ಮಡಿಕೇರಿ : ಪೊನ್ನಂಪೇಟೆ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ ಮತ್ತು ಕನ್ನಡ ಉಪನ್ಯಾಸಕರು ಆದ ಟಿ.ಎಸ್. ಗೋಪಾಲ್ ಅವರನ್ನು ಆಯ್ಕೆ ಮಾಡಲಾಗಿದೆ. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಅವರ ನೇತೃತ್ವದಲ್ಲಿ ನಡೆದ ಪೊನ್ನಂಪೇಟೆ ತಾಲೂಕು ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಪೊನ್ನಂಪೇಟೆ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವು ಹುದಿಕೇರಿಯ ಜನತಾ ಹೈಸ್ಕೂಲ್ ಮೈದಾನದಲ್ಲಿ ದಿನಾಂಕ ೦1 ಜೂನ್ 2026ರ ಸೋಮವಾರ ನಡೆಯಲಿದೆ.
ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಟಿ.ಎಸ್. ಗೋಪಾಲ್ ಇವರು ಹಿರಿಯ ಸಾಹಿತಿಗಳು, ಕನ್ನಡ ಬೋಧಕರು ಹಾಗೂ ನೂರಕ್ಕೂ ಹೆಚ್ಚು ವೈವಿಧ್ಯಮಯ ಕೃತಿಗಳ ಲೇಖಕರು. ಕನ್ನಡ ಕಲಿಕೆ, ಸಂಸ್ಕೃತಿ ಮತ್ತು ಶಿಲ್ಪಕಲೆ, ಪರಿಸರ ಮತ್ತು ವನ್ಯ ಜೀವನ ಕುರಿತ ಸಂವಹನಕಾರರು. ಕನ್ನಡ ಭಾಷೆ ಹಾಗೂ ವ್ಯಾಕರಣವನ್ನು ಸುಲಭವಾಗಿ ಕಲಿಸುವ ಹಲವಾರು ಪುಸ್ತಕಗಳನ್ನು ರಚಿಸಿದ್ದಾರೆ. ಪರಿಸರ ವನ್ಯಜೀವನ ಕುರಿತು ಕನ್ನಡದಲ್ಲಿ ಸಾಹಿತ್ಯ ಕೃಷಿ ಮಾಡಿರುವ ಇವರು ವನ್ಯಪ್ರೇಮಿ ಕೆ.ಎಂ. ಚಿಣ್ಣಪ್ಪ ಮತ್ತು ಡಾ. ಕೆ. ಉಲ್ಲಾಸ್ ಇವರ ಅನುಭವ ಕಥನಗಳನ್ನ ನಿರೂಪಣೆ ಮಾಡಿದ್ದಾರೆ. ಇವರ ‘ಕಾಡು ಕಲಿಸುವ ಪಾಠ’ ಕೃತಿಗೆ ವಿಜ್ಞಾನ ಸಾಹಿತ್ಯ ಪ್ರಕಾರದಲ್ಲಿ 2013ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ದೊರಕಿದೆ. ಸಂಸ್ಕೃತಿ ಹಾಗೂ ಶಿಲ್ಪ ಕಲೆಗಳ ಕುರಿತು ಅಧ್ಯಯನ ಹಾಗೂ ಸಾಹಿತ್ಯ ರಚನೆ ಮಾಡಿದ್ದಾರೆ. ಪ್ರಮುಖ ಪತ್ರಿಕೆಗಳಲ್ಲಿ ಅಂಕಣ ಬರಹ ಹಾಗೂ ಪುಸ್ತಕಗಳ ರಚನೆ ಮಾಡಿದ್ದಾರೆ. ಆಕಾಶವಾಣಿಯಲ್ಲಿ ‘ಶೃದ್ದೆಯ ಶಿಲ್ಪ’ ಮಾಲಿಕೆಯ ಮೂಲಕ ದೇಗುಲಗಳ ಪರಿಚಯ ಮಾಡಿದ್ದಾರೆ. ಬೋಧಿವೃಕ್ಷ ಪತ್ರಿಕೆಯಲ್ಲಿ ಪುರಾತನ ದೇಗುಲಗಳು ಅಂಕಣದಲ್ಲಿ ನೂರಕ್ಕೂ ಬರಹಗಳ ಪ್ರಕಟಣೆಯಾಗಿದೆ. ಕರ್ನಾಟಕದ ಸಾಧಕರ ಸಾಧನೆಯನ್ನು ಪರಿಚಯಿಸುವ 20ಕ್ಕೂ ಹೆಚ್ಚು ಪುಸ್ತಕಗಳನ್ನು ರಚಿಸಿದ್ದಾರೆ. ಹಿರಿಯ ಸಾಹಿತಿಗಳು ಜ್ಞಾನಪೀಠ ಪುರಸ್ಕೃತರ ಜೀವನ ಚಿತ್ರಣ ನೀಡುವ ಕೃತಿಗಳನ್ನು ರಚಿಸಿದ್ದಾರೆ. ನವ ಕರ್ನಾಟಕ ಕನ್ನಡ ಕಲಿಕೆ ಮಾಲಿಕೆಯಲ್ಲಿ ಒಟ್ಟು ಮೂರು ಲಕ್ಷಕ್ಕೂ ಹೆಚ್ಚಿನ ಪ್ರತಿಗಳ ಮಾರಾಟವಾಗಿದೆ. ಇವರು ಪೊನ್ನಂಪೇಟೆ ತಾಲೂಕಿನ ಶ್ರೀಮಂಗಲದ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ 20ಕ್ಕೂ ಹೆಚ್ಚು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಇವರಿಗೆ ತಮ್ಮ ಸಾಹಿತ್ಯಕ್ಕಾಗಿ ಹತ್ತು ಹಲವು ಪ್ರಶಸ್ತಿಗಳು ಬಂದಿದೆ.
