ವಿಜಯಪುರ : ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ವಿಜಯಪುರ ಜಿಲ್ಲಾ ಗಮಕ ಕಲಾ ಪರಿಷತ್ತು ಇವರುಗಳ ಸಂಯುಕ್ತ ಆಶ್ರಯದಲ್ಲಿ ಕವಿ ಲಕ್ಷ್ಮೀಶನ ಜೈಮಿನಿ ಭಾರತದ ಗಮಕ ವಾಚನ-ವ್ಯಾಖ್ಯಾನ ಕಾರ್ಯಕ್ರಮವು ದಿನಾಂಕ 30 ಜೂನ್ 2026 ಮಂಗಳವಾರದಂದು ವಿಜಯಪುರದ ಗಾಂಧೀ ವೃತ್ತದಲ್ಲಿರುವ ಬಾಲಕರ ಸರಕಾರಿ ಕಿರಿಯ ಮಹಾವಿದ್ಯಾಲಯದಲ್ಲಿ ಜರುಗಿತು.
ಸಮಾರಂಭದ ಆರಂಭದಲ್ಲಿ ಕಾಲೇಜಿನ ಉಪನ್ಯಾಸಕರಾದ ಶ್ರೀ ಸುರೇಂದ್ರ ಮೋಹನ ಸುರಪುರ ಇವರು ಬಸವಣ್ಣನವರ ವಚನ ‘ತಂದೆ ನೀನು ತಾಯಿ ನೀನು ಬಂಧು ನೀನು ಬಳಗ ನೀನು ನೀನಲ್ಲದೆ ಮತ್ತಾರು ಇಲ್ಲವಯ್ಯ ಕೂಡಲ ಸಂಗಮದೇವ’ ಎಂಬ ವಚನವನ್ನು ಮಧುರವಾಗಿ ಹಾಡಿದರು. ನಂತರ ವಿಜಯಪುರ ಜಿಲ್ಲಾ ಗಮಕ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಬಿ.ಎಂ. ಪಾಟೀಲರು ಲಕ್ಷ್ಮೀಶನ ಜೈಮಿನಿ ಭಾರತದಲ್ಲಿ ವಿವರಿತವಾದ ಚಂದ್ರಹಾಸನ ಬಾಲ್ಯವನ್ನು ಪದ್ಯಗಳ ಕಂಠಪಾಠದೊಂದಿಗೆ ವಿವರಿಸಿ ವಿದ್ಯಾರ್ಥಿಗಳ ಮನ ಸೆಳೆದರು. ಆಮೇಲೆ ‘ಚಂದ್ರಹಾಸ ವಿಷಯೆ’ ಪರಿಣಯ ಪ್ರಸಂಗದ ಗಮಕ ಕಾರ್ಯಕ್ರಮ ಜರುಗಿತು. ಗಮಕ ವಿದುಷಿ ಶಾಂತಾ ಕೌತಾಳರು ‘ಶ್ರೀವಧುವಿನಂಬಕ ಚಕೋರಕಂ ಪೊರೆಯೆ’ ಎಂಬ ಪೀಠಿಕಾ ಸಂಧಿಯೊಂದಿಗೆ ಗಮಕ ವಾಚನ ಆರಂಭಿಸಿದರು. ವ್ಯಾಖ್ಯಾನ ನೀಡಿದ ಕಲ್ಯಾಣರಾವ್ ದೇಶಪಾಂಡೆಯವರು ಮಂತ್ರಿ ದುಷ್ಟಬುದ್ಧಿ ಬರೆದ ದ್ವಂದ್ವಾರ್ಥದ ಪತ್ರ ‘ಈ ಚಂದ್ರಹಾಸಂ ಮಹಾಹಿತನೆಮಗೆ, ಮೇಲೆ ನಮ್ಮ ಸೀಮೆಗರಸಾದಪಂ ಸಾಮಾನ್ಯದವನಲ್ಲ, ವಿಷವ ಮೋಹಿಸುವಂತೆ ಕೊಡುವದೀತಂಗೆ’ ಮುಂತಾದ ಪದ್ಯದ ಅಂಶಗಳನ್ನು ವಿದ್ಯಾರ್ಥಿಗಳಿಗೆ ತಿಳಿಯುವಂತೆ ವಿವರಿಸಿದರು. ‘ಲಕ್ಷ್ಮೀಕಾಂತನೊಲವಿಂದ ವಿಷವಮೃತವಹುದು ಪೊಸೆತೇನೆನಲ್ಕೆ’ ಎಂಬ ಪದ್ಯದೊಂದಿಗೆ ಗಮಕ ವಾಚನ ಮುಕ್ತಾಯವಾಯಿತು. ಚಂದ್ರಹಾಸನ ವಿಷ್ಣುಭಕ್ತಿ, ಗುಣ, ರೂಪ, ನಡತೆ, ಶೀಲ ಮುಂತಾದವು ಕಾವ್ಯ ವ್ಯಾಖ್ಯಾನದಲ್ಲಿ ಮೂಡಿ ಗಮಕ ವಾಚನವು ರಂಜನೀಯವಾಯಿತು.

ಕಾಲೇಜಿನ ನೂರಾರು ವಿದ್ಯಾರ್ಥಿಗಳು ಶಾಂತಚಿತ್ತರಾಗಿ ಕಾರ್ಯಕ್ರಮ ಆಲಿಸಿದರು. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಎಸ್.ಜಿ. ಕುಂಬಾರ ಇವರು ಕಾರ್ಯಕ್ರಮದ ನಿರೂಪಣೆ ಮಾಡಿದರು. ಸಮಾರಂಭದಲ್ಲಿ ಕಾಲೇಜಿನ ಪ್ರಿನ್ಸಿಪಾಲರಾದ ಶ್ರೀ ಬಿ.ಬಿ. ಗಂಗನಹಳ್ಳಿ, ಕಲಾವಿಭಾಗದ ಉಪನ್ಯಾಸಕರಾದ ಭಾಗ್ಯಾ ತೆಗ್ಗಳ್ಳಿ, ಶಾರದಾ ತೆಗ್ಗಳ್ಳಿ, ಭಾಗ್ಯಲಕ್ಷ್ಮೀ, ವಿಜಯಲಕ್ಷ್ಮೀ ಚೂರಿ ಮುಂತಾದವರು ಉಪಸ್ಥಿತರಿದ್ದರು.
