ತೆಕ್ಕಟ್ಟೆ : ಯಶಸ್ವಿ ಕಲಾವೃಂದ ಮಹಿಳಾ ತಂಡದವರಿಂದ ಮಹಿಳಾ ದಿನಾಚರಣೆ ಅಂಗವಾಗಿ ಶ್ರೀ ಕೈಲಾಸ ಕಲಾಕ್ಷೇತ್ರ ತೆಕ್ಕಟ್ಟೆ ಸಹಕಾರದೊಂದಿಗೆ ದಿನಾಂಕ 01 ಮಾರ್ಚ್ 2026ರಂದು ತೆಕ್ಕಟ್ಟೆ ಹಯಗ್ರೀವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.
ಈ ಸಂದರ್ಭದಲ್ಲಿ ಮಾತನಾಡಿದ ನಿವೃತ್ತ ಹಿಂದಿ ಉಪನ್ಯಾಸಕರಾದ ಶ್ರೀನಿವಾಸ ಸೋಮಯಾಜಿ “ರಂಗ ಚಟುವಟಿಕೆಯನ್ನು ನಿರ್ವಹಿಸುತ್ತಾ ಸಮಾಜ ತಿದ್ದುವ ಕಾರ್ಯ ನಿಜಕ್ಕೂ ಶ್ಲಾಘನೀಯ. ನಿರಂತರ ರಂಗ ಚಟುವಟಿಕೆಯಿಂದ ಯಶಸ್ಸು ಸಾಧಿಸಿದ ಯಶಸ್ವೀ ಕಲಾವೃಂದ ಮಹಿಳೆಯರ ತಂಡವಾಗಿಸಿಕೊಂಡು ವರ್ಷದಿಂದ ವರ್ಷಕ್ಕೆ ಬೆಳೆಯುವುದನ್ನು ನೋಡುವಾಗ ನಿಜಕ್ಕೂ ಸಂತೋಷವಾಗುತ್ತದೆ. ಮಹಿಳೆಯರು ರಂಗದ ಮೇಲೂ ವಿಜೃಂಬಿಸಿದಾಗ ಮಕ್ಕಳಲ್ಲಿ ಪ್ರತಿಭೆ ಇನ್ನಷ್ಟು ಭದ್ರವಾಗುತ್ತದೆ. ಮಹಿಳಾ ದಿನಾಚರಣೆಯನ್ನು ಉತ್ಸುಕತೆಯನ್ನು ಬಹಳ ಮುಂಚೆಯೇ ಆಚರಿಸಿ ಸಂಭ್ರಮಿಸಿದ್ದು ಶ್ಲಾಘ್ಯಯೋಗ್ಯ ವಿಚಾರ. ವಿವಿಧ ಕಲಾ ಪ್ರಕಾರವನ್ನು ಒಂದೇ ದಿನದಲ್ಲಿ ವೇದಿಕೆಯಲ್ಲಿ ತಂದು ಹಬ್ಬವಾಗಿಸಿದ ಮಹಿಳಾ ತಂಡ ಉತ್ತರೋತ್ತರ ಶ್ರೇಯಸ್ಸಾಗಲಿ” ಎಂದು ಶುಭ ಹಾರೈಸಿದರು.

ಹಿರಿಯ ತಾಳಮದ್ದಳೆ ಅರ್ಥದಾರಿ ಮೀರಾ ವಿ. ಸಾಮಗ, ನಿರ್ದೇಶಕರಾದ ರೋಹಿತ್ ಎಸ್. ಬೈಕಾಡಿ, ನರಸಿಂಹ ತುಂಗರನ್ನು ಸಮ್ಮಾನಿಸಲಾಯಿತು. ಯಶಸ್ವೀ ಕಲಾವೃಂದದ ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ, ಸಂಘಟಕಿ ಭಾರತಿ ಮೈಯ್ಯ, ಸಂಗೀತ ಆಚಾರ್, ಸುಧಾ ಮಣೂರು ಉಪಸ್ಥಿತರಿದ್ದರು. ಶ್ಯಾಮಲಾ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಯಶಸ್ವಿ ಕಲಾವೃಂದದ ಮಹಿಳೆಯರಿಂದ ನೃತ್ಯ, ಹಾಡು, ನಾಟಕ, ಯಕ್ಷಗಾನ ರಂಗ ಪ್ರಸ್ತುತಿಗೊಂಡಿತು.
