ಬಂಟ್ವಾಳ : ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ 2026-27ರ ಶೈಕ್ಷಣಿಕ ವರ್ಷದ ವಿವಿಧ ಸಾಂಸ್ಕೃತಿಕ ಕಲಾಪ್ರಕಾರಗಳ ಉದ್ಘಾಟನಾ ಕಾರ್ಯಕ್ರಮವು ದಿನಾಂಕ 16 ಜೂನ್ 2026ರಂದು ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ನಡೆಯಿತು.
ಯಕ್ಷ ಗುರುಗಳು, ಕಟೀಲು ಮೇಳದ ಪ್ರಸಿದ್ಧ ಕಲಾವಿದ ‘ಯಕ್ಷ ದ್ಯುಮನಿ’ ಪ್ರಶಸ್ತಿ ಪುರಸ್ಕೃತ ಮೋಹನ್ ಅಮ್ಮುಂಜೆ ಇವರು ಪ್ರಭು ಶ್ರೀರಾಮನ ಮೂರ್ತಿಗೆ ಕ್ಷೀರಾಭಿಷೇಕ ಮಾಡುವ ಮೂಲಕ ಸಂಗೀತ, ಭರತನಾಟ್ಯ, ಯಕ್ಷಗಾನ, ಚಿತ್ರಕಲೆ, ಕರಾಟೆ, ರೊಬೋಟಿಕ್-ಮಾಡೆಲಿಂಗ್ ಕಲೆಗಳನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿ “ಅಕ್ಷರ ಯಾವತ್ತೂ ನಾಶವಿಲ್ಲದ ಸಂಪತ್ತಾಗಿದೆ. ಅಭಿನಯ, ಮಾತುಗಾರಿಕೆ, ನಾಟ್ಯ ಎಲ್ಲವನ್ನೂ ಒಳಗೊಂಡಿರುವ ಯಕ್ಷಗಾನ ಒಂದು ಸರ್ವಾಂಗ ಕಲೆಯಾಗಿದೆ. ಯಕ್ಷಗಾನ, ಭರತನಾಟ್ಯ, ಸಂಗೀತ ಒಂದಕ್ಕೊಂದು ಅವಿನಾಭಾವ ಸಂಬಂಧವನ್ನು ಹೊಂದಿದೆ. ಯಕ್ಷಗಾನದಿಂದ ದೇಹಕ್ಕೆ ವ್ಯಾಯಾಮ, ಶುದ್ಧ ಕನ್ನಡ ಮಾತನಾಡಲು ಅವಕಾಶ ಹಾಗೂ ಪುರಾಣ ಪುಣ್ಯ ಪುರುಷರ ಪುಣ್ಯ ಕಥೆಗಳನ್ನು ತಿಳಿಸಿಕೊಡುತ್ತದೆ. ಕಲಿಸಿಕೊಡುವುದಕ್ಕಿಂತಲೂ ಕಲಿಯುವ ಆಸಕ್ತಿ ಇರುವ ವಿದ್ಯಾರ್ಥಿಗಳು ಮತ್ತು ಕಲಾಪೋಷಕರ ಅಗತ್ಯವಿದೆ” ಎಂದರು.

ಇದಕ್ಕೂ ಮೊದಲು ದೀಪ ಪ್ರಜ್ವಲಿಸಿ ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿದರು. ವಿದ್ಯಾರ್ಥಿನಿಯರು ಸಮೂಹ ಗೀತೆ ಹಾಡಿದರು. ಭರತನಾಟ್ಯ ಗುರುಗಳಾದ ವಿದ್ಯಾನ್ ಬಿ. ಗಿರೀಶ್ ಮಾತನಾಡಿ “ಶ್ರೀರಾಮನೇ ನಮಗೆಲ್ಲರಿಗೂ ಆದರ್ಶ, ನಮ್ಮಲ್ಲಿ ರಾಮನ ತತ್ವಗಳನ್ನು ಅಳವಡಿಸಿಕೊಳ್ಳಬೇಕು. ಯಾವುದೇ ವಿದ್ಯೆಗೂ ಸತತ ಪರಿಶ್ರಮದ ಅಗತ್ಯವಿದೆ. ಶೈಕ್ಷಣಿಕ ಹಾಗೂ ಸಾಂಸ್ಕೃತಿಕದೊಂದಿಗೆ ಮಕ್ಕಳನ್ನು ಬೆಳೆಸುವ ಕಲೆ, ಪೋತ್ರಾಹ್ನದ ಗುರುಗಳಿಂದ ವಿದ್ಯಾರ್ಥಿಗಳಿಗೆ ಎಲ್ಲವೂ ಸಾಧ್ಯ” ಎಂದು ತಿಳಿಸಿದರು. ಸಂಗೀತ ಗುರುಗಳಾದ ವಿದ್ವಾನ್ ಕೃಷ್ಣ ಆಚಾರ್ಯ, ಮುಖ್ಯೋಪಾಧ್ಯಾಯರಾದ ರವಿರಾಜ್ ಕಣಂತೂರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಸಾನ್ವಿ ಸನಿಲ್ ಸ್ವಾಗತಿಸಿ, ಸದ್ವಿ ಕಾರ್ಯಕ್ರಮ ನಿರೂಪಿಸಿ, ಸ್ಕಂದತೇಜ ವಂದಿಸಿದರು.

