ಪಾರ್ವತಿ ಗಂಗಾಧರ ಐತಾಳರು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕದವರು. ಕಣ್ಣೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದ ಇವರು ಮುಲ್ಕಿಯ ವಿಜಯಾ ಕಾಲೇಜು ಹಾಗೂ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಮತ್ತು ಇಂಗ್ಲೀಷ್ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

    ಶ್ರೀಮತಿ ಪಾರ್ವತಿ ಜಿ. ಐತಾಳರು ಸಣ್ಣ ಕಥೆ, ಕವನ, ನಾಟಕ ಬರೆದಿರುವುದರೊಂದಿಗೆ ಅನುವಾದ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಉದ್ಯೋಗದೊಂದಿಗೆ ದಿನ ಪತ್ರಿಕೆಗಳಲ್ಲಿ ಲೇಖನ ಬರೆಯಲಾರಂಬಿಸಿದ ಇವರು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಕನ್ನಡ ಮಾತೃಭಾಷೆಯಾಗಿರುವ ಇವರು ಸ್ನೇಹಿತರಿಂದ ಮಲಯಾಳಂ ಭಾಷೆಯನ್ನು ಕಲಿತು, ಕನ್ನಡ, ಹಿಂದಿ, ಇಂಗ್ಲಿಷ್, ಮಲಯಾಳಂ ಮತ್ತು ತುಳು ಭಾಷೆಗಳನ್ನು ತಿಳಿದ ಪಂಚಭಾಷಾ ಪ್ರವೀಣೆಯಾಗಿದ್ದಾರೆ.

    ಡಾ. ಪಾರ್ವತಿಯವರು ಸ್ವತಂತ್ರ ಸಾಹಿತ್ಯದೊಂದಿಗೆ ವಿವಿಧ ಸಾಹಿತಿಗಳ ಹಿಂದಿ, ಮಲಯಾಳಂ, ಇಂಗ್ಲೀಷ್ ಮೂಲದ ನಾಟಕ, ಕಾದಂಬರಿ, ಸಣ್ಣ ಕತೆ ಇತ್ಯಾದಿಗಳನ್ನು ಅನುವಾದ ಮಾಡಿದ ಖ್ಯಾತಿ ಇವರದು. ಮಲ್ಲಿಕಾ ಪ್ರಶಸ್ತಿ, ಗೋವಿಂದರಾವ್ ದತ್ತಿನಿಧಿ ವಿಮರ್ಶಾ ಲೇಖನ ಬಹುಮಾನ ಮತ್ತು ಎಚ್. ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ ಇವುಗಳು ಸಾಹಿತ್ಯ ಕ್ಷೇತ್ರದ ಇವರ ಸಾಧನೆಗೆ ಬಂದ ಪ್ರಶಸ್ತಿಗಳು.

    ಲೇಖಕ : ಡಾ. ಅಜಕ್ಕಳ ಗಿರೀಶ ಭಟ್ಟ

    ಕನ್ನಡ ಮತ್ತು ಇಂಗ್ಲೀಷ್ ಪ್ರಾಧ್ಯಾಪಕರಾಗಿದ್ದ, ಡಾ. ಅಜಕ್ಕಳ ಗಿರೀಶ ಭಟ್ಟರು ಮಂಗಳೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿದ್ವಾಂಸರು, ಸಂಸ್ಕೃತಿ ಚಿಂತಕರು, ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು. ‘ಚಿಂತನ ಬಯಲು’ ಎಂಬ ತ್ರೈಮಾಸಿಕ ಪತ್ರಿಕೆಯ ಸಂಪಾದಕರಾದ ಇವರು ಹಲವಾರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ.

     

    article baikady Literature review roovari
    Share. Facebook Twitter Pinterest LinkedIn Tumblr WhatsApp Email
    Previous Articleಕುಂಜತ್ತೂರಿನಲ್ಲಿ ವಸ್ತ್ರಾಂಕಾರ ಮತ್ತು ಕೇಶವಿನ್ಯಾಸ ಕಾರ್ಯಾಗಾರ
    Next Article ಬನ್ನೂರಿನ ಶ್ರೀ ಬಲಮುರಿ ವಿದ್ಯಾಗಣಪತಿ ದೇವಸ್ಥಾನದಲ್ಲಿ ಮಾಸಿಕ ತಾಳಮದ್ದಲೆ
    roovari

    Add Comment Cancel Reply


    Related Posts

    ವಿಶ್ವಭಾರತಿ ಯಕ್ಷ ಸಂಭ್ರಮ ಯಕ್ಷಗಾನ ತಾಳಮದ್ದಳೆ ಸಪ್ತಾಹ

    July 22, 2026

    ಮೈಸೂರಿನ ಸುಗಮ ಸಂಗೀತ ಅಕಾಡೆಮಿಯಿಂದ ‘ಗಾನ ವೈಭವ’ | ಜುಲೈ 24

    July 22, 2026

    ನೃತ್ಯ ವಿಮರ್ಶೆ | ಚೈತನ್ಯಪೂರ್ಣ ಆಹ್ಲಾದಕಾರೀ ‘ಅನನ್ಯ’ ನೃತ್ಯಾಭಿನಯ

    July 22, 2026

    ಎಸ್. ಜಾನಕಿಯವರು ಸಂಗೀತಲೋಕದ ದಂತಕತೆ – ಡಾ. ಸುರೇಶ ಮಯ್ಯ

    July 22, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.