ಕಾಂತಾವರ : ಕನ್ನಡ ಸಂಘ ಕಾಂತಾವರ, ಅಲ್ಲಮಪ್ರಭು ಪೀಠ ಕಾಂತಾವರ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ತಾಲೂಕು ಘಟಕ ಇವುಗಳ ಸಹಭಾಗಿತ್ವದಲ್ಲಿ 2026ರ ವರ್ಷಪೂರ್ತಿ ಪ್ರತೀ ತಿಂಗಳು ನಡೆಯುತ್ತಿರುವ ಮಹಾಭಾರತ ಭಾವದೀಪ ಎಂಬ ಉಪನ್ಯಾಸಮಾಲೆಯ ಪಂಚಮ ಸೋಪಾನದಲ್ಲಿ ಉಪನ್ಯಾಸ ಕಾರ್ಯಕ್ರಮವು ದಿನಾಂಕ 23 ಮೇ 2026ರಂದು ಕಾರ್ಕಳದ ಹೋಟೆಲ್ ಪ್ರಕಾಶ್ ಇದರ ಸಂಭ್ರಮ ಸಭಾಂಗಣದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ವಿದ್ವಾಂಸರಾದ ಡಾ. ವಿನಾಯಕ ಭಟ್ ಗಾಳಿಮನೆಯವರು ‘ಕುಲವೊಂದು ಕವಲೆರಡು’ ಎಂಬ ಕುರಿತಾಗಿ ಉಪನ್ಯಾಸ ನೀಡುತ್ತಾ “ಕೌರವರು ಧೃತರಾಷ್ಟ್ರನ ಅರಮನೆಯಲ್ಲಿ ಬೆಳೆಯುತ್ತಿರುವಾಗಲೇ ಋಷಿ ಮುನಿಗಳೆಲ್ಲರ ಆಶಯದಂತೆ ಅವರ ಸಂಪೂರ್ಣ ಆಶೀರ್ವಾದ ಪಡೆದ ಪಾಂಡವರನ್ನು ತನ್ನ ಮಕ್ಕಳ ಜೊತೆ ಧೃತರಾಷ್ಟ್ರನು ಸೇರಿಸಿಕೊಂಡ. ಆದರೆ ದುರ್ಯೋಧನನಿಗೆ ಇವರೆಲ್ಲರ ಮೇಲೆ ಬಾಲ್ಯದಿಂದಲೇ ಮೈಮನಸ್ಸು ಹುಟ್ಟಿ ಅದು ನಾನಾ ಕಾರಣಗಳಿಂದ ಬೆಳೆಯುತ್ತಲೇ ಹೋಗುತ್ತದೆ. ಭೀಮನನ್ನು ವಿಷ ಪ್ರಾಶನದಿಂದ ಕೊಲ್ಲಲು ಪ್ರಯತ್ನಿಸಿದರೂ ಆತ ಮತ್ತೆ ನೂರಾನೆ ಬಲದೊಂದಿಗೆ ಮರಳಿ ಬರುತ್ತಾನೆ. ಮಹಾಭಾರತದ ಭಾವದೀಪ ಆರದಂತೆ ನೋಡಿಕೊಂಡ ಭೀಷ್ಮ ಮಹಾತ್ಮರಿಗೂ ಇವರ ವೈಷಮ್ಯವನ್ನು ಕೊನೆಗಾಣಿಸಲು ಸಾಧ್ಯವಾಗಲಿಲ್ಲ. ಋಷಿ ಪರಂಪರೆಯ ದ್ರೋಣ ಮತ್ತು ರಾಜ ಪರಂಪರೆಯ ದ್ರುಪದ ಗುರುಕುಲದಲ್ಲಿ ಸ್ನೇಹಿತರಾಗಿದ್ದರೂ ಮುಂದೆ ದ್ರುಪದ ರಾಜನಾದಾಗ ದ್ರೋಣರು ಅರಮನೆಗೆ ಹೋದಾಗ ದ್ರುಪದನು ಅಹಂಕಾರದಿಂದ ಅವರನ್ನು ಅವಮಾನಿಸುತ್ತಾನೆ. ಆತ್ಮಭಿಮಾನಕ್ಕಾದ ಅವಮಾನವು ಸೇಡಾಗಿ ಪರಿವರ್ತನೆಗೊಂಡು ಮುಂದೆ ಸಂಘರ್ಷಕ್ಕೆ ಕಾರಣವಾಗಿ ದ್ರುಪದನ ಗರ್ವಭಂಗವಾಗುತ್ತದೆ. ಹೀಗೆ ದ್ವೇಷ, ಅಸೂಯೆ, ಅಹಂಕಾರಗಳೇ ಯುದ್ಧಕ್ಕೆ ಪ್ರೇರಣೆಯಾದವು” ಎಂದರು.
ಡಾ. ನಾ ಮೊಗಸಾಲೆ, ನಿತ್ಯಾನಂದ ಪೈ, ಶ್ರೀಮತಿ ಮಿತ್ರಪ್ರಭಾ ಹೆಗ್ಡೆ, ಏರ್‌ವೈಸ್ ಮಾರ್ಷೆಲ್ ರಮೇಶ್ ಕಾರ್ಣಿಕ್, ಅ.ಭಾ.ಸಾ.ಪ.ದ ದ.ಕ. ಜಿಲ್ಲಾ ಸಂಯೋಜಕರಾದ ಸುಂದರ ಶೆಟ್ಟಿ ಇಳಂತಿಲ, ಕಾರ್ಯಕ್ರಮದ ಸಂಪೂರ್ಣ ಪ್ರಾಯೋಜಕರಾದ ಶ್ರೀಮತಿ ಪಲ್ಲವಿ ಕೀರ್ತನ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀಮತಿ ಜಯಶ್ರೀ ಆದಿರಾಜ ಅಜ್ರಿ ಪ್ರಾರ್ಥಿಸಿ ಡಾ. ಸುಮತಿ ಪಿ. ಕಾರ್ಯಕ್ರಮ ನಿರೂಪಿಸಿ, ಸದಾನಂದ ನಾರಾವಿ ಸ್ವಾಗತಿಸಿ, ಶ್ರೀಮತಿ ಸುಲೋಚನಾ ಬಿ.ವಿ. ವಂದಿಸಿದರು.
